ಮರದಿಂದ ಮರಕ್ಕೆ ಜಿಗಿಯುತ್ತ ಹತ್ತಾರು ಕಿಲೋ ಮೀಟರ್ ದೂರ ಕ್ರಮಿಸಬಲ್ಲ ಈ ‘ಬೂದು ನೊಣಹಿಡುಕ’ (ASIAN BROWN FLYCATCHER )ನಿಗೆ ಸಮಯಪ್ರಜ್ಞೆ ಜಾಸ್ತಿ. ವಾತಾವರಣದಲ್ಲಿ ಆಗುವ ಪ್ರತಿಯೊಂದು ಬದಲಾವಣೆಯನ್ನು ಸೂಕ್ಷ್ಮವಾಗಿ ಗ್ರಹಿಸಿ ತಿಲಿದುಕೊಳ್ಳಬಲ್ಲ ಜಾಣ್ಮೆ ಈ ಹಕ್ಕಿಯಲ್ಲಿ ನೋಡಲು ಸಾದ್ಯ.
ಸಿಡಿಲ್ಮಿಂಚಿನ ಮಳೆ ಇನ್ನೇನು ಆರಂಭವಾಗಿ ಬಿಡತ್ತೆ ಎನ್ನುವ ಮೊದಲೇ ಆ ಬಗ್ಗೆ ಮುನ್ಸೂಚನೆ ನೀಡತ್ತೆ. ಅದೇನೋ ಗಾಬರಿ ಬಿದ್ದಂತೆ ಬಂದು ತನ್ನ ಗೂಡನ್ನು ಸೇರಿಕೊಳ್ಳತ್ತೆ. ತಾನಿದ್ದ ಪ್ರದೇಶದಿಂದ ತನ್ನ ಗೂಡು ದೂರವಿದೆ ಎಂದರಂತೂ ಅಲ್ಲೇ ಸುರಕ್ಷಿತವಾಗಿ ಇರಬಲ್ಲ ಜಾಗ ಹುಡುಕಿಕೊಂಡು ತನ್ನನ್ನೇ ತಾನು ರಕ್ಷಿಸಿಕೊಳ್ಳುತ್ತದೆ.
ಹಾಗಂತ ಸಣ್ಣ-ಪುಟ್ಟ ಮಳೆಗೆಲ್ಲ ಹೆದರಿ ಕುಳಿತಿರುವ ಹಕ್ಕಿ ಇದಲ್ಲ. ನೋಡಲು ಚಿಕ್ಕದಾಗಿ ತೋರಿದರೂ ಬಲು ತುಂಟಿ. ಸೆಕೆಂಡ್ ಒಂದರಲ್ಲಿ ಹತ್ತಾರು ಜಾಗ ಬದಲಾಯಿಸಿ ಪುಸಲಾಯಿಸುವ ಚಾಣಾಕ್ಷತೆ ಈ ಹಕ್ಕಿಗೆ ಚೆನ್ನಾಗಿ ಗೊತ್ತಿದೆ. ತನ್ನ ವೈರಿಯ ದಾಳಿಯಿಂದ ತಪ್ಪಿಸಿಕೊಳ್ಳಲು ಬೂದು ನೊಣ ಹಿಡುಕ ಅನುಸರಿಸುವ ಕ್ರಮವೇ ಇದು. ವೈರಿ ಹಕ್ಕಿಯ ಗಮನವನ್ನೇ ಬೇರೆಡೆ ಸೆಳೆದು ತಾನು ನಿಧಾನವಾಗಿ ಆ ಜಾಗದಿಂದ ಜಾರಿಕೊಳ್ಳುತ್ತದೆ.
ಈ ಪುಟಾಣಿ ಹಕ್ಕಿಯ ಠಿಕಾಣಿ ಏನಿದ್ದರೂ ದತ್ತ ಕಾಡಿನಲ್ಲೇ. ಹುಳು-ಹುಪ್ಪಡಿ, ನೊಣ, ಕೀಟಗಳು ಜಾಸ್ತಿ ಇರುವಲ್ಲಿ ಎಷ್ಟು ಹೊತ್ತನ್ನಾದರೂ ಕಳೆಯುತ್ತದೆ. ಕೆಲವೊಮ್ಮೆ ಹಸಿವೆ ತಡೆಯಲಾಗದ ಪರಿಸ್ಥಿತಿಯಲ್ಲಿ ಜೇನು ಹುಳುಗಳನ್ನೇ ಎದು ಹಾಕಿಕೊಳ್ಳುತ್ತದೆ. ತೆಪ್ಪಗೆ ಗೂಡಿನಲ್ಲಿದ್ದ ಹುಳುಗಳನ್ನು ಕೆಣಕಿ ಯುದ್ಧಕ್ಕೆ ಆಹ್ವಾನಿಸುತ್ತದೆ. ಜೇನಿನ ಕೈಗೆ ಸಿಗದೇ ತಲೆಮರೆಸಿಕೊಂಡಿರುತ್ತದೆ. ಮರಿ ಹುಳುಗಳನ್ನು ಉಪಾಯದಿಂದ ಹಿಡಿದು ತಿನ್ನುತ್ತದೆ. ಕೆಲವೊಮ್ಮೆ ಜೇನಿನ ಕೋಟೆಯೊಳಗೆ ಸಿಕ್ಕಿ ಪ್ರಾಣ ಬಿಡುವ ಸಾಧ್ಯತೆಗಳೂ ಇರುತ್ತದೆ.
ಇಂಥ ವಿಶೇಷ ಲಕ್ಷಣಗಳನ್ನು ಹೊಂದಿರುವ ಈ ಹಕ್ಕಿಯ ಮೈ ಬಣ್ಣ ಬೂದು. ರೆಕ್ಕೆ ತುದಿ ಭಾಗದಲ್ಲಿ ಕಪ್ಪು ಪಟ್ಟಿಗಳಿರುತ್ತವೆ. ಎದೆ ಮತ್ತು ಹೊಟ್ಟೆ ಭಾಗದಲ್ಲಿ ಬೆಳ್ಳಗಿರುತ್ತದೆ. ಕೊಕ್ಕು ಕಪ್ಪು ಮಿಶ್ರಿತ ಬೂದು ಬಣ್ಣದಿಂದ ಇರುತ್ತದೆ. ಜನವರಿ ನಂತರದ ದಿನಗಳಲ್ಲಿ 3 ರಿಂದ 4 ಮೊಟ್ಟೆಗಳನ್ನು ಇಟ್ಟು ಮರಿಮಾಡುತ್ತದೆ.
ಚಿತ್ರ: ಅಂತರ್ಜಾಲ