- ಮಂಡ್ಯದ ನಾಗಮಂಗಲದಿಂದ ಹಿಮಾಲಯದ ತಪ್ಪಲಿನ ತನಕ
- ಕೆಬಿಕೆ ಕಲಾಪಯಣ ಹಿನ್ನೋಟ ಪರಿಚಯಿಸುವ ಪ್ರದರ್ಶನ
ಹಿಮದಂತೆ ಭಾಸವಾಗುವ ಜಲವರ್ಣದ ಬೀಸುಗಳು (strokes), ಶಿಖರದ ಇಕ್ಕೆಲಗಳ ಇಳಿಜಾರಿನ ಹಿಮದ ರಾಶಿಗಳ ಮೇಲಿನ ಪ್ರತಿಫಲಿತ ವರ್ಣಗಳು, ಪೊದೆಗಳ ನಡುವೆ ಹರಿಯುವ ಹಿಮತಂಪು ನೀರು, ನೀಲಾಕಾಶಗಳನ್ನು ನೋಡುವಾಗ ತಪ್ಪಲಿನಲ್ಲೆಲ್ಲೋ ನಿಂತು ನೋಡುತ್ತಿದ್ದೇವೆನ್ನುವ ಭಾವ!
ತಮಗನ್ನಿಸಿದ್ದನ್ನು ತಮ್ಮದೇ ಆದ ರೀತಿ, ಶೈಲಿಯಲ್ಲಿ ಚಿತ್ರವಾಗಿಸುವ 80ರ ಹರೆಯದ ನಿವೃತ್ತ ಕಲಾ ಶಿಕ್ಷಕರು, ಕಲಾವಿದರಾದ ಕೆ.ಬಿ. ಕುಲಕರ್ಣಿ ಅವರ 60 ವರ್ಷಗಳ ವೃತ್ತಿಜೀವನದ ಒಂದು ಸುಂದರ ಹಿನ್ನೋಟ ಕಟ್ಟಿಕೊಡುವ ‘ಸಗ್ಗ’ ಕಲಾಪ್ರದರ್ಶನ (retrospective art exhibition) ಬೆಂಗಳೂರಿನ ಚಿತ್ರಕಲಾ ಪರಿಷತ್ನ ಗ್ಯಾಲರಿ 2 ಮತ್ತು 3ರಲ್ಲಿ ಏಪ್ರಿಲ್ 8ರಿಂದ 12ರ ತನಕ ನಡೆಯಿತು ನಡೆಯುತ್ತಿದೆ. ಈ ಇಳಿವಯಸ್ಸಿನಲ್ಲೂ ಕಲಾಕೃತಿಗಳನ್ನು ರಚಿಸಿ, ಪ್ರದರ್ಶನ ಏರ್ಪಡಿಸಬೇಕು ಎನ್ನುವ ಅವರ ಉತ್ಸಾಹ ದಾಹ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. 60ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ವಿವಿಧ ಪ್ರಯೋಗಾತ್ಮಕ ಕೃತಿಗಳ ರಚನೆಗೂ ಒಗ್ಗಿಕೊಂಡಿರುವ ಕುಲಕರ್ಣಿ ಅವರು ಈಗಲೂ ಪೆನ್ನು, ಬ್ರಶ್ ಹಿಡಿದು ಕಲಾಕೃತಿಗಳನ್ನು ರಚಿಸಬಲ್ಲರು.
ಹೆಸರಲ್ಲೇ ಇರುವಂತೆ ‘ಸಗ್ಗ’ ಕಲಾಪ್ರದರ್ಶನದಲ್ಲಿ ಪ್ರದರ್ಶಿತ ಕಲಾಕೃತಿಗಳು ಕೇವಲ ಕುಲಕರ್ಣಿ ಅವರ ಸ್ವರ್ಗವಷ್ಟೇ ಅಲ್ಲ, ಪ್ರತಿಯೊಬ್ಬ ನೋಡುಗರಿಗೂ ಸ್ವರ್ಗವೆನ್ನುವುದರ ಕಲ್ಪನಾತ್ಮಕ ಖುಷಿಗೆ ಸಾಕ್ಷಿಯಾಗುವಂತವು. ಮಂಡ್ಯ ಜಿಲ್ಲೆಯ ನಾಗಮಂಗಲ ಸುತ್ತಮುತ್ತಲಿನ ಭೂದೃಶ್ಯವನ್ನು ಜಲವರ್ಣದಲ್ಲಿ ತಮ್ಮಿಚ್ಚೆಯಂತೆ ಚಿತ್ರಿಸಿ, ಅನುಭವಿಸಿದ ರೀತಿ ಗಮನಾರ್ಹ. ತಾವು ನಾಗಮಂಗಲದಲ್ಲಿ ಕಳೆದ ದಿನಗಳನ್ನು ಕಲಾಕೃತಿಯೊಂದಿಗೆ ಆಸಕ್ತಿದಾಯಕ ಕಥೆಯಾಗಿಸಿ ಎಳೆಎಳೆಯಾಗಿ ತೆರೆದಿಡುತ್ತಾರೆ.
ಅವರ ಹಿಮಾಲಯ ಸರಣಿ ಕಲಾಕೃತಿಗಳು ಗಮನ ಸೆಳೆಯುವಂತವು. ಆರಂಭದಲ್ಲಿ ಹೇಳಿದಂತೆ ಈ ಸರಣಿ ಕಲಾಕೃತಿಗಳಲ್ಲಿನ ಜಲವರ್ಣದ ಬೀಸುಗಳು, ಹಿಮರಾಶಿಗಳಲ್ಲಿ ಕಾಣಿಸುವ ಪ್ರತಿಫಲಿತ ಬಣ್ಣಗಳು, ನೀಲಾಕಾಶಗಳನ್ನೆಲ್ಲ ಚಿತ್ರಿಸಿರುವ ಕ್ರಮ ವಿಶೇಷವೆನಿಸುತ್ತವೆ. ಚಿತ್ರರಚನಾ ಶೈಲಿ, ವಿಧಾನ ಅವರನ್ನು ಎಷ್ಟು ಆಳವಾಗಿ ಆವರಿಸಿಕೊಂಡಿದೆ ಎನ್ನುವುದನ್ನು ಹಿಮಾಲಯ ಸರಣಿ ಕಲಾಕೃತಿಗಳಲ್ಲಿ ಗಮನಿಸಬಹುದಾಗಿದೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಕುಲಕರ್ಣಿ ಅವರು, ಹೊಸತನದ ಪ್ರಭಾವಕ್ಕೂ ಒಳಗಾಗಿದ್ದಾರೆ. ಆ ನೆಲೆಯಲ್ಲಿ ಒಂದಿಷ್ಟು ಕಲಾಕೃತಿಗಳನ್ನೂ ಚಿತ್ರಿಸಿದ್ದಾರೆ. ಆದರೆ, ಎಲ್ಲಿಯೂ ಬೇರೆ ಶೈಲಿಯ ಪ್ರಭಾವಕ್ಕೆ ಒಳಗಾಗದೇ ತಮ್ಮತನವನ್ನು ಉಳಿಸಿಕೊಂಡಿದ್ದಾರೆ.
ಕಲಾಕೃತಿ ಕಲಾವಿದನ ಭಾವಾಭಿವ್ಯಕ್ತಿ. ಅನುಭೂತಿಯನ್ನೂ ಮೀರಿದ್ದು. ಆದರೆ, ಈ ಕಾಲಘಟ್ಟದಲ್ಲಿ ಕಲೆ ಅಥವಾ ಕಲಾಕೃತಿ ಪ್ರಚಾರದ, ವಾಣಿಜ್ಯದ ಸರಕು ಎನ್ನುವ ರೀತಿಯಲ್ಲಿ ಬೆಳೆದು ನಿಂತಿದೆ. ಕಲಾವಿದನ ಭಾವ ಮತ್ತು ಕಣ್ಣೋಟಕ್ಕೆ ವಿರುದ್ಧವಾದ ಅಭಿವ್ಯಕ್ತಿ ಅನಿಸಲಾರಂಭಿಸಿದೆ. ಬದಲಾವಣೆ ಜಗ ನಿಯಮ ಆಗಿದ್ದರಿಂದ ಆಯಾ ಕಾಲಘಟ್ಟದಲ್ಲಿ ಇವನ್ನೆಲ್ಲ ಸ್ವೀಕರಿಸಿ, ಅಳವಡಿಸಿಕೊಳ್ಳುತ್ತಲೇ ಮುಂದೆ ಸಾಗಬೇಕಾಗಿರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಇದು ಅನಿವಾರ್ಯವಾಗಿರುತ್ತದೆ. ಅನೇಕರಿಗೆ ಸವಾಲು ಕೂಡ. ಆದರೆ, ಇವೆಲ್ಲದರ ನಡುವೆಯೂ ಭಾವನೆಗಳಿಗೆ ಒತ್ತು ಕೊಟ್ಟು ತಮ್ಮ ಪರಿಧಿಯನ್ನೂ ಮೀರದೆ ಕಲಾಭ್ಯಾಸ ನಡೆಸಿಕೊಂಡು ಬಂದಿರುವ ಹಿರಿಯ ಕಲಾಶಿಕ್ಷಕ, ಕಲಾವಿದ ಕೆ.ಬಿ.ಕುಲಕರ್ಣಿ ಇಂದಿಗೂ ಸ್ಫೂರ್ತಿಯಾಗಿ ನಿಲ್ಲುತ್ತಾರೆ. 60 ವರ್ಷಗಳ ಸುದೀರ್ಘ ಕಲಾಪಯಣ ಇದಕ್ಕೆ ಸಾಕ್ಷಿಯಾಗಬಲ್ಲದು. ಎಲ್ಲೂ ಮನಸ್ಸಿನಿಚ್ಛೆಗೆ ವಿರುದ್ಧವಾಗಿ ಕಲಾಕೃತಿ ರಚಿಸಿರುವ ಪ್ರಯತ್ನ ಮಾಡಿರುವಂತೆ ಕಾಣಿಸುವುದಿಲ್ಲ. ತನ್ನಿಚ್ಛಿಯಂತೆ ಬಣ್ಣಗಳನ್ನು, ಬ್ರಶ್ಗಳನ್ನು ಬಳಸಿಕೊಂಡಿರುವ ರೀತಿ ಸೋಜಿಗ. ‘ಸಗ್ಗ’ ಕಲಾಪ್ರದರ್ಶನ ಅವರ ಕಲಾಪಯಣಕ್ಕೆ ಹಿಡಿದಿರುವ ಕನ್ನಡಿ.
ಭೂದೃಶ್ಯಗಳನ್ನು ನೋಡಿ, ಅನುಭವಿಸಿ ತನ್ನ ಅಭಿವ್ಯಕ್ತಿಯನ್ನಾಗಿಸಿಕೊಳ್ಳುವಲ್ಲಿ ಕುಲಕರ್ಣಿ ಸಿದ್ಧಹಸ್ತರು. ತಾವು ಭೇಟಿ ನೀಡುವ ಸ್ಥಳಗಳಲ್ಲಿ ಸಮಯ ಮಾಡಿಕೊಂಡು ಚಿತ್ರ ರಚನೆಯಲ್ಲಿ ತೊಡಗಿಕೊಳ್ಳುವ ಕುಲಕರ್ಣಿ ಅವರು ತಮ್ಮೆದುರಿಗಿನ ಭೂದೃಶ್ಯವನ್ನೇ ಅಭಿವ್ಯಕ್ತಿಯಾಗಿಸಿಕೊಳ್ಳುತ್ತಾರೆ. ಪ್ರಕೃತಿಯ ಮಡಿಲಿನ ಆ ಕ್ಷಣದ ಅನುಭೂತಿಯನ್ನೇ ಸ್ವರ್ಗವೆನ್ನುವ ರೀತಿ ಪ್ರೀತಿಸುತ್ತಾರೆ. ‘ಸಗ್ಗ’ ಕಲಾಪ್ರದರ್ಶನದಲ್ಲಿ ಪ್ರದರ್ಶಿತ ಒಂದೊಂದು ಕಲಾಕೃತಿಯೂ ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ಸಮಕಾಲೀನ ಮತ್ತು ಸಮಕಾಲೋನೋತ್ತರ ನೆಲೆಯಲ್ಲೂ ಅವರ ಕಲಾಕೃತಿಗಳನ್ನು ನೋಡಲು ಸಾಧ್ಯವಿದೆ. ಕಾರಣ ಅವರು ಈ ಇಳಿವಯಸ್ಸಿನಲ್ಲೂ ಎಲ್ಲ ವಯಸ್ಸಿನವರ ಜೊತೆ ಜೀವಿಸಿ, ಅನುಭವಿಸಿ ಅದರ ಸಾರ ಹೀರಲು ಬಯಸುತ್ತಾರೆ. ಹೀಗಾಗಿ ‘ಸಗ್ಗ’ ಸಂದರ್ಭೋಚಿತ ಕಲಾಪ್ರದರ್ಶನ.








