ನಮ್ಮನ್ನು ಕ್ಷಮಿಸಿ ಮಾನಸಾ ಅವರೆ,
ಈ ಭಂಡ ಸರ್ಕಾರದ, ಅಧಿಕಾರಿಗಳ ಕಿವಿಗೆ ನ್ಯಾಯ ಕೇಳುವ ಯಾರ ಧ್ವನಿಯೂ ಕೇಳಿಸುವುದಿಲ್ಲ. ಅಧಿಕಾರದ ದರ್ಪ, ಮದದಲ್ಲಿ ಸಾರ್ವಜನಿಕ ನ್ಯಾಯದ ಕಡೆಗೆ ಗಮನ ಕೊಡದ ಸರ್ಕಾರದ ಮುಂದೆ ಇನ್ನೆಷ್ಟು, ಇನ್ಯಾವ ರೀತಿಯಿಂದ ಬಡಿದಾಡಿಕೊಳ್ಳಬೇಕೋ ಗೊತ್ತಿಲ್ಲ. ನಮ್ಮಿಂದ ನಿಮ್ಮ ಸಾವಿಗೆ ನ್ಯಾಯ ಕೊಡಿಸುತ್ತೇವೆಂದು ಗಟ್ಟಿಯಾಗಿ ಹೇಳಿಕೊಳ್ಳುವ ಧೈರ್ಯವೂ ಇಲ್ಲದಾಗಿದೆ. ಕ್ಷಮಿಸಿ ನಮ್ಮನ್ನು, ಆದರೆ ನ್ಯಾಯಕ್ಕಾಗಿ ಧ್ವನಿ ಎತ್ತುತ್ತೇವೆನ್ನುವ ಸಮಾಧಾನ ನಮಗಿದೆ. ನಿಮ್ಮೆಲ್ಲ ಸ್ನೇಹಿತರು, ಹಿತೈಷಿಗಳು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಾರೆ, ಹೋರಾಟಕ್ಕಿಳಿದಿದ್ದಾರೆ. ನರಸತ್ತ ವ್ಯವಸ್ಥೆಯನ್ನು ಬದಲಾಯಿಸುವುದು ಕಷ್ಟವಾದೀತು, ಆದರೆ ಈ ಸಾವಿಗೆ ನ್ಯಾಯ ಸಿಗಬೇಕು. ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ #DKShivakumar ಅವರ ಕಿವಿಗೆ ತಲುಪಿ, ಖುದ್ದು ಅವರೇ ಇದಕ್ಕೊಂದು ನ್ಯಾಯ ಕೊಡಿಸಲಿ, ಪರಿಹಾರ ಘೋಷಿಸಲಿ.
ಸ್ನೇಹಿತರೇ,
ಸಹೋದರಿ ಮಾನಸಾ ಸಾವಿಗೆ ನ್ಯಾಯ ಸಿಗಬೇಕು. ಆದರೆ, ಈ ನ್ಯಾಯಕ್ಕಾಗಿ ಆಕ್ರೋಶ ಇನ್ನೆಷ್ಟು ಮೊಳಗಬೇಕೊ ಗೊತ್ತಿಲ್ಲ. ಮಾನಸಾ ಅವರು ಬೆಂಗಳೂರು ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿ. ಸಹೋದರಿ ಮಾನಸಾ ಸಾವು ನಿಜಕ್ಕೂ ಆಘಾತವನ್ನುಂಟು ಮಾಡಿದೆ. ಪ್ರತಿಯೊಬ್ಬ ಪೋಷಕರನ್ನು ಬೆಚ್ಚಿಬೀಳಿಸಿದೆ. ನೂರಾರು ಕನಸು ಹೊತ್ತು ವಿಶ್ವವಿದ್ಯಾಲಯಕ್ಕೆ ಶಿಕ್ಷಣಕ್ಕಾಗಿ ಹೋಗುವ ವಿದ್ಯಾರ್ಥಿನಿಯ ಭವಿಷ್ಯ ಹೀಗೆ ಅನ್ಯಾಯವಾಗಿ ಕೊನೆಗೊಳ್ಳಬಾರದು. ಈ ಹಿಂದೆ ಇಂತಹ ಘಟನೆಗಳು ಘಟಿಸಿದಾಗಲೇ ಸಂಚಾರ ವ್ಯವಸ್ಥೆ ಸುಧಾರಿಸುವ ನಿರ್ಧಾರ ಆಗಬೇಕಿತ್ತು. ಆದರೆ ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳಿಗೆ ಏನನ್ನೋಣ. ಇವರಿಗೆಲ್ಲ ಢಂಗುರ ಸಾರಬೇಕೋ ಏನೊ ಗೊತ್ತಾಗುತ್ತಿಲ್ಲ. ಇವರ ಮನೆ ಮಕ್ಕಳು ಇಂತಹ ಘಟನೆಗೆ ಸಿಲುಕೊಂಡಾಗ ನೋವು ಅರ್ಥವಾಗೋದು ಎಂಬ ಆಕ್ರೋಶ ನಮ್ಮನ್ನು ಆವರಿಸಿಕೊಳ್ಳುತ್ತೆ. ಅವರ ಮಕ್ಕಳೂ ನಮ್ಮ ಸೋದರ-ಸೋದರಿಯರೇ ಅಲ್ಲವೆ, ಹಾಗಾಗಬಾರದು.
ಈಗ ಮಾನಸಾ ಸಾವು ಇಡೀ ವ್ಯವಸ್ಥೆಗೆ ಎಚ್ಚರಿಕೆಯ ಗಂಟೆ ಆಗಬೇಕು. ಮಾನಸಾ ಸಾವಿಗೆ ನ್ಯಾಯ ದೊರಕಬೇಕು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಬೇಡಿಕೆಯಂತೆ ಸರ್ಕಾರ ತತಕ್ಷಣ ವಿಶ್ವವಿದ್ಯಾಲಯ ಆವರಣದ ಒಳಗೆ ಸಾರ್ವಜನಿಕ ವಾಹನಗಳಿಗೆ ನಿರ್ಬಂಧ ಹೇರಬೇಕು. ವಿದ್ಯಾರ್ಥಿನಿ ಸಾವಿಗೆ ಸರ್ಕಾರ ಪರಿಹಾರ ಘೋಷಿಸಬೇಕು. ಈ ಸಾವಿಗೆ ಕಾರಣನಾದ ವಾಹನ ಜಪ್ತಿಮಾಡಿ ವ್ಯಕ್ತಿಯನ್ನು ಬಂಧಿಸಬೇಕು. ಅಪಘಾತ ಮುನ್ನೆಂದೂ ನಡೆಯದ ರೀತಿಯಲ್ಲಿ ಸಂಚಾರ ವ್ಯವಸ್ಥೆ ಸುಧಾರಿಸಬೇಕು. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಲಿ. ಕಬ್ಬನ್ ಪಾರ್ಕ್ ಪ್ರವೇಶಕ್ಕೆ ಹೇಗೆ ನಿರ್ಬಂಧವಿದೆಯೋ ಅದೇ ರೀತಿ ಇಲ್ಲಿಯೂ ಸುಕ್ತ ನಿರ್ಬಂಧ ಜಾರಿಯಾಗಬೇಕು.
ಮಾನಸಾ ಸಾವು ಆಘಾತ, ಭಯ ಮೂಡಿದೆ. ಮೃತ ಸಹೋದರಿಗೆ ಸದ್ಗತಿ ದೊರೆಯಲಿ. ಪೋಷಕರು ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆ ಈ ದುಃಖ ಭರಿಸುವ ಶಕ್ತಿ ಆ ದೇವರು ದಯಪಾಲಿಸಲಿ.



