ಅಧ್ಯಕ್ಷರೇ ದಯವಿಟ್ಟು ಈ ಪರಿಪಾಠ ಬೇಡಾ…

Share This

• ಗೌರವ ಪ್ರಶಸ್ತಿ ಪ್ರದಾನ ಕನ್ನಡ ನೆಲದಲ್ಲೇ ನಡೆಯಲಿ
• ಕರ್ನಾಟಕದ ಯಾವುದೇ ಸ್ಥಳವಾದರೂ ಆದೀತು
• ಕನ್ನಡನಾಡಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ
ಕರ್ನಾಟಕ ಲಲಿತಕಲಾ ಅಕಾಡೆಮಿಯು ಗೌರವ ಪ್ರಶಸ್ತಿ , ವರ್ಣಶ್ರೀ ಪ್ರಶಸ್ತಿ ಹಾಗೂ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಪ್ರಶಸ್ತಿ ಪಡೆದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಚೆನ್ನೈನ ಚೋಳಮಂಡಲದಲ್ಲಿ ಆಯೋಜಿಸಿರುವುದು ಖಂಡಿತವಾಗಿ ಅಕ್ಷಮ್ಯ. ಇದರ ಹಿಂದಿನ ಉದ್ದೇಶ ಏನು? ಕರ್ನಾಟಕದಲ್ಲಿ ಯಾವ ಸ್ಥಳವೂ ಸೂಕ್ತ ಅನಿಸಲೇ ಇಲ್ಲವೆ? ಇದೆಂತಹ ನಿರ್ಧಾರ? ದಯವಿಟ್ಟು ಲಲಿತಕಲಾ ಅಕಾಡಮಿ ಈ ನಿರ್ಧಾರವನ್ನು ಮಗದೊಮ್ಮೆ ಪರಿಶೀಲಿಸಬೇಕು. ಖಡಾಖಂಡಿತವಾಗಿ ಇದು ಸೂಕ್ತವಾದ ನಿರ್ಧಾರವಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ನೋಡಿ ಬಹಳ ಬೇಸರವಾಯಿತು.
ಯಾಕೆ ಸೂಕ್ತ ನಿರ್ಧಾರವಲ್ಲ?
1. ಕರ್ನಾಟಕ ರಾಜ್ಯ ಸರ್ಕಾರ ತನ್ನ ರಾಜ್ಯದ ಸಾಂಸ್ಕೃತಿಕ, ಕಲಾ ಕ್ಷೇತ್ರಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆನ್ನುವ ಕಾರಣಕ್ಕಾಗಿ, ಇದಕ್ಕೆ ಅರ್ಹರನ್ನು ಗುರುತಿಸಿ ಗೌರವ ಪ್ರಶಸ್ತಿ ಮತ್ತು ವರ್ಣಶ್ರೀ ಪ್ರಶಸ್ತಿ ನೀಡುತ್ತಾ ಬಂದಿದೆ. ಹೀಗಿರುವಾಗ ಈ ನೆಲದ ಪ್ರಶಸ್ತಿ ಪುರಸ್ಕೃತರನ್ನು ಬೇರೆ ರಾಜ್ಯಕ್ಕೆ ಹೋಗಿ, ಆ ನೆಲದಲ್ಲಿ ಗೌರವಿಸುವುದು, ಪ್ರಶಸ್ತಿ ಪ್ರದಾನ ಮಾಡುವುದು ಎಷ್ಟರಮಟ್ಟಿಗೆ ಸರಿ?
2. ಈ ಪರಿಪಾಠವನ್ನು ಸರ್ಕಾರ ಹಾಕಿಕೊಟ್ಟರೆ ಮುಂದೊಂದು ದಿನ ಎಲ್ಲಾ ಅಕಾಡೆಮಿಗಳೂ ಅನುಸರಿಸುತ್ತಾ ಹೋಗಬಹುದು. ಹಾಗಾದರೆ ಈ ನೆಲಕ್ಕೆ, ಇಲ್ಲಿನ ಪ್ರಜೆಗಳಿಗೆ ಅರ್ಥಾತ್ ಕನ್ನಡಿಗರಿಗೆ ನೀವು ಮಾಡುತ್ತಿರುವುದು ಅವಮಾನವಲ್ಲವೇ ಇದು? ರಾಜ್ಯದ ಜನ ತಮ್ಮ ನಡುವಿನ ಕಲಾವಿದರ ಸಾಧನೆಯನ್ನು ನೋಡಿ ಖುಷಿ ಪಡಬೇಕಾದ ಸುಸಂದರ್ಭವನ್ನು ಕಳೆದುಕೊಳ್ಳಬೇಕಾ? ಬೇರೆ ರಾಜ್ಯದಲ್ಲಿ ಆಯೋಜನೆಯಾದರೆ ಕನ್ನಡಿಗರು, ಕನ್ನಡನಾಡಿನ ಕಲಾವಿದರು, ಕಲಾಪ್ರೇಮಿಗಳು ಎಷ್ಟು ಮಂದಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ? ತನ್ನ ಜಿಲ್ಲೆಯ, ತನ್ನ ತಾಲೂಕಿನ, ತನ್ನ ಊರಿನ ಅಥವಾ ತನ್ನ ಹೋಬಳಿಯ ಕಲಾವಿದನಿಗೆ ಗೌರವ ಸಲ್ಲಿಕೆಯಾಗುವಾಗ ಆ ಭಾಗದ ಮಿತ್ರರು ಪಾಲ್ಗೊಳ್ಳಲು ಬಯಸಿದಲ್ಲಿ ಬೇರೆ ರಾಜ್ಯಕ್ಕೆ ಹೋಗಿ ನೋಡಿ ಬರಬೇಕಾದ ಕ್ರಮ ಎಷ್ಟು ಸರಿ? ಖಂಡಿತವಾಗಿ ಇದು ಸೂಕ್ತ ನಿರ್ಧಾರ ಅನಿಸುತ್ತಿಲ್ಲ.
3. ಇದರೊಟ್ಟಿಗೆ ವಾರ್ಷಿಕ ಕಲಾಪ್ರದರ್ಶನದಲ್ಲಿ ಬಹುಮಾನ ಪಡೆದ ಕಲಾವಿದರಿಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಚೋಳಮಂಡಲದಲ್ಲಿ ಆಯೋಜಿಸಲು ನಿರ್ಧರಿಸಿದ್ದೀರಿ. ರಾಜ್ಯದ ಕಲಾವಿದರು, ಕಲಾರಸಿಕರು ಇವರ ಕಲಾಕೃತಿಗಳನ್ನು ಚೋಳಮಂಡಲಕ್ಕೆ ಬಂದು ನೋಡಬೇಕೆ? ಹೌದು ಎನ್ನುವುದಾದರೆ ಯಾವ ಪುರುಷಾರ್ಥಕ್ಕೆ ಈ ಸ್ಪರ್ಥೆ ಆಯೋಜನೆಯಾಗಬೇಕು? ಕರ್ನಾಟಕದ ಯುವ ಕಲಾವಿದರಿಗೆ ಮತ್ತು ಕಲಾ ವಿದ್ಯಾರ್ಥಿಗಳಿಗೆ ಸಹಕಾರಿಯಾಗಬೇಕೆನ್ನುವ ಉದ್ದೇಶಕ್ಕೆ ಈ ನಡೆಯಿಂದ ಏನು ಪ್ರಯೋಜನವಾದೀತು?
4. ಕರ್ನಾಟಕ ಲಲಿತಕಲಾ ಅಕಾಡೆಮಿ ಯಾವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ವಾರ್ಷಿಕವಾಗಿ ಆಗಬೇಕಾದ ಕಾರ್ಯಕ್ರಮಗಳನ್ನು ರಾಜ್ಯದಿಂದಾಚೆ ಆಯೋಜಿಸುವುದು ಸೂಕ್ತವಲ್ಲ. ಕನ್ನಡಿಗರು ಹೆಮ್ಮೆಯಿಂದ ನೋಡಿ, ಅಭಿನಂದಿಸಿ ಹೇಳಿಕೊಳ್ಳಬೇಕಾದ ಕಾರ್ಯಕ್ರಮ ಇದು. ಹೀಗಿರುವಾಗ ಬೇರೆ ರಾಜ್ಯದಲ್ಲಿ ಆಯೋಜಿಸಿದರೆ ಪ್ರಯೋಜನವೇನು? ನಮ್ಮ ರಾಜ್ಯದ ಕಲಾವಿದರ ಬಗ್ಗೆ, ನಮ್ಮ ನೆಲದ ಕಾರ್ಯಕ್ರಮ ರಾಜ್ಯದಲ್ಲೇ ನಡೆಯಬೇಕು. ರಾಜ್ಯಕ್ಕೆ ತೋರಣವಾಗಬೇಕಾದ ಕಾರ್ಯಕ್ರಮ ಇದಾಗಬೇಕು.
ದಯವಿಟ್ಟು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರು ಈ ನಿರ್ಧಾರದಿಂದ ಹೊರಬರುವ ಮನಸ್ಸು ಮಾಡಲಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕಾರ್ಯಕ್ರಮದ ಉದ್ದೇಶವರಿತು ಸೂಕ್ತ ಸಲಹೆ ನೀಡಲಿ. ಗೌರವಾನ್ವಿತ ಮಾನ್ಯ ಸಚಿವರು, ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ಕೂಡಲೆ ಗಮನಹರಿಸಬೇಕಿದೆ. ನಮ್ಮ ರಾಜ್ಯದ ಯಾವುದೇ ಸ್ಥಳದಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಲಿ.
ಚುನಾವಣಾ ನೀತಿ ಸಂಹಿತೆಯ ಅಡೆತಡೆಗಳು ಬರುತ್ತವೆನ್ನುವುದಾದರೆ ತತಕ್ಷಣ ಕಾರ್ಯಕ್ರಮ ಆಯೋಜಿಸಿ ಮುಗಿಸುವ ಶಕ್ತಿ ಈ ರಾಜ್ಯದ ಅಧಿಕಾರಿಗಳಿಗೆ ಇದೆ. ಒಂದೊಮ್ಮೆ ಅದೂ ಸಾಧ್ಯವಾಗದು ಎನ್ನುವುದಾದರೆ ಈಗಾಗಲೇ ಈ ಕಾರ್ಯಕ್ರಮ ತಡವಾಗಿದೆ, ಇನ್ನಷ್ಟು ತಡವಾಗಿಯಾದರೂ ಸರಿ ಈ ನೆಲದಲ್ಲೇ ನಡೆಯಲಿ.

Share This

Leave a Reply

Your email address will not be published. Required fields are marked *