- ಒರತೆ ಸಹಿತ ಭಿನ್ನ ಕಲಾಭಿವ್ಯಕ್ತಿಯ ‘ಜಲ’ಧಾರೆ
- ಒಂದೊಳ್ಳೆಯ ಸಮಕಾಲೀನ ಕಲಾಪ್ರದರ್ಶನ
‘ಜಲ’! ಈ ಎರಡಕ್ಷರದ ಮಹಿಮೆ ಊಹಿಸಲಾಗದ್ದು. ಜಲ ಇಲ್ಲದೆ ಬದುಕಿಲ್ಲ. ಭೂಮಿಯ ಉದರದಲ್ಲಿ ಉದಯಿಸಿ ಮೇಲ್ಭಾಗದಲ್ಲಿ ನಿಂತು ಸಕಲ ಜೀವಿಗಳಿಗೂ ಜೀವ ಒದಗಿಸುವ ಜಲ ಬತ್ತಬಾರದು. ಬತ್ತದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರಮೇಲಿದೆ.
ಆದರೆ, ಜಲ ಮಡಿಲ ಮಗು ಎನ್ನುವುದನ್ನೇ ಮರೆತ ಪರಿಣಾಮವಾಗಿ ಭೂಮಿಯ ಮೇಲೆ ಏನೇನೆಲ್ಲಾ ಸೃಷ್ಟಿಯಾಗುತ್ತಿದೆ ಎನ್ನುವುದನ್ನು ಕಾಣುತ್ತಿದ್ದೇವೆ. ಜಲ ಕೋಪಿಸಿಕೊಂಡರೆ ಎಂತೆಂಥ ವಿಪತ್ತು ಸಂಭವಿಸಬಹುದು ಎನ್ನುವುದನ್ನೂ ನೋಡುತ್ತಿದ್ದೇವೆ. ಹೀಗಾಗಿ ಜಲಚಕ್ರದ ಮಹತ್ವವನ್ನು ಎಲ್ಲರೂ ಅರಿಯಬೇಕಿದೆ. ಜಲದ ಮೂಲ ಕಾಪಾಡಿಕೊಳ್ಳಬೇಕಿದೆ.
ಇಟಲಿಯ ಪ್ರಸಿದ್ಧ ಕಲಾವಿದ ಲಿಯೊನಾರ್ಡೊ ಡಾ. ವಿಂಚಿ ಜಲದ ಬಗ್ಗೆ ಹೇಳಿದ್ದು ಹೀಗೆ… “Water is the driving force of all nature”. ಜಲ ಪ್ರತಿಯೊಂದು ಪ್ರಕೃತಿಯ ಪ್ರೇರಕ ಶಕ್ತಿ. ಜಲ ಇಲ್ಲದೆ ಪ್ರಕೃತಿ ಇಲ್ಲ, ಪ್ರಕೃತಿ ಇಲ್ಲದೆ ನಾವಿಲ್ಲ. ನಮ್ಮ ಉಸಿರಾಟಕ್ಕೆ ಬೇಕಾದ ಆಮ್ಲಜನಕ ಸಿಗುವುದೇ ಪ್ರಕೃತಿಯಿಂದ. ಇಂತಹ ಅದ್ಭುತ ಸಂಪನ್ಮೂಲ ಜಲದ ಬಗ್ಗೆ ಅರಿಯಬೇಕಾದ ಅಗತ್ಯತೆ ಈಗ ವಿಶ್ವಮಟ್ಟದಲ್ಲಿದೆ.
ಇಂತಹದ್ದೊಂದು ಜಾಗೃತಿ ಮೂಡಿಸುವ ‘ಜಲ’ ಸಮೂಹ ಕಲಾಪ್ರದರ್ಶನ ಬೆಂಗಳೂರಿನ ರಂಗೋಲಿ ಮೆಟ್ರೋ ಕಲಾ ಕೇಂದ್ರದಲ್ಲಿ ನಡೆಯುತ್ತಿದೆ. ಸಮಕಾಲೀನ ಸಂದರ್ಭದ 21 ಯುವ ಕಲಾವಿದರು ತಮ್ಮ ಕಲಾಕೃತಿಗಳ ಮೂಲಕ ನೀರಿನ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸಿದ್ದಾರೆ. ರಂಗೋಲಿ ಕಲಾ ಕೇಂದ್ರಕ್ಕೆ 13ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆಯೋಜನೆಯಾಗಿರುವ ‘ಜಲ’ ಕಲಾಪ್ರದರ್ಶನವನ್ನು ಕಲಾವಿದರಾದ ಪ್ರದೀಪ್ ಕುಮಾರ್ ಡಿ. ಮತ್ತು ಸಮೀರ್ ರಾವ್ ಕ್ಯುರೇಟ್ ಮಾಡಿದ್ದಾರೆ.
ಕಲಾವಿದ ತನ್ನ ಅಭಿವ್ಯಕ್ತಿ ಮಾಧ್ಯಮಗಳ ಮೂಲಕ ಹೇಗೆ ಗಮನಸೆಳೆಯಬಲ್ಲ, ಪ್ರಕೃತಿಯ ಆಗು-ಹೋಗುಗಳಿಗೆ ಹೇಗೆ ಸ್ಪಂದಿಸಬಲ್ಲ ಎನ್ನುವುದಕ್ಕೆ ‘ಜಲ’ ಕಲಾಪ್ರದರ್ಶನ ನಿದರ್ಶನವಾಗಲಿದೆ. ಪ್ರತಿಯೊಂದು ಕಲಾಕೃತಿಯೂ ನೋಡುಗರ ಜೊತೆ ಸಂಭಾಷಿಸಬಲ್ಲ ವಿಷಯಾಧಾರಿತ ಅರ್ಥಪೂರ್ಣ ಅಭಿವ್ಯಕ್ತಿ. ಮೂರ್ತ-ಅಮೂರ್ತಗಳಿಂದ ಕೂಡಿದ ಸಂವೇದನಾಶೀಲ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿದೆ. ಆಧುನಿಕ ಕಲಾ ಸಂದರ್ಭದ ಚಳವಳಿಯ ಸಂದರ್ಭದ ಭಾವನಾತ್ಮಕ ಅಂಶಗಳು ಅನೇಕ ಕಲಾಕೃತಿಗಳಲ್ಲಿ ಗಮನಸೆಳೆಯುತ್ತಿವೆ.
ಇನ್ನೊಂದು ಬಹಳ ಮುಖ್ಯವಾದ ಅಂಶವೇನೆಂದರೆ ಕಲಾಕೃತಿಗಳ ಅಳತೆ. ಈ ಕಾರಣಕ್ಕಾಗಿಯೂ ಪ್ರದರ್ಶನ ಹೆಚ್ಚು ಮುಖ್ಯವಾಗಿದೆ. ಅಳತೆ ಮತ್ತು ಸರಳತೆ ಕಲಾವಿದರನ್ನು ಹೇಗೆಲ್ಲಾ ಆಕರ್ಷಿಸಬಲ್ಲದು ಹಾಗೂ ಕಲಾವಿದ ತನ್ನ ನೋಡುಗರ ಗಮನವನ್ನು ಹೇಗೆ ಆಕರ್ಷಿಸಬಲ್ಲ ಎನ್ನುವ ಪ್ರಯತ್ನ ಈ ಪ್ರದರ್ಶನದಲ್ಲಿ ಕಂಡುಕೊಳ್ಳಲು ಸಾಧ್ಯವಾಗಲಿದೆ.
ಇವೆಲ್ಲದರ ಜೊತೆಗೆ ಕಲಾವಿದ ತನ್ನ ಸ್ಟುಡಿಯೋ ಸ್ಪೇಸ್ ಬಳಸಿಕೊಳ್ಳುವಲ್ಲಿ ಏನು ಜಾಣತನ ತೋರಬಲ್ಲ ಎನ್ನುವುದಕ್ಕೂ ಇಲ್ಲಿ ಉದಾಹರಣೆ ಸಿಗಲಿದೆ. ಕಲಾವಿದ ಸಚಿನ್ ಶಾಸ್ತ್ರಿ ಉದ್ದನೆಯ ಕಾಗದದ ರೊಲ್ ಬಳಸಿಕೊಂಡು ಗ್ಯಾಲರಿಯಲ್ಲೆ ಕಲಾಕೃತಿ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಕಲಾತ್ಮಕ ಬದುಕು ಬಯಸುವ ಕಲಾವಿದನಿಗೆ ನೋಡುಗರ ಜೊತೆಗಿನ ಮಾತುಕತೆ, ಜನಸ್ಪಂದನೆ ಮುಖ್ಯವಾಗಲಿದೆ ಎನ್ನುವುದಕ್ಕೆ ಈ ಪ್ರಕ್ರಿಯೆ ಸಾಕ್ಷಿಯಾಗಲಿದೆ. ನಿಜಕ್ಕೂ ಇದೊಂದು ಒಳ್ಳೆಯ ಪ್ರಯತ್ನ, ಒಳ್ಳೆಯ ನಿರ್ಧಾರ.
ಹನುಮಂತ ಟಿ., ನಾಗರಾಜು ಪಿ, ಸಂದೀಪ್ ಡಿ.ಎಚ್., ಮನೊಜ್ ಮೇಗಲಮನಿ, ಅಕ್ಷಯ್ ಭಟ್, ಜಾನ್ ಎಚ್.ವಿ., ಮಲ್ಲಿಕಸಾಬ್ ಆರ್. ನದಾಫ್, ಮಧುಶ್ರೀ ಎಚ್.ಎಂ., ಯಶಸ್ವಿನಿ ಮೂಲ, ಮಹದೇವ್ ಎ., ನಾಗರಾಜ್ ಹಳ್ಳದ್ ಮಾದಬಾಳ, ಭರತ್ ಲದ್ದಿಯವರ್, ಅರವಿಂದ ಕಾಂಬ್ಳೆ, ಈಶ್ವರಯ್ಯ ಮಠಪತಿ, ಸಂತೋಷ್ ಪತ್ತಾರ್, ಪ್ರಶಾಂತ ಕೆ., ವಿನ್ಯಾಸ ಕಾಟೇನಹಳ್ಳಿ, ರಾಕೇಶ್ ವೈ.ಎಂ., ನಾಮದೇವು ಪಾಟೇಕರ್, ಯದುನಂದನ್ ಎನ್. ಅವರ ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ.
ಕಲಾಪ್ರದರ್ಶನ ಸಮಯೋಚಿತ ಎನ್ನುವುದನ್ನು ಉಲ್ಲೇಖಿಸಬೇಕು ಅನಿಸುತ್ತಿದೆ. ಕಾರಣ ನೀರಿನ ಮಹತ್ವ ಗೊತ್ತಾಗುವುದು ಬೇಸಿಗೆಯ ಬಿರುಬಿಸಿಲಿನ ಬಾಯಾರಿಕೆ, ಬಳಕೆಗೆ ಕೊರತೆ ಎದುರಾದಾಗ ಮಾತ್ರ. ಎಲ್ಲರಿಗೂ ಗೊತ್ತಿರುವ ಹಾಗೆ, ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ನೀರಿಗಾಗಿ ಹಾಹಾಕಾರವಿದೆ. ರೈತ ಮಳೆ ಎದುರುನೋಡುತ್ತಿದ್ದಾನೆ. ಬದಲಾದ ವಾತಾವರಣ ಪರಿಣಾಮ ಅನೇಕ ಕಡೆ ಅಕಾಲಿಕ ಮಳೆ ಜಲ ಪ್ರವಾಹ ಸಂಕಷ್ಟ ಸೃಷ್ಟಿಸಿದೆ. ಇಂತಹ ಸಂದರ್ಭಗಳ ವಿಭಿನ್ನ ದೃಶ್ಯಾವಳಿಗಳು, ಅನುಭವಗಳು ಪ್ರದರ್ಶನದ ಮೆರಗು ಹೆಚ್ಚಿಸಿವೆ. ಹೊಸ ಆಯಾಮದಲ್ಲಿ, ದಿಕ್ಕುಗಳಲ್ಲಿ ‘ಜಲ’ ಕಲಾಕೃತಿಗಳು ಹರಿಯುತ್ತಿವೆ.
ಒಂದೊಳ್ಳೆಯ ಕಲಾಪ್ರದರ್ಶನ ನಾಳೆ ಮೇ 20ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.


























