• ಪುಸ್ತಕ ಮಂದಿರವಾದ ಕಲಾಶಾಲೆ ‘ಕಲಾಮಂದಿರ’
• ಕುವೆಂಪು ಸ್ಮರಿಸಿದ ಕೋಗಿಲೆ ಕಂಠದ ಎಂ.ಡಿ.ಪಲ್ಲವಿ
ಖ್ಯಾತ ಗಾಯಕಿ, ನಟಿ ಎಂ.ಡಿ.ಪಲ್ಲವಿ ಅವರ ಕೋಗಿಲೆ ಕಂಠದಿಂದ ಕುವೆಂಪು ಅವರ ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಹಾಡಿನ ಸಾಲುಗಳನ್ನು ಕೇಳಿಸಿಕೊಳ್ಳುವಾಗ ಪುಸ್ತಕಗಳ ಪುಟಪುಟದಲ್ಲೂ ಮುದ್ರಿಸಲ್ಪಟ್ಟಿವೆಯೇನೋ ಎನ್ನುವ ಭಾವ. ತೆರೆದ ಪುಸ್ತಕದ ಪುಟಗಳಿಂದ ಜ್ಞಾನವೆನ್ನುವ ಬೆಳಕು ಸೂರ್ಯನ ಕಿರಣಗಳಂತೆ ‘ಕಲಾಮಂದಿರ’ದ ಯಾವ ಮೂಲೆಯಲ್ಲೂ ಕತ್ತಲಿರದಂತೆ ರಕ್ಷಿಸುತ್ತಿವೆಯೇನೋ ಎನ್ನುವ ಕಲಾಕೃತಿಯ ಸಂದೇಶ. ಪ್ರದರ್ಶಿತ ಪುಸ್ತಕದ ಪುಟಗಳು ನಮ್ಮೆಲ್ಲರ ಓದಿನ ತುಡಿತದ ದಣಿವಾರಿಸುವ ಅಮೃತದಂತೆ ತೆರೆದುಕೊಂಡಿವೆ ಎನ್ನುವ ಸನ್ನಿವೇಶ!
ಇದೆಲ್ಲವೂ ಅನಿರೀಕ್ಷಿತ. 106 ವರ್ಷಗಳನ್ನು ಪೂರೈಸಿದ ರಾಜ್ಯದ ಅತ್ಯಂತ ಹಳೆಯ ಕಲಾಶಾಲೆಗಳಲ್ಲಿ ಒಂದಾದ ‘ಕಲಾಮಂದಿರ’ ಅಂಗಳದಲ್ಲಿ ಸಿಕ್ಕ ಬೆಳಗುವ ಬೆಳದಿಂಗಳ ಅನುಭವ. ನಿನ್ನೆ ಜುಲೈ 15, ಬುಧವಾರ ಕಲಾಮಂದಿರ ಆಡಳಿತ ಮಂಡಳಿ, ಹಿರಿಯ-ಕಿರಿಯ, ಹಳೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ‘ಕಲಾ ಫೆಸ್ಟ್ | Kala Fest’ ಕಾರ್ಯಕ್ರಮದ ಭಾಗವಾಗಿ ‘ಓಪನ್ ಲೈಬ್ರರಿ | Open Library’ ಅನಾವರಣವಾಯಿತು. ಈ ಇಡೀ ಪರಿಕಲ್ಪನೆಯೇ ಊಹಿಸಲಾಗದಂತಹ ಪ್ರತಿಷ್ಠಾಪನಾ ಅಥವಾ ಅನುಸ್ಥಾಪನಾ ಕಲಾಕೃತಿ (installation Art) ಅನಿಸಿತು. ಬಾಗಿಲ ತೆರೆದು ಒಳ ಪ್ರವೇಶಿಸಿದಂತೆ ಜ್ಞಾನಾರ್ಜನೆಗಾಗಿ ಜ್ಞಾನದೇಗುಲದೊಳಗೆ ಪ್ರದರ್ಶಿತ ಪುಸ್ತಕಗಳು ಮೈನವಿರೇಳಿಸುವಂತೆ ಮಾಡಿದವು. ಭಾವನಾತ್ಮಕ ಅನಿಸಿದರೂ ಆ ಕಂಪನದ ತೀವ್ರತೆ (Intensity of vibration) ತುಸು ಕ್ಷಣ ವಿಚಲಿತನನ್ನಾಗಿಸಿತು. ತಿಂಗಳ ಹಿಂದಷ್ಟೇ ಕಲಾಮಂದಿರ ಸಂಸ್ಥಾಪಕರ ಬಗ್ಗೆ ಓದಿಕೊಂಡು, ಅವರು ‘ವ್ಯಕ್ತಿಯಲ್ಲ ಶಕ್ತಿ’ ಎಂದುಕೊಂಡಿದ್ದ ನನಗೆ ಅರೆ ಕ್ಷಣ ಒಳಗಡೆ ಅ.ನ.ಸುಬ್ಬರಾಯರೇ ಕುಳಿತಿರಬೇಕೆನ್ನುವ ಅಂದ ಭಾವ ಆವರಿಸಿತು. ಒಟ್ಟಾರೆ ಕಾರ್ಯಕ್ರಮ ಬಹಳ ಸುಂದರ, ಅರ್ಥಪೂರ್ಣವಾಗಿ ನೆರವೇರಿತು. ಕಲೆಯ ಮಂದಿರ ‘ಕಲಾಮಂದಿರ’ದ ಸಹೃದಯರು ಸಾಕ್ಷಿಯಾದರು.
ಕಲಾಶಾಲೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ, ಕಲಾವಿದರೂ ಆದ ಎ.ಎಂ. ಪ್ರಕಾಶ್ ಅವರ ಪ್ರೀತಿಗೆ ‘ಸ್ಟುಡಿಯೋ ಕಲಾವಿಸ್ತಾರ’ದ ಹಿರಿಯ ಶಿಲ್ಪಿ ವೆಂಕಟಾಚಲಪತಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಭಾಜನರಾದ ವಿ.ಹರಿರಾಂ, ಹಿರಿಯ ಕಲಾವಿದ ಎಚ್.ಎಸ್. ವೇಣುಗೋಪಾಲ ಅವರು ಉಪಸ್ಥಿತರಿದ್ದರು. ಗಾಯಕಿ ಎಂ.ಡಿ. ಪಲ್ಲವಿ ಅವರು ಜೊತೆ ಇದ್ದು, ಕುವೆಂಪು ಅವರನ್ನು ಸ್ಮರಿಸಿ ತಮ್ಮ ಕಂಠದಿಂದ ನಮ್ಮನ್ನೆಲ್ಲ ಕ್ಷಣ ಕಾಲ ತಲ್ಲೀನಗೊಳಿಸಿದರು. ಇದಕ್ಕಿಂತ ಇನ್ನೇನು ಬೇಕು, ಕಾರ್ಯಕ್ರಮ ಚೆಂದವಾಗಿಸಲು. ಪಲ್ಲವಿ ಅವರೇ, ತುಂಬು ಹೃದಯದ ಧನ್ಯವಾದಗಳು ತಮಗೆ.
ಕಲಾವಿದ್ಯಾರ್ಥಿಗಳಿಗೆ ವಿಭಿನ್ನ ಪುಸ್ತಕಗಳನ್ನು ಓದಿಕೊಳ್ಳಲು ಇದೊಂದು ಸುವರ್ಣಾವಕಾಶ. ಇನ್ನೆರಡು ದಿನ ಪುಸ್ತಕಗಳು ಓದಿಗೆ ಲಭ್ಯವಾಗಿರಲಿದೆ. ಅಲ್ಲಿಯೇ ಕುಳಿತು ಓದಿಕೊಳ್ಳಬಹುದು. ಓದು ರೂಢಿಸಿಕೊಳ್ಳಬಹುದು. ಇದಲ್ಲದೇ, ಕಲಾಮಂದಿರ ಇನ್ನಷ್ಟು ಕಾರ್ಯಕ್ರಮಗಳನ್ನೂ ಆಯೋಜಿಸಿದೆ.
ಶುಭವಾಗಲಿ






