ಮತ್ತೆ ಗುರುವಾಗಿ ಬನ್ನಿ, ಶಿಷ್ಯರನ್ನಾಗಿ ಸ್ವೀಕರಿಸಿ

Share This

  • ಮೇಷ್ಟ್ರು ಎಸ್. ಕೆ. ಭಟ್ ಅಜರಾಮರ

‘ಹಾ.. ಶಂಭೋ… ‘ ಎಂದು ಕರೆದಾಗಲೆಲ್ಲ ಮೇಷ್ಟ್ರು ಇಂದು ಖುಷಿಯಲ್ಲಿ ಇದ್ದಾರೆ ಅಂದುಕೊಳ್ಳೋದು, ಗಪ್ಪತಿ…ಬಾ ಇಲ್ಲಿ… ಎಂದು ಕರೆದ ದಿನ ಇಂದೇನೊ ಗ್ರಹಚಾರ ಕಾದಿದೆ ಎನ್ನುವ ಭಯ. ಮನಸ್ಸಲ್ಲೇ ಮುಂದೇನೇನು ಆಗಬಹುದು ಎನ್ನುವ ಲೆಕ್ಕಾಚಾರ. ಸಣ್ಣದೊಂದು ಕತೆ ಹೆಣೆಯುವಷ್ಟು ದೃಶ್ಯಗಳು ಕಲ್ಪನೆಗೆ ಬರುತ್ತಿದ್ದವು. ಅಂದಹಾಗೆ, ಕಲ್ಪಿಸಿಕೊಂಡಿದ್ದೆಲ್ಲವೂ ಸತ್ಯವಾಗಿರುವ ದಿನಗಳು ಬಹಳ ಕಡಿಮೆ. ಹಾಗಿದ್ದರೂ, ಮೇಷ್ಟ್ರು ಕರೆಯುತ್ತಿದ್ದಂತೆ ಮುಂದಿನ ಚಿತ್ರಣವನ್ನು ಕಲ್ಪಿಸಿಕೊಳ್ಳುವುದು ನಿಲ್ಲುತ್ತಿರಲಿಲ್ಲ. ಉಸಿರು ಗಟ್ಟಿಯಾಗಿಸಿಕೊಂಡು ಕೈಕಟ್ಟಿ ನಿಲ್ಲುತ್ತಿದ್ದೆವು!

ಬೆನ್ನು ತಟ್ಟಿಸಿಕೊಂಡು ಆಟವಾಡಿದ ದಿನಗಳೆಲ್ಲವೂ ಕಣ್ಣೆದುರು ಬರುತ್ತಿವೆ. ತರಗತಿಯಲ್ಲಿ ಕುಳಿತು ಮತ್ತೀಗ ಪಾಠ ಕೇಳಿಸಿಕೊಳ್ಳಬೇಕಿತ್ತು ಎನ್ನುವ ಭಾವ. ಸೀಮೆ ಸುಣ್ಣ ಹಿಡಿದ ಆಳುಬೆರಳುಗಳ ಕೈಯಲ್ಲಿ ಕಿವಿ ಹಿಂಡಿಸಿಕೊಳ್ಳಬೇಕೆನ್ನುವ ಪ್ರೀತಿ, ಅಭಿಮಾನ. ಸ್ಮರಿಸಿದಷ್ಟು ಸಲ ಅದ್ಯಾಕೋ ಕಣ್ಣಾಲಿಗಳು ಒದ್ದೆಯಾಗುತ್ತವೆ. ನೀವು ಇನ್ನೊಂದಿಷ್ಟು ದಿನಗಳ ಕಾಲ ನಮ್ಮೊಂದಿಗೆ ಇರಬೇಕಿತ್ತು ಅನಿಸುತ್ತಿದೆ. ನಾವು ನಮ್ಮನ್ನರಿಯುವ ಗುಟ್ಟುಗಳನ್ನು ಮಗದೊಮ್ಮೆ ನಿಮ್ಮ ಧ್ವನಿಯಲ್ಲಿ ಕೇಳಬೇಕು ಎನ್ನುವ ಅತಿಯಾಸೆ. ಆದರೆ, ಈಗ ನೀವಿಲ್ಲ ನಮ್ಮ ಮುಂದೆ. ಇಷ್ಟೇ ಬಯಸಿದರೂ ನಮ್ಮನ್ನಗಲಿದ ನಿಮ್ಮನ್ನು ಮತ್ತೆ ನೋಡುತ್ತೇವೆನ್ನುವುದು ಭ್ರಮೆ. ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಮೇಷ್ಟ್ರೇ. ಇನ್ನಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಅನಿಸಿಬಿಡುತ್ತದೆ, ಆದರೆ ಅದೇ ಸತ್ಯ. ನಂಬಲೇ ಬೇಕು. ಅಷ್ಟರಮಟ್ಟಿಗೆ ನೀವು ನಮ್ಮನ್ನು ಆವರಿಸಿಕೊಂಡಿದ್ದೀರಿ. ಇನ್ನೊಂದು ಜನುಮವಿದೆ ಎನ್ನುವುದು ನಿಜವಾದರೆ, ಮತ್ತೆ ಗುರುವಾಗಿ ಬನ್ನಿ. ಶಿಷ್ಯರನ್ನಾಗಿ ಸ್ವೀಕರಿಸಿ.

ನನ್ನಂತಹ ಅನೇಕರು ಇಷ್ಟಪಡುತ್ತಿದ್ದ, ಎದೆಯಲ್ಲಿ ಬಚ್ಚಿಟ್ಟುಕೊಂಡಿರುವ ಗುರು ಎಸ್.ಕೆ. ಭಟ್ ಅವರು ಇಹಲೋಕ ತ್ಯಜಿಸಿದ್ದಾರೆ. ವಿಧಿ ಲಿಖಿತದಂತೆ 2026, ಫೆಬ್ರವರಿ 8ರಂದು ನಮ್ಮನ್ನಗಲಿದರು. ನಿವೃತ್ತ ಜೀವನ ಸಾಗಿಸುತ್ತಿದ್ದ ಅವರು ವಯೋಸಹಜ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರಷ್ಟೆ. ಪ್ರಗತಿ ವಿದ್ಯಾಲಯ, ಮೂರೂರು ಪ್ರೌಢಶಾಲಾ ವಿದ್ಯಾರ್ಥಿಗಳಾದ ನಾವು (1995-96 SSLC BATCHMATES) 2026, ಜನವರಿ 25ರಂದು ಹಮ್ಮಿಕೊಂಡಿದ್ದ ‘ಗುರುವಂದನಾ / ಸ್ನೇಹಸಮ್ಮಿಲನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮನ್ನೆಲ್ಲ ಹರಸಿದ್ದರು. ಆಶೀರ್ವದಿಸಿ ಕಿವಿಮಾತು ಹೇಳಿದ್ದರು. ಆದರೆ, ಆ ಭೇಟಿ ಕೊನೆಯಾಯಿತು. 30 ವರ್ಷಗಳ ಬಳಿಕ ಆಶೀರ್ವಾದ ಪಡೆದ ನಾವು ಧನ್ಯರು ಎನ್ನುವ ಸಮಾಧಾನದ ಭಾವ ಉಳಿಸಿಹೋದರು. ಮರೆಯಲಾಗದ ಕ್ಷಣವಾಗಿಸಿ ಬಾರದ ಲೋಕ ಸೇರಿಕೊಂಡರು.

ಹೋಗಿ ಬನ್ನಿ… ಎಂದಷ್ಟೆ ಹೇಳ ಬೇಕಾದ ಸಂದಿಗ್ಧತೆ. ಅನಿವಾರ್ಯವಾಗಿ, ನಮ್ಮೊಂದಿಗಿಲ್ಲ ಎನ್ನಬಹುದೆ ಹೊರತು, ಶಿಷ್ಯರ ನಮ್ಮೆಲ್ಲರ ಮನಸ್ಸಲ್ಲಿ ಸದಾ ಉಳಿದುಕೊಳ್ಳಲಿದ್ದೀರಿ. ನಮ್ಮ ಬದುಕಿನ ಪುಟ ಪುಟಗಳಲ್ಲೂ ಅಪ್ಯಾಯಮಾನರು ನೀವು. ನಮ್ಮ ಮೇಷ್ಟ್ರು ಎಂದು ಎದೆತಟ್ಟಿ ಹೆಮ್ಮೆಯಿಂದ ಹೇಳಿಕೊಳ್ಳುವ ಮೇರು ವ್ಯಕ್ತಿತ್ವ ನಿಮ್ಮದು.
ಹೋಗಿ ಬನ್ನಿ.

ಹೌದು, ಎಸ್. ಕೆ. ಭಟ್ ಒಂದು ಅಚ್ಚರಿ. ನಾನಾ ಕಾರಣಗಳಿಂದ ವಿಶೇಷವೆನಿಸುವ ಗುರು. ಶಿಷ್ಯವೃಂದದ ಅಚ್ಚುಮೆಚ್ಚು. ಅಪಾರ ದೂರದೃಷ್ಟಿ ಇರುವ ಮೇಷ್ಟ್ರು, ಹಿತೈಷಿ. ನನ್ನ ಪಾಲಿನ ದಾರಿ ದೀಪ. ಇದಕ್ಕೊಂದು ಸಣ್ಣ ಘಟನೆ ಹಂಚಿಕೊಳ್ಳಬೇಕು ಅನಿಸುತ್ತಿದೆ.‌ 30ವರ್ಷಗಳ ಹಿಂದೆ ನಡೆದದ್ದು.

SSLC ಫಲಿತಾಂಶ ಪ್ರಕಟವಾಗಿ, ಅಂಕಪಟ್ಟಿ ಪಡೆಯಲೆಂದು ಶಾಲೆಗೆ ಹೋದ ದಿನದ ಮಾತು. ಗುರುಗಳನ್ನು ಭೇಟಿ ಮಾಡಿ ಫಲಿತಾಂಶ ತಿಳಿಸಬೇಕಿತ್ತು. ಶಾಲೆಯ ಆವರಣಕ್ಕೆ ಹೊಂದಿಕೊಂಡು ಇದ್ದ ಕ್ಯಾಂಟೀನ್ ಒಳಗಿನ ಕುರ್ಚಿಯೊಂದರಲ್ಲಿ ಕುಳಿತಿದ್ದರು. ಮುಂದೆ ಹೋಗಿ ನಿಂತುಕೊಂಡೆ. ಎಂದಿನಂತೆ ಹಾ… ಶಂಭೋ ಅಂದರು. ಖುಷಿಯಲ್ಲಿದ್ದಾರೆ ಅನಿಸಿತು. ಸರ್… ರಿಸಲ್ಟ್ ಬಂತು ಅಂದೆ. ಹೌದಾ.. ಎಂದು ನಕ್ಕು, ಏನಾಯ್ತು ಅಂತ ಕೇಳಲೇ ಇಲ್ಲ. ನನಗೂ ಹೇಳಲು ಬಿಡದೆ, ಮುಂದೆ… ಅಂದರು. ನಾನೂ ನಕ್ಕು ಸುಮ್ಮನಾದೆ. ಅರೆ, ಮುಂದೆ ಏನ್ಮಾಡ್ತ್ಯೋ… ಅಂದು ಕೈ ಎಳೆದು ಪಕ್ಕಕ್ಕೆ ಕುಳ್ಳಿರಿಸಿಕೊಂಡರು. ತಲೆಯನ್ನು ಸಾವರಿಸಿ, ಬೆನ್ನು ತಟ್ಟಿ ಒಳ್ಳೆಯದಾಗಲಿ ಅಂದರು. ಬಿ.ಕಾಂ ಮಾಡಬೇಕು, ಕುಮಟಾ ಬಾಳಿಗಾ ಕಾಲೇಜಿಗೆ ಹೋಗುವ ನಿರ್ಧಾರ ಮಾಡಿದ್ದೇನೆ ಅಂದೆ. ಕಣ್ಣರಳಿಸಿ, ತಲೆ ತೂಗಿ ಹೌದಾ… ಅಂದರು.

ತಕ್ಷಣ ಎದ್ದು ನಿಂತರು. ನಾನೂ ಎದ್ದು ನಿಲ್ಲುತ್ತಿದ್ದಂತೆ ಹೆಗಲ ಮೇಲೆ ಕೈಹಾಕಿ, ” ನೀನು ಬೇರೆ ಏನಾದ್ರು ಯೋಚಿಸ್ಲಾಗಿತ್ತು. ಬೇಕಷ್ಟು ಅವಕಾಶ ಇದ್ದು. ನಿನ್ನದು ಕ್ರಿಯೇಟಿವ್ ಮೈಂಡ್. ಕ್ರಿಯೇಟಿವ್ ಫೀಲ್ಡ್ ಆಯ್ಕೆ ಮಾಡ್ಕೊ. ಚಿತ್ರ ಚೆನ್ನಾಗಿ ಬಿಡಸ್ತೆ, ಫೈನ್ ಆರ್ಟ್ ಸೈಡ್ ಹೋಗು. ಬರವಣಿಗೆನೂ ಚೆನ್ನಾಗಿರ್ತು. ಆದ್ರೆ ಸಾಕಷ್ಟು ಓದವಾಗ್ತು. ಸೂಕ್ಷ್ಮತೆ, ಸಮಯಪ್ರಜ್ಞೆ ಬೇಕು. ಬೆಸ್ಟ್ ಅಂದ್ರೆ ನಿನಗೆ ಫೈನ್ ಆರ್ಟ್” ಅಂದರು. ಓಕೆ ಸರ್ ಇನ್ನೊಮ್ಮೆ ಯೋಚನೆ ಮಾಡುತ್ತೇನೆ ಅಂದು ಹೊರಬಂದೆ. ಅದೇನೋ, ತಪ್ಪು ಮಾಡುತ್ತಿದ್ದೇನಾ ಎನ್ನುವಷ್ಟು ಕಾಡಲಾರಂಭಿಸಿತು ಅವರ ಮಾತು. ಮನಸ್ಸಲ್ಲಿ ಇಲ್ಲದ್ದನ್ನು, ಅದರ ಬಗ್ಗೆ ಏನೂ ಗೊತ್ತಿಲ್ಲದ್ದನ್ನು ಹೇಳಿದರಲ್ಲ ಎಂದು ತಲೆ ಕೆರೆದುಕೊಂಡು ಮನೆಗೆ ಬಂದೆ.

ಮೂರ್ನಾಲ್ಕು ದಿನ ಎಷ್ಟೇ ಯೋಚಿಸಿದರೂ ಬಿ.ಕಾಂ ಬಿಟ್ಟರೆ ಬೇರೇನೂ ಯೋಚಿಸಲು ಸಾಧ್ಯವಾಗ್ತಿಲ್ಲ. ಕಡೆಗೂ ಅವರ ಸಲಹೆ ಮೀರಿ ಬಾಳಿಗಾ ಕಾಲೇಜಿನಲ್ಲಿ ಅಡ್ಮೀಶನ್ ಮಾಡಿಸಿದೆ. ಕಾಲೇಜು ದಿನಗಳು ಅಂದರೆ ಗೊತ್ತಲ್ಲ ಹೇಗಿರುತ್ತೆ ಅಂತ. ಎರಡೇ ವರ್ಷಕ್ಕೆ ಮನಸ್ಸು ಬದಲಾಯ್ತು. ಎಸ್.ಕೆ.ಭಟ್ಟರು ಹೇಳಿದ ಮಾತು ನಿಜವಾಯ್ತು. ಜ್ಞಾನೋದಯ ಅನ್ನುವಂತೆ ಚಿತ್ರಕಲೆ ಅಥವಾ ಜರ್ನಲಿಸಂ ಅಂದುಕೊಂಡು, ಬೆಟ್ಟದಷ್ಟು ಕನಸು ಕಟ್ಟಿಕೊಂಡು ಪದವಿ ವ್ಯಾಸಂಗಕ್ಕಾಗಿ ರಾತ್ರೋರಾತ್ರಿ ಮೈಸೂರು ಪಯಣ. ಸುಳ್ಳಾಗಲಿಲ್ಲ ಮೇಷ್ಟ್ರು ಹೇಳಿದ ಮಾತು. ಇಂದು ಮನಸ್ಸಿಗೆ ಬಂದಾಗಲೆಲ್ಲ ರೋಮಾಂಚನ.

ಚಿತ್ರಕಲೆ, ಬರವಣಿಗೆಯ ಹುಚ್ಚು ಅಂಟಿಕೊಂಡು ಎರಡು ದಶಕವೇ ಕಳೆದಿದೆ. ಬರವಣಿಗೆ ಮತ್ತು ಚಿತ್ರಕಲಾ ಕ್ಷೇತ್ರದಲ್ಲಿ ಸಾಸಿವೆಯಷ್ಟು ಸಾಧಿಸಿದ್ದರೆ ಅದಕ್ಕೆ ಮೂಲಕಾರಣವೇ ಎಸ್.ಕೆ.ಭಟ್ ಅವರು. ಹೀಗಾಗಿ ನನ್ನೊಳಗೆ ಭದ್ರವಾಗಿ ಉಳಿದಿದ್ದಾರೆ, ಅಚ್ಚಳಿಯದೇ ಉಳಿಯುತ್ತಾರೆ. ಕ್ಯಾಂಟೀನ್ ಒಳಗೆ ಹೇಳಿದ ಮಾತನ್ನು ಅಂದೇ ಕಿವಿಗೆ ಹಾಕಿಕೊಂಡಿದ್ದರೆ ದೃಶ್ಯಕಲಾ ಪಯಣಕ್ಕೆ ಎರಡು ವರ್ಷ ಜಾಸ್ತಿ ಆಗಿರುತ್ತಿತ್ತು.

ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಅರ್ಥಮಾಡಿಕೊಂಡು ದಾರಿ ತೋರುವ ವ್ಯಕ್ತಿತ್ವ ಅವರದ್ದಾಗಿತ್ತು. ಕ್ರಿಯಾಶೀಲರಾಗಿ ಇರುವ ವಿದ್ಯಾರ್ಥಿಗಳೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಅವರೊಂದಿಗೆ ವಾಲಿಬಾಲ್ ಆಡಿದ ದಿನಗಳಂತೂ ಮರೆಯಲು ಸಾಧ್ಯವೇ ಇಲ್ಲ. ಕ್ರೀಡೆಯಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ತಾವೂ ಜೊತೆಯಾಗಿ ಮಕ್ಕಳಾಗುತ್ತಿದ್ದರು. ಹೊರಲಾಗದಷ್ಟು ಪ್ರೀತಿ, ಸ್ನೇಹ ಕೊಟ್ಟು ಜೀವನಕ್ಕೆ ದಾರಿ ತೋರಿಸಿದವರು.

ಕಟ್ಟುಸಿರು ಬಿಟ್ಟು ಹೇಳುತ್ತಿದ್ದೇನೆ, ಎಸ್.ಕೆ. ಭಟ್ ಇನ್ನಿಲ್ಲ ಎನ್ನಲು ಈಗಲೂ ಸಾಧ್ಯವಿಲ್ಲ. ನಮ್ಮೆಲ್ಲರ ಮನದ ಆರಾಧ್ಯದೈವ ಅವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಸದ್ಗತಿ ದೊರೆಯಲಿ.
ಹೋಗಿ ಬನ್ನಿ ಮೇಷ್ಟ್ರೇ.


Share This

Leave a Reply

Your email address will not be published. Required fields are marked *