ಎ. ರಾಮಚಂದ್ರನ್‌ರಿಗೆ ಚಿತ್ರಕಲೆ ಉಸಿರಾಗಿತ್ತು!

Share This

 ಭಾರತದ ಹಿರಿಯ ಕಲಾವಿದರಲ್ಲಿ ಒಬ್ಬರಾದ, ಪದ್ಮ ವಿಭೂಷಣ ಅಚ್ಯುತನ್ ರಾಮಚಂದ್ರನ್ ನಾಯರ್ (A.Ramachandran) ಫೆಬ್ರವರಿ 10, 2024 ಶನಿವಾರ ಇಹಲೋಕ ತ್ಯಜಿಸಿದರು. ಅವರಿಗೆ 89ವರ್ಷ ವಯಸ್ಸಾಗಿತ್ತು.
     ವಿಶ್ವಾದ್ಯಂತ ಇರುವ ಅಪಾರ ಅಭಿಮಾನಿಗಳನ್ನು, ಸ್ನೇಹಿತರನ್ನು, ಕುಟುಂಬಸ್ಥರನ್ನು ಅಗಲಿರುವ
ಎ. ರಾಮಚಂದ್ರನ್ ಕೇರಳದವರು. ಅಟ್ಟಿಂಗಲ್ ಎ. ರಾಮಚಂದ್ರನ್ ಅವರ ಹುಟ್ಟೂರು. ಸಾಹಿತ್ಯ ಮತ್ತು ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಎ.ರಾಮಚಂದ್ರನ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ತಂದುಕೊಟ್ಟಿದ್ದು ಚಿತ್ರಕಲೆ. ಅದರಲ್ಲೂ ವಿಶೇಷವೇನೆಂದರೆ ಕೇರಳ ಬಿತ್ತಿಚಿತ್ರಗಳ (Kerala murals) ಮೇಲೆ ಅಧ್ಯಯನ ನಡೆಸಿ ಪಿಎಚ್.ಡಿ (Ph.D/Doctor of Philosophy) ಪಡೆದ ಬಳಿಕ ರಾಮಚಂದ್ರನ್ ಅವರ ಕಲಾಶೈಲಿಯಲ್ಲಿ ಭಿತ್ತಿ ಚಿತ್ರಗಳ ಪ್ರಭಾವವಾಯಿತು. ಆ ಬದಲಾವಣೆ ಅವರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಿತು.
    2002ರಲ್ಲಿ ಲಲಿತ ಕಲಾ ಅಕಾಡೆಮಿಯ ಫೆಲೋ ಆಗಿ ಆಯ್ಕೆಯಾದರು, 2005ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಎ.ರಾಮಚಂದ್ರನ್ ಅವರ ಮುಡಿಗೇರಿತು. 2013ರಲ್ಲಿ ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಕೇರಳ ಲಲಿತಕಲಾ ಅಕಾಡೆಮಿಯ ಗೌರವಾಧ್ಯಕ್ಷರಾದರು.
| ಬೆನ್ನು ಬಿಡದ ಚಿತ್ರಕಲೆ |
ಆಗಲೇ ಹೇಳಿದಂತೆ ಎ.ರಾಮಚಂದ್ರನ್ ಅವರ ಮೂಲ ಆಸಕ್ತಿ ಸಾಹಿತ್ಯ ಮತ್ತು ಚಿತ್ರಕಲೆ. ಹೀಗಾಗಿ 1957 ರಲ್ಲಿ ಅವರು ಮಲಯಾಳಂ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಳ್ಳಲು ಸಾಧ್ಯವಾಯಿತು. ಆದರೆ ಚಿತ್ರಕಲೆಯಿಂದ ದೂರವುಳಿಯಲು ಸಾಧ್ಯವಾಗಲಿಲ್ಲ. ಕಲಾ ಭವನ, ಶಾಂತಿನಿಕೇತನದಲ್ಲಿ ಚಿತ್ರಕಲೆ ಅಭ್ಯಸಿಸಿದರು. 1961ರಲ್ಲಿ ರಾಮ್ಕಿಂಕರ್ ಬೈಜ್ ಮತ್ತು ಬೆನೋಡೆ ಬಿಹಾರಿ ಮುಖರ್ಜಿ ಅವರ ಬಳಿ ಸ್ನಾತಕೋತ್ತರ ಅಧ್ಯಯನ ನಡೆಸಿ ಕಲಾಶಿಕ್ಷಣ ಪೂರ್ಣಗೊಳಿಸಿದರು.
ಆ ಬಳಿಕ ಅವರನ್ನು ಬಲವಾಗಿ ಕಾಡಿದ್ದು ಕೇರಳ ಮ್ಯೂರಲ್. 1961ರಿಂದ 1964ರ ಅವಧಿಯಲ್ಲಿ ಮ್ಯೂರಲ್ ಪೇಂಟಿಂಗ್ ಬಗ್ಗೆ ಆಳ ಅಧ್ಯಯನಕ್ಕಿಳಿದರು. ಡಾಕ್ಟರೇಟ್ ಗಾಗಿ ಪ್ರಬಂಧ ಮಂಡಿಸಿದರು. ಇದೇ ಅವಧಿಯಲ್ಲಿ ದೆಹಲಿಯತ್ತ ಪಯಣ ಬೆಳೆಸಿದರು. 1965ರಲ್ಲಿ ಜಾಮಿಯಾ ಇಸ್ಲಾಮಿಯಾದಲ್ಲಿ ಕಲಾ ಶಿಕ್ಷಣ ಉಪನ್ಯಾಸಕರಾಗಿ ಸೇರಿದರು. ಅಲ್ಲಿಯೇ ಪ್ರಾಧ್ಯಾಪಕರಾಗಿ ಭಡ್ತಿ ಪಡೆದು 1992 ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಕಲೆಗೆ ರಾಜಧಾನಿ ದೆಹಲಿ ಸೂಕ್ತವಾದ ಸ್ಥಳ ಅನಿಸಿದ್ದರಿಂದ ದೆಹಲಿಯಲ್ಲೇ ವಾಸವಿದ್ದರು.
    ಎ. ರಾಮಚಂದ್ರನ್ ಅವರು ಶಾಂತಿನಿಕೇತನ ಚೀನಾ ಭವನದ ಸಂಸ್ಥಾಪಕ ಮತ್ತು ಚೀನಿ ವಿದ್ವಾಂಸರಾದ ಟಾನ್ ಯುನ್ ಶಾನ್ ಅವರ ಮಗಳು ಟಾನ್ ಯುವಾನ್ ಚಮೇಲಿ ಅವರನ್ನು ವಿವಾಹವಾಗಿದ್ದರು. ಚಮೇಲಿ ಅವರೂ ಕಲಾವಿದರು. ರವೀಂದ್ರನಾಥ ಠಾಗೋರ್ ಅವರು ಚಮೇಲಿ ಎಂದು ಹೆಸರಿಟ್ಟಿದ್ದರಂತೆ.
| ಪ್ರಭಾವ ಮತ್ತು ಸಾಧನೆ |
ಭಾರತೀಯ ಚಿತ್ರಕಲೆಯ ಅಪ್ರತಿಮ ಸಾಧಕರಲ್ಲಿ ಎ.ರಾಮಚಂದ್ರನ್ ಒಬ್ಬರು. ವಿದ್ಯಾರ್ಥಿ ದೆಸೆಯಿಂದ ವೃತ್ತಿಪರರಾಗಿ ಬೆಳೆಯುವ ದಿನದವರೆಗೂ ಎ.ರಾಮಚಂದ್ರನ್ ನಗರ ಜೀವನದ ತಲ್ಲಣಗಳನ್ನೇ ವಸ್ತು ವಿಷಯವಾಗಿಸಿಕೊಂಡು ಕಲಾಕೃತಿಗಳನ್ನು ರಚಿಸುತ್ತಿದ್ದರು. ನಗರ ಜೀವನ ಅವರ ಮೇಲೆ ಬಲವಾದ ಪ್ರಭಾವ ಬೀರಿತ್ತು. ಅನೇಕ ಕಡೆ ಈ ಬಗ್ಗೆ ಹೇಳಿಕೊಂಡಿದ್ದಾರೆ ಕೂಡ.
ಆನಂತರದ ದಿನಗಳಲ್ಲಿ ರಾಜಸ್ಥಾನದ ಬುಡಕಟ್ಟು ಸಮುದಾಯದ ಸಂಪ್ರದಾಯ, ಕೇರಳದ ಬಿತ್ತಿಚಿತ್ರಗಳ ಪ್ರಭಾವದಿಂದಾಗಿ ಅಭಿವ್ಯಕ್ತಿಯ ಶೈಲಿಯಲ್ಲಿ ಒಂದಿಷ್ಟು ಬದಲಾವಣೆಗೆ ನಾಂದಿ ಹಾಡಿದರು.
     ರಾಮಚಂದ್ರನ್ ಅವರು ಸಾಕಷ್ಟು ಬೃಹತ್ ಕಲಾಕೃತಿಗಳನ್ನು ರಚಿಸಿದ್ದಾರೆ. ಅಷ್ಟೇ ಅಲ್ಲ, ರಾಮಕಿಂಕರ್ ಅವರ ಮಾರ್ಗದರ್ಶನದಲ್ಲಿ ಅನೇಕ ಶಿಲ್ಪಗಳನ್ನು ರಚಿಸಿದ್ದಾರೆ. ಚೆನ್ನೈನ ಶ್ರೀಪೆರಂಬದೂರಿನಲ್ಲಿರುವ ರಾಜೀವ್ ಗಾಂಧಿ ಸ್ಮಾರಕದಲ್ಲಿ ಗ್ರಾನೈಟ್ ಬ್ರಾಸ್-ರಿಲೀಫ್ ಶಿಲ್ಪ ಅವರನ್ನು ನೆನಪಿಸಿಕೊಳ್ಳಲೇಬೆಕಾದ ಕಲಾಕೃತಿ. 20 ಅಡಿ ಎತ್ತರದ ಶಿಲ್ಪ ಇದಾಗಿದೆ.
    ಭಾರತೀಯ ಚಿತ್ರಕಲಾ ಕ್ಷೇತ್ರದ ಮಿನುಗು ತಾರೆಯರಲ್ಲಿ ಒಬ್ಬರಾಗಿದ್ದ ಎ. ರಾಮಚಂದ್ರನ್ ಅವರನ್ನು ಸದಾ ಸ್ಮರಿಸೋಣ. ಅವರ ಆತ್ಮಕ್ಕೆ ಶಾಂತಿಸಿಗಲೆಂದು ಪ್ರಾರ್ಥಿಸೋಣ.

Share This

Leave a Reply

Your email address will not be published. Required fields are marked *