ಇತಿಹಾಸ ದಾಖಲಿಸುವ ಸಿಂಗ್ ಕ್ಯಾಮೆರಾ ಕಹಾನಿ!

Share This

* ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ಬ್ರಿಗೇಡಿಯರ್ ಎ.ಪಿ.ಸಿಂಗ್ ಛಾಯಾಚಿತ್ರಗಳ ಪ್ರದರ್ಶನ

Perhaps even the photographer cannot express the truth that photographs reveal…

ವೃತ್ತಿ ಬದುಕಿನ ಅನೇಕ ಸಂದರ್ಭಗಳಲ್ಲಿ ಇಂತಹ ಸಾಲುಗಳು ನಮ್ಮನ್ನು ಎಚ್ಚರಿಸುತ್ತಲೇ ಇರುತ್ತವೆ. ಏನೋ ಯೋಚಿಸುತ್ತಾ ಕುಳಿತಿರುವಾಗ ಇದ್ದಕ್ಕಿದ್ದಂತೆ ಬದುಕನ್ನು ಎಚ್ಚರಿಸುವ ಅಥವಾ ಬದುಕಿನ ದಿಕ್ಕನ್ನೇ ಬದಲಿಸುವ ಸಾಲುಗಳು ಮೌನಕ್ಕೆ ಜಾರಿಕೊಳ್ಳುವಂತೆ ಮಾಡಿಬಿಡುತ್ತವೆ. ನಮ್ಮ ಮನಸ್ಸು ಯಾಕೆ ಹೀಗೆ? ಈಗ ಯಾಕೆ ಈ ಎಚ್ಚರಿಕೆ? ಬಹಳ ವಿಚಿತ್ರವಾಗಿದೆಯಲ್ಲ ಎನ್ನುವಷ್ಟರ ಮಟ್ಟಿಗೆ ಆ ಕ್ಷಣಗಳನ್ನು ಅನುಭವಿಸಿರುತ್ತೇವೆ.

ಯಾರಿಗೂ ಇದೇನು ಹೊಸದಲ್ಲ. ಎಲ್ಲರ ಜೀವನ ಪಯಣದಲ್ಲೂ ಘಟಿಸಿರುತ್ತವೆ. ಕೆಲವೊಮ್ಮೆ ಅನುಭವಕ್ಕೂ ಬಂದಿರುತ್ತವೆ. ಆದರೆ, ನಾವು ಅದನ್ನು ಗ್ರಹಿಸಿಕೊಂಡಿರುವುದಿಲ್ಲ ಅಥವಾ ಗಂಭೀರವಾಗಿ ಪರಿಗಣಿಸಿರುವುದಿಲ್ಲ. ಹಾಗೆಯೇ, ಅನೇಕ ಸಂದರ್ಭಗಳಲ್ಲಿ ನಮ್ಮ ಬಿಡುವಿನ ಸಮಯವನ್ನು ಹೇಗೆ ಕಳೆಯುವುದು ಎಂದು ಯೋಚಿಸುವಾಗಲೂ ಮನಸ್ಸಿಗೆ ಸಂದೇಶವೊಂದು ರವಾನೆಯಾಗಿರುತ್ತದೆ. ಅಚ್ಚರಿ ಪಡುವ ರೀತಿಯಲ್ಲಿ ನಮಗದು ಕಾಡುವುದುಂಟು. ಇದಕ್ಕೆ ಸಾಕಷ್ಟು ಉದಾಹರಣೆಗಳೂ ಸಿಗುತ್ತವೆ. ನೆನಪುಗಳ ಬುಟ್ಟಿಯಲ್ಲಿ ಹುಡುಕಾಡಿದರೆ ಒಂದಲ್ಲಾ ಒಂದು ಸಿಗುತ್ತವೆ. ಹುಡುಕುವ ವ್ಯವಧಾನ ಬೇಕು.

ಅಂದಹಾಗೆ, ಈ ವಿಚಾರವನ್ನು ಪ್ರಸ್ತಾಪಿಸಲು ಕಾರಣವಿದೆ. ಎಲ್ಲರಲ್ಲೂ ಇರುವ ಸುಪ್ತ ಮನಸ್ಸು (Subconscious Mind) ಬಹಳ ಸಂದರ್ಭಗಳಲ್ಲಿ ದೇಹದೊಳಗಿನ ಬೇರೆ ಬೇರೆ ವ್ಯವಸ್ಥೆಯನ್ನಾಧರಿಸಿ ಕೆಲವೊಂದು ಸಂದೇಶಗಳನ್ನು ನೀಡುತ್ತವೆ. ಆ ಕ್ಷಣದಲ್ಲಿ ನಾವು ಅದನ್ನು ನಮ್ಮ ಒಳಿತಿಗೆ ಬಳಸಿಕೊಂಡಾಗ ಬದುಕು ಹಸನಾಗಿಸಲು ಸಾಧ್ಯವಾಗಿಬಿಡುತ್ತದೆ. ಅನೇಕ ಅನುಭವಿ ಮಹಾನುಭಾವರು ಹೇಳಿರುವ ಈ ಸತ್ಯವನ್ನು ಪುನರುಚ್ಚರಿಸುದ್ದೇನಷ್ಟೆ.

ಬರಹದ ಆರಂಭದಲ್ಲಿ ಹೇಳಿದ ಸಾಲಿನಲ್ಲಿರುವಂತೆ, ಅನೇಕ ಛಾಯಾಗ್ರಾಹಕರಿಗೆ ಅನುಭವಕ್ಕೆ ಬಂದಿರುತ್ತದೆ. ಯಾವುದೇ ಛಾಯಾಚಿತ್ರಗಳು ಹೇಳುವಷ್ಟು ಸತ್ಯವನ್ನು, ವಿಚಾರವನ್ನು, ಮಾಹಿತಿಯನ್ನು ಬಹುಶಃ ಅದೇ ಚಿತ್ರವನ್ನು ಸೆರೆ ಹಿಡಿದ ಛಾಯಾಗ್ರಾಹಕನೂ ಹೇಳಲು ಸಾಧ್ಯವಾಗದಿರಬಹುದು. ಚಿತ್ರವೊಂದು 10 ವಿಚಾರಗಳನ್ನು ತೆರೆದಿಡುತ್ತದೆ ಎನ್ನುವ ಮಾತಿನಂತೆ, ಹತ್ತಲ್ಲ ನೂರಾರು ಸಂಗತಿಗಳನ್ನು ಪುಸ್ತಕದಂತೆ ತೆರೆದಿಡುವ ಛಾಯಾಚಿತ್ರಗಳ ಪ್ರದರ್ಶನ WHISPERS IN STONE – Chronicles of a Civilization‘ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 1 ಮತ್ತು 2ರಲ್ಲಿ ನಡೆಯುತ್ತಿದೆ. ಭಾರತದ ಅನೇಕ ಪ್ರದೇಶಗಳನ್ನು ಕ್ಯಾಮೆರಾ ಜೊತೆ ಸುತ್ತಾಡುವ ಬ್ರಿಗೇಡಿಯರ್ ಎ.ಪಿ.ಸಿಂಗ್ ಅವರ ಕ್ಯಾಮೆರಾ ಸೆರೆಹಿಡಿದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. ದೇಶದ ಐತಿಹಾಸಿಕ ತಾಣಗಳಲ್ಲಿನ ಅನೇಕ ವಿಶೇಷತೆಗಳನ್ನು ಗುರಿಯಾಗಿಸಿಕೊಂಡು ಅವುಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಒಂದಿಷ್ಟು ಸಾಮಾನ್ಯವೆನಿಸುವ ಛಾಯಾಚಿತ್ರವಾದರೂ, ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಹ ಗುಣಗಳನ್ನು ಹೊಂದಿವೆ. ಕೆಲವು ಛಾಯಾಚಿತ್ರಗಳಲ್ಲಿನ ಕಲಾತ್ಮಕ ಗುಣ ವೃತ್ತಿಪರರ ಗಮನ ಸೆಳೆಯುವಂತಿವೆ. ಇತಿಹಾಸ ಅರಿಯುವ, ಐತಿಹಾಸಿಕ ತಾಣಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ವಿದ್ಯಾರ್ಥಿಗಳು ನೋಡಲೇಬೇಕಾದ ಪ್ರದರ್ಶನ ಇದಾಗಿದೆ.

ಗಮನಿಸಬಹುದಾದ ಇನ್ನೊಂದು ಅಂಶವೇನೆAದರೆ, ಭಾರತೀಯ ಶಿಲ್ಪಕಲೆಗೆ ಸಾವಿರಾರು ವರ್ಷಗಳ ಹಿಂದೆ ಯಾವೆಲ್ಲಾ ಕಲ್ಲುಗಳ ಬಳಕೆ ಮಾಡಲಾಗಿದೆ, ಯಾವ ಕಾಲ ಘಟ್ಟದಲ್ಲಿ ಕಲಾಕೃತಿಯಾಗಿ ಮೂಡಿಬಂದಿತು ಎನ್ನುವುದರ ಅಧ್ಯಯನ ಯೋಗ್ಯ ಪ್ರದರ್ಶನ ಇದಾಗಿದೆ. 30,000  ವರ್ಷಗಳ ಹಿಂದೆ ಮಧ್ಯಪ್ರದೇಶದ ರಾಯ್‌ಸೇನ್ ಜಿಲ್ಲೆಯಲ್ಲಿರುವ  ಭೀಮ್‌ಭೇಟ್ಕಾ ಗುಹೆಗಳಲ್ಲಿನ ಶಿಲೆ, ಕಲೆ ಈ ಕಾಲಘಟ್ಟದಲ್ಲಿ ವಿಭಿನ್ನ ದೃಷ್ಟಿಕೋನದಲ್ಲಿ ದಾಖಲಿಸಿದ್ದಾರೆ ಸಿಂಗ್. ಈ ಮೂಲಕ ಆದಿಮಾನವರ ಕಾಲಕ್ಕೆ ನೋಡುಗರನ್ನು ಕರೆದೊಯ್ಯುವ ಪ್ರಯತ್ನ ಇದಾಗಿದೆ. ವಿಶೇಷವಾಗಿ ಅಲ್ಲಿನ ಶಿಲಾ ವಿನ್ಯಾಸ, ಪ್ರಾಕೃತಿಕ ಶಿಲಾ ವರ್ಣ ಸಂಯೋಜನೆ ಎಷ್ಟು ಆಕರ್ಷಣೀಯ ಎನ್ನುವುದನ್ನು ಗಮನಿಸಬಹುದಾಗಿದೆ. ಅಲ್ಲಿನ ಭಿತ್ತಿ ಚಿತ್ರಗಳು ಅಷ್ಟೊಂದು ವರ್ಷಗಳ ಹಿಂದಿನ ನಾಗರಿಕರ ಕಲಾಪ್ರಜ್ಞೆಯನ್ನು ದಾಖಲಾಗಿಸುವಂತೆ ಮಾಡುತ್ತವೆ. ಬದಾಮಿ-ಪಟ್ಟದಕಲ್ಲುಗಳ ಗುಹಾಂತರ ದೇವಾಲಯಗಳಲ್ಲಿನ ಶಿಲೆ ಮತ್ತು ಶಿಲ್ಪಗಳ ಗುಣ-ಲಕ್ಷಣ, ಚಾಲುಕ್ಯರ ಕಲಾತ್ಮಕ ಶೈಲಿ ಮತ್ತು ಕಲಾಪ್ರಜ್ಞೆ ಬಗ್ಗೆ ಅರಿಯುವ ಒಂದಿಷ್ಟು ಛಾಯಾಚಿತ್ರಗಳು ಗಮನ ಸೆಳೆಯುವಂತಿದೆ. ಎಲಿಫೆಂಟಾ ಗುಹೆಗಳಲ್ಲಿನ ಕಲ್ಲಿನ ವಿಶೇಷತೆ, ತಮಿಳುನಾಡಿನ ಮಹಾಬಲಿಪುರಂನಲ್ಲಿರುವ ಪಲ್ಲವರ ಕಾಲದ ಶಿಲ್ಪ ಶೈಲಿಗಳಲ್ಲಿನ ವಿಭಿನ್ನತೆ, ಭುವನೇಶ್ವರ ಸುತ್ತಮುತ್ತಲಿನ ದೇವಾಲಯ ಮತ್ತು ಅವುಗಳಲ್ಲಿನ ವಾಸ್ತುಶಿಲ್ಪ ಪರಿಕಲ್ಪನೆ, ಗೋವಾದ ಪಾಂಡವ ಗುಹೆಗಳಲ್ಲಿನ ಕಲ್ಲಿನ ಗುಣಲಕ್ಷಣಗಳು… ಹೀಗೆ ಇನ್ನೂ ಅನೇಕ ಕುತೂಹಲಗಳಿಂದ ಕೂಡಿರುವ ಛಾಯಾಚಿತ್ರಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಅಧ್ಯಯನಕ್ಕೆ ಯೋಗ್ಯವಾಗುವ ರೀತಿಯಲ್ಲಿ ಕ್ಯುರೇಟ್ ಆಗಿರುವುದು ಶ್ಲಾಘನೀಯ.

ಪ್ರದರ್ಶಿತ ಛಾಯಾಚಿತ್ರಗಳ ಮೂಲಕ ಅನೇಕ ಸಂಗತಿಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಕಲಾ ಇತಿಹಾಸ ತಜ್ಞ, ಬರಹಗಾರರಾದ ಪ್ರೊ.ಆರ್.ಎಚ್. ಕುಲಕರ್ಣಿ ಅವರು ಈ ಪ್ರದರ್ಶನವನ್ನು ಕ್ಯುರೇಟ್ ಮಾಡಿದ್ದಾರೆ. ಮುಂಬೈನ ನಾಯ್ಕ್ ಫಿಲೋಂಥ್ರೊಪಿಕ್ ಸೆಂಟರ್ (Naik Philanthropic Centre) ಪ್ರಾಯೋಜಕತ್ವ ವಹಿಸಿ ಕೈಜೋಡಿಸಿದೆ.

ಬ್ರಿಗೇಡಿಯರ್ ಎ.ಪಿ.ಸಿಂಗ್?

ಭಾರತೀಯ ಸೇನೆಯ ನಿವೃತ್ತ ಅಧಿಕಾರಿ. ಅಷ್ಟೇ ಅಲ್ಲ, ಲೇಖಕ, ಛಾಯಾಗ್ರಾಹಕ, ಸಾಹಸಿ ಆಗಿದ್ದಾರೆ. ಪರಂಪರೆಯ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದಲ್ಲದೆ ತಮ್ಮ ಕ್ಯಾಮೆರಾದಲ್ಲಿ ಸಾವಿರಾರು ಚಿತ್ರಗಳನ್ನು ಸೆರೆಹಿಡಿದಿರುವ ಹೆರಿಟೇಜ್ ಛಾಯಾಗ್ರಾಹಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಸಾಧನೆಗೆ ಸೇನಾ ಪದಕ, ವಿಶಿಷ್ಟ ಸೇವಾ ಪದಕಗಳು ಸಂದಿವೆ. ಪ್ರಪಂಚದುದ್ದಗಲಕ್ಕೂ ಸುತ್ತಿ ಬಂದಿರುವ ಭಾರತದ ಮೊದಲ ನೌಕೆಯಾದ ‘ತ್ರಿಷ್ಣಾ’ದ (1985-87) ಸಿಬ್ಬಂದಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯ ಬಳಿಕ ಛಾಯಾಗ್ರಹಣದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿರುವ ಇವರು, ಈಗಾಗಲೇ ಭಾರತೀಯ ಪರಂಪರೆಗೆ ಸಂಬಂಧಿಸಿ ಪುಸ್ತಕಗಳನ್ನು ಬರೆದು, ಪ್ರಕಟಿಸಿದ್ದಾರೆ. ‘Kashmir: The Land of Rishis, Temples of Goa’  ಇವು ಸಿಂಗ್ ಅವರು ಬರೆದಿರುವ ಪುಸ್ತಕಗಳಾಗಿವೆ.

 

 

 

 


Share This

Leave a Reply

Your email address will not be published. Required fields are marked *