ಕುಂತಾಗ ಒಂಥರಾ.. ನಿಂತಾಗ ಇನ್ನೊಂಥರಾ…!
ವ್ಯಕ್ತಿತ್ವದ ಬಗ್ಗೆ ಹೇಳುವಾಗ ‘ಕುಂತಾಗ ಒಂಥರಾ.. ನಿಂತಾಗ ಇನ್ನೊಂಥರಾ’ ಎಂದು ಹೇಳು ವುದುಂಟು. ಇಂತದೇ ಸ್ವಭಾವದ ಹಕ್ಕಿ ಇಲ್ಲೊಂದಿದೆ. ಅದೇ ಪಂಜಾಬಿನ ರಾಜ್ಯ ಪಕ್ಷಿ.
ಸೂಕ್ಷ್ಮವಾಗಿ ಗಮನಿಸಿ. ಈ ಹಕ್ಕಿಯ ನೆತ್ತಿಯ ಮೇಲೊಂದು ಸುಂದರವಾದ ಜುಟ್ಟಿದೆ. ಎರಡು ಹಕ್ಕಿಗಳು ಜೊತೆಗೆ ಕುಳಿತಿದ್ದರೆ ಮದುವೆಗೆ ಸಿಂಗರಿಸಿಕೊಂಡು ಕುಳಿತಿರುವ ವಧೂವರರಂತೆ ತೋರುತ್ತದೆ. ಈ ಅರ್ಧ ಚಂದ್ರಾಕಾರದ ಜುಟ್ಟೇ ಈ ಹಕ್ಕಿಯ ವಿಶೇಷ.
ಎಲ್ಲಿಯೇ ಹೋಗಿ ಕುಳಿತರೂ ಈ ಜುಟ್ಟು ತೆರೆದುಕೊಳ್ಳುತ್ತದೆ. ಮತ್ತೆ ಹಾರಲು ಆರಂಭಿಸಿತೆಂದರೆ ಜುಟ್ಟು ಮಾಯವಾಗಿಬಿಡುತ್ತದೆ. ಹಾರಾಟಕ್ಕೆ ತೊಂದರೆ ಆಗದಂತೆ ಜುಟ್ಟನ್ನು ಹಿಂದಕ್ಕೆ ಭಾಗಿಸಿಕೊಳ್ಳುತ್ತದೆ. ಆದರೆ ಕುಳಿತುಕೊಳ್ಳುವಾಗ ಮಾತ್ರ ತೆರೆದುಕೊಳ್ಳಲೇ ಬೇಕು. ಇದೇ ಈ ‘ಜುಟ್ಲ ಹಕ್ಕಿ’ (Common Hoopoe) ವಿಶೇಷ.
ಇಸ್ಟೇ ಅಲ್ಲ, ಜುಟ್ಲಹಕ್ಕಿಯ ಕೂಗಿನಲ್ಲೂ ಕೆಲವು ವಿಶೇಷ ಕಾಣಬಹುದು. ಒಮ್ಮೊಮ್ಮೆ ಉಪ್ಪಿಪ್ಪೂ…ಉಪ್ಪೋ ಎಂದು ಕೇಳಿಸಿದರೆ, ಕೆಲವೊಮ್ಮೆ ಹ್ಹು..ಹ್ಹು ಎಂದು ನಕ್ಕಂತೆ ಇರುತ್ತದೆ.
ಹಾರುವಾಗ ಜುಟ್ಲನ ದೇಹದ ಮೇಲ್ಭಾಗ ಪ್ಯಾರಾಚುಟ್ ನಂತೆ ತೋರುತ್ತದೆ. ಕುರುಚಲು ಕಾಡುಗಳಲ್ಲಿ ವಾಸವಾಗಿರುವ ಜುಟ್ಲನನ್ನು ಬಾಸಿಂಗ, ಬಸವನಕೋಡು, ಜುಟ್ಲಕ್ಕಿ, ಚಂದ್ರಮುಕುಟ ಎಂದೆಲ್ಲ ಕರೆಯುತ್ತಾರೆ. ಗೊರವಂಕ ಹಕ್ಕಿಯಸ್ಟೇ ಇರುವ ಈ ಹಕ್ಕಿ ಕಂದು ಬಣ್ಣದಿಂದಿರುತ್ತದೆ. ರೆಕ್ಕೆ ಮತ್ತು ಬಾಲ ಬಿಳಿಯದಾದ ಪಟ್ಟಿಗಳಿಂದ ಕೂಡಿರುತ್ತದೆ. ಕೊಕ್ಕು ಸೂಜಿಯಂತೆ ಇದ್ದು, ಕತ್ತಿಗಿಂತ ಉದ್ದವಾಗಿರುತ್ತದೆ. ಕಣ್ಣು ಕಪ್ಪಗಾಗಿರುತ್ತದೆ. ಜುಟ್ಟಿನ ತುದಿಯಲ್ಲಿ ಕಪ್ಪು ಪಟ್ಟಿಗಳು ಇರುತ್ತವೆ. ಹೊಟ್ಟೆ ಭಾಗದಿಂದ ಕೆಳಕ್ಕೆ ಬೆಳ್ಳಗಿರುತ್ತದೆ.
ಪೊಟರೆ, ಹಾಳುಬಿದ್ದ ಕಟ್ಟಡಗಳ ಛಾವಣಿಗಳಲ್ಲಿ ಗೂಡು ಮಾಡಿಕೊಳ್ಳುವ ಜುಟ್ಲ ಹಕ್ಕಿ ಜನವರಿಯಿಂದ ಜುಲೈ ತಿಂಗಳಿನ ಅವಧಿಯಲ್ಲಿ 5 ರಿಂದ 6 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. 15 ರಿಂದ 20 ದಿನ ಕಾವು ನೀಡುತ್ತದೆ. ಈ ಹಕ್ಕಿಯನ್ನು ರಾಜ್ಯದ ಎಲ್ಲೆಡೆ ನೋಡಲು ಸಾಧ್ಯ.
ದೇವರಾಯನ ದುರ್ಗಾ, ಸಾವನದುರ್ಗಗಳಲ್ಲಿ ಜಾಸ್ತಿ. ಪಾಕಿಸ್ತಾನ್, ಬಾಂಗ್ಲ, ಲಂಕಾಗಳಲ್ಲಿಯೂ ಇವೆ. ಹಣ್ಣು, ಹಲ್ಲಿ, ಚೇಳು, ಇಲಿ, ಇರುವೆ ಇವುಗಳೇ ಈ ಹಕ್ಕಿಯ ಆಹಾರ.