ಮುತ್ತಿನ ನಗರಿಯಲ್ಲಿ ಇಂಡಿಯಾ ಆರ್ಟ್ ಫೇರ್!

Share This

  • ಹೈದರಾಬಾದ್‌ನಲ್ಲಿ ನವೆಂಬರ್ 1,2ರಂದು ‘ಕಲಾಮೇಳ’

16 ಆವೃತ್ತಿ ಬಳಿಕ ಇದೀಗ ಇಂಡಿಯಾ ಆರ್ಟ್ ಫೇರ್ (INDIA ART FAIR) ಮತ್ತೊಂದು ಹೊಸ ಹೆಜ್ಜೆ ಇಡುತ್ತಿದೆ. ನವ್ಯ ಮತ್ತು ಸಮಕಾಲೀನ ಕಲಾ ಪರಂಪರೆಯ ಇತಿಹಾಸದಲ್ಲೇ ಯಾರೂ ಮರೆಯಲಾರದಂತಹ ವೇದಿಕೆ ಸೃಷ್ಟಿಸಿ, ದಕ್ಷಿಣ ಏಷ್ಯಾದಲ್ಲಿಯೇ ಪ್ರತಿಷ್ಠಿತ ಮತ್ತು ದಾಖಲಾರ್ಹ ಕಲಾ ಪ್ರದರ್ಶನ ಎನಿಸಿಕೊಂಡಿರುವ ಇಂಡಿಯಾ ಆರ್ಟ್ ಫೇರ್ ಆಡಳಿತ ಮಂಡಳಿ ಇಂತಹದ್ದೊಂದು ಮಹತ್ವದ ನಿರ್ಧಾರಕ್ಕೆ ಬರುತ್ತಿರುವುದು ಭಾರತೀಯ ಕಲಾ ಕ್ಷೇತ್ರದ ಮಟ್ಟಿಗೆ ಗಮನಾರ್ಹವಾದುದು.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿವರ್ಷ ಫೆಬ್ರವರಿಯಲ್ಲಿ ನಡೆಯುವ ಇಂಡಿಯಾ ಆರ್ಟ್ ಫೇರ್ ಸಹಸ್ರಾರು ಕಲಾರಸಿಕರನ್ನು ಆಕರ್ಷಿಸುತ್ತದೆ. ಕೋಟ್ಯಂತರ ವಹಿವಾಟು ಕೂಡ ನಡೆಯುವಂತೆ ಮಾಡಿ ಕಲಾವಿದರಿಗೂ, ಕಲಾ ಗ್ಯಾಲರಿಗೂ ಬೆಂಬಲವಾಗಿ ನಿಲ್ಲುವಂತೆ ಮಾಡುತ್ತದೆ. ಇದೀಗ ಅಂತಹದ್ದೇ ಒಂದು ವೇದಿಕೆಯನ್ನು ಹೈದರಾಬಾದ್‌ನಲ್ಲಿ ನವೆಂಬರ್ 1 ಮತ್ತು 2ರಂದು ನಡೆಸಲು ನಿರ್ಧರಿಸಿದೆ. ಮೊದಲ ಆವೃತ್ತಿಯನ್ನು ಎರಡು ದಿನಗಳ ಕಾಲ ನಡೆಸುವ ನಿರ್ಧಾರ ಮಾಡಿದ್ದು, ಈ ಮಹಾ ಕಲಾ ಪ್ರದರ್ಶನದ ಆಯೋಜನೆಯ ಜವಾಬ್ದಾರಿಯನ್ನು BMW India ಮತ್ತು RMZ Foundation ಹೊತ್ತುಕೊಂಡಿದೆ. RMZಗೆ ಸೇರಿದ ದ ಲಾಫ್ಟ್ (THE LOFT) ಆವರಣದಲ್ಲಿ ಈ ಪ್ರದರ್ಶನ ಆಯೋಜನೆಗೊಳ್ಳಲಿದೆ ಎಂದು ಇಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಮೂಲಕ ಹೊಸದೊಂದು ಕಲಾ ಪಯಣಕ್ಕೆ ನಾಂದಿ ಹಾಡಲಿದ್ದೇವೆ ಎಂದು ಹೇಳಿಕೊಂಡಿದೆ.

ಇಲ್ಲೊಂದು ಸಂಗತಿಯನ್ನು ನೆನಪಿಸಿಕೊಳ್ಳಬೇಕಿದೆ. ವರ್ಷದ ಹಿಂದಷ್ಟೇ ಇಂಡಿಯಾ ಆರ್ಟ್ ಫೇರ್ ಆವೃತ್ತಿಯನ್ನು ಮುಂಬೈನಲ್ಲಿ ಆರಂಭಿಸುತ್ತೇವೆ ಎಂದು ಹೇಳಿಕೊಂಡಿತ್ತು. ದಿನಾಂಕವನ್ನೂ ಪ್ರಕಟಿಸಿತ್ತು. ಆದರೆ, ಮುಂಬೈನಲ್ಲಿ ಖಾಸಗಿ ಸಂಸ್ಥೆಯೊಂದು ಆರ್ಟ್ ಮುಂಬೈ ಶೀರ್ಷಿಕೆಯಡಿ ಇದೇ ಪ್ರಮಾಣದಲ್ಲಿ ಕಲಾಪ್ರದರ್ಶನವನ್ನು ಆಯೋಜಿಸಿಕೊಂಡು ಬಂದಿತ್ತು. ಇಂಡಿಯಾ ಆರ್ಟ್ ಫೇರ್ ಆಯೋಜನೆ ಆಗುತ್ತದೆನ್ನುವ ಹಿನ್ನೆಲೆಯಲ್ಲಿ ೨ನೇ ಆವೃತ್ತಿಯನ್ನು ಹೆಚ್ಚುಕಡಿಮೆ ಇದೇ ರೀತಿಯಲ್ಲಿ ಆಯೋಜಿಸಿ ಯಶಸ್ವಿಗೊಳಿಸಿತು. ಅಲ್ಲದೆ, ಈಗಾಗಲೇ ಮುಂದಿನ ಮತ್ತು ೩ನೇ ಆವೃತ್ತಿಯ ದಿನಾಂಕವನ್ನೂ ಪ್ರಕಟಿಸಿ ಮುಂಬೈ ಮಾರುಕಟ್ಟೆಯನ್ನು ತನ್ನ ವ್ಯಾಪ್ತಿಯಿಂದ ಜಾರದಂತೆ ಜಾಣತನದ ಹೆಜ್ಜೆ ಇಟ್ಟಿತು. ಈ ಹಿನ್ನೆಲೆಯಲ್ಲಿ ಇಂಡಿಯಾ ಆರ್ಟ್ ಫೇರ್ ಆಡಳಿತ ಮಂಡಳಿ ತಕ್ಷಣ ಈ ಪೈಪೋಟಿಯಿಂದ ಹಿಂದೆ ಸರಿಯಿತು. ಆದರೆ ಇದೀಗ ಹೈದರಾಬಾದಿನ ಆರ್ಟ್ ಮಾರುಕಟ್ಟೆಯನ್ನು ಆವರಿಸಿಕೊಳ್ಳುವ ಅತ್ಯಂತ ಗಮನಾರ್ಹ ಹೆಜ್ಜೆ ಇಟ್ಟಿದೆ. ಇದೊಂದು ಆರೋಗ್ಯಕರ ಬೆಳವಣಿಗೆ ಎನ್ನಬಹುದು.

ಒಟ್ಟಾರೆ ಭಾರತೀಯ ಕಲಾವಿದರಿಗೆ, ಕಲಾಪ್ರಿಯರಿಗೆ ಮಗದೊಂದು ಪ್ರತಿಷ್ಠಿತ ಕಲಾಪ್ರದರ್ಶನದಲ್ಲಿ ಪಾಲ್ಗೊಳ್ಳುವ ಅವಕಾಶಕ್ಕೆ ವೇದಿಕೆ ಸೃಷ್ಟಿಯಾಗಿದೆ. ಇದರಿಂದ ಭಾರತೀಯ ಕಲಾಕ್ಷೇತ್ರಕ್ಕೂ, ಯುವ ಕಲಾವಿದರಿಗೂ ಹೆಚ್ಚೆಚ್ಚು ಅವಕಾಶ ಸಿಗಲಿ ಎಂದು ಹಾರೈಸೋಣ.

 

 

 


Share This

Leave a Reply

Your email address will not be published. Required fields are marked *