ಕಾಡು ಸುತ್ತಿದ ಮಂದಿಗೆ ಈ ಹಕ್ಕಿ ಚಿರಪರಿಚಿತ.
ನಿವೆಸ್ಟೇ ದೈರ್ಯವಂತ ರಾಗಿದ್ದರೂ ಒಮ್ಮೆಯಾದರೂ ನಿಮ್ಮನ್ನು ಗಾಬರಿಗೊಳಿಸದೆ ಇರದು. ಕಾರಣ ಇಸ್ಟೇ, ಗಾಬರಿ ಬೀಳಿಸುವ ಈ ಹಕ್ಕಿ ಕೂಡ ಗಾಬರಿ ಬೀಳುವ ಸ್ವಭಾವದ್ದೆ. ಬಹುತೇಕ ಹಕ್ಕಿಗಳಿಗಿಂತ ಈ ಹಕ್ಕಿಗೆ ಗಾಬರಿ ಬೀಳುವ ಸ್ವಭಾವ ಜಾಸ್ತಿ. ತನ್ನ ಅಕ್ಕಪಕ್ಕ ಬೀಸುವ ಗಾಳಿಗೆ ತರಗಲೆ ಅಲ್ಲಾಡಿದ ಸಪ್ಪಳವಾದರೂ ಕೆಲ ಕ್ಷಣದಲ್ಲೇ ಕಿ.ಮೀ. ದೂರದಲ್ಲಿರುವ ಹಕ್ಕಿ ಇದು.
ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ನೋಡ ಸಿಗುವ ಈ ಹಕ್ಕಿ ‘ಬುರ್ಲಿ’ ಅರ್ಥಾತ್ Jungle Bush Quail.
ಬುರ್ಲಿಗೆ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಿವೆ. ಪೊದೆ ಹಕ್ಕಿ, ನೆಲ ಕೆದರೋ ಹಕ್ಕಿ ಎಂದೂ ಕರೆಯುತ್ತಾರೆ. ಬಹಳ ಸೂಕ್ಷ್ಮಜೀವಿಗಳಲ್ಲಿ ಇದೂ ಒಂದು. ಸೂಕ್ಷ್ಮಜೀವಿ ಎನಿಸಿಕೊಂಡಿದ್ದು ಅದರ ಗ್ರಹಣ ಶಕ್ತಿಯಿಂದ. ತಾನಿದ್ದ ಪೊದೆಯ ಸುತ್ತಮುತ್ತ ಸಣ್ಣ ಸದ್ದಾದರೂ ಥಟ್ಟಂತ ಜಾಗೃತ ಸ್ಥಿತಿಗೆ ಬಂದು ಬಿಡುತ್ತದೆ. ಸ್ವಲ್ಪ ಅಪಾಯ ಕಾದಿದೆ ಎಂದು ತಿಳಿದರಂತೂ ಬುರ್ ಎಂದು ಹಾರಿ ಜಾಗ ಖಾಲಿ ಮಾಡಿಬಿಡುತ್ತದೆ. ಬುರ್ಲಿ ಹಕ್ಕಿ ಒಂಟಿಯಾಗಿರುವುದು ವಿರಳ. ಒಂದು ಗುಂಪಿನಲ್ಲಿ ಕನಿಷ್ಠ 3 ರಿಂದ 4 ಹಕ್ಕಿಗಳಾದರೂ ಇರುತ್ತದೆ. ಕಲ್ಲು ಹಕ್ಕಿಗಳಂತೆ ನೆಲದ ಮೇಲೆ ಗೂಡು ಮಾಡಿ ಕೊಳ್ಳುತ್ತದೆ. ಸುತ್ತಲೂ ಹುಲ್ಲುಗಳನ್ನು ತಂದು ಹಾಕಿಕೊಳ್ಳುತ್ತದೆ. ಈ ಹಕ್ಕಿಯ ದೇಹದ ಕೆಳಭಾಗದ ಪಟ್ಟಿಗಳು ಆಕರ್ಷಕ.
ಸಾಮಾನ್ಯವಾಗಿ ಸಂತಾನೋತ್ಪತ್ತಿಯ ವೇಳೆಯಲ್ಲೇ ಗೂಡು ಕಟ್ಟಿಕೊಳ್ಳುವ ಈ ಹಕ್ಕಿ ಆಗಸ್ಟ್-ಮೇ ವೇಳೆಯಲ್ಲಿ 3-5 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಈ ವೇಳೆ ವ್ಹೀ ವ್ಹೀ ವ್ಹೀ ಎಂದು ಕೂಗುತ್ತಲೇ ಇರುತ್ತದೆ. ಕಲ್ಲಿನ ಬಣ್ಣವನ್ನೇ ಹೋಲುವ ಈ ಹಕ್ಕಿಯ ದೇಹದ ಮೇಲೆ ಕಂದು ಚುಕ್ಕಿಗಳಿರುತ್ತದೆ. ಬಂಡೆಗಳಿರುವ ಪ್ರದೇಶ, ಕುರುಚಲು ಪ್ರದೇಶ, ಪರ್ಣಪಾತಿ ಕಾಡುಗಳಲ್ಲಿ ಜಾಸ್ತಿ. ಮಣ್ಣಿನಲ್ಲಿರುವ ಬೇಳೆ-ಕಾಳುಗಳು ಮತ್ತು ಕೀಟಗಳೇ ಈ ಹಕ್ಕಿಯ ಆಹಾರ.
ಚಿತ್ರ: ಅಂತರ್ಜಾಲ