ಸುಬ್ರಮಣಿಯನ್ ಕಲಾಕೃತಿಗಳಲ್ಲಿ ಪೌರಾಣಿಕ ಅಂಶಗಳ ಅನಾವರಣ

Share This

“Art is unquestionably one of the purest and highest elements in human happiness. It trains the mind through the eye, and the eye through the mind. As the sun colours flowers, so does art colour life”
ಕಲೆಯ ಕುರಿತು ಹೀಗೆಂದು ಬಣ್ಣಿಸಿದವರು ಲಂಡನ್‌ನ ರಾಜಕಾರಣಿ, ವಿಜ್ಞಾನಿ ಜಾನ್ ಲುಬ್ಬಾಕ್. ಹೌದು, ಮನುಷ್ಯನಿಗೆ ಸಂತೋಷ ನೀಡುವ ಅಂಶಗಳಲ್ಲಿ ಕಲೆಯೂ ಒಂದು. ಅನೇಕ ಸಂದರ್ಭಗಳಲ್ಲಿ ಕಲೆ ನಮ್ಮ ಮನಸ್ಸು ಮತ್ತು ಕಣ್ಣುಗಳನ್ನು ತೆರೆಸಬಲ್ಲದು. ನಮ್ಮ ದೃಷ್ಟಿಕೋನವನ್ನು ಬದಲಾಯಿಸಬಲ್ಲದು. ಸೂರ್ಯನ ಕಿರಣಗಳಿಂದ ಹೂವು ಹೇಗೆ ಅರಳಲು ಸಾಧ್ಯವೋ ಹಾಗೇ ಕಲೆ ಜೀವನ ಅರಳುವಂತೆ ಮಾಡಬಲ್ಲದು.
ಇಂಥದ್ದೊಂದು ಉತ್ಸಾಹ, ಉನ್ಮಾದ, ಉಲ್ಲಾಸ ಹೊರಹೊಮ್ಮುವಂತೆ ಮಾಡುವ ಕಲಾಕೃತಿಗಳ ಪ್ರದರ್ಶನ ಬೆಂಗಳೂರಿನ ಕಿಂಕಿಣಿ ಗ್ಯಾಲರಿಯಲ್ಲಿ ನಡೆಯುತ್ತಿದೆ. ಹಿರಿಯ ಕಲಾವಿದರಾದ ಸುಬ್ರಮಣಿಯನ್ ಗೋಪಾಲಸ್ವಾಮಿ ( Subramanian Gopalsamy ) ಅವರ ಕಲಾಜೀವನದ ಬೇರೆ ಬೇರೆ ಸಂದರ್ಭಗಳಲ್ಲಿ ರಚನೆಗೊಂಡಿರುವ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ.


ಸುಬ್ರಮಣಿಯನ್ ಅವರ ಕಲಾಕೃತಿಗಳಲ್ಲಿ ಪೌರಾಣಿಕ ಅಂಶಗಳು (Mythological elements) ಇರುವುದನ್ನು ಕಾಣಬಹುದು. ವಿಶೇಷವಾಗಿ ಅವರ ಕಲಾಕೃತಿಗಳಲ್ಲಿ ರಾಧಾ ಕೃಷ್ಣರನ್ನು ನವ್ಯವಾಗಿ ಬಳಸಿಕೊಳ್ಳುವ ಪ್ರಯತ್ನಗಳು ಸಹಜವಾಗಿ ಹಿಡಿದು ನಿಲ್ಲಿಸುತ್ತವೆ. ಮಿಶ್ರ ಮಾಧ್ಯಮದಲ್ಲಿ ವಿಭಿನ್ನ ಮೈವಳಿಕೆಗಳ ಮೂಲಕ ತಮ್ಮದೇ ಶೈಲಿಯನ್ನಾಗಿಸಿಕೊಂಡಿರುವ ಜಾಡು ಪ್ರದರ್ಶಿತ ಕಲಾಕೃತಿಗಳಲ್ಲಿ ಕಾಣಬಹುದು.
ಒಂದಿಷ್ಟು ರೇಖಾ ಚಿತ್ರಗಳು ಗಮನ ಸೆಳೆಯುವಂತವು. ಸುಬ್ರಮಣಿಯನ್ ಅವರ ಕಲಾಕೃತಿಗಳಲ್ಲಿ ಕೊಲಾಜ್ ತಂತ್ರದ ಸೂಕ್ಷ್ಮತೆ ಹಾಗೂ ಕೊಲಾಜ್ ಗೆ ಬಳಸಿಕೊಳ್ಳುವ ಪರಿಕರಗಳಲ್ಲಿನ ಮೈವಳಿಕೆ ಇಡೀ ಕಲಾಕೃತಿಗೆ ಹೊಸದೊಂದು ಆಯಾಮವನ್ನೆ ಸೃಷ್ಟಿಮಾಡಿಬಿಡುತ್ತದೆ. ಆಧುನಿಕ ಕಾಲಘಟ್ಟದ ಮುದ್ರಣ ಕಲೆಯ ಅನೇಕ ಸಿದ್ಧ ಪರಿಕರಗಳನ್ನು ದುಡಿಸಿಕೊಳ್ಳುವ ರೀತಿ, ವೇಗ, ವೃತ್ತಿಪರತೆ ಗಮನಾರ್ಹ.
ಖಾಸಗಿ ಕಲಾ ಸಂಸ್ಥೆಯೊಂದು ಕಲಾವಿದನ ಜೀವಮಾನ ಸಾಧನೆಯನ್ನು ಕಟ್ಟಿಕೊಡುವಲ್ಲಿ, ಶಿಸ್ತುಬದ್ಧವಾಗಿ ಅನಾವರಣಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಕಲಾಕೃತಿಗಳಿಗೆ ಸೂಕ್ತ ಚೌಕಟ್ಟು(framing) ಜೋಡಿಸಿದಾಗ ಇಡೀ ಪ್ರದರ್ಶನದ ಪ್ರಸ್ತುತಿಯ ಗುಣಮಟ್ಟ ಹೆಚ್ಚಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಈ ಪ್ರದರ್ಶನ ಸಾಕ್ಷಿಯಾಗಿ ನಿಲ್ಲುವಂತಿದೆ.
ತಮಿಳುನಾಡು ಮೂಲದ ಬೆಂಗಳೂರು ನಿವಾಸಿ ಸುಬ್ರಮಣಿಯನ್ ಅವರು ಸಮಕಾಲೀನ ಸ್ಪರ್ಧಾತ್ಮಕ ಸವಾಲುಗಳಿಗೆ ಸ್ಪಂದಿಸುವ ಪರಿ ಆಪ್ತವೆನಿಸುತ್ತದೆ. ಸರಳ, ಆತ್ಮೀಯವೆನಿಸುವ ಅವರ ನಡವಳಿಕೆ ಅಚ್ಚುಮೆಚ್ಚು. ಕರ್ನಾಟಕದ ಹಿರಿಯ ಕಲಾಸಾಧಕರಲ್ಲಿ ಒಬ್ಬರಾಗಿ, ಅನೇಕ ಕಿರಿಯ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದಾರೆ.
ಸ್ನೇಹಿತರೆ, ಈ ಕಲಾಪ್ರದರ್ಶನ ಡಿಸೆಂಬರ್ ಅಂತ್ಯದವೆರೆಗೂ ಇರಲಿದೆ. ಸಮಯ ಮಾಡಿಕೊಂಡು ಭೇಟಿಕೊಡಿ.


Share This

Leave a Reply

Your email address will not be published. Required fields are marked *