• ಗಮನಸೆಳೆದ ‘LOOKING BEYOND, STEPPING IN’
• ಗ್ಯಾಲರಿ ಸುಮುಖದಲ್ಲಿ ‘ಸಮಕಾಲೀನ’ ಕಲಾಪ್ರದರ್ಶನ
ಸಮಕಾಲೀನ ಕಲೆ (Contemporary Art) ಮತ್ತು ಇದನ್ನಾವರಿಸಿ ಇಂದಿನ ಯುವ ಕಲಾವಿದರನ್ನು ಹೆಚ್ಚೆಚ್ಚು ಆವರಿಸಿಕೊಳ್ಳುತ್ತಿರುವ ಪರಿಕಲ್ಪನಾ ಕಲೆ (Conceptual Art) ಹೇಗೆ ಮುಖ್ಯ ವಾಹಿನಿಯಾಗಿ ಪರಿಣಾಮ ಬೀರಬಲ್ಲದು? ಸಾಮಾನ್ಯರನ್ನು ಹೇಗೆ ತಲುಪಬಲ್ಲದು? ಹೇಗೆ ಸಾಂಪ್ರದಾಯಿಕ ಚಿಂತನೆಗಳ ಸಾಮ್ಯತೆಯ ಹೊರತಾಗಿ ಹೊಸತು ಎನಿಸಿಕೊಳ್ಳಬಲ್ಲವು? ಕಲಾವಿದ ಸಮಕಾಲೀನ ಭಾವಗಳತ್ತ ಆಕರ್ಷಿತನಾಗಿ ತಾನು ಅನುಭವಿಸಬೇಕಾದುದನ್ನೇ ಕೈಚೆಲ್ಲಿ ಕ್ಷಣಿಕದ ಕಡೆ ಓಡುವ, ವಾಲಿಕೊಳ್ಳುವ ಸಾಹಸಕ್ಕೆ ಮುಂದಾಗುತ್ತಿರುವುದನ್ನು ನಿತ್ಯ ಕಾಣುತ್ತಿದ್ದೇವೆ. ಕ್ಷಣ ಕ್ಷಣಕ್ಕೂ ಬದಲಾಗುವ ಅನೇಕ ಸಂಗತಿಗಳು ಕಲಾವಿದರ ಆಲೋಚನೆಯನ್ನು ಅವರ ಅಭಿವ್ಯಕ್ತಿಯಲ್ಲೇ ಗಮನಿಸಬಹುದಾಗಿದೆ.
ಎಐ (artificial intelligence) ತಂತ್ರಜ್ಞಾನ ವಿಜೃಂಭಿಸುತ್ತಿರುವ ಕಾಲಘಟ್ಟದಲ್ಲಿ ಬೆರಳೆಣಿಕೆಯಷ್ಟು ಯುವ ಕಲಾವಿದರ ಆಲೋಚನೆಗಳು ಸಹಜವಾಗಿಯೇ ಆಶಾ ಭಾವ ಮೂಡಿಸುತ್ತವೆ. ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ನೆಲೆಯಲ್ಲೇ ತೇಲಾಡುವ ಬದಲು ಭೌಗೋಳಿಕ ಮತ್ತು ನೈಸರ್ಗಿಕ ವಿಚಾರಗಳತ್ತ ಆಕರ್ಷಿತರಾಗುತ್ತಿರುವುದು ಹೆಚ್ಚು ಆಪ್ತವೆನಿಸುತ್ತದೆ. ಈ ಕಾರಣಕ್ಕಾಗಿ ಬೆಂಗಳೂರಿನ ‘ಗ್ಯಾಲರಿ ಸುಮುಖ’ದಲ್ಲಿ ನಡೆಯುತ್ತಿರುವ ‘LOOKING BEYOND, STEPPING IN’ ಕಲಾಪ್ರದರ್ಶನ ಗಮನ ಸೆಳೆಯಿತು.
ಯುವ ಕಲಾವಿದರಾದ ಅರಣ್ಯಾ ನಾಗನೂರ್ (Aranya Naganur), ಕವನಾ ಬದ್ರೀನಾಥ್ (Kavana Badrinath), ಮನುಷ್ಯ(Manushya), ಸಂತೋಷ್ ಪತ್ತಾರ್ (Santosh Pattar), ವೈಶಾಲಿ ವಿ. (Vaishali V), ವಿನ್ಯಾಸ ಕಾಟೇನಹಳ್ಳಿ (Vinyas Katenhalli) ಮತ್ತು ವರುಣ (Varuna) ಅವರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. 30ವರ್ಷ ಪೂರೈಸಿದ ಸಂದರ್ಭದಲ್ಲಿ ‘ಗ್ಯಾಲರಿ ಸುಮುಖ’ ಮೂವತ್ತರ ಆಸುಪಾಸಿನ ವಯೋಮಿತಿಯ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿರುವುದು ಸ್ವಾಗತಾರ್ಹವಾದುದು. ಯಾವುದೇ ಗ್ಯಾಲರಿ ಆಯಾಕಾಲಘಟ್ಟದಲ್ಲಿ ತನ್ನನ್ನು ತಾನು ತೆರೆದುಕೊಳ್ಳುವ ಪ್ರಯತ್ನಕ್ಕೆ ಮುಂದಾಗದೇ ಇದ್ದರೆ ಕಾಲಬಾಹಿರ (outdated) ಅನಿಸಿಕೊಳ್ಳಬಹುದಾದ ಸಾಧ್ಯತೆ ಹೆಚ್ಚು. ಈ ನಿಟ್ಟಿನಲ್ಲಿ ಸುಮುಖ ಗ್ಯಾಲರಿಯ ನಡೆ ಪ್ರಶಂಸನೀಯ. ಕಲಾವಿದ, ಕಲಾ ವಿಮರ್ಶಕರಾದ ಎಚ್.ಎ. ಅನಿಲ್ ಕುಮಾರ್ ಅವರು ಅರ್ಥಪೂರ್ಣ ಸಾಲುಗಳ ಮೂಲಕ ಈ ಪ್ರದರ್ಶನದ ಸೊಬಗು ಹೆಚ್ಚಿಸಿದ್ದಾರೆ. ಅಕ್ಷರ ಮತ್ತು ಚಿತ್ರಗಳ ಪ್ರಾಮುಖ್ಯತೆಯ ಬಗ್ಗೆ ಜಾಗ್ರತಗೊಳಿಸಿದ್ದಾರೆ.
ಸಂತೋಷ್ ಪತ್ತಾರ್ ಅವರ ಕಲಾಕೃತಿಗಳಲ್ಲಿ ವೈರುಧ್ಯ, ವೈವಿಧ್ಯ ನೋಡುಗನಿಗೆ ವೇದ್ಯವೆನಿಸಲು ಸಾಧ್ಯವಾಗಿದೆ. ‘FORMER ACT OF VIJAYANAGAR’ ಶೀರ್ಷಿಕೆಯ ಫೋಟೊ ಪ್ರಿಂಟ್ ಕಲಾಕೃತಿಯಲ್ಲಿ ತಾವೇ ವಿಷಯವಸ್ತುವಾಗಿ ನಿಲ್ಲುತ್ತಾರೆ ಮತ್ತು ಅನುಭವಿಸುತ್ತಾರೆ. GONGURA ಮತ್ತು SESAME ಶೀರ್ಷಿಕೆಯ ಕಲಾಕೃತಿಗಳಲ್ಲಿ ತಾವೇ ಕಳೆದುಹೋಗುತ್ತಾರೆ. ಕೌಶಲ್ಯ ಪ್ರಧಾನವಾಗಿಸಿ ನೈಸರ್ಗಿಕ ಸತ್ಯ ತೆರೆದಿಡುವ ಪ್ರಯತ್ನ ಮಾಡುತ್ತಾರೆ. ವಿಜಯನಗರ ಆಳ್ವಿಕೆಯ ಕಾಲದಿಂದ ಪ್ರಜಾಪ್ರಭುತ್ವದ ಆಧುನಿಕ ಸಂದರ್ಭದಲ್ಲಿ ರೈತ, ಕೃಷಿ, ಸಂಬಂಧ, ಜೀವನದ ವೈರುಧ್ಯ, ವೈವಿಧ್ಯ ವಿಶೇಷವಾಗಿಸಿದ್ದಾರೆ. ಸಾಂಪ್ರದಾಯಿಕ ಕೃಷಿ ಮೂಲವನ್ನು ಸಮಕಾಲೀನ ದೃಷ್ಟಿಯಲ್ಲಿ ಚಿತ್ರಿಸುವ ಪ್ರಯತ್ನ ನಡೆದಿದೆ ಎನ್ನಬಹುದು.
ವೈಶಾಲಿ ವಿ. ಅವರ ‘Monotonous Discomfort’ ಶೀರ್ಷಿಕೆಯ ಮುದ್ರಣ ಕಲಾಕೃತಿ ವಿಭಿನ್ನ ಅನುಭವ ಊಣಬಡಿಸುವಂತಿದೆ. ಏಕತಾನತೆ ಮುದ್ರಣ ತಂತ್ರಗಾರಿಕೆಯಲ್ಲಿ ಉಳಿಸಿಕೊಂಡಿದ್ದು ಗಮನಾರ್ಹ. ಬಟ್ಟೆಯ ಮೇಲಿನ ಮುದ್ರಣದ ‘ಅಂತಿಮ ಆವೃತ್ತಿ’ (final edition) ಕೃತಿಯ ಬಗ್ಗೆ ಕುತೂಹಲ ಹೆಚ್ಚಿದೆ. ಇನ್ನು, ಮನುಷ್ಯ ಅವರ ಕಲಾಕೃತಿಗಳಲ್ಲಿಯೂ ನಿಸರ್ಗ ವೈವಿಧ್ಯತೆ ಪ್ರಾಮುಖ್ಯತೆ ಪಡೆದಿದೆ. ‘Homosymbio Anurae’ ಶೀರ್ಷಿಕೆಯ ಸರಣಿ ಕಲಾಕೃತಿಗಳು ಕ್ಷಣಕಾಲ ಹಿಡಿದು ನಿಲ್ಲಿಸುತ್ತವೆ. ಅಧ್ಯಯನಶೀಲತೆ ಕಲಾಕೃತಿಗಳಲ್ಲಿ ಪ್ರತಿಬಿಂಬಿಸಿದೆ. ಜಲವರ್ಣ ಬಳಕೆ ಮತ್ತು ಮೃವಳಿಕೆಯ ಸೃಷ್ಟಿ ನೈಜತೆಯ ಭಾವ ಮೂಡಿಸುವಂತಿವೆ.
ಕವನಾ ಬದ್ರೀನಾಥ್ ಅವರ ‘Space of ripples’ ಶೀರ್ಷಿಕೆಯ ಕಲಾಕೃತಿ ವಿಭಿನ್ನ ಚಿಂತನೆಯದ್ದಾಗಿದೆ. ಗಾಢ ವರ್ಣದ ಮೂಲಕ ಗ್ಯಾಲರಿಯ ಕಂಪನದ ಮೇಲೆ ಪರಿಣಾಮ ಬೀರುವಂತಿದೆ. ಕಲಾಕೃತಿಯ ಗಾತ್ರ ಗಮನ ಸೆಳೆಯುವಂತಿದೆ. ಕ್ಯಾನ್ವಾಸ್ ಪ್ರಸ್ತುತಿಯಲ್ಲಿ ಕಾಣಬಹುದಾದ ಜಾಣತನ ಕೌಶಲ್ಯದಲ್ಲಿ ಮೊಣಚುಗೊಳಿಸಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಿ ಇರುತ್ತಿತ್ತು. ಆದರೆ, ಉದ್ದೇಶಪೂರ್ವಕವಾಗಿ (deliberately) ನಿರ್ಲಕ್ಷಿಸಿದ್ದಾರೆನ್ನುವುದು ವೇದ್ಯ.
ಇನ್ನು, ಅರಣ್ಯಾ ನಾಗನೂರ್ ಅವರ ‘Still Giving’ ಶೀರ್ಷಿಕೆಯ ಚಿತ್ರ ನೇಯ್ಗೆ (tapestry) ಮನಮುಟ್ಟುವಂತಿದೆ. ನೇಯ್ಗೆಯ ಸಹಜತೆಯಲ್ಲೂ ಹೊಸತೊಂದು ಮೈವಳಿಕೆ ಮೂಡುವಂತೆ ಜಾಣತನ ತೋರಿರುವುದು ಶ್ಲಾಘನೀಯ. ಕುತೂಹಲ ಹೆಚ್ಚಿಸುವಂತೆ ಮಾಡಿದ್ದಾರೆ. ಸಾಮಾನ್ಯರೂ ಬೇಗ ಅರ್ಥೈಸಿಕೊಳ್ಳಬಹುದಾದ ಅರ್ಥಪೂರ್ಣ ಪ್ರಯತ್ನ ಎನ್ನುವುದರಲ್ಲಿ ಅನುಮಾನವಿಲ್ಲ.
ವರುಣ ಅವರ ‘ಚಂದ್ರನಖ-Chandranakha’ ಶೀರ್ಷಿಕೆಯ ಲೋಹ, ಮರ ಬಳಕೆಯ ಸರಣಿ ಕಲಾಕೃತಿ ವಸ್ತುಸಂಗ್ರಹಾಲಯದ (museum) ಪ್ರಸ್ತುತಿ. ಕಲಾತ್ಮಕತೆ (aesthetically) ದೃಷ್ಟಿಯಿಂದಲೂ ಪರಿಣಾಮಕಾರಿಯಾಗಿದೆ. ಪಂಚತಂತ್ರ ಕಥೆಗಳೇ ಸ್ಪೂರ್ತಿ ಎಂದು ಕಲಾವಿದರು ಹೇಳಿಕೊಂಡಿದ್ದಾರೆ. ಹಾಗಾಗಿ ಬೇರಾವುದೇ ನೋಟ ಇದಕ್ಕೆ ಸಿಗದೆನ್ನುವ ಭಾವ ಮೂಡುವುದೂ ಸಹಜ. ಕಲಾಕೃತಿ ಶೀರ್ಷಿಕೆ ಮತ್ತು ಅವರ ವಿವರಣೆ ಪಂಚತಂತ್ರದ ಮಿತ್ರಭೇದ ತಂತ್ರದ ಪ್ರಸಿದ್ಧ ಕಥೆ ‘ನೀಲಿ ನರಿ’ ನೆನಪಿಸಿತು. ಆ ನರಿಯ ಹೆಸರು ಚಂಡರವ ಅಥವಾ ಚಂದ್ರನಖ. ಪ್ರಸಿದ್ಧ ಕಥೆ ಇದಾಗಿದೆ.
ವಿನ್ಯಾಸ ಕಾಟೇನಹಳ್ಳಿ ಅವರ terracotta ಕಲಾಕೃತಿಗಳು ಅಪ್ಪಟ ಹಳ್ಳಿ ಸೊಗಡಿನದು, ಇತಿಹಾಸ ನೆನಪಿಸುವಂತದ್ದು. ‘ಜಿಮ್’ ವ್ಯವಸ್ಥೆಯ ಭರಾಟೆಯಲ್ಲಿ ಅವಸಾನದ ಅಂಚಿಗೆ ತಳ್ಳಲ್ಪಡುತ್ತಿರುವ ‘ಗರಡಿ ಮನೆ’ಯನ್ನು ಬಲ್ಲವರು ಬೇಗ ಇವರ ಸಂವೇದನೆ ಅರ್ಥ ಮಾಡಿಕೊಳ್ಳಲು ಸಾಧ್ಯ. ಬಹಳ ಸೂಕ್ಷ್ಮ ಸಂವೇದನೆಯ ಕಲಾಕೃತಿಗಳು. ಮಣ್ಣು ಸಾಮಾನ್ಯ ಮಾಧ್ಯಮವೆನಿಸಿದರೂ ಬಳಸಿಕೊಂಡಿರುವ ರೀತಿ ಹೃದಯಸ್ಪರ್ಶಿ. ಕಲಾವಿದರ ಕಳಕಳಿ ಬಹಳ ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಈ ಪ್ರದರ್ಶನ ನೋಡುಗರನ್ನೂ ಅಧ್ಯಯನ ಶೀಲರನ್ನಾಗಿಸುತ್ತಿದೆ. ಒಂದೊಳ್ಳೆಯ ಸಂದೇಶ ರವಾನಿಸಬಹುದಾದ ಕಲಾಪ್ರದರ್ಶನ. ಹೊಸಪೀಳಿಗೆಯ ಹೊಸಹೆಜ್ಜೆಗೆ ಈ ಕಲಾಪ್ರದರ್ಶನ ನಾಂದಿಯಾಗಲಿ.
ಸ್ನೇಹಿತರೆ, ‘LOOKING BEYOND, STEPPING IN’ ಕಲಾಪ್ರದರ್ಶನ ನವೆಂಬರ್ 28ಕ್ಕೆ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.












