- 2011ರಲ್ಲಿ ಪದ್ಮಭೂಷಣ ಗೌರವ ಪುರಸ್ಕೃತೆ
- ಸೋಮವಾರ ನವದೆಹಲಿ ನಿವಾಸದಲ್ಲಿ ನಿಧನ
ಅರ್ಪಿತಾ ಸಿಂಗ್ (1937-2026)
ಪದ್ಮಭೂಷಣ ಅರ್ಪಿತಾ ಸಿಂಗ್ ಅವರು ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ಕಲಾವಿದೆ ಅರ್ಪಿತಾ ಸಿಂಗ್ ಅವರಿಗೆ 89 ವರ್ಷ ವಯಸ್ಸಾಗಿತ್ತು. ನವದೆಹಲಿಯ ನಿಜಾಮುದ್ದೀನ್ ಈಸ್ಟ್ನಲ್ಲಿರುವ ತಮ್ಮ ನಿವಾಸದಲ್ಲಿ ವಾಸವಿದ್ದರು. ಇವರ ನಿಧನ ಕಲಾ ಸಮುದಾಯಕ್ಕೆ ತುಂಬಲಾರದ ನಷ್ಟ. ಶ್ರೀಯುತರು ದೆಹಲಿಯ ನಿವಾಸದಲ್ಲಿ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದರು ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.
ಕೋಲ್ಕತ ಮೂಲದ ಕಲಾವಿದೆ ಅರ್ಪಿತಾ ಸಿಂಗ್ ಮಹಿಳಾ ಸಂವೇದನೆಯಿಂದ ಕೂಡಿರುವ ಕಲಾಕೃತಿಗಳನ್ನು ರಚಿಸಿ, ಆ ಮೂಲಕವೇ ಗುರುತಿಸಿಕೊಂಡಿದ್ದರು. ಜವಳಿ ಇಲಾಖೆ ಸಚಿವಾಲಯದ ನೇಕಾರರ ಸೇವಾ ವಿಭಾಗದಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು, ಬ್ರಿಟಿಷರಿಂದ ಭಾರತ ಸ್ವಾತಂತ್ರ್ಯ ಪಡೆದುಕೊಳ್ಳುವುದಕ್ಕೂ ವರ್ಷ ಮೊದಲು ಕೋಲ್ಕತದಿಂದ ಪ್ರಯಾಣ ಬೆಳೆಸಿ ನವದೆಹಲಿಯನ್ನು ತಮ್ಮ ಕರ್ಮ ಭೂಮಿಯನ್ನಾಗಿ ಮಾಡಿಕೊಂಡಿದ್ದರು. 1962ರಲ್ಲಿ ಕಲಾವಿದ ಪರಮಜೀತ್ ಸಿಂಗ್ ಅವರನ್ನು ವಿವಾಹವಾಗಿ, ತದನಂತರ ಕಲಾಕ್ಷೇತ್ರದಲ್ಲಿ ಉತ್ತುಂಗಕ್ಕೇರಿದರು. ಕಲೆಯಲ್ಲಿ ಡಿಪ್ಲೋಮಾ ಪದವಿ ಪಡೆದುಕೊಂಡಿದ್ದ ಅರ್ಪಿತಾ ಸಿಂಗ್ ಅವರು ಜವಳಿ ಕ್ಷೇತ್ರದ ಇಂಚಿಂಚೂ ವಿಚಾರಗಳನ್ನು ಬಲ್ಲವರಾಗಿದ್ದರು. ಈ ಕ್ಷೇತ್ರದ ಶ್ರಮಿಕರ ಬದುಕು-ಬವಣೆ, ಆಗು-ಹೋಗುಗಳನ್ನು ಹತ್ತಿರದಿಂದ ಅನುಭವಿಸಿರುವ ಅರ್ಪಿತಾ ಸಿಂಗ್ ಅವರ ಕಲಾಕೃತಿಗಳಲ್ಲಿ ಇವೆಲ್ಲವೂ ಪ್ರತಿಫಲಿಸುತ್ತಿದ್ದವು.
ಅರ್ಪಿತಾ ಸಿಂಗ್ ಅವರು 1972ರಲ್ಲಿ ನವದೆಹಲಿಯ ಕುನಿಕಾ ಚೆಮೋಲ್ಡ್ ಗ್ಯಾಲರಿಯಲ್ಲಿ ಚೊಚ್ಚಲ ಕಲಾಪ್ರದರ್ಶನ ನಡೆಸಿ ತಮ್ಮ ಕಲಾಪಯಣಕ್ಕೆ ಹೊಸ ದಿಕ್ಕು ರೂಪಿಸಿಕೊಂಡರು. ನವದೆಹಲಿಯ ‘The Unknown’ ಗ್ರೂಪ್ ಸದಸ್ಯೆಯಾಗಿದ್ದ ಇವರು, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಗಮನ ಸೆಳೆಯುವಂತಹ ಕಾರ್ಯಗಳ ಮೂಲಕವೂ ಚಿರಪರಿಚಿತರಾಗಿದ್ದರು. ಹೀಗೆ ಕಲಾಪಯಣವನ್ನು ವರ್ಣರಂಜಿತವಾಗಿಸಿಕೊAಡಿದ್ದ ಇವರು ದೇಶ-ವಿದೇಶಗಳಲ್ಲಿ ಸಾಕಷ್ಟು ಕಲಾಪ್ರದರ್ಶನಗಳನ್ನು ನಡೆಸಿದ್ದಾರೆ.
ಅರ್ಪಿತಾ ಸಿಂಗ್ ಅವರ ಕಲಾ ಸಾಧನೆಗೆ 2011ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ನೀಡಿ ಗೌರವಿಸಿತು. ಇದಲ್ಲದೆ ಇವರ ಸಾಧನೆಗೆ ಕಾಳಿದಾಸ್ ಸಮ್ನಾನ್, ಪರಿಷತ್ ಸಮ್ಮಾನ್ ಪ್ರಶಸ್ತಿ ಸೇರಿದಂತೆ 2014ರಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿ ಫೆಲೋಶಿಪ್ ಕೂಡ ಲಭಿಸಿದೆ.



