- ಗಮನ ಸೆಳೆದ ಗುರು ಶಂಕರ ಕಂದಸ್ವಾಮಿ, ಅರುಣಾ ಮೊಹಂತಿ
ಬೆಂಗಳೂರು ನೃತ್ಯ ರಸಿಕರಿಗೆ ಮೂರು ದಿನಗಳ ಕಾಲ ರಸದೌತಣ ದಕ್ಕಿತು, ನವರಸಗಳ ಅನುಭೂತಿಯಲ್ಲಿ ಮಿಂದೆದ್ದರು. ವಿವಿಧ ಪ್ರಕಾರದ ನೃತ್ಯಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ ಕಲಾವಿದರು ಅತ್ಯುತ್ತಮ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾದರು!
ಅಷ್ಟಕ್ಕೂ ಈ ನೃತ್ಯ ಸಂಭ್ರಮಕ್ಕೆ ವೇದಿಕೆಯಾಗಿದ್ದು ‘ನೃತ್ಯ ನೀರಾಜನ’. ಎರಡು ದಶಕಗಳಿಂದ ನಿರಂತರವಾಗಿ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಸಂಗೀತ, ನೃತ್ಯ ಕಲಾ ಪರಂಪರೆಯನ್ನು ಉಳಿಸಿ, ಬೆಳೆಸುವಲ್ಲಿ ಆಧಾರ ಸ್ತಂಭವಾಗಿ ನಿಂತಿರುವ ಅನನ್ಯ ಸಂಸ್ಥೆ ಡಿಸೆಂಬರ್ ೧೩ರಿಂದ ಮೂರು ದಿನಗಳ ಕಾಲ ‘ನೃತ್ಯ ನೀರಾಜನ’ ನೃತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕರ್ನಾಟಕವೂ ಸೇರಿದಂತೆ ದೇಶದ ಬೇರೆ ಬೇರೆ ಭಾಗದ, ಬೇರೆ ಬೇರೆ ಪ್ರಕಾರದಲ್ಲಿ ಪರಿಣಿತ ಕಲಾವಿದರು ಪಾಲ್ಗೊಂಡಿದ್ದರು. ಈ ಮೂರು ದಿನಗಳಲ್ಲಿ ನಡೆದ ನೃತ್ಯ ಕಾರ್ಯಕ್ರಮಗಳು ರಸಿಕರ ಮನಸ್ಸಿನಲ್ಲಿ ಮನೆ ಮಾಡಿಕೊಂಡಿವೆ. ಅಷ್ಟರಮಟ್ಟಿಗೆ ಕಲಾವಿದರ ರಸದೌತಣ ರುಚಿಸಿದೆ. ಕಲಾವಿದರಲ್ಲೂ ಸಂತೃಪ್ತ ಭಾವ ಮೂಡುವಂತೆ ಮಾಡಿದೆ.
ಡಿಸೆಂಬರ್ 15, ಭಾನುವಾರ ನಡೆದ ಮೂರನೇ ಮತ್ತು ಅಂತಿಮ ದಿನ ಖ್ಯಾತ ಭರತನಾಟ್ಯ ಗುರು ಶಂಕರ ಕಂದಸ್ವಾಮಿ ಅವರ ಪ್ರದರ್ಶನ ಹಾಗೂ ಗುರು, ಪದ್ಮಶ್ರೀ ಡಾ. ಅರುಣಾ ಮೊಹಾಂತಿ ಅವರ ಒಡಿಸ್ಸಿ ನೃತ್ಯ ಪ್ರದರ್ಶನ ಗಮನ ಸೆಳೆದವು. ನೃತ್ತದಲ್ಲಿನ ನಿಖರತೆ ಮತ್ತು ಸ್ಪಷ್ಟತೆಗೆ ಜನಪ್ರಿಯರಾದ ಗುರು ಶಂಕರ ಕಂದಸ್ವಾಮಿ ಅವರು ಮಗದೊಮ್ಮೆ ಬೆಂಗಳೂರಿನ ನೃತ್ಯ ರಸಿಕರ ಪ್ರಶಂಸೆಗೆ ಪಾತ್ರರಾದರು, ಹುಬ್ಬೇರಿಸುವಂತೆ ಮಾಡಿದರು. ಭಕ್ತಿ, ಭಾವ ಸಾಗರದಲ್ಲಿ ತೇಲಿಸಿದರು. ಪಾಡುರಂಗ ಅಲರಿಪು ಮೂಲಕ ರಸಿಕರ ಮುಂದೆ ಬಂದ ಶಂಕರ ಕಂದಸ್ವಾಮಿ ವಿಭಿನ್ನವೆನಿಸುವ ನೃತ್ಯ ಸಂಯೋಜನೆಯಿಂದ ರಂಜಿಸಿದರು. ಪಾಂಡುರಂಗನ ಸ್ಮರಣೆ ಮತ್ತು ಹೂವೊಂದು ಅರಳಿ ಭೂಮಾತೆ ಅಲಂಕರಿಸುವ ಕ್ಷಣದಂತೆ ಶುದ್ಧ ನೃತ್ಯದ ಮೂಲಕ ಆಪ್ತವಾಗಿಸಿದರು. ಮತ್ತೆ ನಮ್ಮನ್ನು ಆವರಿಸಿಕೊಂಡಿದ್ದು ನವಿಲಿನ ಮೇಲೇರಿ ಸವಾರಿ ಮಾಡುವ ಸುಬ್ರಹ್ಮಣ್ಯ, ಕಾರ್ತಿಕೇಯ. ಕಮಾಜ್ ರಾಗ, ಆದಿ ತಾಳದಲ್ಲಿ ಸಂಯೋಜಿಸಲಾದ ವರ್ಣಂ ‘ವೇಲನೇ ಕಾಣ್ಬೊ ವಾರಿ ವೇಲ್ ವಿರಿ ಮಾತರೈ ಮನಂಧಾ’ (Velane kaanboum vaari vel viri maatharai manandha) ಒಂದೊಂದು ಸಾಲುಗಳಿಗೂ ಅವರಿಟ್ಟ ಒಂದೊಂದು ಹೆಜ್ಜೆಯಲ್ಲೂ ನೃತ್ಯದ ಶಕ್ತಿ ಅನಾವರಣವಾಗುವಂತೆ ಇತ್ತು. ಭಾವಪೂರ್ಣ ಪ್ರಸ್ತುತಿಯ ಮೂಲಕ ರಸಿಕರ ಹೃದಯದಲ್ಲಿ ನೆಲೆಸಿದರು. ಭಕ್ತಿ ಸಾಗರದ ನಡುವೆ ಶ್ರೀರಾಮಚಂದ್ರನ ಭಕ್ತ ಹನುಮಂತ ಎದುರುಬಂದು ನಿಂತರೆ ಹೇಗಿರಬೇಡಾ… ಶಂಕರ ಕಂದಸ್ವಾಮಿ ಅವರ ಮುಂದಿನ ಆಯ್ಕೆ ಅದೇ ಆಗಿತ್ತು. ಭಕ್ತಿಯ ಪರಾಕಾಷ್ಠೆಗೆ ರಸಿಕರಲ್ಲಿ ಕಂಡಿದ್ದು ವಿಧೇಯ ಭಾವ ಮಾತ್ರ.
ಪದ್ಮಶ್ರೀ ಡಾ. ಅರುಣಾ ಅವರ ಒಡಿಸ್ಸಿ ನೃತ್ಯ ಪ್ರದರ್ಶನಕ್ಕೆ ತಲೆದೂಗದವರಿಲ್ಲ. ಅಭಿನಯ, ಭಾವಪೂರ್ಣವಾದ ಪ್ರದರ್ಶನ ನೀಡಿ ರಸಿಕರ ಹೃದಯ ಗೆದ್ದರು. ” ಭಜ ಗೋವಿಂದಂ ಭಜ ಗೋವಿಂದಂ, ಗೋವಿಂದಂ ಭಜ ಮೂಢಮತೇ ” ಎಂದು ಭಕ್ತಿ ಕಾವ್ಯದ ಸಾಲುಗಳಿಗೆ ಭಕ್ತಿ ಸಾಗರದಲ್ಲಿ ತೇಲುವಂತೆ ಭಾವ ಸೃಷ್ಟಿಸಿದರು. ರಾಗಮಾಲಿಕಾ ತಾಳಮಾಲಿಕಾದಲ್ಲಿ ನಿಬಂಧಿತ ಭೂಮಿಸುತ ರೂಪಕ ಪ್ರಸ್ತುತಿ ರಂಗಮಂದಿರದಲ್ಲಿ ವಿಶೇಷವೆನಿಸುವ ಕಂಪನ ಸೃಷ್ಟಿಸಿತು. ಮಣ್ಣಿನ ಮಗಳು ಸೀತಾಮಾತೆಯ ಕಥೆ ಹೇಳುವ ಅದ್ಭುತ ಸಂಯೋಜನೆ ಭೂಮಿಸುತ. ಪತಿ ಶ್ರೀರಾಮಚಂದ್ರನಿಗಾಗಿ ಭೇಷರತ್ತಾದ ಭಕ್ತಿ ಸಮರ್ಪಣೆಯ ಭಾವ, ರಾವಣನಿಂದ ಅಪಹರಣಕ್ಕೊಳಗಾಗಿ ಅಪಮಾನ ಎದುರಿಸಿದ ಕ್ಷಣ ಇವೆಲ್ಲವನ್ನೂ ಸೀತಾಮಾತೆಯೇ ಎದುರು ನಿಂತು ವಿವರಿಸುತ್ತಿದ್ದಾಳೆ ಎನ್ನುವಂತಿತ್ತು. ವನವಾಸದಲ್ಲಿದ್ದ ಸಂದರ್ಭದಲ್ಲಿ ಕಾಡಿನ ಸೌಂದರ್ಯ ಆಸ್ವಾದಿಸುವ ಸನ್ನಿವೇಶ, ಚಿನ್ನದ ಜಿಂಕೆ ಕಂಡಾಗ ಪ್ರತಿಕ್ರಿಯಿಸುವ ರೀತಿ, ಸೀತೆಯ ರಕ್ಷಣೆಗೆ ಧಾವಿಸುವ ಜಟಾಯು, ರಾವಣನ ಆಕ್ರೋಶ, ರಾವಣನಿಂದ ಅಪಹರಣಕ್ಕೊಳಗಾದ ಸೀತಾಮಾತೆ ಲಂಕೆಯಲ್ಲಿ ಕಳೆಯುವ ದಿನಗಳನ್ನು ನೃತ್ತ, ಅಭಿನಯದಲ್ಲಿ ಕಟ್ಟಿಕೊಡುವ ಪ್ರಯತ್ನ ಅರ್ಥಗರ್ಭಿತ ಅಭಿವ್ಯಕ್ತಿಯಾಗಿ ಮೂಡಿಬಂತು.
ಪದ್ಮಶ್ರೀ ಡಾ. ಅರುಣಾ ಅವರ ಒಡಿಸ್ಸಿ ನೃತ್ಯ ಪ್ರದರ್ಶನ.
ಗುರು ಶಂಕರ ಕಂದಸ್ವಾಮಿ ನೃತ್ಯ ಪ್ರದರ್ಶನ
ರಂಜಿಸಿದ ರಾಮ’ ಮತ್ತು ಅರ್ಧನಾರಿ!
ಡಿಸೆಂಬರ್ 14, ಶನಿವಾರ ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರದ ನರ್ತಕಿಯರ ಭರತನಾಟ್ಯ ಪ್ರಸ್ತುತಿ ಹಾಗೂ ವಿದ್ವಾನ್ ಶ್ರೀಜಿತ್ ನಂಬಿಯಾರ್ ಮತ್ತು ವಿದುಷಿ ಪಾರ್ವತಿ ಮೆನನ್ ಅವರ ‘ಅರ್ಧನಾರಿ’ ಪ್ರಸ್ತುತಿ ರಂಜನೀಯವಾಗಿತ್ತು. ಗುರು, ವಿದುಷಿ ಡಾ. ಮಂಜರಿ ಚಂದ್ರ ಪುಷ್ಪರಾಜ್, ಜಾನಕಿ ಡಿ.ವಿ, ಪನ್ನಗ ರಾವ್, ಧನ್ಯಶ್ರೀ ಭಟ್ ಮತ್ತು ನಿಧಿ ಶರ್ಮಾ ಅವರು ಆಯ್ದುಕೊಂಡಿದ್ದ ಒಂದೊಂದು ನೃತ್ಯ ಪ್ರಯೋಗವೂ ಅಚ್ಚುಕಟ್ಟಾದ ನೃತ್ತದಿಂದ ಒಳಗೊಂಡಿತ್ತು. ಅಂಗಶುದ್ಧಿ ಮತ್ತು ನೃತ್ತದ ನಿಖರತೆ ರಸಿಕರ ಹೃದಯವನ್ನು ನಾಟಿತು. ಸ್ವಾತಿ ತಿರುನಾಳ್ ಅವರ ಸಂಯೋಜನೆಯ ರಾಗಮಾಲಿಕಾ, ರೂಪಕ ತಾಳದಲ್ಲಿ ನಿಬಂಧಿತ ‘ಭಾವಯಾಮಿ ರಘುರಾಮಂ ಭವ್ಯಸುಗುಣಾರಾಮಂ’ ಹಾಡಿಗೆ ಹೃದಯಸ್ಪರ್ಶಿ ಪ್ರದರ್ಶನ ನೀಡಿದರು.
‘ಅರ್ಧನಾರಿ’ ಇದೊಂದು ವಿಶಿಷ್ಟವೆನಿಸುವ ಪರಿಕಲ್ಪನೆ. ಮೇಲ್ನೋಟಕ್ಕೆ ಶಿವನ ಅವತಾರಗಳಲ್ಲೊಂದು ಎನ್ನುವುದು ಒಂದಾದರೆ, ಅದರ ಹಿಂದಿನ ಭಾವ ವಿಭಿನ್ನವಾಗಿ ಕಾಣಿಸುವಂತದ್ದು. ಈ ಸುಂದರ ಪರಿಕಲ್ಪನೆಯನ್ನು ನೃತ್ಯದಲ್ಲಿ ಭಾವಪೂರ್ಣವಾಗಿ ತರುವುದು ಕಷ್ಟಸಾಧ್ಯ. ಶ್ರೀಜಿತ್ ಮತ್ತು ಪಾರ್ವತಿ ಅವರು ಅತ್ಯಂತ ಆಪ್ತವೆನಿಸುವ ರೀತಿಯಲ್ಲಿ ಕಟ್ಟಿಕೊಟ್ಟರು. ನರ್ತಕ ಮತ್ತು ನರ್ತಕಿ ರಂಗವನ್ನು ನೃತ್ಯ ಸಂಯೋಜನೆಗೆ ಪೂರಕವಾಗಿ ಬಳಸಿಕೊಂಡಿರುವ ರೀತಿ ಭಿನ್ನವೆನಿಸಿತು. ಸೃಷ್ಟಿಯಲ್ಲಿ ಗಂಡು ಹೆಣ್ಣು ಸಮಾನರು ಎಂಬ ಸಾಮಾಜಿಕ ಸಂದೇಶದ ಜತೆ ಜೊತೆಯಲ್ಲೇ ಸಾಗುವ ಪ್ರಸ್ತುತಿ ರಸಿಕರ ಮೆಚ್ಚುಗೆಗೆ ಪಾತ್ರವಾಯಿತು. ಪಾರ್ವತಿ, ಶಿವೆ ಶಿವನ ಹೃದಯೇಶ್ವರಿ ಎಂಬ ಕಾರಣಕ್ಕಾಗಿ ಹೃದಯಸ್ಥಾನದಲ್ಲಿ ಅಂದರೆ ಎಡಭಾಗದಲ್ಲಿ ಅಲಂಕರಿಸಿದ್ದಾಳೆ ಎನ್ನುವ ನಂಬಿಕೆಗೆ ಪೂರಕವಾಗಿ ನೃತ್ಯ ಸಂಯೋಜನೆಯಲ್ಲಿ ನರ್ತಕ/ನರ್ತಕಿ ಅರ್ಧನಾರಿಯಾಗಿ ಕಾಣಿಸಿಕೊಳ್ಳುವುದು ಸಂವೇದನಾ ಶೀಲತೆಗೆ ಕನ್ನಡಿ ಹಿಡಿದಂತೆ ಇತ್ತು. ಇಂತಹ ಸೂಕ್ಷö್ಮ ಮತ್ತು ಭಾವಪೂರ್ಣ ಪ್ರಸ್ತುತಿಯಲ್ಲಿ ಪರಕಾಯ ಪ್ರವೇಶ ಸಾಧ್ಯವಾಗದಿದ್ದರೆ ಅನುಭೂತಿ ಸಾಧ್ಯವಾಗದು. ಆದರೆ ರಸಭಂಗವಾಗದ ರೀತಿಯಲ್ಲಿ ಶ್ರೀಜಿತ್ ಮತ್ತು ಪಾರ್ವತಿ ಅವರ ಪ್ರಸ್ತುತಿ ಸೊಗಸಾಗಿ ಮೂಡಿಬಂತು. ಶಿವಪುರಾಣದ ಪರಿಕಲ್ಪನೆಗಳು ಕಣ್ಣೆದುರು ಬಂದವು. ವಿದ್ವಾನ್ ವಿವೇಕ್ ಸದಾಶಿವಂ ಅವರ ಗಾಯನ, ವಿದ್ವಾನ್ ಪಿ.ಕೆ. ಶಿವಪ್ರಸಾದ್ ಅವರ ಮೃದಂಗ ವಾದನ, ವಿದ್ವಾನ್ ಮತ್ತೂರು ಶ್ರೀನಿಧಿ ಅವರ ವೇಣುವಾದನ ಇಡೀ ಪ್ರಸ್ತುತಿಯ ಮೌಲ್ಯವನ್ನು ದ್ವಿಗುಣಗೊಳಿಸಿತು.
ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರ ಸದಸ್ಯರು
‘ಅರ್ಧನಾರಿ’ ಡ್ಯುಯೆಟ್ ಪ್ರದರ್ಶಿಸಿದ ಶ್ರೀಜಿತ್ ಮತ್ತು ಪಾರ್ವತಿ
ಕಥಕ್, ಕೂಚಿಪುಡಿ ನೃತ್ಯ ಲಾಲಿತ್ಯ
ಡಿಸೆಂಬರ್ 13, ಶುಕ್ರವಾರ ನಾದಂ ಮತ್ತು ಚೆನ್ನೈನ ಶಿವಮೋಹನಂ ತಂಡದ ಸದಸ್ಯರು ಕಥಕ್ ಮತ್ತು ಕೂಚಿಪುಡಿ ನೃತ್ಯ ಪ್ರದರ್ಶನ ನೀಡಿದರು. ವಿದುಷಿ ನಂದಿನಿ ಮೆಹ್ತಾ ಮತ್ತು ವಿದ್ವಾನ್ ಮುರಳಿ ಮೋಹನ್ ಅವರ ಶಿಷ್ಯರಾದ ಸೌಮ್ಯಾ ರವಿ, ಪಾವನಿ ಕಲ್ವಕಲ್ವಾ, ವಿಭಾ ಭಟ್, ಜಿನಾಲ್ ರೂಪಣಿ, ಪ್ರೀತಿ ಧರ್ ಚೌಧರಿ, ವೈಭವಿ ಶುಕ್ಲಾ ಮತ್ತು ನಿಖಿಲ್ ಪರ್ಮಾರ್ ಅವರು ಕಥಕ್ ಪ್ರದರ್ಶನದ ಮೂಲಕ ಗಮನ ಸೆಳೆದರು. ಅಂತೆಯೇ ಗುರು ಡಾ. ಪದ್ಮವಾಣಿ ಮೊಸಲಿಕಂಟಿ ಮತ್ತು ಗುರು ಜೈಕಿಶೋರ್ ಮೊಸಲಿಕಂಟಿ ಅವರ ಶಿಷ್ಯರಾದ ಅಲಾ ವೇಣುಗೋಪಾಲ, ಸಮ್ಮೋಹನ ಮೊಸಲಿಕಂಟಿ ಮತ್ತು ಸಾತ್ವಿಕಾ ರೆಡ್ಡಿ ಅವರ ಕೂಚಿಪುಡಿ ಪ್ರದರ್ಶನ ಕೂಡ ಅತ್ಯಂತ ಅಚ್ಚುಕಟ್ಟಾಗಿ ಮೂಡಿಬಂತು.
ನಾದಂ ತಂಡದ ಸದಸ್ಯರಿಂದ ಕಥಕ್ ನೃತ್ಯ ಪ್ರದರ್ಶನ.
ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರ ಸದಸ್ಯರು
ಇಬ್ಬರು ಸಾಧಕರಿಗೆ ಸಮ್ಮಾನ, ಅನನ್ಯ ಪುರಸ್ಕಾರ
ಅಂತಿಮ ದಿನವಾದ ಡಿಸೆಂಬರ್ 15, ಭಾನುವಾರ ಉತ್ತಮ ಸಾಧಕರಿಗೆ ನೀಡಲಾಗುವ ಅನನ್ಯ ಪುರಸ್ಕಾರ ಪ್ರದಾನ ಮಾಡಿ ಕಲಾವಿದರನ್ನು ಗೌರವಿಸಲಾಯಿತು. ಒಡಿಸ್ಸಿ ನೃತ್ಯ ಪ್ರದರ್ಶನ ನೀಡಿ ಅನನ್ಯ ರಸಿಕರ ಹೃದಯ ಗೆದ್ದ ಪದ್ಮಶ್ರೀ ಡಾ. ಅರುಣಾ ಮೊಹಾಂತಿ ಅವರನ್ನು ಮತ್ತು ವಿದ್ವಾನ್ ಕಲಾಯೋಗಿ ಎನ್. ನಾರಾಯಣಸ್ವಾಮಿ ಅವರು ಪ್ರಸಕ್ತ ಸಾಲಿನ ಗೌರವಕ್ಕೆ ಭಾಜನರಾದರು.