• ಭುವನಾರಿಂದ ವಿಭಿನ್ನ ನೃತ್ಯ ರಂಗ ಪ್ರಯೋಗ
• ಮಗಳ ಪ್ರದರ್ಶನಕ್ಕೆ ತಾಯಿ, ಗುರು ಸೀತಾ ಸಾಥ್
ಕುಮಾರಿ ಭುವನಾ ಗುರುಪ್ರಸಾದ್ ಪ್ರಯತ್ನ ಅನನ್ಯ. ಆದರ್ಶ ನಡೆ ಶ್ಲಾಘನಾರ್ಹ!
ತಾಯಿ, ನೃತ್ಯ ಗುರು ಸೀತಾ ಗುರುಪ್ರಸಾದ್ ಅವರಿಗೂ ಗೊತ್ತಿದೆ, ಈ ತಲೆಮಾರಿನ ಮಕ್ಕಳನ್ನು ಕೆಲ ವಿಚಾರಗಳಲ್ಲಿ ಒಪ್ಪಿಸುವುದು ಅಷ್ಟು ಸುಲಭವಲ್ಲ ಎನ್ನುವುದು. ಆ ಕಾರಣಕ್ಕಾಗಿಯೂ ಮಗಳು ಭುವನಾ, ತಾಯಿ ಸೀತಾ ಹಾಗೂ ಬೆನ್ನೆಲುಬಾಗಿ ನಿಂತು ಅಮ್ಮ, ಮಗಳ ಕಾರ್ಯ ಬೆಂಬಲಿಸುತ್ತ ಬಂದಿರುವ ಗುರುಪ್ರಸಾದ್ ಅಭಿನಂದನಾರ್ಹರು.
ಸಾಮಾನ್ಯವಾಗಿ ಹುಟ್ದಬ್ಬ ಅಂದಾಕ್ಷಣ ಹೆಚ್ಚಿನ ಮಕ್ಕಳು ಆಧುನಿಕತೆಯ ಮಾರ್ಗದಲ್ಲಿಯೇ ಸಂಭ್ರಮಿಸಿಕೊಳ್ಳಲು ಆಸಕ್ತಿ ತೋರುತ್ತಾರೆ. ಆದರೆ, ಭುವನಾ ಗುರುಪ್ರಸಾದ್ ಈ ವಿಚಾರದಲ್ಲಿ ಭಿನ್ನರೆನಿಸಿಕೊಳ್ಳುತ್ತಾರೆ. ಕಳೆದ ಅನೇಕ ವರ್ಷಗಳಿಂದ ಭರತನಾಟ್ಯ ಪ್ರದರ್ಶನದ ಮೂಲಕ ಹುಟ್ಟುಹಬ್ಬ ಸಂಭ್ರಮಿಸಿಕೊಳ್ಳುತ್ತಿದ್ದಾರೆ. ಹೆತ್ತವರ, ಬಂಧುಗಳ ಹಾಗೂ ಕಲಾ ರಸಿಕರನ್ನೂ ರಂಜಿಸುತ್ತಿದ್ದಾರೆ. ಸಂಭ್ರಮಕ್ಕೆ ಇದೊಂದು ಕಾರಣವಷ್ಟೆ. ಇದರಾಚೆಗಿನ ಸಂಭ್ರಮವೇ ಇಲ್ಲಿ ಮುಖ್ಯವಾಗುತ್ತದೆ.
ಮಾರ್ಚ್ 16, ಭಾನುವಾರ, ಯುವ ನೃತ್ಯಗಾರ್ತಿ ಭುವನಾ ಗುರುಪ್ರಸಾದ್ ಅವರು ಮಲ್ಲೇಶ್ವರದ ಸೇವಾಸದನ ರಂಗ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹೊಸದೊಂದು ಸಂಯೋಜನೆಯ ನೃತ್ಯ ರಂಗ ಪ್ರದರ್ಶನ ನೀಡಿ ಗಮನ ಸೆಳೆದರು. ಸುಮಾರು ಒಂದುವರೆ ಗಂಟೆ ಕಾಲದ ‘ಅಂಬಾ ಶಿಖಂಡಿ’ ಸಂಯೋಜನೆ ವಿಶೇಷವೆನಿಸಿತು. ಏಕವ್ಯಕ್ತಿ ಪ್ರಯೋಗವನ್ನಾಗಿಸಿ ಯಶಸ್ವಿಯಾಗಿ ರಂಗಕ್ಕೆ ತರುವ ಮೂಲಕ ಇಂತಹದ್ದೊಂದು ಪ್ರಯೋಗಕ್ಕೂ ಸಿದ್ಧ ಎನ್ನುವ ಸಂದೇಶವನ್ನು ಭುವನಾ ರವಾನಿಸಿದ್ದಾರೆ. ಭುವನಾ ಅವರು ಪ್ರದರ್ಶನದುದ್ದಕ್ಕೂ ಸಮರ್ಥ ನಿರ್ವಣೆಯಿಂದ ಭೇಷ್ ಅನಿಸಿಕೊಂಡರು. ನೃತ್ತ, ರಂಗ ಬಳಕೆ, ಸಂಭಾಷಣೆಯಲ್ಲಿ ಬಹಳ ಜಾಣ್ಮೆಯಿಂದ ನಿರ್ವಹಿಸಿದರು.
ಭಿಷ್ಮನ ವಿರುದ್ಧ ಆಕ್ರೋಶ ಹೊರಹಾಕುವ ಸನ್ನಿವೇಶವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದರು. ಹಾಗೇ ಯುದ್ಧದ ಸನ್ನಿವೇಶದಲ್ಲಿ ಪಾತ್ರಕ್ಕೆ ಬೇಕಾದ ಶಕ್ತಿ ದೊರಕಿಸಿ ನ್ಯಾಯ ಒದಗಿಸಿದರು. ತನ್ನ ಪ್ರೀತಿಯನ್ನು ಶಾಲ್ವ ತಿರಸ್ಕರಿಸಿದಾಗ ಅನುಭವಿಸಿದ ಆಘಾತವನ್ನು ಬಹಳ ಸೊಗಸಾಗಿ ಪ್ರದರ್ಶಿಸಿ ಮೆಚ್ಚುಗೆ ಪಡೆದುಕೊಂಡರು. ಹೀಗೆ ಎಲ್ಲಿಯೂ ಪಾತ್ರದ ಮೌಲ್ಯಕ್ಕೆ ಧಕ್ಕೆಯಾಗದಂತೆ ನಿರ್ವಹಿಸಿದರು.
ಭರತಾಂಜಲಿ ನಾಟ್ಯ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿಯೂ ಕಾರ್ಯನಿರ್ವಹಿಸುವ ಭುವನಾ ಅವರ ಈ ಪ್ರಯತ್ನಕ್ಕೆ ಇನ್ನಷ್ಟು ಅನುಭವಿಗಳ ಕೊಡುಗೆಯೂ ಇದೆ. ಸ್ವತಃ ಸೀತಾ ಗುರುಪ್ರಸಾದ್ ಅವರು ನೃತ್ಯ ಸಂಯೋಜನೆ ಮಾಡಿದ್ದು, ವಾಣಿ ಕುಲಕರ್ಣಿ ಅವರ ಸ್ಕ್ರಿಪ್ಟ್, ವಿದ್ವಾನ್ ಮಹೇಶ್ ಸ್ವಾಮಿ ಅವರ ಸಂಗೀತ-ವಾಧ್ಯ, ಡಾ.ಕರುಣಾ ವಿಜಯೇಂದ್ರ ಅವರ ಡೈಲಾಗ್, ವಿದ್ವಾನ್ ಡಿ.ಎಸ್.ಶ್ರೀವತ್ಸ ಅವರ ಗಾಯನ, ವಿದ್ವಾನ್ ಶ್ರೀಹರಿ ರಂಗಸ್ವಾಮಿ ಅವರ ಮೃದಂಗ ವಾದನ, ವಿದ್ವಾನ್ ಶ್ರೀನಿಧಿ ಆರ್. ಮಥೂರ್ ಅವರ ವೈಯಲಿನ್, ವಿದ್ವಾನ್ ಕಾರ್ತಿಕ್ ದಾತರ್ ಅವರ ರಿದಂ ಪ್ಯಾಡ್ ಮತ್ತು ಜತಿ ನಿರ್ವಹಣೆ, ವಿದ್ವಾನ್ ವೇಣುಗೋಪಾಲ್ ವೆಂಕಿ ಅವರ ಕೀಬೋರ್ಡ್ ನಿರ್ವಣೆಯೂ ಈ ಪದರ್ಶನದ ಯಶಸ್ಸಿಗೆ ಕಾರಣವಾಗಿದೆ.
ಪ್ರದರ್ಶನ ಯಶಸ್ವಿಯಾಗಿಸಿದ ಭುವನಾಗೆ ಅಭಿನಂದನೆಗಳು 





(ಫೋಟೋ ಕೃಪೆ: ಭುವನಾ ಅವರ ವಾಲ್ ನಿಂದ)




