- 120 ಪ್ರದರ್ಶಕರಿಂದ ಸಾವಿರಾರು ಕಲಾಕೃತಿಗಳ ಪ್ರದರ್ಶನ
- ದಕ್ಷಿಣ ಏಷ್ಯಾದ ಪ್ರತಿಷ್ಠಿತ ಕಲಾಪ್ರದರ್ಶನಕ್ಕೆ ಭಾರೀ ಸಿದ್ಧತೆ
ಏಷ್ಯಾದ ಪ್ರತಿಷ್ಠಿತ ಕಲಾಪ್ರದರ್ಶನಗಳಲ್ಲಿ ಒಂದಾಗಿರುವ ಇಂಡಿಯಾ ಆರ್ಟ್ ಫೇರ್ 16ನೇ ಆವೃತ್ತಿಗೆ ದೇಶದ ಕಲಾವಿದರು, ಸಂಗ್ರಹಕಾರರು, ಗ್ಯಾಲರಿಗಳು ಮತ್ತು ಕಲಾಪ್ರಿಯರು ಕುತೂಹಲದಿಂದ ಕಾದಿದ್ದಾರೆ. ಫೆ.6ರಿಂದ 9ರ ತನಕ ರಾಷ್ಟ್ರ ರಾಜಧಾನಿ ನವದೆಹಲಿಯ ಎನ್‌ಎಸ್‌ಐಸಿ ಮೈದಾನದಲ್ಲಿ ನಡೆಯಲಿರುವ ಬೃಹತ್ ಕಲಾ ಸಮ್ಮೇಳನದಲ್ಲಿ ಈ ವರ್ಷ 120 ಪ್ರದರ್ಶಕರು ಪಾಲ್ಗೊಳ್ಳುತ್ತಿದ್ದು, ನಿರೀಕ್ಷೆ ಇನ್ನಷ್ಟು ಹೆಚ್ಚುವಂತೆ ಮಾಡಿದೆ.
ಬಹು ನಿರೀಕ್ಷಿತ ಕಲಾ ಪ್ರದರ್ಶನಕ್ಕೆ ಸಂಬಂಧಿಸಿ ಶನಿವಾರ ಪ್ರಕಟಣೆ ಬಿಡುಗಡೆ ಮಾಡಿರುವ, ಇಂಡಿಯಾ ಆರ್ಟ್ ಫೇರ್ ನಿರ್ದೇಶಕಿ ಜಯಾ ಅಶೋಕನ್ ಅವರು, 16ನೇ ಆವೃತ್ತಿಯಲ್ಲಿ ಅನೇಕ ಯುವ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ. ಯುವ ಕಲಾವಿದರನ್ನು ಪರಿಚಯಿಸಲು ನಾವು ಕೂಡ ಉತ್ಸುಕರಾಗಿದ್ದೇವೆ. ಯುವ ಕಲಾವಿದರು, ಯುವ ಕಲಾಸಂಗ್ರಹಾಕರು ಮುಂದೆ ಬರುತ್ತಿರುವುದು ನಮ್ಮ ಉತ್ಸಾಹವನ್ನೂ ಹೆಚ್ಚಿಸುವಂತೆ ಮಾಡಿದೆ. ಭಾರತೀಯ ಆರ್ಟ್ ಮಾರ್ಕೆಟ್ ಇನ್ನಷ್ಟು ಯುವಕರ ಮೂಲಕ ಬೆಳೆಯಬೇಕಿದೆ. ಈ ಉದ್ದೇಶದಿಂದ ಬೇರೆ ಬೇರೆ ಪ್ರಯತ್ನಗಳು ನಡೆದಿವೆ. ಈ ಬಗ್ಗೆ ಹೆಚ್ಚಿನ ತಿಳವಳಿಕೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನಿರಂತರವಾಗಿ ಜಾಗೃತಿ ಚಟುವಟಿಕೆಗಳನ್ನು ಆಯೋಜಿಸಿ ಯುವ ಕಲಾವಿದರಿಗೆ ಅನೇಕ ರೀತಿಯಲ್ಲಿ ಅವಕಾಶಗಳನ್ನು ಸೃಷ್ಟಿಸುವ ಆಯೋಜಕರು ಇದೀಗ ಯುವ ಕಲಾವಿದರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿರುವುದು ಅತ್ಯಂತ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ ಎನ್ನುವ ನಿರೀಕ್ಷೆ ಹುಟ್ಟಿಸಿದೆ. ಅಲ್ಲದೆ, ವಿಭಿನ್ನ ನೆಲೆಯಲ್ಲಿ ನಿಲ್ಲಬಲ್ಲ ವೈವಿಧ್ಯಮಯ ಕಲಾಕೃತಿಗಳು ಈ ಆವೃತ್ತಿಯ ಪ್ರಮುಖ ಆಕರ್ಷಣೆ ಎಂದು ವಿಶ್ಲೇಷಿಸಲಾಗುತ್ತಿದೆ.
2008ರಲ್ಲಿ ಇಂಡಿಯಾ ಆರ್ಟ್ ಫೇರ್ ಆರಂಭದ ಆವೃತ್ತಿಯಲ್ಲಿ ಕೇವಲ 34 ಪ್ರದರ್ಶಕರು ಮಾತ್ರ ಕಲಾಕೃತಿಗಳನ್ನು ಪ್ರದರ್ಶಿಸಿದ್ದವು. ಅದೀಗ 120ಕ್ಕೆ ಏರಿದೆ. ವಿಶ್ವದ ಅನೇಕ ರಾಷ್ಟ್ರಗಳ ಪ್ರತಿಷ್ಠಿತ ಪ್ರದರ್ಶಕರು ಪಾಲ್ಗೊಳ್ಳುತ್ತಿದ್ದು, ವಿಶ್ವದರ್ಜೆಯ ಬೃಹತ್ ಕಲಾಪ್ರದರ್ಶನವಾಗಿ, ಬೃಹತ್ ಕಲಾ ಸಮ್ಮೇಳನವಾಗಿ ಬೆಳೆದಿದೆ. ಬೆಂಗಳೂರಿನ ಪ್ರತಿಷ್ಠಿತ ಗ್ಯಾಲರಿಗಳಲ್ಲಿ ಒಂದಾದ ಕಿಂಕಿಣಿ ಸೇರಿದಂತೆ ಈ ವರ್ಷ 26 ಹೊಸ ಪ್ರದರ್ಶಕರು ಇರುವುದಾಗಿ ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಡಿಯಾ ಆರ್ಟ್ ಫೇರ್ ನಿರ್ದೇಶಕಿ ಜಯಾ ಅಶೋಕನ್ ಈ ಕುರಿತು ಮಾತನಾಡಿ, ” ಏಷ್ಯಾದ ಅತಿದೊಡ್ಡ ವೇದಿಕೆಯಾಗಿ ಇಂಡಿಯಾ ಆರ್ಟ್ ಫೇರ್ ಬೆಳೆದಿದೆ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ. ವಿಶ್ವದ ಅನೇಕ ಶ್ರೇಷ್ಠ ಕಲಾವಿದರ ಕಲಾಕೃತಿಗಳು ಈ ವೇದಿಕೆಯಲ್ಲಿ ಪ್ರದರ್ಶಿಸಲ್ಪಟ್ಟಿವೆ. ಎಂದಿನಂತೆ ಈ ವರ್ಷವೂ ಜನಪ್ರಿಯ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ದೆಹಲಿ ಈಗ ಜಾಗತಿಕ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ದೀರ್ಘಕಾಲದ ಬದ್ಧತೆ ಇದ್ದುದರಿಂದ ಇವೆಲ್ಲವೂ ಸಾಧ್ಯವಾಗಿದೆ. ಏಷ್ಯಾ ಭಾಗದ ವೈವಿಧ್ಯಮಯ ಕಲಾಕೃತಿಗಳನ್ನು ಜಗತ್ತಿಗೆ ಈ ವೇದಿಕೆ ಮೂಲಕ ಪ್ರದರ್ಶಿಸುತ್ತಿದ್ದೇವೆ ಎಂಬ ಖುಷಿ ನಮಗಿದೆ” ಎಂದು ಹೇಳಿದ್ದಾರೆ.
(ಸಾಂದರ್ಭಿಕ ಚಿತ್ರಗಳು)