• ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ 6 ಮಂದಿ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನ
ಛಾಯಾಚಿತ್ರ ಮುದ್ರಣ ಬೆಳೆದುಬಂದಿರುವ ಬಗೆ ಒಂದು ಅಚ್ಚರಿ. 19ನೇ ಶತಮಾನದ ಆರಂಭದಲ್ಲಿ ಹುಟ್ಟಿ, ಇಂದಿನ ಡಿಜಿಟಲ್ ಮುದ್ರಣದ ನಡುವಿನ ಅವಧಿಯಲ್ಲಿ ಸಾಕಷ್ಟು ರೀತಿಯ ಬದಲಾವಣೆ ಕಂಡಿದೆ. ಈಗ ಕ್ಷಣಾರ್ಧದಲ್ಲಿ ಛಾಯಾಚಿತ್ರ ಮುದ್ರಿಸಬಲ್ಲ ತಂತ್ರಜ್ಞಾನ ನಮ್ಮ ನಡುವೆ ಇದೆ.
1826ರ ಸಂದರ್ಭವದು, ಛಾಯಾಚಿತ್ರ ಮುದ್ರಿಸಲೇಬೇಕೆಂದು ಹಠಹೊತ್ತಿದ್ದ ನೈಸ್ಫೋರ್ ನೀಪ್ಸ್ (Nicéphore Niépce) ನಡೆಸಿದ ಪ್ರಯೋಗಗಳು ಒಂದಲ್ಲ ಎರಡಲ್ಲ. ನೂರಾರು ಪ್ರಯತ್ನಗಳು ನಡೆದವು. ಅಂತಿಮವಾಗಿ ಯಶಸ್ವಿಯಾದರು. ಆದರೆ, ಪ್ರಯತ್ನ ಅಷ್ಟಕ್ಕೇ ನಿಲ್ಲಲಿಲ್ಲ. ತದನಂತರ 1841 ರಲ್ಲಿ ವಿಲಿಯಂ ಫಾಕ್ಸ್ ಟಾಲ್ಬೋಟ್ ‘ಕ್ಯಾಲೋಟೈಪ್’ (Calotype) ಪ್ರಕ್ರಿಯೆ ಮೂಲಕ ಮುದ್ರಿಸುವ ತಂತ್ರ ಕಂಡುಕೊಂಡರು. ಚಿತ್ರಗಳನ್ನು ನೆಗೆಟಿವ್ ನಿಂದ ಪಾಸಿಟಿವ್ ಮಾಡುವ ಅವಕಾಶಗಳು ಇದರಿಂದ ಸಾಧ್ಯವಾಯಿತು. ಹೀಗೆ ಮುಂದೆ, ಮಗದಷ್ಟು ಪ್ರಯೋಗಗಳು ನಡೆದವು. 1850ರ ಸಂದರ್ಭದಲ್ಲಿ
ಕೊಲೊಡಿಯನ್ ಕಾಗದ ಬಳಸಿ ಮುದ್ರಿಸುವ ಪ್ರಯತ್ನವೂ ಸಫಲತೆ ಕಂಡಿತು. 1890ರ ಸಂದರ್ಭದಲ್ಲಿ ಜಿಲಾಟಿನ್ ಮುದ್ರಣ ಅಭಿವೃದ್ಧಿ ಕಂಡಿತು. ಜೆಲಾಟಿನ್ ಮತ್ತು ಬೆಳ್ಳಿ ಹಲೈಡ್ಗಳ (Silver halide) ಬಳಕೆಗೆ ಬಂತು. ಕಪ್ಪು-ಬಿಳುಪಿನ ಛಾಯಾಚಿತ್ರ ಮುದ್ರಣ ಹೆಚ್ಚು ವೇಗ ಪಡೆದುಕೊಂಡಿತು.
ಈ ಕಾಲಘಟ್ಟದ ಮುದ್ರಣಗಳನ್ನು ನೆನಪಿಸುವ, ಆಧುನಿಕಯುಗದಲ್ಲಿ ಮತ್ತದೇ ಪದ್ಧತಿಯಲ್ಲಿ ಛಾಯಾಚಿತ್ರ ಮುದ್ರಿಸಿ ಅಂತಹದ್ದೊಂದು ಪ್ರಕಾರವನ್ನು ಮುಂದಿನ ಪೀಳಿಗೆಗೆ ದಾಟಿಸುವ ಮತ್ತು ಇನ್ನಷ್ಟು ಅನ್ವೇಷಣೆಗಳ ಮೂಲಕ ಹೊಸತು ಕಂಡುಕೊಳ್ಳುವ ಪ್ರಯತ್ನಗಳನ್ನು ಒಳಗೊಂಡ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ‘CONFLUENCE- Handcrafted Photo Prints’ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 1 ಮತ್ತು 2ರಲ್ಲಿ ನಡೆಯುತ್ತಿದೆ.
ದೆಬಾಂಜನ್ ದಾಸ್ ಗುಪ್ತಾ, ರಾಘವೇಂದ್ರ ಉಡುಪಾ, ರಾಜಕುಮಾರ್ ಕೃಷ್ಣ, ರಮೇಶ್ ಅಡ್ಕೋಳಿ, ಸಬೀರ್ ಅಹ್ಮದ್ ಮತ್ತು ಶಂಕರ್ ಕಿರಗಿ ಅವರ ಛಾಯಾಚಿತ್ರಗಳು ಪ್ರದರ್ಶಿಸಲ್ಪಟ್ಟಿವೆ. ತಂತ್ರಜ್ಞಾನದ ಈ ಯುಗದಲ್ಲಿ ಶತಮಾನಗಳ ಹಿಂದಿನ ಬಹಳ ಅಪರೂಪದ ಪದ್ಧತಿಯಲ್ಲಿ ಮುದ್ರಿಸುವ ಆಸಕ್ತಿ ತೋರಿರುವುದು ಮತ್ತು ಆ ಮುದ್ರಣಗಳನ್ನು ಆಸಕ್ತರಿಗಾಗಿ ಪ್ರದರ್ಶಿಸಿರುವುದು ಶ್ಲಾಘನೀಯ. ಮುದ್ರಣಕ್ಕೆ ಛಾಯಾಚಿತ್ರಗಳ ಆಯ್ಕೆಯಲ್ಲಿ ಇನ್ನಷ್ಟು ಗುಣಮಟ್ಟ ಇರಬೇಕಿತ್ತು. ಛಾಯಾಗ್ರಹಣದ ಶಕ್ತಿಯೇ ನೆರಳು ಮತ್ತು ಬೆಳಕು. ಹಾಗಾಗಿ ಇಂತಹ ಛಾಯಾಚಿತ್ರಗಳನ್ನು ಆಯ್ದುಕೊಂಡಿದ್ದರೆ ಬಹುಶಃ ಮುದ್ರಣದ ಗುಣಮಟ್ಟ ಇನ್ನಷ್ಟು ಸೊಗಸಾಗಿ ಇರುತ್ತಿತ್ತು.
ಈ ಕುರಿತಾದ ಮುದ್ರಣಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಬಿಡುವು ಮಾಡಿಕೊಂಡು ಪ್ರದರ್ಶನಕ್ಕೊಮ್ಮೆ ಭೇಟಿ ನೀಡಿ. ಇಂದು, ಮೇ 31 ಪ್ರದರ್ಶನ ಸಂಪನ್ನಗೊಳ್ಳಲಿದೆ. ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಧನ್ಯವಾದಗಳು.
















