- 4ನೇ ಆವೃತ್ತಿಗೆ ಕಲಾ ಸಮುದಾಯ, ಕಲಾರಸಿಕರ ಮೆಚ್ಚುಗೆ
ಕಲಾ’ಮೇಳ’ಗಳು (Art fairs), ಕಲಾಪ್ರದರ್ಶನಗಳು (Art Exhibitions) ಅಥವಾ ಇನ್ನಾವುದೇ ಸ್ವರೂಪದ ಕಲಾಚಟುವಟಿಕೆಗಳು (Art activities) ಸಮಾಜದಲ್ಲಿ, ಅದರಲ್ಲೂ ಕಲಾ ಸಮುದಾಯದಲ್ಲಿ ಕಾಣರಿಯದ ಬದಲಾವಣೆಗೆ ಕಾರಣವಾಗಲಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕೋ, ಒಪ್ಪಿಕೊಳ್ಳಬಾರದೋ ಎನ್ನುವುದೇ ಒಂದು ದೊಡ್ಡ ಜಿಜ್ಞಾಸೆ, ಚರ್ಚೆಗೊಳಪಡುವ ವಿಚಾರ. ಇದಕ್ಕೊಂದು ಸ್ಪಷ್ಟ ಉತ್ತರ ಸಿಗದಿರಬಹುದು. ಭಿನ್ನಾಭಿಪ್ರಾಯಗಳೂ ಇರಬಹುದು. ಆದರೆ, ಬದಲಾವಣೆಯ ಗಾಳಿಯೊಂದು ಬೀಸಲಿದೆ. ಬದಲಾವಣೆಗೆ ಒಗ್ಗಿಕೊಳ್ಳಬೇಕು ಎಂದುಕೊಳ್ಳುವ ಕಲಾವಿದರ ಮೇಲೆ ಹಾಗೂ ಹುಡುಕಾಟದಲ್ಲಿ ನಿರತ ಯುವ ಕಲಾವಿದರ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆ. ಈ ಬಗ್ಗೆ ಯಾವ ಅನುಮಾನ ಬೇಡ. ಬಹಳ ಮುಖ್ಯವಾಗಿ ಕಲಾವಿದರ ಆಲೋಚನೆಯ ಕ್ರಮದಲ್ಲಿ (Thought process) ಪರಿಣಾಮವನ್ನು ಗುರುತಿಸಲು ಸಾಧ್ಯವಿದೆ.
ಇಂತಹ ಕಲಾ ಚಟುವಟಿಕೆಗಳಿಂದಲೇ ಕಲಾವಿದ ತನ್ನ ಆಲೋಚನಾ ಲಹರಿಯನ್ನು ಬದಲಾಯಿಸಿಕೊಳ್ಳುತ್ತಾನೆ ಎಂದೇನಿಲ್ಲ. ಇವೆಲ್ಲದರ ಹೊರತಾದ ಪ್ರಯತ್ನಗಳು, ಕಾರಣಗಳೂ ಸಾಕಷ್ಟು ಇರುತ್ತವೆ. ಅಂತಹ ಕಾರಣ, ಪ್ರಯತ್ನಗಳಲ್ಲಿ ಕಲಾ ಚಟುವಟಿಕೆಗಳೂ ಒಂದಾಗಿರುತ್ತವೆ. ಸದುದ್ದೇಶ ಪೂರಿತ ಕಲಾಚಟುವಟಿಕೆಗಳಿಂದ ಫಲಿತಾಂಶವನ್ನು ಹೆಚ್ಚೆಚ್ಚು ನಿರೀಕ್ಷಿಸಬಹುದಾಗಿದೆ. ವಾಣಿಜ್ಯ ನಗರಿ ಮುಂಬೈನ ಮಹಾಲಕ್ಷ್ಮೀ ರೇಸ್ ಕೋರ್ಸ್ ಆವರಣದಲ್ಲಿ ನವೆಂಬರ್ 12ರಿಂದ 15ರ ತನಕ ನಡೆದ ‘ಆರ್ಟ್ ಮುಂಬೈ’ 4ನೇ ಆವೃತ್ತಿ ಇದಕ್ಕೊಂದು ಉತ್ತಮ ಸಾಕ್ಷಿಯಾಗಿ ಗೋಚರಿಸಿತು. ನಿರೀಕ್ಷೆಯಂತೆ ಕಳೆದ ಆವೃತ್ತಿಗಳಿಗಿಂತ ತುಸು ವಿಸ್ತರಿಸಿಕೊಂಡಿರುವುದು, ಅಂತಾರಾಷ್ತ್ರೀಯ ಗುಣಮಟ್ಟ ಕಾಯ್ದುಕೊಳ್ಳುವ ಜವಾಬ್ದಾರಿ ತೋರಿರುವುದು ಅನುಭವಕ್ಕೆ ಬರುವಂತಿತ್ತು. ಸಾಂಪ್ರದಾಯಿಕ, ಆಧುನಿಕ, ಸಮಕಾಲೀನ ಕಾಲಘಟ್ಟದ ಎಲ್ಲಾ ಪ್ರಕಾರದ, ವಿಭಿನ್ನ ಶೈಲಿಯ, ಹೊಸ ಹೊಸ ಆಲೋಚನೆಗಳಿಂದ ಕೂಡಿರುವ ಕಲಾಕೃತಿಗಳು ಕಲಾ ರಸಿಕರಿಗೆ ಹಬ್ಬದ ಸಂಭ್ರಮ ಉಣಬಡಿಸಿದವು. ಆಯೋಜಕರ ಸದುದ್ದೇಶ ಯಶಸ್ಸು ಕಂಡಿದೆ ಎನ್ನುವುದಕ್ಕೆ ಇಷ್ಟು ಸಾಕು. ಇದರ ಹೊರತಾಗಿ ಆಯೋಜನೆಯಲ್ಲಿ ಆಗಬಹುದಾದ ಕೆಲವೊಂದು ಲೋಪಗಳು ಗೌಣ. ಆಂತರಿಕವಾಗಿ ಬದಲಾವಣೆ ಮಾಡಿಕೊಳ್ಳಲು, ಇನ್ನಷ್ಟು ಸುಧಾರಣೆ ಮಾಡಿಕೊಳ್ಳಲು ಅವಕಾಶ ಇದ್ದೇ ಇದೆ. ಒಂದಂತೂ ಖರೆ, ART MUMBAI is India’s premier modern and contemporary art fair ಎನ್ನುವುದನ್ನು 4ನೇ ಆವೃತ್ತಿ ಇನ್ನೊಮ್ಮೆ ಸಾಬೀತು ಪಡಿಸಿದೆ.
ಮಹಾಲಕ್ಷ್ಮೀ ರೇಸ್ ಕೋರ್ಸ್ ಆವರಣದಲ್ಲಿ ಇರುವ ಅವಕಾಶವನ್ನು ಬಹಳ ಅಚ್ಚುಕಟ್ಟಾಗಿ ಉಪಯೋಗಿಸಿಕೊಳ್ಳಲಾಗಿತ್ತು. ‘ಹ್ಯಾಂಗರ್ ಸಿ’ (HANGAR C) ಮತ್ತು ‘ಹ್ಯಾಂಗರ್ ಎ’ (HANGAR A) ಪ್ರತಿಯೊಬ್ಬ ಕಲಾರಸಿಕರಲ್ಲೂ ಅಚ್ಚರಿ ಎನ್ನುವ ರೀತಿಯಲ್ಲಿ ಕಲಾಕೃತಿಗಲು ಪ್ರದರ್ಶಿಸಲ್ಪಟ್ಟಿದ್ದವು. ಸಾವಿರಾರು ಕಲಾಕೃತಿಗಳನ್ನು ಒಂದೇ ಸೂರಿನಡಿ ವೀಕ್ಷಿಸುವುದು ಸಹಜವಾಗಿಯೇ ಎಲ್ಲರ ಕಣ್ಣಿಗೂ ಹಬ್ಬದ ಸಂಭ್ರಮವೇ ಆಗಿರುತ್ತದೆ. ‘ಹ್ಯಾಂಗರ್ ಎ’ನಲ್ಲಿದ್ದ ಗ್ಯಾಲರಿಗಳಲ್ಲಿ ಭಾರತದ ಅನೇಕ ಖ್ಯಾತನಾಮ ಕಲಾವಿದರ ಕಲಾಕೃತಿಗಳು ಕಂಡುಬಂದವು. ‘ಹ್ಯಾಂಗರ್ ಸಿ’ನಲ್ಲಿ ಖ್ಯಾತನಾಮರ ಜೊತೆಗೆ ಪ್ರಚಾರದಲ್ಲಿರುವ ಮತ್ತು ಬೆಳೆಯುತ್ತಿರುವ ಕಲಾವಿದರ ಕಲಾಕೃತಿಗಳು ಗಮನ ಸೆಳೆದವು. ಕಳೆದೊಂದು ದಶಕದೀಚೆ ಭಾತೀಯ ಕಲಾಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಹುತೇಕ ಕಲಾವಿದರ ಕಲಾಕೃತಿಗಳು ಆರ್ಟ್ ಮುಂಬೈ ೪ನೇ ಆವೃತ್ತಿಯಲ್ಲಿ ನೋಡಲು ಸಾಧ್ಯವಾಗಿರುವುದು ಪ್ರದರ್ಶನದ ವಿಶೇಷ ಎನ್ನಬಹುದು. ಆದರೆ, ಕೆಲವೊಂದು ಪ್ರತಿಷ್ಠಿತ ಗ್ಯಾಲರಿಗಳು ಕಲಾಕೃತಿಗಳ ಆಯ್ಕೆ ಮತ್ತು ಕ್ಯುರೇಶನ್ ವಿಭಾಗದಲ್ಲಿ ಎಡವಿರುವುದು ಸ್ಪಷ್ಟವಾಗಿ ಗೋಚರಿಸಿತು. ಬಹುಶಃ ಈ ನಿಟ್ಟಿನಲ್ಲಿ ಇನ್ನಷ್ಟು ಅಳೆದು ತೂಗಿ ಕಲಾಕೃತಿಗಳನ್ನು ಆಯ್ಕೆ ಮಾಡಿಕೊಂಡಿದ್ದರೆ, ಕಲಾಕೃತಿಗಳಿಗೆ ಮಹತ್ವ ಕೊಟ್ಟಿದ್ದರೆ ಗ್ಯಾಲರಿಗಳ ಕಾಂತೀಯ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದಿತ್ತು. ಬೆರಳೆಣಿಕೆಯಷ್ಟು ಪ್ರದರ್ಶಕರ ವಾಲ್ಗಳು ಖಂಡಿತವಾಗಿಯೂ ವೃತ್ತಿಪರತೆ ಕಾಪಾಡಿಕೊಳ್ಳುವಲ್ಲಿ ಎಡವಿದೆ. ಆದರೆ, ಸಾವಿರಾರು ಉತ್ತಮ ಕಲಾಕೃತಿಗಳ ನಡುವೆ ಇವು ಗೌಣ ಎಂದೇ ಭಾವಿಸಬಹುದಾದರೂ, ಒಟ್ಟಾರೆ ಪ್ರದರ್ಶನಕ್ಕೆ ಕಪ್ಪುಚುಕ್ಕೆಯೂ ಆಗಿಬಿಡಬಹುದಾದ ಸಾಧ್ಯತೆ ಇದೆ.
‘ಹ್ಯಾಂಗರ್ ಸಿ’ನಲ್ಲಿರುವ ಸಾಕಷ್ಟು ಗ್ಯಾಲರಿಗಳಲ್ಲಿ ಹೊಸ ಹೊಸ ಮಾಧ್ಯಮಗಳನ್ನು ಬಳಸಿಕೊಂಡು ರಚಿಸಲಾದ ಶಿಲ್ಪಗಳು (Sculptures) ಆಪ್ತವೆನಿಸಿದವು. ಸಾಮಾನ್ಯ ಅನಿಸುವ ಶಿಲ್ಪಕಲಾಕೃತಿಗಳಿಂದ ಹಿಡಿದು ನಿಬ್ಬೆರಗಾಗಿಸುವ ಶಿಲ್ಪ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿದ್ದವು. ಹೊಸ ಹೊಸ ಪ್ರಯತ್ನಗಳಿಗೆ ತೆರೆದುಕೊಳ್ಳುತ್ತಿರುವುದು ಭಾರತೀಯ ಕಲಾ ಸಮುದಾಯದ ಕ್ರಿಯಾಶೀಲತೆಗೆ, ಪ್ರಯೋಗಶೀಲತೆಗೆ ಹಿಡಿದ ಕನ್ನಡಿ. ಸಮಕಾಲೀನ ಸಂದರ್ಭದ ಸಾವಿರಾರು ಅತ್ಯುತ್ತಮ ಕಲಾಕೃತಿಗಳು ಮುಂದಿನ ಪೀಳಿಗೆಗೆ ದಿಕ್ಸೂಚಿಯಂತೆ ಇತ್ತು. ಸಾಂಪ್ರದಾಯಿಕ ಮತ್ತು ಆಧುನಿಕ ಕಾಲಘಟ್ಟದ ಚಿಂತನೆಗಳಿಗೆ ಅಂಟಿಕೊAಡಿದ್ದ ಗ್ಯಾಲರಿಗಳು ಸಮಕಾಲೀನ ಸಂದರ್ಭದ ಚಿಂತನೆಗಳಿಗೆ ತೆರೆದುಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಸಂವಾದಾತ್ಮಕ (Interactive) ಮತ್ತು ತಲ್ಲೀನಗೊಳಿಸುವ (Immersive) ಕಲಾಕೃತಿಗಳನ್ನು ಇನ್ನಷ್ಟು ಪ್ರಚುರ ಪಡಿಸುವ ಕಡೆ ಪ್ರದರ್ಶಕರು ಒಲವು ತೋರುತ್ತಿರುವುದು ಗಮನಾರ್ಹ ಬೆಳವಣಿಗೆ. ಅಲ್ಲದೆ, ಹೊಸ ಮುಖಗಳನ್ನು ಅಂದರೆ ಯುವ ಕಲಾವಿದರ ಕಲಾಕೃತಿಗಳನ್ನು ಪರಿಚಯಿಸುವ ಪ್ರಯತ್ನಗಳೂ ಕೆಲವೊಂದು ಪ್ರದರ್ಶಕರಿಂದ ಆಗಿರುವುದು ಸ್ವಾಗತಾರ್ಹ ಬೆಳವಣಿಗೆ. ಈ ಪರಿಪಾಠ ಇನ್ನಷ್ಟು ವೃದ್ಧಿಸಬೇಕಿದೆ. ಆರ್ಟ್ ವರ್ಲ್ಡ್ ನಿರೀಕ್ಷೆ ಕೂಡ ಇದೇ ಆಗಿದೆ.
ವಿಶ್ವಪ್ರಸಿದ್ಧ ಕಲಾವಿದರಾದ ಅನಿಶ್ ಕಪೂರ್ ಅವರ stainless steel ಮಾಧ್ಯಮಗಳಿಂದ ರಚಿಸಲಾದ ಕಲಾಕೃತಿಗಳು, ಜಿತೀಶ್ ಕಲ್ಲಟ್ ಅವರ ವಿಭಿನ್ನ ಮೈವಳಿಕೆಗಳಿಂದ ಕೂಡಿರುವ ಕಲಾಕೃತಿಗಳು, ಶಿಲ್ಪಾ ಗುಪ್ತಾ ಅವರ ಸಮಕಾಲೀನ ಚಿಂತನೆಯಿAದ ಕೂಡಿರುವ ಕಲಾಕೃತಿಗಳು ಸೇರಿದಂತೆ ಅನೇಕ ಖ್ಯಾತನಾಮ ಸಮಕಾಲೀನ ಚಿಂತನಾಶೀಲ ಕಲಾವಿದರ ಕಲಾಕೃತಿಗಳು ಗಮನ ಸೆಳೆದವು. ಉಳಿದಂತೆ ಕಿರಣ್ ನಡಾರ್ ಮ್ಯೂಸಿಯಂ ಆಫ್ ಆರ್ಟ್ (Kiran Nadar Museum of Art) ಮತ್ತು ಸ್ಯಾಫರಾನ್ ಆರ್ಟ್ ಫೌಂಡೇಶನ್ (Saffronart Foundation) ಅವರ ಆಯೋಜನೆಯ ‘Voices from the Earth‘ ಶೀರ್ಷಿಕೆಯ ಪ್ರದರ್ಶನವು ಮಹಿಳೆ, ಜಾನಪದ, ನಿಸರ್ಗ, ಬುಡಕಟ್ಟು, ಶ್ರಮಿಕರನ್ನೇ ವಿಷಯವಾಗಿಸಿಕೊಂಡು ಕ್ಯುರೇಟ್ ಮಾಡಿರುವ ಕಲಾಪ್ರದರ್ಶನ ಅನಿಸಿತು. ಇನ್ನು ಶಿಲ್ಪ ವನದಲ್ಲಿ (Sculpture Park) ಹೇಳಿಕೊಳ್ಳುವಂತಹ ಆಕರ್ಷಣೆ ಕಾಣಲಿಲ್ಲ. 13ಕ್ಕೂ ಹೆಚ್ಚು ಶಿಲ್ಪಗಳು ಪ್ರದರ್ಶಿಸಲ್ಪಟ್ಟಿದ್ದವು.
ಕಲಾವಿದರಿಗೆ Dabriwala ಕುಟುಂಬ ಗೌರವ!
ನಾಲ್ಕು ದಶಕಗಳಿಂದ ಕುಟುಂಬವೊAದು ಸಂಗ್ರಹಿಸಿದ ಕಲಾಕೃತಿಗಳು ಆರ್ಟ್ ಮುಂಬೈನ ‘The Arches‘ ವಿಭಾಗದ ಗ್ಯಾಲರಿ ಸ್ಥಳದಲ್ಲಿ ಪ್ರದರ್ಶಿಸಲ್ಪಟ್ಟಿದ್ದವು. ಕೋಲ್ಕತ ಮೂಲದ ದಬ್ರಿವಾಲಾ ಫೌಂಡೇಶನ್ ಫಾರ್ ದ ಆರ್ಟ್ಸ್ (The Dabriwala Foundation for the Arts) ಇಂತಹದ್ದೊಂದು ಪ್ರಯತ್ನವನ್ನು ಇದೇ ಮೊದಲ ಬಾರಿಗೆ ಮಾಡಿತ್ತು.
‘ವ್ಯಕ್ತ್ – ಅವ್ಯಕ್ತ್ (Vyakt – Avyakt)’ ಶೀರ್ಷಿಕೆಯಡಿ ಭಾರತೀಯ ಕಲಾಪರಂಪರೆಯಲ್ಲಿ ಕಲಾಕೃತಿಗಳ ಮೂಲಕವೇ ಖ್ಯಾತಿಗಳಿಸಿದ ವಾಸುದೇವ್ ಗಾಯತೊಂಡೆ (Vasudev Gaitonde), ಜ್ಯೋತಿ ಭಟ್ (Jyoti Bhatt), ಜಿ.ಆರ್.ಸಂತೋಷ್ (G. R. Santosh), ಅಂಬಾದಾಸ್ ಖೋಬ್ರಗಡೆ (Ambadas), ರಾಮ್ ಕುಮಾರ್ (Ram Kumar), ಎಸ್.ಎಚ್. ರಜಾ (Sayed Haider Raza), ಅವಿನಾಶ್ ಚಂದ್ರ (Avinash Chandra), ಪ್ರಭಾಕರ್ ಬಾರ್ವೆ (Prabhakar Barwe), ಶಾಂತಿ ದವೆ (Shanti Dave), ಜೆರಮ್ ಪಟೇಲ್ (Jeram Patel) , ಸೋಹನ್ ಖದ್ರಿ (Sohan Qadri), ಅಕ್ಬರ್ ಪದ್ಮಸೆ (Akbar Padamsee) ಸೇರಿದಂತೆ 15 ಮಂದಿ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿದ್ದವು. ಈ ಮೂಲಕ ಕುಟುಂಬ ಕಳೆದ ಮರ್ನಾಲ್ಕು ದಶಕಗಳಿಂದ ತಾನು ಸಂಗ್ರಹಿಸಿದ ಕಲಾಕೃತಿಗಳನ್ನು ಪ್ರದರ್ಶಿಸಿ ಕಲಾವಿದರಿಗೆ ಗೌರವ ಸಲ್ಲಿಸಿದ್ದು ನಿಜಕ್ಕೂ ಶ್ಲಾಘನೀಯ. ಕುಟುಂಬದ ಮೂರನೇ ತಲೆಮಾರಿನ ಸಂಗ್ರಾಹಕಿ ವಾಸವಿ ದಬ್ರಿವಾಲಾ (Vasavi Dabriwala) ಅವರು ಈ ಪ್ರದರ್ಶನವನ್ನು ಕ್ಯುರೇಟ್ ಮಾಡಿದ್ದರು.
ವಾಸವಿ ದಬ್ರಿವಾಲಾ ಅವರ ಕ್ಯುರೇಶನ್ ಪ್ರಯತ್ನ ಆಪ್ತವೆನಿಸಿತು. ಸ್ಥಳಾವಕಾಶವನ್ನು ಬಹಳ ಜಾಣ್ಮೆಯಿಂದ ಬಳಸಿಕೊಂಡಿದ್ದರು. ಭಾರತೀಯ ಕಲಾಕ್ಷೇತ್ರದಲ್ಲಿ ಶ್ರೇಷ್ಠ ಕಲಾವಿದರಾಗಿ ಬೆಳೆದ ಕಲಾವಿದರ ಕಲಾಕೃತಿಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು. ಕುಟುಂಬ ಸಂಗ್ರಹದ ಕಲಾಕೃತಿಗಳನ್ನು ಕಲಾ ರಸಿಕರಿಗೆ ವೀಕ್ಷಿಸುವಂತೆ ಮಾಡುವ ಹೃದಯವಂತಿಕೆ ಈ ಕಾಲಘಟ್ಟಕ್ಕೆ ಅಗತ್ಯ. ಸ್ವತಃ ಅದೇ ಕುಟುಂಬ ಸದಸ್ಯರು ಮುಂದೆ ನಿಂತು ಪ್ರದರ್ಶಿಸಿದ್ದು ಯಶಸ್ವಿ ಪ್ರಯತ್ನ.
