– 4 ದಶಕಗಳ ಅನುಭವ ತೆರೆದಿಟ್ಟ ಹೈದರಾಬಾದ್ ಹಿರಿಯ ಕಲಾವಿದ ಡಿ.ಅನಂತಯ್ಯ
ಪ್ರಕೃತಿಯೇ ಉಸಿರು. ಪ್ರತಿಯೊಂದು ಕಲಾಕೃತಿಯಲ್ಲಿಯೂ ಪ್ರಕೃತಿಯ ಅನೇಕ ಸಂಗತಿಗಳನ್ನು ದುಡಿಸಿಕೊಂಡು ಒಂದು ವಿಭಿನ್ನ ಕಲಾಜೀವನ ಅನುಭವಿಸಿದವರು. ತಮ್ಮ ಅಭಿವ್ಯಕ್ತಿಗೆ ನಾಲ್ಕು ದಶಕಗಳ ಕಾಲ ಪ್ರಕೃತಿಯನ್ನೇ ವಿಷಯವಾಗಿಸಿಕೊಂಡು ಧ್ಯಾನಿಸಿದವರು ಇವರು!
ಹೈದರಾಬಾದ್ನ ಹಿರಿಯ ಕಲಾವಿದ, ಪ್ರಿಂಟ್ಮೇಕರ್ (printmaker) ಡಿ. ಅನಂತಯ್ಯ ಅವರ ಮುದ್ರಣ ಕಲಾಕೃತಿಗಳ ಜೀವಮಾನ ಸಾಧನೆ ತೆರೆದಿಡುವ ‘A Poetic Tryst with Nature’ ಕಲಾಪ್ರದರ್ಶನ (retrospective) ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ನ ಗ್ಯಾಲರಿ 1,2,3 ಮತ್ತು 4ರಲ್ಲಿ ನಡೆಯುತ್ತಿದೆ. ಅಂದಾಜು ೧೫೦ ಮುದ್ರಣ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಎಚ್ಚಿಂಗ್ ಮತ್ತು ಲಿಥೋ ಮುದ್ರಣ ಕಲಾಕೃತಿಗಳು ಹೆಚ್ಚಿದ್ದು, ಬೆರಳೆಣಿಕೆಯಷ್ಟು ಕೊಲೋಗ್ರಫಿ ಮುದ್ರಣವೂ ಪ್ರದರ್ಶಿಸಲ್ಪಟ್ಟಿವೆ.
ಅನಂತಯ್ಯ ಅವರ ಕಲಾಕೃತಿಗಳಲ್ಲಿ ಬಹಳ ಶಾಂತ ಭಾವದಿಂದ ಕೂಡಿರುವ ವರ್ಣ ಸಂಯೋಜನೆಯನ್ನು ಕಾಣಬಹುದಾಗಿದೆ. ಅವರು ಪಕೃತಿಯನ್ನು ನೋಡಿರುವ ಬಗೆ ನಿಜಕ್ಕೂ ವಿಭಿನ್ನ. ಎಚ್ಚಿಂಗ್ ಕಲಾಕೃತಿಗಳಲ್ಲಿ ಸೃಷ್ಟಿಸಿರುವ ಮೈವಳಿಕೆ (texture) ಗಮನ ಸೆಳೆಯುತ್ತವೆ. ಬಹುತೇಕ ಕಲಾಕೃತಿಗಳಲ್ಲಿ ಮೈವಳಿಕೆಗಳ ಹೋಲಿಕೆ ನೋಡಿದಾಗ ಅನಂತಯ್ಯನವರು ತಮ್ಮ ಕಲಾಕೃತಿಗಳಲ್ಲಿ ಮೈವಳಿಕೆಯನ್ನೇ ಶೈಲಿಯಾಗಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗುರುತಿಸಬಹುದು. ಉಳಿದಂತೆ ಅವರ ಕೆಲವೊಂದು ಕಲಾಕೃತಿಗಳಲ್ಲಿ ಸಂಯೋಜನೆ ಬೇರೆ ಬೇರೆಯಾಗಿಯೆ ಕಾಣಿಸುತ್ತವೆ. ಅನೇಕ ಕಲಾಕೃತಿಗಳಲ್ಲಿ ವನ್ಯಜೀವಿಗಳನ್ನು ಬಳಸಿಕೊಂಡಿದ್ದಾರೆ. ಈ ಮೂಲಕ ತಮ್ಮ ವನ್ಯಜೀವಿ ಮೇಲಿನ ಒಲವನ್ನೂ ತೋರ್ಪಡಿಸುವ ಪ್ರಯತ್ನವನ್ನೂ ಮಾಡಿದ್ದಾರೆ.