‘ಸಪ್ತವರ್ಣ’ಗಳಿಗೆ ಭಾವ ಪ್ರಚೋದನೆ

Share This

• ಚಿತ್ರಕಲಾ ಪರಿಷತ್ತಲ್ಲೊಂದು ಗಮನಾರ್ಹ ಕಲಾಪ್ರದರ್ಶನ
ಕಲಾವಿದರಿಗೆ ಸ್ಫೂರ್ತಿ ಬೇಕೆನ್ನುವ ಸಾಮಾನ್ಯ ಜ್ಞಾನ ಯಾರೂ ಯಾರಿಗೂ ಹೇಳಿ ತಿಳಿಸಬೇಕಾದ ಕಾಲಘಟ್ಟ ಇದಲ್ಲ. ಇದೊಂದು ಪ್ರಕ್ರಿಯೆ (process). ಪ್ರತಿಯೊಬ್ಬ ವ್ಯಕ್ತಿಯಲ್ಲೂ ನಡೆಯಬಹುದಾದ ಅತ್ಯಂತ ಕುತೂಹಲಕಾರಿ ಪ್ರಕ್ರಿಯೆ. ಮನುಷ್ಯ ಸೇರಿದಂತೆ ಕೆಲವೇ ಕೆಲವು ಜೀವಿಗಳಲ್ಲಿನ ಈ ಪ್ರಕ್ರಿಯೆ ಗಮನ ಸೆಳೆಯುವಂತೆ ಇರುತ್ತದೆ. ಪರಿಣಾಮ ಬಹಳ ಭಿನ್ನವಾಗಿಯೂ, ಸರಳವಾಗಿಯೂ, ಏನೂ ಇಲ್ಲದೆಯೂ ಇರಬಹುದು. ಪ್ರತಿಕ್ರಿಯೆ ಇಲ್ಲದೇ ಹೋದರೂ ಪ್ರಕ್ರಿಯೆ ಸೃಷ್ಟಿಯ ನಿಯಮ.
‘An artist’s environment acts as a silent collaborator. The spaces, sounds, and social dynamics surrounding a creator do not just provide subject matter; they fundamentally alter the brain’s cognitive and emotional processing.’
ನಮ್ಮೊಳಗೆ ನಡೆಯುವ ಪ್ರಕ್ರಿಯೆಯ ಬಗ್ಗೆ ನಮಗೇ ಅರಿವು ಇಲ್ಲದಂತಾಗುವ ಸಂದರ್ಭಗಳು ಎಲ್ಲರಿಗೂ ಎದುರಾಗಿರುತ್ತವೆ. ನಮ್ಮ ಸುತ್ತಲಿನ ಪರಿಸರ ಪ್ರತಿಯೊಬ್ಬ ಕಲಾವಿದನಿಗೆ ಮೂಕ ಸಹಯೋಗಿಯಾಗಿ (silent Ccollaborator) ಕಾರ್ಯನಿರ್ವಹಿಸುತ್ತದೆ. ಸಹಜವಾಗಿಯೇ ಪ್ರೆರೇಪಿಸುತ್ತದೆ. ಅಭಿವ್ಯಕ್ತಿಯ ಮೂಲವೇ ಅದಾಗಿರುತ್ತದೆ. ಕಲಾಕೃತಿಯನ್ನು ಓದಿಕೊಳ್ಳುವ ಬಗೆ ಹೇಗೆ (how to read a Work of Art?) ಎನ್ನುವುದು ಪ್ರಶ್ನೆಯಾದಾಗ ಉತ್ತರಗಳಲ್ಲಿ ಇದೂ ಒಂದಾಗಿರುತ್ತದೆ.
ಸುತ್ತಲಿನ ಸ್ಥಳ, ಶಬ್ದ ಮತ್ತು ಸಾಮಾಜಿಕವಾದ ಚಲನಶೀಲ ಅಂಶಗಳು ಕಲಾವಿದನಿಗೆ ಕೇವಲ ವಸ್ತು ವಿಷಯವಷ್ಟೇ ಆಗಿರುವುದಿಲ್ಲ, ಆತನ ಚಿಂತನೆಯನ್ನೇ ಬದಲಾಯಿಸುತ್ತವೆ. ಕಲಾವಿದ ಬೆಳೆದ, ಅವನ ನೆಲದ ಅಥವಾ ಮಣ್ಣಿನ ಸುವಾಸನೆ ಕಲಾಕೃತಿಯಲ್ಲಿ ಪ್ರತಿಬಿಂಬಿಸುವ ಒಂದು ನಿಗೂಢ ಪ್ರಕ್ರಿಯೆಯೇ ಇದಾಗಿರುತ್ತದೆ. ಕಲಾಕೃತಿಗಳು ಹುಟ್ಟಿಕೊಳ್ಳುವುದರ ಮೂಲ ಇದಾಗಿರುತ್ತದೆ.
ಇದಕ್ಕೊಂದು ಉತ್ತಮ ಉದಾಹರಣೆ ಎನ್ನುವಂತಹ ಕಲಾಕೃತಿಗಳು ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 3ರಲ್ಲಿ ಪ್ರದರ್ಶನವಾಗಿವೆ. ಏಳು ಮಂದಿ ಕಲಾವಿದರ “ಸಪ್ತ ವರ್ಣ (Sapta Varna)” ಸಮೂಹ ಕಲಾಪ್ರದರ್ಶನ ಈ ನಿಟ್ಟಿನಲ್ಲಿ ಗಮನ ಸೆಳೆಯುವಂತಿದೆ. ಕಲಾವಿದರಾದ ಕೆ.ವಿ. ಶಂಕರ್ (Shankar Kadakuntla ), ನವೀನ್ ಬಿ.ಪತ್ತಾರ್ (Naveen B Pattar), ಬಿ.ಎನ್. ಹರಿಪ್ರಸಾದ್ (Hariprasad Prasad ), ವಿಜಯ್ ಎ. ಧೊಂಗಡಿ (Vijay Dhongadi), ಪ್ರತಿಮಾ ದೊಡ್ಡಮನಿ (Pratima Ganesh Doddamani), ಸುಶೀಲ್ ಐ. ತರ್ಬರ್ ( Sushil I. Tarbar) ಮತ್ತು ಬಸವರಾಜ್ ಎಂ. (Basavaraj M.) ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.
ಈ ಎಲ್ಲರ ಕಲಾಕೃತಿಗಳಲ್ಲಿಯೂ ಒಂದಲ್ಲಾ ಒಂದು ಅಂಶಗಳು ಅವರ ನೆಲದ ಸುವಾಸನೆಗೆ ಕನ್ನಡಿ ಹಿಡಿದಂತಿವೆ. ಗಾಢವಾದ ಪರಿಣಾಮ ಬೀರಿರುವುದನ್ನು ಗಮನಿಸಬಹುದಾಗಿದೆ. ಇತ್ತೀಚಿನ ಕಲಾ ಪರಂಪರೆಯಿಂದ ಪ್ರಭಾವಕ್ಕೊಳಗಾಗದೇ ತಮ್ಮ ಅನುಭವಕ್ಕೆ ಪ್ರಾಧಾನ್ಯತೆ ನೀಡಿರುವುದು ಸ್ಪಷ್ಟ. ಅಷ್ಟೇ ಅಲ್ಲ, ಸ್ವಾಗತಾರ್ಹವೂ ಹೌದು.‌ ಆದರೆ, ಎಲ್ಲರ ಕಲಾಕೃತಿಗಳು ಇನ್ನಷ್ಟು ಬದಲಾವಣೆಗೆ ಹೊರಳಿಕೊಳ್ಳಬಹುದಾದ ಸೂಚನೆಯನ್ನು ಒದಗಿಸುತ್ತವೆ. ಇದು ಕಲಾವಿದರ ಅನುಭವಕ್ಕೂ ಬಂದಿರಬಹುದು, ಬಾರದೆಯೂ ಇರಬಹುದು. ಹುಡುಕಾಟದ ಹರಿವು ಚುರುಕು ಕಾಣಬೇಕಷ್ಟೆ. ‘ಸಪ್ತವರ್ಣ’ಗಳ ಮೇಲಾದ ಭಾವ ಪ್ರಚೋದನೆ ಸಾಮಾನ್ಯ ನೋಡುಗರ ಕಣ್ಣಗೆ ಹಬ್ಬ. ಕಣ್ಣಂಚುಗಳಲ್ಲಿ ತುಸು ಕುತೂಹಲ, ಸಂಭ್ರಮ. ಕಲಾಕೃತಿಯೊಂದು ಪರಿಣಾಮಕಾರಿ ಅನಿಸಿಕೊಳ್ಳುವುದೂ ಇದೇ ಕಾರಣಕ್ಕಾಗಿ ಎನ್ನುವುದು ಸತ್ಯ.
ಸಮಕಾಲೀನ ಚಿಂತನೆಗಳ ಪ್ರವಾಹದಲ್ಲಿ ಒಂದಿಷ್ಟು ಅಂಶಗಳು ಅನಿವಾರ್ಯವೇ ಎನ್ನುವ ಪ್ರಶ್ನೆಗಳು ಕಾಡಬಹುದು. ಹಾಗೇನಿಲ್ಲ, ಅದರಾಚೆಗಿನ ಪ್ರಯತ್ನವೊಂದು ಘಟಿಸಬಹುದು. ಇನ್ನು ಪ್ರದರ್ಶಿತ ಬಹುತೇಕ ಕಲಾಕೃತಿಗಳಲ್ಲಿ ಗಾಢ ವರ್ಣಗಳು ಮೇಳೈಸಿವೆ. ಪ್ರದರ್ಶಿತ ಶಿಲ್ಪ ಕಲಾಕೃತಿಗಳು ಗ್ಯಾಲರಿಯ ವೈಬ್ಸ್ (vibes) ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.
ಸ್ನೇಹಿತರೆ, ‘ಸಪ್ತ ವರ್ಣ’ ಕಲಾಪ್ರದರ್ಶನ ಅಕ್ಟೋಬರ್‌ 27ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.

 

 


Share This

Leave a Reply

Your email address will not be published. Required fields are marked *