ಮೈಸೂರಿನ ರವಿವರ್ಮ ಕಲಾಶಾಲೆಯ ಆವರಣದಲ್ಲಿ ಈ ಎರಡು ಕಲಾಕೃತಿಗಳ ಜೊತೆಗೆ ಇನ್ನೊಂದಿಷ್ಟು ಪೇಪರ್ ಕೊಲಾಜ್ ಕಲಾಕೃತಿಗಳ ಯಶಸ್ವಿ ಏಕವ್ಯಕ್ತಿ ಕಲಾಪ್ರದರ್ಶನ ಪೂರೈಸಿ ಇಂದಿಗೆ (ಫೆಬ್ರವರಿ 2) ಎಂಟು ವರ್ಷಗಳು ಕಳೆದುಹೋದವು.
ಆದರೆ ಆ ನೆನಪುಗಳು, ಬೆನ್ನೆಲುಬಾಗಿ ನಿಂತ ಗುರು ಶಿವಕುಮಾರ್ ಕೆಸರಮಡು, ಸೋದರ ಮನೋಭಾವದಿಂದ ಸಹಕರಿಸಿದ ಕಲಾಶಾಲೆಯ ಉಪನ್ಯಾಸಕರು, ಸ್ನೇಹಿತರನ್ನು ಖಂಡಿತವಾಗಿ ಮರೆಯಲು ಸಾಧ್ಯವೇ ಇಲ್ಲ. ಕಲಾಶಾಲೆ ಆಯೋಜಿಸಿದ್ದ ವರ್ಣ ಸಂಭ್ರಮ ಕಾರ್ಯಕ್ರಮದ ಭಾಗವಾಗಿ ನನ್ನ ಏಕವ್ಯಕ್ತಿ ಕಲಾಪ್ರದರ್ಶನವನ್ನೂ ಆಯೋಜಿಸಲಾಗಿತ್ತು.
ನನ್ನ ನಿವೇದನೆಯಂತೆ ‘ ಮಾಡು ಮಗಾ… ಆಗತ್ತೆ, ಯೋಚಿಸ್ಬೇಡಾ ‘ ಎಂದು ಬೆನ್ನು ತಟ್ಟಿ ಹುರಿದುಂಬಿಸಿದವರು ಶಿವಕುಮಾರ್ ಸರ್. ಅವರಿಗೊಂದು ಉದ್ದಂಡ ನಮಸ್ಕಾರ ಹೇಳಲೇಬೇಕು. ನನ್ನ ಕಲಾ ಜೀವನದ ಅನೇಕ ಯಶಸ್ಸುಗಳ ಹಿಂದೆ ಈ ಗುರುವಿದ್ದಾರೆ. ಅವರು ಕಲಾನಿಕೇತನ ಕಲಾಶಾಲೆಯಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿಯೂ ಜೊತೆಗಿದ್ದು ಬೆನ್ನುತಟ್ಟಿದ್ದಾರೆ.
2016ರ ಮಾರ್ಚ್ 2ರಂದು ಈ ಕಲಾಪ್ರದರ್ಶನ ಉದ್ಘಾಟನೆಯಾಗಿ 10 ದಿನಗಳ ಕಾಲ ನಡೆಯಿತು. ಮೊದಲ ದಿನದಿಂದ ಕಲಾಪ್ರದರ್ಶನ ಮುಗಿಯುವ ತನಕ ಕಲಾವಿದರಾದ ಚಿಕ್ಕಾಟಿ ಶಿವಕುಮಾರ್, ಯಳಂದೂರು ಶ್ರೀನಿವಾಸ್, ಉಪನ್ಯಾಸಕರಾಗಿದ್ದ ಅರುಣ್, ಸ್ನೇಹಿತರಾದ ಸುರೇಶ್ ಗೌಡ, ಚಾಮರಾಜನಗರ ರಾಜೇಂದ್ರ…ಇವರೆಲ್ಲರೂ ಕಡೇ ಕ್ಷಣದ ತನಕ ಜೊತೆನಿಂತು ಬಲ ಹೆಚ್ಚಿಸಿದರು. ಎಲ್ರಿಗೂ ಮಗದೊಂದು ಧನ್ಯವಾದ.
| 29 ಅಡಿ ಎತ್ತರದ ಗೂಡು |
ಮೈಸೂರಿನಲ್ಲಿ ದೊಡ್ಡದೊಂದು ಸುದ್ದಿ, ಸದ್ದು ಮಾಡಿದ ಕಲಾಪ್ರದರ್ಶನ ಇದಾಯಿತು. ಕಾರಣ 29 ಅಡಿ ಎತ್ತರದ ಗೀಜಗನ ಗೂಡು. ಕಲಾಶಾಲೆಯ ಒಳ ಬಂದರೆ 16 ಅಡಿಯ ಹೆಲಿಕಾಪ್ಟರ್!
ಇದೇನಿದು ಎಂದು ಹುಬ್ಬೇರಿಸಿ ಹೋದವರು ನೂರಾರು ಮಂದಿ. ಸ್ನೇಹಿತರ ಸಹಕಾರದಿಂದ ರಾತ್ರೋ ರಾತ್ರಿ ಗೀಜಗನ ಗೂಡು ಮರದಲ್ಲಿ ಇತ್ತು. ಮಾರ್ಗದಲ್ಲಿ ಸಂಚರಿಸುವ ಶಾಲಾ ಮಕ್ಕಳಿಗೆ, ಕಚೇರಿಗೆ ಹೋಗುವವರಿಗೆ ಇದೇನಪ್ಪಾ, ನಿನ್ನೆ ಸಾಯಂಕಾಲ ಇರಲಿಲ್ಲ. ಬೆಳ್ಳಂಬೆಳಗ್ಗೆ ಇದೆಲ್ಲಿಂದ ಬಂತು ಎಂದು ಅಚ್ಚರಿಯಿಂದ ಫೋಟೋ ಕ್ಲಿಕ್ಕಿಸಿಕೊಂಡು ಹೋದವರು ಸಾವಿರಾರು ಮಂದಿ. ಮಕ್ಕಳಿಗಂತೂ ಹಬ್ಬ. ಬಳಿಕ ನಿಭಾಯಿಸಲಾಗದೇ ಪೊಲೀಸರ ಸಹಕಾರವನ್ನೂ ಪಡೆಯಲಾಯ್ತು.
ಮತ್ತೆ ಇದನ್ನೆಲ್ಲ ಇಂದು ನೆನಪಿಸಿದ್ದು ಈ ಫೇಸ್‌ಬುಕ್ ಮತ್ತು ಜಾಲತಾಣ. ಯಾಕೋ ಮೇಷ್ಟ್ರು ತುಂಬಾ ನೆನಪಾದರು ಕೂಡ. ಅನಂತಾನಂತ ಧನ್ಯವಾದಗಳು ಶಿವಕುಮಾರ್ ಸರ್.