ಶ್ರೇಯಾ, ಸುರಭಿ, ಪನ್ನಗಾ “ಅನನ್ಯ” ನೃತ್ಯ!

Share This

  • “ನೃತ್ಯೋಲ್ಲಾಸ”ದಲ್ಲಿ ನರ್ತಕಿಯರಿಂದ ನಾಟ್ಯ ಸಂಭ್ರಮ
  •  ಆತ್ಮರಂಜನೆ, ಮನರಂಜನೆ ಮಹತ್ವ ಬಿಂಬಿಸಿದ ಕಾರ್ಯಕ್ರಮ

ಪ್ರತಿಯೊಂದು ಕಲಾಪ್ರಕಾರದಲ್ಲೂ ಎರಡು ಪ್ರಮುಖ ಅಂಶಗಳನ್ನು ಗುರುತಿಸಬಹುದು. ಒಂದು ಮನರಂಜನೆಗಾಗಿ ಕಲೆಯಾದರೆ ಇನ್ನೊಂದು ಆತ್ಮರಂಜನೆಗಾಗಿ ಕಲೆ. ಈ ಎರಡನ್ನೂ ಗಮನದಲ್ಲಿ ಇರಿಸಿಕೊಂಡು ಕಲಾವಿದರು ಕಾರ್ಯನಿರ್ವಹಿಸಬೇಕಾಗುತ್ತದೆ. ಉತ್ತಮ ಪ್ರದರ್ಶನವಾಗಿ ಅಥವಾ ಉತ್ತಮ ಪ್ರಸ್ತುತಿಯಾಗಿ ಅಭಿವ್ಯಕ್ತಗೊಳ್ಳಬೇಕಾದರೆ ಈ ಎರಡು ಅಂಶಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ವಿಶೇಷವಾಗಿ ರಂಗದ ಮೇಲೆ ನಡೆಯುವ ಎಲ್ಲಾ ಕಲಾ ಪ್ರಕಾರಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಅದೇ ಕಾರಣಕ್ಕಾಗಿಯೋ ಏನೋ ಪ್ರದರ್ಶನ ಕಲಾ (performing arts) ಪ್ರಕಾರಗಳಲ್ಲಿ ಈ ಎರಡು ಅಂಶಗಳ ಜೋಡಣೆಗೆ ಒತ್ತು ನೀಡಲಾಗಿರುತ್ತದೆ.

ಭಾರತೀಯ ನೃತ್ಯ ಪ್ರಕಾರಗಳಲ್ಲಿ ಮನರಂಜನೆ ಮತ್ತು ಆತ್ಮರಂಜನೆಗೆ ಅಗತ್ಯ ಅಂಶಗಳನ್ನು ಋಷಿಗಳೇ ಸೇರಿಸಿರುವುದನ್ನು ಗಮನಿಸಬಹುದಾಗಿದೆ. ಮನರಂಜನೆ ನರ್ತಕಿ/ನರ್ತಕನ ಮೇಲೆ ನಿರೀಕ್ಷೆ ಇರಿಸಿಕೊಳ್ಳುವ ರಸಿಕರಿಗೆ ಸಂಬಂಧಿಸಿದ್ದಾದರೆ, ಆತ್ಮರಂಜನೆ ಹಾಗಲ್ಲ. ನರ್ತಕಿ/ನರ್ತಕ ತಾನು ಏನನ್ನು ಅಭಿವ್ಯಕ್ತಪಡಿಸಲು ಇಚ್ಚಿಸುವರೋ, ಈ ಪ್ರಕ್ರಿಯೆಯಲ್ಲಿ ಸ್ವತಃ ಅನುಭೂತಿ ಕಂಡುಕೊಳ್ಳುತ್ತಾರೆ. ಈ ಪ್ರಯತ್ನ ಫಲಿಸಿದಾಗ ಸಹಜವಾಗಿಯೇ ರಸಿಕರಿಗೆ ಆ ಪ್ರಸ್ತುತಿ ಅಥವಾ ಪ್ರದರ್ಶನದಿಂದ ನಿರೀಕ್ಷಿತ ಮನರಂಜನೆ ಸಿಗಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಈ ಇಡೀ ಪ್ರಕ್ರಿಯೆಯನ್ನೇ ಪರಕಾಯ ಪ್ರವೇಶ ಎನ್ನಲಾಗುತ್ತೆ. ಯಾವುದೇ ಪ್ರದರ್ಶಕಿ/ಪ್ರದರ್ಶಕ ಪರಕಾಯ ಪ್ರವೇಶ ಮಾಡಿದಾಗ ಆ ಪಾತ್ರಕ್ಕೂ ನ್ಯಾಯ ಸಿಗುವುದು ನಿಶ್ಚಿತ. ಆದರೆ ಅಷ್ಟು ಸುಲಭವಾಗಿ ಧಕ್ಕಿಸಿಕೊಳ್ಳಬಹುದಾದ ವಿದ್ಯೆ ಇದಲ್ಲ. ನಿರಂತರ ಅಭ್ಯಾಸದ ಜೊತೆಗೆ ಆಯ್ದುಕೊಳ್ಳುವ ಹಾಡು, ಸಂಗತಿಗಳನ್ನು ಅರ್ಥೈಸಿಕೊಳ್ಳಬೇಕು. ಅರ್ಥೈಸಿಕೊಂಡಿದ್ದನ್ನು ಭಾವಪೂರ್ಣವಾಗಿ ಅಭಿನಯಿಸುವುದರ ಜೊತೆಗೆ ಹಿತ-ಮಿತ ನೃತ್ತ ಇಡೀ ಪ್ರದರ್ಶನ ಜನಮಾನಸದಲ್ಲಿ ಉಳಿಯುವಂತೆ ಮಾಡಲಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಭಾನುವಾರ ಮಲ್ಲೇಶ್ವರಂನ ಸೇವಾಸದನ ರಂಗಮಂದಿರದಲ್ಲಿ “ಅನನ್ಯ ನೃತ್ಯೋಲ್ಲಾಸ” ನಡೆಯಿತು. ಭಾರತೀಯ ವಿದ್ಯಾ ಭವನ ಸಂಯುಕ್ತಾಶ್ರಯದಲ್ಲಿ ಅನನ್ಯ ಸಂಸ್ಥೆಯ 88ನೇ ನೃತ್ಯೋಲ್ಲಾಸ ಕಾರ್ಯಕ್ರಮ ಇದಾಗಿತ್ತು ಎನ್ನವುದು ಇನ್ನೊಂದು ವಿಶೇಷ. ಮೋಡಗವಿದ ವಾತಾವರಣದಲ್ಲಿ ತುಂತುರು ಹನಿ ಚಿಮ್ಮಿಸಿ ಮಂದಹಾಸದಲ್ಲಿ ನೃತ್ಯ ಸಂಜೆಗೆ ತಾನೂ ಸಾಕ್ಷಿಯಾಗುತ್ತಿದ್ದೇನೆ ಎನ್ನುವಂತೆ ಮೇಘರಾಯನ ಸಾಥ್ ಒಂದು ಕಡೆಯಾದರೆ, ರಂಗ ಮಂದಿರದಲ್ಲಿ ನೃತ್ಯೋತ್ಸವ ಸಂಭ್ರಮಕ್ಕಾಗಿ ಕಾತುರದಿಂದ ಕುಳಿತಿದ್ದ ನೃತ್ಯ ಪ್ರಿಯರಿಗೆ ವಿದುಷಿ ಶ್ರೇಯಾ ಬಾಲಾಜಿ, ವಿದುಷಿ ಸುರಭಿ ಭಾರದ್ವಾಜ್ ಮತ್ತು ವಿದುಷಿ ಪನ್ನಗ ಎಂ. ಅವರು ನಟರಾಜ ನೃತ್ಯ ದರ್ಶನ ಮಾಡಿಸಿದರು. ಮೂವರು ಅನುಭವಿ ನರ್ತಕಿಯರ ನಾಟ್ಯಕ್ಕೆ ಸಹೃದಯಿ ಪ್ರೇಕ್ಷಕರು ಎರಡು ಗಂಟೆಗಳ ಕಾಲ ಮೈಮರೆತು ಕುಳಿತಿದ್ದರು. ನೃತ್ತ, ಭಾವಾಭಿನಯ, ಆಂಗಿಕಾಭಿನಯದ ಪರಿಶುದ್ಧತೆ ಮೂವರೂ ನರ್ತಕಿಯರ ಅನುಭವ ಅನಾವರಣಗೊಳಿಸಿತು.

 

| ಭಾವ, ನೃತ್ಯ ಶ್ರೇಯಕ್ಕೇರಿಸಿದ ಶ್ರೇಯಾ |
ರಾಗಮಾಲಿಕ ತಾಳಮಾಲಿಕಾ ನಿಬಂಧಿತ ತೊಡಯ ಮಂಗಲಂ ಮೂಲಕ ನೃತ್ಯೋಲ್ಲಾಸಕ್ಕೆ ದೇವಾನು ದೇವತೆಗಳನ್ನು ಸ್ಮರಿಸುತ್ತ ಹೆಜ್ಜೆ ಇಟ್ಟು ಗೆಜ್ಜೆಯ ನಾದಕ್ಕೆ ಪ್ರೇಕ್ಷಕರನ್ನು ಅನುರಣಿಸಿದರು ವಿದುಷಿ ಶ್ರೇಯಾ ಬಾಲಾಜಿ. ಮಂಜೀರದ ಝೇಂಕಾರ ಅರಗಿಸಿಕೊಳ್ಳುತ್ತಿದ್ದಂತೆ ರಾಗ ಶುದ್ಧ ಧನ್ಯಾಸಿ, ಆದಿ ತಾಳದಲ್ಲಿ ನಿಬಂಧಿತ “ಪ್ರಣವಾಕಾರ ಸಿದ್ಧಿವಿನಾಯಕ” ಸ್ತುತಿಗೆ ಭಕ್ತಿಪೂರ್ವಕ ನೃತ್ಯದೊಂದಿಗೆ ನಮಿಸಿ, ಸಾಕ್ಷಾತ್ ಸಿದ್ಧಿವಿನಾಯಕನ ದರ್ಶನವೇ ಆಗಿಬಿಡುತ್ತದೆನ್ನುವ ಭಾವ ಮಂದಿರದಲ್ಲಿ ನೆಲೆಸುವಂತೆ ಮಾಡಿದರು. ನರ್ತಕಿ / ನರ್ತಕ ತನ್ನ ನೃತ್ಯ ಮತ್ತು ಭಾವಾಭಿನಯದ ಮುಖೇನ ಪ್ರೇಕ್ಷಕರನ್ನು ಭಕ್ತಿಯಲ್ಲಿ ತೇಲಿಸಿದರು. ಇಷ್ಟು ಸಾಲದು ಎನ್ನುವಂತೆ ಪರಶಿವನ ಬಳಿ ಕರೆದೊಯ್ದರು. ಚಂದ್ರಕೌಂಸ್ ರಾಗ, ಆದಿ ತಾಳದಲ್ಲಿ ನಿಬಂಧಿತ “ಚಂದ್ರಶೇಖರಂ ಭಜಾಮಿ ಸತತಂ” ಸ್ತುತಿಗೆ ತಾಂಡವ ಚಲನೆಗಳೊಂದಿಗೆ ಸಂಕೀರ್ಣ ನೃತ್ತಜಾಲ ಸೃಷ್ಟಿಸಿದರು. ಬಹಳ ಅಪರೂಪದ ಹೆಜ್ಜೆ ಅನಿಸುವ ರೀತಿಯಲ್ಲಿ ನೃತ್ತ ಸಂಯೋಜನೆ ಇತ್ತು. ಶ್ರೇಯಾ ಅವರು ತಮ್ಮ ಅವಕಾಶದ ಕಡೆಯ ಪ್ರದರ್ಶನವಾಗಿ ಪೆರಿಯಸಾಮಿ ತೂರನ್ ಅವರ ಭೆಹಾಗ್ ರಾಗ, ಆದಿ ತಾಳದಲ್ಲಿ ನಿಬಂಧಿತ ಶ್ರೀಕೃಷ್ಣನ ಕುರಿತಾದ ಜನಪ್ರಿಯಂ ಪದಂ “ತೊಟ್ಟು ತೊಟ್ಟು” ಸಂಯೋಜನೆಗೆ ಮನೋಹರ ಮತ್ತು ಶಿಸ್ತುಬದ್ಧವಾದ ನೃತ್ಯ ಪ್ರದರ್ಶಿಸಿ ಮೆಚ್ಚುಗೆಗಳಿಸಿದರು.

 

 

| ಶೃಂಗಾರ ಚಲನೆಯ ಸುರಭಿ ವೈಭವ |
ಶ್ರೇಯಾ ಪ್ರದರ್ಶನದ ಬಳಿಕ ವಿದುಷಿ ಸುರಭಿ ಭಾರದ್ವಾಜ್ ಅವರು ಶಿವ ವರ್ಣನೆಯ ತೋಡಿ ರಾಗ, ಆದಿ ತಾಳದಲ್ಲಿ ನಿಬಂಧಿತ ಪದವರ್ಣ “ರೂಪಮು ಜೂಚಿ” (ROOPAMU JOOCHI) ಸಂಯೋಜನೆಗೆ ಅತ್ಯಂತ ಭಾವಪೂರ್ಣವಾದ ಹಾಗೂ ಶಿಸ್ತುಬದ್ಧವಾದ ನೃತ್ಯ ಪ್ರದರ್ಶನ ನೀಡಿದರು. ಅಂಗ ಶುದ್ಧಿಗೆ ಇರಬೇಕಾದ ಪ್ರಾಮುಖ್ಯತೆ, ಮಹತ್ವವನ್ನು ತಮ್ಮ ನೃತ್ಯದುದ್ದಕ್ಕೂ ಹೇಳುತ್ತಿದ್ದಾರೇನೋ ಎನ್ನುವಷ್ಟು ಶಿಸ್ತಿನಿಂದ ಕೂಡಿತ್ತು. ವಿಶೇಷವಾಗಿ ಭರತನಾಟ್ಯದಲ್ಲಿ ಈ ಚುರುಕು ಮತ್ತು ಜಾಣತನ ಕಾಣಿಸದಿದ್ದಲ್ಲಿ ಪ್ರದರ್ಶನವೂ ಸೋಲುವ ಸಾಧ್ಯತೆ ಹೆಚ್ಚು. ಆದರೆ, ಸುರಭಿ ಕೊಂಚ ಕ್ಲಿಷ್ಟಕರ ಎನಿಸುವ ಪದವರ್ಣವನ್ನೇ ಆಯ್ದುಕೊಂಡು “ನೃತ್ಯೋಲ್ಲಾಸ” ಕುಂದದ ರೀತಿಯಲ್ಲಿ ಪ್ರದರ್ಶನದ ಕಂಪನ ಉಳಿಸಿಕೊಂಡರು. ಈ ನಿರ್ವಹಣೆ ಅಭಿನಂದನೀಯ.
ನಿರೀಕ್ಷೆಯಂತೆ ವರ್ಣಂ ಬಳಿಕ ಸುರಭಿ ಅವರೇ ತಿಲ್ಲಾನದೊಂದಿಗೆ ಪ್ರದರ್ಶನ ಮುಗಿಸುತ್ತಾರೆ ಅಂದುಕೊಂಡರೆ ಲೆಕ್ಕಾಚಾರ ಸುಳ್ಳಾಯಿತು. ಸುರಭಿ ಅವರ ಶಿಷ್ಯವೃಂದ ತಿಲ್ಲಾನಕ್ಕೆ ಗುರುವನ್ನೇ ಮೀರಿಸುವ ರೀತಿಯಲ್ಲಿ ಹೆಜ್ಜೆ ಇಟ್ಟು ಮೆಚ್ಚುಗೆ ಗಳಿಸಿಕೊಂಡರು. ಇಂಥದ್ದೊಂದು ಪ್ರತಿಷ್ಠಿತ ವೇದಿಕೆಯಲ್ಲಿ ಅವಕಾಶ ಕೊಡಿಸುವ ಮೂಲಕ ಗುರು-ಶಿಷ್ಯ ಪರಂಪರೆಯ ಸಂಪ್ರದಾಯ ಮುಂದುವರಿಯುವ ಭರವಸೆ ಮೂಡಿಸಿದರು.

 

| ಪನ್ನಗಾ “ಶ್ರೀಕೃಷ್ಣ ಲೀಲೆ” |
ಸುರಭಿ ಭಾರದ್ವಾಜ್ ಮತ್ತು ಅವರ ಶಿಷ್ಯೆಯಂದಿರ ಪ್ರದರ್ಶನದ ಬಳಿಕ ವಿದುಷಿ ಪನ್ನಗಾ ಅವರು ರಾಗ ಕನಕಾಂಗಿ, ಆದಿ ತಾಳದಲ್ಲಿ ನಿಬಂಧಿತ ಗಣೇಶ ಸ್ತುತಿಗೆ ಅತ್ಯಂತ ಮನೋಜ್ಞ ಪ್ರದರ್ಶನ ನೀಡಿದರು. ತದನಂತರದಲ್ಲಿ ರಾಗ ಸುಮನೇಶರಂಜನಿ, ಆದಿ ತಾಳದಲ್ಲಿ ನಿಬಂಧಿತ ವರ್ಣ ಪ್ರಸ್ತುತಿ ಕೃಷ್ಣ ಪ್ರಿಯರ ಹೃದಯ ಮೀಟಿತು. ಮಧುರಾಧಿಪ ಶ್ರೀಕೃಷ್ಣನ ಲೀಲೆ, ಭಾಗವತದ ಕೆಲ ಸನ್ನಿವೇಶಗಳನ್ನು ಸಂಚಾರಿಯಲ್ಲಿ ಬಹಳ ಸೊಗಸಾಗಿ ಪ್ರಸ್ತುತಪಡಿಸಿದರು. ಮಧುರೆಗೆ ಪ್ರವೇಶ ಮಾಡಿದ ಆರಂಭದ ದೃಶ್ಯಾವಳಿಗಳು ಹಾಗೂ ಮುಷ್ಟಿಕಾ, ಚಾಣೂರ, ಕಂಸ ಸಂಹಾರದ ಅನ್ನಿವೇಶಗಳ ಭಾವಾಭಿನಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದರು. ನಾಟಕಗಳಲ್ಲಿ ಒಂದೇ ಸನ್ನಿವೇಶದ ಇಬ್ಬರು ಪಾತ್ರಧಾರಿಗಳ ಭಾವ ನಿಭಾಯಿಸುವುದು ಒಂದು ಬಗೆಯ ಸವಾಲಾದರೆ, ನಾಟ್ಯದಲ್ಲಿ ನೃತ್ತದ ಜೊತೆಗೆ ಭಾವನೆಗಳ ಅಭಿವ್ಯಕ್ತಿ ಬಹಳ ಕಠಿಣ ಸವಾಲಾಗಿರುತ್ತದೆ. ಪನ್ನಗಾ ಅವರು ಈ ಸನ್ನಿವೇಶಗಳನ್ನು ಲೀಲಾಜಾಲವಾಗಿಯೇ ನಿಭಾಯಿಸಿದರು. ಮುಷ್ಟಿಕಾ, ಚಾಣೂರ, ಕಂಸ ಸಂಹಾರದ ಸನ್ನಿವೇಶಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವ ಅವಕಾಶ ಇತ್ತು. ನಿಭಾಯಿಸಬಹುದಿತ್ತು ಕೂಡ. ಈ ಎಲ್ಲಾ ಸಾಮರ್ಥ್ಯ ಪನ್ನಗಾ ಅವರಲ್ಲಿಯೂ ಇತ್ತು. ಉಳಿದಂತೆ ಗೀತೋಪದೇಶ ಮತ್ತು ಶ್ರೀಕೃಷ್ಣನನ್ನು ಭಕ್ತಿ, ಪ್ರೀತಿ ಭಾವದಿಂದ ಸ್ಮರಿಸುವ, ಸ್ತುತಿಸುವ ಸನ್ನಿವೇಶಗಳನ್ನು ಪನ್ನಗಾ ಅವರು ಅತ್ಯಂತ ಸೊಗಸಾಗಿಯೇ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಅಂತಿಮವಾಗಿ ರಾಗ ಸಿಂಧೂಭೈರವಿ, ಆದಿ ತಾಳದಲ್ಲಿ ನಿಬಂಧಿತ ಅಷ್ಟಪದಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳಿಸಿದರು.

| ಅನನ್ಯ ಸ್ಮರಣೀಯ |
ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನನ್ಯ ಸಂಸ್ಥೆಯ ಕಾರ್ಯ ಅವಿಸ್ಮರಣೀಯ. ಕಲೆ, ಕಲಾವಿದರನ್ನು ವಿಭಿನ್ನ ರೀತಿಯಲ್ಲಿ ಪ್ರೋತ್ಸಾಹಿಸುತ್ತ ಬಂದಿರುವ ಅನನ್ಯ ಸಂಸ್ಥೆ ಕಳೆದ ಇಪ್ಪತ್ತೈದು ವರ್ಷಗಳಲ್ಲಿ 2000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ, ಸಾವಿರಾರು ಕಲಾವಿದರನ್ನು ಪ್ರೋತ್ಸಾಹಿಸಿದೆ. 88ನೇ ಅನನ್ಯ ನೃತ್ಯೋಲ್ಲಾಸ ಕಾರ್ಯಕ್ರಮದ ಮೂಲಕ ತನ್ನ ಬದ್ಧತೆಯ ಕಾರ್ಯವನ್ನು ಮುಂದುವರಿಸಿರುವುದು ಶ್ಲಾಘನೀಯ. ಯಾವುದೇ ಫಲಾಪೇಕ್ಷೆಗಳಿಲ್ಲದೆ ಭಾರತೀಯ ಕಲೆ, ಸಂಸ್ಕೃತಿಯ ಬೆಳವಣಿಗೆಯಲ್ಲಿ ತೊಡಗಿಕೊಂಡಿರುವ ಅಪರೂಪದ ಸಂಸ್ಥೆ “ಅನನ್ಯ”.

Photo Credit: V B Suresh and Sudhi R N (sudhi behind the lens)

 


Share This

Leave a Reply

Your email address will not be published. Required fields are marked *