CREATIVE MONK: ದೃಶ್ಯ, ಕಾವ್ಯ ಅನಾವರಣ

Share This

ಸೌಂದರ್ಯ ಸುಗಂಧ!
ಸೌಂದರ್ಯ ಕುರಿತು ಮಾತನಾಡುವಾಗ ಖುದ್ದು ಅನುಭವವೇ ಶಿಖರ. ಅರ್ಥಪೂರ್ಣವೂ ಹೌದು. ಅನುಭವದಿಂದ ಬರುವ ಮಾತಲ್ಲಿ ಮಾತ್ರ ಆಳ, ಅಂತರಾಳ ಅರಿಯಲು ಸಾಧ್ಯ. ಕವಿ ಮನಸ್ಸಿನ ಕಲಾವಿದ, ಕಲಾವಿದನ ಕವಿ ಮನಸ್ಸು ಆಧುನಿಕ ಕಲಾ ಸಂದರ್ಭದಲ್ಲಿ ಭಿನ್ನವಾದುದಲ್ಲ. ಒಂದೆ ಒರತೆಯಲ್ಲಿ ನೀರಿನಂತೆ ಜಿನುಗಿದೆ, ನದಿಯಾಗಿ ಹರಿದಿದೆ.
” an aesthete
has no borders
no limitations
no hesitations
no inhibitions
no…”
ಮಾತು ಒಪ್ಪುವಂತದ್ದೇ… ” ಸೌಂದರ್ಯಕ್ಕೆ ಯಾವ ಗಡಿಗಳ ಹಂಗಿಲ್ಲ, ಯಾವುದೇ ಮಿತಿಗಳಿಲ್ಲ, ಯಾವುದೇ ಹಿಂಜರಿಕೆ ಇಲ್ಲ, ಯಾವುದೇ ಪ್ರತಿಬಂಧಕವೂ ಇಲ್ಲ ” ಎನ್ನುತ್ತಲೇ ಸೌಂದರ್ಯದ ಹುಡುಕಾಟ ನಡೆಸಿದ್ದಾರೆ ಕರ್ನಾಟಕದ ಹಿರಿಯ ಕಲಾವಿದರಲ್ಲಿ ಒಬ್ಬರಾದ ಕೃಷ್ಣ ರಾಜೇಂದ್ರ ಕುಮಾರ್. ಕರ್ನಾಟಕ ಚಿತ್ರಕಲಾ ಪರಿಷತ್ ನಿವೃತ್ತ ಉಪನ್ಯಾಸಕರಾದ ಕೃಷ್ಣ ಅವರ ಸಮಕಾಲೀನ ಪ್ರಕಾರದ ಕಲಾಕೃತಿಗಳ ” CREATIVE MONK ” ಏಕವ್ಯಕ್ತಿ ಕಲಾಪ್ರದರ್ಶನ (solo show) ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಗಳಲ್ಲಿ ನಡೆಯುತ್ತಿದೆ. ಸ್ವತಃ ಕಾವ್ಯ ರಚನೆಯಲ್ಲಿಯೂ ತೊಡಗಿರುವ ಕಲಾವಿದರ ಕವಿ ಭಾವ ಪ್ರದರ್ಶನದ ಕೇಂದ್ರ ಬಿಂದುವಾಗಿ ಕಾಣಿಸುತ್ತಿದೆ.
ಮನುಷ್ಯನ ಅಂಗಗಳ ಎಕ್ಸರೆ (x-rays)ಗಳನ್ನು ಮತ್ತು ಬೆಳಕು (light/visible radiation) ಬಳಸಿಕೊಂಡು ರಚಿಸಲಾದ ಪ್ರತಿಷ್ಠಾಪನಾ (installation) ಕಲಾಕೃತಿಗಳು ಗಮನಸೆಳೆದವು. ಹೊಸ ನೆಲೆಯಲ್ಲಿ ನಿಲ್ಲಬಹುದಾದ ಹಳೆಯ ಕಲ್ಪನೆಯ ಅಭಿವ್ಯಕ್ತಿ ಕುತೂಹಲ ಕೆರಳಿಸಿದವು. ಕ್ಷಣಕಾಲ ನಿಲ್ಲುವಂತೆ ಮಾಡಿ ಅನುಸಂಧಾನಕ್ಕೆ ಪ್ರೇರೇಪಿಸಿದವು. ಆದರೆ ಕಲಾಕೃತಿಗಳ ನಡುವೆ ಇನ್ನಷ್ಟು breathing space ಅಗತ್ಯವಿತ್ತು. ಪ್ರಸ್ತುತಿ (presentation) ನಿಟ್ಟಿನಲ್ಲಿ ತುಸು ಕಾಳಜಿ ವಹಿಸಬಹುದಿತ್ತು ಅನಿಸಿತು. HOMAGE TO GURU’S, INNER SEARCH, JOURNEY, GREAT SEARCH ಶೀರ್ಷಿಕೆಯ ಕಲಾಕೃತಿಗಳು ನೋಡುಗರನ್ನು ಸ್ಪಂದಿಸುವ, ಸಂಧಿಸುವ ಪ್ರಕ್ರಿಯೆ ನಡೆಸುತ್ತವೆ. ಒಂದು ಕ್ಷಣ ಭಾವನಾತ್ಮಕವಾದ ಆವರಣ ಸೃಷ್ಟಿಸುತ್ತವೆ. ಇನ್ನು ಅವರ ವರ್ಣಚಿತ್ರಗಳಲ್ಲಿ ಸಮಾಜ ಸ್ಪಂದನೆ ಇದೆ. ನಂಬಿಕೆಯ ಪ್ರಭಾವ ಕಾಣಿಸುತ್ತದೆ. SPACE-SONG & GLOW – DANCE, THE GREAT ENTRY, INNER SEARCH ಶೀರ್ಷಿಕೆಯ ಕಲಾಕೃತಿಗಳು ಆಧ್ಯಾತ್ಮಿಕತೆಯ (spirituality) ಭಾವ ಮೂಡಿಸುತ್ತವೆ.
ನಾಲ್ಕನೇ ಗ್ಯಾಲರಿಯಲ್ಲಿನ GREAT GIVER, SACRED SONG ಮತ್ತು GAME OF BIRTH ಶೀರ್ಷಿಕೆಯ ಕವನಗಳ ನಡುವಿನ ಪ್ರತಿಷ್ಠಾಪನಾ ಕಲಾಕೃತಿ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಅಂತರಾಳದ ಭಾವನೆಗಳನ್ನು ಮೀಟಿ ಮೌನ ಆವರಿಸುವಂತೆ ಮಾಡುತ್ತದೆ. ಒಂದೊಳ್ಳೆಯ ಪರಿಕಲ್ಪನೆ ಎನ್ನಬಹುದು.
ಸ್ನೇಹಿತರೇ, CREATIVE MONK ಕಲಾಪ್ರದರ್ಶನ ಇಂದು ಸೋಮವಾರ, ಏಪ್ರಿಲ್ 8ರಂದು ಸಂಪನ್ನಗೊಳ್ಳಲಿದೆ. ಇಂದು ಸಂಜೆ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಜರುಗಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.

Share This

Leave a Reply

Your email address will not be published. Required fields are marked *