ಕಡೆಮನಿ ಅನುಭವ ಮಂಟಪ “ಕಲಾಪಯಣ” 

Share This

• ಬೆಂಗಳೂರು, ಹಾಸನ ಬಳಿಕ ಬೆಣ್ಣೆನಗರಿ ದಾವಣಗೆರೆಯಲ್ಲಿ ಕಲಾಕೃತಿಗಳ ದರ್ಶನ
‘ಅನುಭವ ಮಂಟಪ’
ಎಷ್ಟು ಸುಂದರ, ಅರ್ಥಗರ್ಭಿತ ಪದ ಜೋಡಣೆ. ಅನುಭವದ ಮುಂದೆ ಯಾವುದನ್ನೂ ದೊಡ್ಡದೆನ್ನಲು ಸಾಧ್ಯವೇ ಇಲ್ಲ. ಆ ಕ್ಷೇತ್ರ, ಈ ಕ್ಷೇತ್ರ ಎಂದೇನಿಲ್ಲ. ಎಲ್ಲಾ ಕ್ಷೇತ್ರಕ್ಕೂ ಅನ್ವಯಿಸುವಂತದ್ದು. ಜಾತಿ, ಧರ್ಮ ಮೀರಿದ ಒಂದು ಸುಂದರ ಪರಿಕಲ್ಪನೆ. ತತ್ವಜ್ಞಾನಿ ಬಸವಣ್ಣನವರು 12ನೇ ಶತಮಾನದಲ್ಲಿ ಸ್ಥಾಪಿಸಿದ ಮತ್ತು ಅನುಭವ ಹಂಚಿಕೊಳ್ಳಲೆಂದೇ ಸ್ಥಾಪಿತವಾದ ಭವ್ಯ ವೇದಿಕೆ ‘ಅನುಭವ ಮಂಟಪ’.
ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಅನುಭವವನ್ನು ಉಪಯೋಗಕ್ಕೆ ಪಡೆದುಕೊಳ್ಳುವವರೇ ವಿರಳ. ದೃಶ್ಯಕಲಾ ಕ್ಷೇತ್ರದಲ್ಲೂ ಇಂತಹ ವ್ಯಕ್ತಿತ್ವದ ಕೊರತೆ ಇದೆ. ಈ ಮಧ್ಯೆ ಕೆಲವೇ ಕೆಲವು ಮಂದಿ ತಮ್ಮ ಬದುಕನ್ನೇ ‘ಅನುಭವ ಮಂಟಪ’ ಆಗಿಸಿಕೊಳ್ಳಬಲ್ಲರು. ಗೊತ್ತಿದ್ದೋ ಗೊತ್ತಿಲ್ಲದೆಯೋ ಬಸವಣ್ಣನವರ ತತ್ವದಡಿ ಹುಡುಕಾಟ ನಡೆಸಬಲ್ಲರು. ಜೀವನವನ್ನೇ ಕಲಾತ್ಮಕ ಆಗಿಸಿಕೊಳ್ಳಬಲ್ಲರು. ಕಲೆಯ ಜೊತೆ ಪ್ರೀತಿ ಹಂಚಿಕೊಳ್ಳಬಲ್ಲರು. ತನ್ಮೂಲಕ ಆತ್ಮತೃಪ್ತಿ ಸಾಧಿಸಬಲ್ಲರು.
ಈ ಸಾಲಿಗೆ ಸೇರಬಲ್ಲ ಅನುಭವಿ ಕಲಾವಿದರಲ್ಲಿ ವಿಜಯಪುರದ ಪಿ.ಎಸ್. ಕಡೆಮನಿ ಅವರು ಒಬ್ಬರು. ಶ್ರೀಯುತರ ಕಲಾಕೃತಿಗಳ ಪ್ರದರ್ಶನ “ಕಲಾ ಪಯಣ” ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ಅಕ್ಟೋಬರ್ 8ರಿಂದ ಮೂರು ದಿನಗಳ ಕಾಲ ನಡೆಯಿತು. ಕಲಾವಿದರಾದ ವಿದ್ಯಾದರ ಸಾಲಿ ಅವರು ಮುಂಚೂಣಿಯಲ್ಲಿ ನಿಂತು ಕಲಾಪ್ರದರ್ಶನಕ್ಕೆ ಬೆನ್ನೆಲುಬಾಗಿದ್ದರು. ಕಲಾಪ್ರದರ್ಶನ ಇನ್ನು ಕೆಲದಿನಗಳ ಕಾಲ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂದುಕೊಳ್ಳುವಾಗಲೇ ಗೊತ್ತಾಗಿದ್ದು ಇನ್ನೂ ಸಂಪನ್ನವಾಗಿಲ್ಲ ಎಂದು.
ಹೌದು ಸ್ನೇಹಿತರೆ, ಕಲಾಪ್ರದರ್ಶನದ ಪಯಣ ಮುಂದುವರಿದಿತ್ತು. ಬಡವರ ಊಟಿ ಎಂದೇ ಹೇಳಲಾಗುವ ಹಾಸನದತ್ತ ಮುಖಮಾಡಿತ್ತು. ಇಲ್ಲಿನ ಕಲಾಶ್ರೀ ಗ್ಯಾಲರಿಯಲ್ಲಿ 11ರಿಂದ ಮೂರು ದಿನಗಳ ಕಾಲ ಪ್ರದರ್ಶನ ಆಯೋಜನೆಯಾಗಿ, ಯಶಸ್ವಿಯಾಯಿತು.
ಈಗ ‘ಪಯಣ’ಕ್ಕೆ ಅರ್ಥ ಬಂತು ಅಂದುಕೊಳ್ಳುವಾಗಲೇ ಮುಂದಿನ ಪ್ರದರ್ಶನ ದಾವಣಗೆರೆಯಲ್ಲಿ ಎನ್ನುವುದೂ ಗೊತ್ತಾಯ್ತು. ಕಲಾಕೃತಿಗಳನ್ನು ಆಯಾ ಜಿಲ್ಲೆಗಳ ಜನರ ಬಳಿಯೇ ಹೋಗಿ ತೋರಿಸುವ ಪ್ರಯತ್ನ ಮತ್ತು ಉದ್ದೇಶ ಖುಷಿಕೊಟ್ಟಿತು. ಇದೀಗ “ಕಲಾ ಪಯಣ” ಪ್ರದರ್ಶನ ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯ ವಿಶ್ವಕಲಾ ಗ್ಯಾಲರಿಯಲ್ಲಿ ನಡೆಯುತ್ತಿದೆ. ಅಕ್ಟೋಬರ್ 17, ಇಂದು ಕಲಾಪ್ರದರ್ಶನಕ್ಕೆ ಕಡೆಯ ದಿನವಾಗಿದೆ. “ಕಲಾ ಪಯಣ”ದ ಮುಂದಿನ ದರ್ಶನ ಎಲ್ಲೆಂದು ಮಾಹಿತಿ ಲಭಿಸಿಲ್ಲ. ಕಲಾಪಯಣ ನಿಲ್ಲದಿರಲಿ, ಮುಂದುವರಿಯಲಿ ಎಂದು ಆಶಿಸೋಣ.
“ಕಲಾಪಯಣ” ಈ ಪದ ಜೋಡಣೆಯೇ ವಿಶೇಷ. ಅಂದಹಾಗೆ, ಇದೇನು ಮೊದಲಲ್ಲ. ಈ ಹಿಂದೆಯೂ ನಡೆದಿದೆ. ಆದರೆ ಕಡೆಮನಿ ಅವರು ಇಂತಹ ಪ್ರಯತ್ನಗಳಿಗೆ ಮರುಜೀವ ನೀಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ತಾತ್ಸಾರ ಮಾಡುವ ದಿನಗಳಲ್ಲಿ ಉತ್ಸಾಹ ತುಂಬಿದ್ದಾರೆ. ಯುವ ಕಲಾವಿದರನ್ನು ಹುರಿದುಂಬಿಸಿದ್ದಾರೆ. ಯಾವುದೇ ಕಲಾವಿದನ ಈ ಬಗೆಯ ಪ್ರಯತ್ನ ಅವರ ಸಾಂಸ್ಕೃತಿಕ ಜೀವನದ ಪಯಣಕ್ಕೆ (artistic journey) ಸಾಕ್ಷಿಯಾಗಲಿದೆ. ಇವೆಲ್ಲವೂ ಫಿಲಾಸಫಿ ಅಂದುಕೊಳ್ಳಬಹುದು, ಆದರೆ ಮಹತ್ವ ಇದ್ದೇ ಇದೆ. ಇಂದೂ ಇದೆ, ಮುಂದೆಯೂ ಇರಲಿದೆ. ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ.
ಕನ್ನಡನಾಡಿನ ನೆಲದ ಕಲಾ ಇತಿಹಾಸದ ಪುಟಗಳನ್ನು ತೆರೆದರೆ ಇಂತಹ ಪ್ರಯತ್ನಕ್ಕೆ ಹತ್ತಾರು ಉದಾಹರಣೆಗಳು ಸಿಗುತ್ತವೆ. ಮುಖ್ಯವಾಗಿ ಕರ್ನಾಟಕದ ಹಿರಿಯ ಕಲಾವಿದರು ನಡೆಸಿದ “ಕಲಾಯಾತ್ರೆ” ಪ್ರಯತ್ನವನ್ನು ಇತಿಹಾಸದ ಪುಟಗಳಿಂದ ಅಳಿಸಳು ಸಾಧ್ಯವಿಲ್ಲ. ಇದರಂತೆ ಇನ್ನು ಒಂದಿಷ್ಟು ಪ್ರಯತ್ನಗಳು ಆಗಿವೆ. ಕರ್ನಾಟಕ ಚಿತ್ರಕಲಾ ಪರಿಷತ್ ಆರಂಭಿಸಿದ ಚಿತ್ರಸಂತೆ ಇದೀಗ ಅನೇಕ ಜಿಲ್ಲೆಗಳಲ್ಲಿ ‘ಚಿತ್ರಸಂತೆ’ ಹೆಸರಲ್ಲೇ ನಡೆಯುತ್ತಿವೆ. ಕಡೆಮನಿ ಅವರ “ಕಲಾಪಯಣ” ಪ್ರಯತ್ನವೂ ಇತಿಹಾಸದ ಪುಟ ಸೇರಲಿ. ಪಯಣ ಮೊಟಕುಗೊಳ್ಳದಿರಲಿ. ರಾಜ್ಯದ ಎಲ್ಲಾ ಭಾಗಗಳಲ್ಲಿ ಆಯೋಜನೆಯಾಗಲಿ.
ಗ್ರಾಮೀಣ ಬದುಕಿನಲ್ಲಿ ಮನೆಯೆನ್ನುವ ಅನುಭವ ಮಂದಿರದ ಸಾಮಾನ್ಯ ಸಂಗತಿಗಳನ್ನೇ ಆಯ್ದುಕೊಂಡು ಕಲಾಕೃತಿ ರಚಿಸುವ ಕಡೆಮನಿ ಅವರು ಸಾಮಾನ್ಯ ವರ್ಗದ ಕಲಾಸಕ್ತರಿಗೆ ಆಪ್ತರಾಗುವುದರಲ್ಲಿ ಅನುಮಾನವಿಲ್ಲ. ಆಧುನಿಕ ಕಲಾಪರಂಪರೆಯ ಪ್ರಮುಖರಲ್ಲಿ ಒಬ್ಬರಾದ ಕಡೆಮನಿ ಅವರು “ಕಲಾಪಯಣ”ದ ಮೂಲಕ ಹೊಸ ತಲೆಮಾರಿನ ಕಲಾವಿದರಿಗೆ ಆದರ್ಶವಾಗಲಿ. ಭಾವಚಿತ್ರಗಳ ರಚನೆಯಲ್ಲಿ ಸಿದ್ಧಹಸ್ತರಾಗಿರುವ ಇವರ ಕಲಾಕೌಶಲ್ಯದ ಪರಿಚಯ ಕಲಾ ವಿದ್ಯಾರ್ಥಿಗಳಿಗೆ ಆಗಬೇಕಿದೆ. ಸಮಕಾಲೀನ ಕಲೆಯ ಹೆಸರಲ್ಲಿ ಕಲಾಚಿಂತನೆಯ ಮತ್ತು ಕಲಾಭ್ಯಾಸದ ದಿಕ್ಕು ಬದಲಿಸಿಕೊಳ್ಳುವ ಯುವ ಪೀಳಿಗೆಗೆ ಕೌಶಲ್ಯದ ಅರಿವು ಬೇಕಿದೆ. ಇದಕ್ಕೆ ಕಡೆಮನಿ ಅವರಂತಹ ಕಲಾವಿದರ ಕಲಾಕೃತಿಗಳನ್ನು ವಿಕ್ಷಿಸುವುದೂ ಅಷ್ಟೇ ಮುಖ್ಯವಾಗಲಿದೆ.
ತಮ್ಮ ಹತ್ವದ ಕಲಾಕೃತಿಗಳ ಮೂಲಕ ಎಲ್ಲರ ಗಮನ ಸೆಳೆದ ಹಿರಿಯ ಕಲಾವಿದರಾದ ಪಿ.ಎಸ್. ಕಡೆಮನಿ ಅವರಿಗೆ ಅಭಿನಂದನೆಗಳು 💐

Share This

Leave a Reply

Your email address will not be published. Required fields are marked *