‘ಭಾವ, ರೇಖೆ, ಬಣ್ಣ’ ನಡುವೆ ಭಾಷೆ ಕನ್ನಡ

Share This

| ‘ಭಾವ, ರೇಖೆ, ಬಣ್ಣ’ ನಡುವೆ ಭಾಷೆ ಕನ್ನಡ |

  • ಕನ್ನಡ ರಾಜ್ಯೋತ್ಸವದಲ್ಲೊಂದು ಕಲಾದರ್ಶನ
  • ಸುರೇಶ್, ಮೋಹನ್ ಕಲಾಕೃತಿಗಳ ಕಲಾಪ್ರದರ್ಶನ

ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿದ್ದೇವೆ. ನಾನೊಬ್ಬ ಕನ್ನಡಿಗ ಎನ್ನುವುದನ್ನು ಎದೆ ತಟ್ಟಿ ಹೇಳಿಕೊಳ್ಳುವ ಸ್ವಾತಂತ್ರ್ಯವನ್ನು  ಈ ನಾಡು ನಮಗೆ ನೀಡಿದೆ. ಹೀಗಾಗಿಯೇ ಕನ್ನಡದ ಭಾವುಟಗಳು ಎಲ್ಲೆಡೆ ರಾರಾಜಿಸುತ್ತಿವೆ, ಕನ್ನಡದ ಕಹಳೆ ಮೊಳಗುತ್ತವೆ. ಇಂತಹದ್ದೊಂದು ಸಂಭ್ರಮವನ್ನು ಹೀಗೆ ಆಚರಿಸಿ ಎನ್ನುವ ತಾಕೀತು ಯಾರದ್ದೂ ಇಲ್ಲ. ಎಲ್ಲರೂ ಒಪ್ಪಿಕೊಳ್ಳುವ ರೀತಿಯಲ್ಲಿ, ಕನ್ನಡಾಂಬೆಗೆ ಅವಮಾನ ಆಗದ ರೀತಿಯಲ್ಲಿ, ಕನ್ನಡ ಭಾಷೆ, ಕನ್ನಡದ ನೆಲದ ಗೌರವಕ್ಕೆ ಧಕ್ಕೆ ಆಗದ ರೀತಿಯಲ್ಲಿ ಸಂಭ್ರಮಿಸುವ ರಾಜ್ಯೋತ್ಸವ ಎಲ್ಲರಿಗಿದೆ. ಹಾಗೇ ಇಲ್ಲಿಬ್ಬರು ಹಿರಿಯ ಕಲಾವಿದರು ಕನ್ನಡ ರಾಜ್ಯೋತ್ಸವ ಸಂಭ್ರಮವನ್ನು ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಈ ಮೂಲಕ ಹೀಗೂ ಆಚರಿಸಬಹುದು ಎನ್ನುವುದಕ್ಕೆ ಉದಾಹರಣೆ ಆಗಿದ್ದಾರೆ.

ಹಿರಿಯ ಕಲಾವಿದರಾದ ಸುರೇಶ್ ಟಿ.ಡಿ. ಮತ್ತು ಮೋಹನ್ ಕುಮಾರ್ ಈ. ಅವರು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಗ್ಯಾಲರಿಯಲ್ಲಿ ವಿಭಿನ್ನ ದೃಷ್ಟಿಕೋನದಲ್ಲಿ ಕಲಾಕೃತಿಗಳನ್ನು ಗ್ರಹಿಸುವ ಪ್ರಯತ್ನ ಮಾಡಿದ್ದಾರೆ. ಸುರೇಶ್ ಅವರು ಕನ್ನಡ ನಾಡಿನ ಅನೇಕ ಗಣ್ಯರ ಭಾವಚಿತ್ರಗಳನ್ನು ಚಿತ್ರಿಸುವ ಮತ್ತು ಭಾವಚಿತ್ರದಲ್ಲಿರುವ ವ್ಯಕ್ತಿಗಳಿಂದಲೇ ಸಹಿ, ಹಸ್ತಾಕ್ಷರ ಅಥವಾ ಚಿತ್ರ ರಚಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಇದೊಂದು ವಿಭಿನ್ನ ಪ್ರಯತ್ನ ಎನ್ನುವುದರಲ್ಲಿ ಯಾವ ಅನುಮಾನವಿಲ್ಲ. ಹಾಗೇ ಮೋಹನ್ ಕುಮಾರ್ ಅವರು ಕನ್ನಡ ಲಿಪಿಯನ್ನು ವಿಭಿನ್ನ ಆಕೃತಿಗಳ ಮೂಲಕ ಬೆಸೆದು ಕಲಾಕೃತಿಯನ್ನಾಗಿಸುವ ಪ್ರಯತ್ನ ಮಾಡಿದ್ದಾರೆ. ಇಬ್ಬರೂ ಕಲಾವಿದರು ಈ ನಿಟ್ಟಿನಲ್ಲೇ ಯೋಚಿಸಿ, ಎಲ್ಲಾ ತಯಾರಿ ನಡೆಸಿ ‘ಕರ್ನಾಟಕದ ಸಾಧಕರು-ಗ್ರಾಫೈಟ್ ಭಾವಚಿತ್ರಗಳು ಮತ್ತು ಕನ್ನಡ ಲಿಪಿಕಲಾ ಕಲಾಕೃತಿಗಳ ಪ್ರದರ್ಶನ’ ಆಯೋಜಿಸಿ ವಿಭಿನ್ನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಸುರೇಶ್ ಅವರ ಕಲಾಕೃತಿಗಳಲ್ಲಿ ಶೀರ್ಷಿಕೆಯಲ್ಲೇ ಹೇಳಿದಂತೆ ಗ್ರಾಫೈಟ್ ಬಳಕೆ ಗಮನಾರ್ಹ. ಮೈಸೂರು ಶೈಲಿಯಲ್ಲಿ ಸಾಂಪ್ರದಾಯಿಕ ಚಿತ್ರರಚನೆಯಲ್ಲಿ ಪಳಗಿರುವ ಸುರೇಶ್ ಅವರು ಭಾವಚಿತ್ರಗಳ ರಚನೆಗೆ ಒತ್ತುಕೊಟ್ಟಿರುವುದು ವಿಶೇಷ ಅನಿಸುತ್ತದೆ. ಅಲ್ಲದೆ, ಇದೊಂದು ವಿಶಿಷ್ಟ ಪ್ರಯತ್ನ ಎನ್ನುವುದನ್ನೂ ಗಮನಿಸುವಂತದ್ದು. ಕ್ಯಾಲಿಗ್ರಫಿ ಪ್ರಭಾವಗಳಿಂದ ಕೂಡಿರುವ ಮೋಹನ್ ಅವರ ಕಲಾಕೃತಿಗಳಲ್ಲಿ ಪರಿಣಾಮಕಾರಿ ಇಲಸ್ಟ್ರೇಷನ್ ಶೈಲಿ ನೋಡಬಹುದು. ಅಲ್ಲದೆ, ಚೀನಿಯರು ಇಂಕ್ ಬಳಸಿ ರಚಿಸುವ ಟಿಪಿಕಲ್ ಚೈನಿ ಶೈಲಿ ಅವರನ್ನು ಸಾಕಷ್ಟು ಕಾಡಿರುವುದು ಸ್ಪಷ್ಟ. ಹಾಗಂತ ಬೇರೊಂದು ಕಲಾಶೈಲಿಯ ಪ್ರಭಾವಕ್ಕೆ ಒಳಗಾಗಬಾರದು ಎನ್ನುವ ನಿಯಮವೇನಿಲ್ಲ. ಆ ಪ್ರಯತ್ನದ ಜೊತೆ ಜೊತೆಗೆ ತನ್ನದೇ ಆದ ಕಲಾಪಯಣದಲ್ಲಿ ತನ್ನ ದಾಖಲಿಸುವ ಪ್ರಯತ್ನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದು ಎನ್ನುವುದನ್ನು ಅವರ ಕಲಾಕೃತಿಗಳೇ ಹೇಳುತ್ತವೆ.

ಒಟ್ಟಾರೆಯಾಗಿ ಈ ಇಬ್ಬರು ಹಿರಿಯ ಕಲಾವಿದರು ಸಂದರ್ಭೋಚಿತ ಕಲಾಪ್ರದರ್ಶನದ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಸ್ನೇಹಿತರೇ, ಕಲಾಪ್ರದರ್ಶನ ನವೆಂಬರ್ ೭ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

 

 


Share This

Leave a Reply

Your email address will not be published. Required fields are marked *