ಬಳೆ ಮಂಟಪದಲ್ಲಿ ಜಲವರ್ಣ ಕಂಪನ!

Share This

  • 30ಕ್ಕೂ ಹೆಚ್ಚು ಕಲಾವಿದರಿಂದ ಕಲಾಕೃತಿಗಳ ರಚನೆ
  • ಯಳಂದೂರಿನ ಏ ರಿಚ್ ಫೌಂಡೇಶನ್ ಆಯೋಜನೆ

ಗೌರೀಶ್ವರನ ಸನಿಧಾನ, ಮಹಾಧ್ವಾರದಲ್ಲಿ ವಿಜಯನಗರ ಶೈಲಿಯ ಶಿಲ್ಪಗಳಿಂದ ಅಲಂಕೃತ ಬಳೆಮಂಟಪ, ತುಸು ಹೊಯ್ಸಳ ಶೈಲಿ ಲೇಪಿತ ವಾಸ್ತು ವಿಶೇಷ. 16ನೇ ಶತಮಾನದ ವೈಭವ. ಇಂತಹ ದ್ದೊಂದು ವಿಶೇಷ ಕಂಪನ ಗರ್ಭಿತ ಸ್ಥಳದಲ್ಲಿ ಕಲಾವಿದರು ಕುಳಿತು ಜಲವರ್ಣ ಮುಖೇನ  ದಾಖಲಿಸುತ್ತಾರೆ. ನಿಬ್ಬೆರಗಾಗುವಂತಹ ಚಿತ್ರಗಳನ್ನು ರಚಿಸುವುದೆಂದರೆ ಹುಡುಗಾಟದ ಮಾತಲ್ಲ, ಅದೊಂದು ತಪಸ್ಸು. ಎದುರಿಗಿನ ಸೌಂದರ್ಯವನ್ನು ಕ್ಷಣಾರ್ಧದಲ್ಲಿ ಸೆರೆ ಹಿಡಿಯುವುದು ಒಂದು ದಾಖಲಾರ್ಹ ಸಂಗತಿಯಾದರೆ, ಬೆಳ್ಳಂಬೆಳಗ್ಗೆ ಸ್ವರ್ಣ ಲೇಪಿತ ರವಿ ಕಿರಿಣಗಳ ನಡುವಿನಲ್ಲಿ ಉತ್ಸಾಹಿ ಕಲಾವಿದರು ಸಹೃದಯಿ ಜನತೆಯನ್ನು ಆಕರ್ಷಿಸುವಂತೆ ಮಾಡಿದ್ದು ಗಮನಾರ್ಹ!

ಚಾಮರಾಜನಗರ ಯಳಂದೂರಿನಲ್ಲಿ 2026, ಜೂನ್ 28ರಂದು ಆ ಭಾಗಕ್ಕೆ ಅಪರೂಪವೆನಿಸುವ ದೃಶ್ಯಕಲಾ ಕಾರ್ಯಕ್ರಮವೊಂದು ನಡೆಯಿತು. ಇಲ್ಲಿನ ಉದ್ಯಮಿ, ನಿವಾಸಿ, ಆತ್ಮೀಯರಾದ ಶ್ರೀನಿವಾಸ್ ಎಚ್.ಆರ್. ಅವರು ಇಂತಹ ದ್ದೊಂದು  ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಕಲೆ ಮತ್ತು ಸಂಸ್ಕೃತಿ ಕ್ಷೇತ್ರಕ್ಕಾಗಿ ತಾವೇ ಹುಟ್ಟುಹಾಕಿರುವ ಏ ರಿಚ್ ಫೌಂಡೇಶನ್ ಇದಕ್ಕೆ ವೇದಿಕೆ ಒದಗಿಸಿಕೊಟ್ಟಿತ್ತು. ರಾಜ್ಯದ ಬೇರೆ ಬೇರೆ ಭಾಗಗಳಿಂದ ೩೦ಕ್ಕೂ ಹೆಚ್ಚು ಕಲಾವಿದರು ಈ ಕಲಾಶಿಬಿರದಲ್ಲಿ ಪಾಲ್ಗೊಂಡಿದ್ದರು. ಆ ಸುಂದರ ಪರಿಸರದಲ್ಲಿ ಕುಳಿತು ಜಲವರ್ಣದಿಂದ ಕಲಾಕೃತಿಗಳನ್ನು ರಚಿಸಿದರು. ಕರ್ನಾಟಕದ ಅನುಭವಿ ಕಲಾವಿದ ಕಾಂತರಾಜ್ ಎನ್. ಅವರ ನಿರ್ದೇಶನದಲ್ಲಿ ಶಿಬಿರ ನಡೆಯಿತು. ಕನ್ನಡ ಸಂಸ್ಕೃತಿ ಇಲಾಖೆ, ಪ್ರಾಚ್ಯವಸ್ತು, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಅಭ್ಯಾಸಿ ಟ್ರಸ್ಟ್ ಸೇರಿದಂತೆ ಇನ್ನೂ ಕೆಲ ಸಂಘಟನೆಗಳು ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದವು.

ಗ್ರಾಮೀಣ ಭಾಗದಲ್ಲಿರುವ ಅನೇಕ ಕಲಾವಿದರಿಗೆ ಇಂತಹ ಕಲಾಶಿಬಿರಗಳಲ್ಲಿ ಪಾಲ್ಗೊಳ್ಳುವಂತಹ ಅವಕಾಶಗಳು ಲಭ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ ಏ ರಿಚ್ ಫೌಂಡೇಶನ್ ಸಂಸ್ಥಾಪಕ ಶ್ರೀನಿವಾಸ್ ಅವರ ಪ್ರಯತ್ನ ಶ್ಲಾಘನೀಯವಾದುದು. ಐತಿಹಾಸಿಕ ಸ್ಥಳದಲ್ಲಿ ಪರವಾನಿಗೆ ಪಡೆದು ಕಾರ್ಯಕ್ರಮ ಆಯೋಜಿಸುವುದೆಂದರೆ ಅಷ್ಟು ಸುಲಭದ ಮಾತಲ್ಲ. ಅಗತ್ಯವಿರುವ ಇಲಾಖೆಗಳಿಂದ ಪರವಾನಿಗೆ ಪಡೆದು ಈ ಶಿಬಿರ ಆಯೋಜನೆ ಮಾಡಿದ್ದರು. ಕಲಾವಿದರು, ಬಳೆ ಮಂಟಪದ ಶಿಲ್ಪ ಕಲಾಕೃತಿಗಳನ್ನು, ಭೂದ್ಯಶ್ಯವನ್ನು ಮತ್ತು ಸುತ್ತಲಿನ ಪರಿಸರಗಳನ್ನು ಚಿತ್ರಿಸಿ ಎಲ್ಲರ ಗಮನ ಸೆಳೆದರು. ಶಿಬಿರದಲ್ಲಿ ಮೈಸೂರಿನ ರವಿವರ್ಮ ಕಾಲೇಜಿನ ಕಲಾವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು.

ಆದರ್ಶ ಕಲಾಸಂಗಮ!

ಕಲಾಶಿಬಿರಕ್ಕೆ ಚಾಮರಾಜನಗರದ ಅಭ್ಯಾಸಿ ಟ್ರಸ್ಟ್ ರಂಗ ಕಲಾವಿದರು “ನೆಲ ತಾಯಿ” ರಂಗ ರೂಪಕ ಪ್ರದರ್ಶನ ನೀಡಿ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ತಂದುಕೊಟ್ಟರು. ಬಳೆ ಮಂಟಪದ ಎದುರಲ್ಲಿ ಪರಿಸರ ಜಾಗೃತಿ ಮೂಡಿಸುವ ರಂಗ ರೂಪಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಕಿರಣ್ ಗಿರ್ಗಿ ನೇತೃತ್ವದ ರಂಗ ತಂಡದ ಪ್ರದರ್ಶನಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು. ರಂಗಾಯಣದ ಕಲಾವಿದರಾಗಿ ಗುರುತಿಸಿಕೊಂಡಿರುವ ಕಿರಣ್ ಅವರು ಚಾಮರಾಜನಗರದಲ್ಲಿ ಇಂತಹದ್ದೊಂದು ತಂಡವನ್ನು ಕಟ್ಟಿಕೊಂಡು, ಅವರಿಗೆ ರಂಗ ತರಬೇತಿಯನ್ನೂ ನೀಡಿ ಮುನ್ನಡೆಸುತ್ತಿರುವುದು ಗಮನಾರ್ಹ.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಟಿ.ನರಸೀಪುರದ ಮೈಸೂರು ಶೈಲಿ ಸಾಂಪ್ರದಾಯಿಕ ಕಲಾವಿದ ಶ್ರೀಹರಿ ಕೆ.ಎಸ್., ಸಮಕಾಲೀನ ದೃಶ್ಯ ಕಲಾವಿದ ಗಣೇಶ್ ಧಾರೇಶ್ವರ್, ವರ್ಣಶ್ರೀ ಪ್ರಶಸ್ತಿ ವಿಜೇತ ಕಲಾವಿದ ಟ್ಯಾಬ್ಲೋ ಮಹಾದೇವ, ಉರಗ ತಜ್ಞ ಎಂ.ಎಸ್. ಮಹೇಶ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕಲಾವಿದ ಶ್ರೀಹರಿ ಅವರು, ಯಳಂದೂರಿನಂತಹ ಪಟ್ಟಣದಲ್ಲಿ ಕಲಾಶಿಬಿರ ನಡೆದಿರುವುದು ಖುಷಿ ಪಡುವ ಸಂಗತಿ. ವಿಶೇಷವಾಗಿ ಶ್ರೀನಿವಾಸು ಅವರು ಒಂದೊಳ್ಳೆಯ ಪರಿಪಾಠಕ್ಕೆ ನಾಂದಿ ಹಾಡಿದ್ದಾರೆ. ಎಲ್ಲರ ಸಹಕಾರ ಸಿಕ್ಕಾಗ ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕಲಾಶಿಬಿರದಲ್ಲಿ ಅನೇಕರು ಪಾಲ್ಗೊಂಡು ಕಲಾಕೃತಿಗಳನ್ನು ರಚಿಸಿದರು.

 

 


Share This

Leave a Reply

Your email address will not be published. Required fields are marked *