ಗಾಂಭೀರ್ಯ ಕಾಯ್ದ 𝐏𝐫𝐢𝐧𝐭 𝐄𝐱𝐜𝐡𝐚𝐧𝐠𝐞!

Share This

ಪ್ರಿಂಟ್ ಎಕ್ಸ್ಚೇಂಜ್ (Print Exchange)!
ಒದೊಳ್ಳೆಯ ಕಾನ್ಸೆಪ್ಟ್ (concept). ವಿದೇಶಗಳಲ್ಲಿ ಸಾಕಷ್ಟು ಪ್ರಚಲಿತ. ಭಾರತದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಜಾಗತಿಕ ಮಟ್ಟದಲ್ಲಿ ಚರ್ಚೆಗೂ ಕಾರಣವಾಗುತ್ತಿದೆ. ಚರ್ಚೆಗೆ ಕಾರಣವಾಗಬೇಕು ಕೂಡ. ಮುಖ್ಯವಾಗಿ ಭಾರತೀಯ ಸಮಕಾಲೀನ (contemporary) ಕಲಾಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ತವಕದಲ್ಲಿದ್ದ ಈ ತಲೆಮಾರಿನ ಅನೇಕ ಕಲಾವಿದರ ಆಯ್ಕೆ ಈಗ ಮುದ್ರಣ ಕಲೆ (printmaking).
ಭವಿಷ್ಯದಲ್ಲಿ ಮುಂದ್ರಣ ಕಲೆ ಪ್ರಾಮುಖ್ಯತೆ ಪಡೆದುಕೊಳ್ಳುವ, ಮೊದಲ ಆದ್ಯತೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ತಂತ್ರಜ್ಞಾನದ ಅಳವಡಿಕೆ, ಹೊಸ ಹೊಸ ಅನ್ವೇಷಣೆ, ಸಾಧ್ಯತೆಗಳು ಈ ಪ್ರಕಾರದತ್ತ ಮುಖಮಾಡಲು ಪ್ರೇರೇಪಿಸುತ್ತಿವೆ. ಪೂರಕ ವಾತಾವರಣವೂ ನಿರ್ಮಾಣವಾಗುತ್ತಿದೆ.
” ಬೆಂಗಳೂರು ಪ್ರಿಂಟ್ ಎಕ್ಸ್ಚೇಂಜ್ ” (Bengaluru Print Exchange) ಯಾವುದೋ ಒಂದು ಬದಲಾವಣೆಗೆ ದಾರಿದೀಪ ಆಗಲಿಗೆ ಎಂಬ ಭರವಸೆ ಮೂಡಿದೆ. ಇಷ್ಟು ಗಟ್ಟಿಯಾಗಿ ಹೇಳಲಿಕ್ಕೂ ಬಲವಾದ ಕಾರಣವಿದೆ. ಸ್ವತಃ ಕಲಾವಿದರಾದ ಅಲ್ಕಾ ಚಾವ್ಡಾ Alka Chavda ಮತ್ತು ಸುರೇಶ್ ಕುಮಾರ್ ಮಹ್ತೋ Suresh Kumar ಅವರು ತಮ್ಮ ಮಹತ್ವಾಕಾಂಕ್ಷೆಯ “ಲವರು ಆರ್ಟ್ ಸೆಂಟರ್” ( Lavaru Art Centre ) ಮೂಲಕ ತೋರಿದ ಬದ್ಧತೆ ಈ ಭರವಸೆಯನ್ನು ಹುಟ್ಟುಹಾಕಿದೆ. ಕಳೆದ ಅನೇಕ ವರ್ಷಗಳಿಂದ ಮುದ್ರಣ ಕಲೆಯಲ್ಲಿ ತೊಡಗಿಸಿಕೊಂಡಿರುವ ಲವರು ಆರ್ಟ್ ಸೆಂಟರ್ ನಿರ್ದೇಶಕಿ ಅಲ್ಕಾ ಅವರು ಸುರೇಶ್ ಅವರ ಸಹಕಾರದಿಂದ ರಾಷ್ಟ್ರಮಟ್ಟದಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಇದೀಗ 3ನೇ ಆವೃತ್ತಿಯನ್ನು ಯಶಸ್ವಿಯಾಗಿಸಿದೆ.
ಕಳೆದ ಒಂದು ತಿಂಗಳಿಂದ ಲವರು ಗ್ಯಾಲರಿಯಲ್ಲಿ ನಡೆಯುತ್ತಿದ್ದ ಮುದ್ರಣ ಕಲಾಕೃತಿಗಳ ಅಂತಾರಾಷ್ಟ್ರೀಯ ಕಲಾಪ್ರದರ್ಶನ ಅನೇಕ ವಿಶೇಷತೆಗಳಿಂದ ಕೂಡಿತ್ತು. ಆಧುನಿಕ ಸಂದರ್ಭದ ಹೊಸ ಹೊಸ ಪ್ರಕಾರಗಳ, ವಿಭಿನ್ನ ತಂತ್ರಗಳಿಂದ ಕೂಡಿದ್ದ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿದ್ದವು. ಪುಸ್ತಕದಳತೆಯ ಕಲಾಕೃತಿಗಳು ವಸ್ತು ವಿಷಯದ ದೃಷ್ಟಿಯಿಂದ, ತಂತ್ರಗಾರಿಕೆಯಿಂದ, ಆಯ್ದ (selective) ಬಣ್ಣಗಳ ಬಳಕೆಯಿಂದ ಕುತೂಹಲ ಕೆರಳಿಸುವಂತಿತ್ತು. ಭಾರತವೂ ಸೇರಿದಂತೆ ಬೇರೆ ಬೇರೆ ದೇಶಗಳ 60 ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಂಡಿದ್ದವು. ಬಹುತೇಕ ಕಲಾಕೃತಿಗಳು ಅನೇಕ ಕಾರಣಗಳಿಂದ ಗಮನ ಸೆಳೆಯುವಂತಿತ್ತು. ಹತ್ತಾರು ಕಲಾಕೃತಿಗಳು ತಾಂತ್ರಿಕವಾಗಿ ಮೇಲ್ಪಂಕ್ತಿಯಲ್ಲಿ ನಿಲ್ಲುವಂತವಾಗಿದ್ದವು.
ಬೆರಳೆಣಿಕೆಯಷ್ಟು ಕಲಾಕೃತಿಗಳನ್ನು ಹೊರತು ಪಡಿಸಿದರೆ ಹೆಚ್ಚಿನ ಕಲಾಕೃತಿಗಳು ಖಂಡಿತವಾಗಿ ಅಂತಾರಾಷ್ಟ್ರೀಯ ಗುಣಮಟ್ಟದ್ದೇ ಆಗಿದ್ದವು ಎನ್ನಲೇನಡ್ಡಿಯಿಲ್ಲ. ಇದು ಹೊಗಳಿಕೆಯ ಮಾತಲ್ಲ. ನೇಪಾಳದ Bidhyaman Tamang, ಭಾರತದ Chandana N Raju, ಕೆನಡಾದ Guy Langevin, ಅರ್ಜೆಂಟೀನಾದ Juan Sebastian Carnero, ನೇಪಾಳದ Kabi Raj Lama, ಥಾಯ್ಲೆಂಡ್‌ನ Kitipong Ngowsiri, ಭಾರತದ Madhvi Srivastava, ಭಾರತದ Manjunath Honnapura, ಜಪಾನ್‌ನ Mika Sakimoto, ಇರಾನ್‌ನ Mahboobeh Esfandiary, ಬಾಂಗ್ಲಾದೇಶದ Md Fakhrul Islam Mazumdar, ರಷ್ಯಾದ Nina Klimovskaya, ಬಾಂಗ್ಲಾದೇಶದ Palash Baran Biswas, ಭಾರತದ Priyanshu Chaurasia, Prof. Rajan Shripad Fulari, Rebba Prakash, Spandan S Mundhe, Srabani Sarkar, Suresh Kumar Sambath Kumar, Urmila V G ಅವರ ಕಲಾಕೃತಿಗಳು ಗಮನ ಸೆಳೆದವು. ಅರೆಕ್ಷಣ ನಿಂತು ವೀಕ್ಷಿಸುವಂತೆ ಮಾಡಿದವು.
ಮುದ್ರಣ ತಂತ್ರಗಾರಿಕೆಯ ದೃಷ್ಟಿಯಿಂದ Suresh Kumar ಅವರ ಪ್ಲಾನೋಗ್ರಾಫಿಕ್ ಪ್ರಿಂಟ್(Planographic), ನಿನಾ ಅವರ ಮಿಜೋಟಿಂಟ್(Mezzotint), ಮೊಹಮ್ಮದ್ ಫಕ್ರೂಲ್ ಇಸ್ಲಾಂ ಅವರ ವುಡ್‌ಕಟ್(Woodcut), ಕಿಟಿಪಾಂಗ್ ಮತ್ತು ಗೈ ಲ್ಯಾಂಗೆವಿನ್ ಅವರ ಮಿಜೋಟಿಂಟ್ (Mezzotint) ಬಹಳ ಸೂಕ್ಷ್ಮ ಗ್ರಹಿಕೆಯ ಕಲಾಕೃತಿಗಳಾಗಿವೆ. ಈ ಗುಣಮಟ್ಟ ಕಾಯ್ದುಕೊಳ್ಳುವುದೇ ಮುದ್ರಣ ಕಲಾವಿದರ ಆದ್ಯತೆ ಮತ್ತು ಸವಾಲಾಗಿರುತ್ತದೆ. ಇಂತಹ ಕಲಾಕೃತಿಗಳನ್ನು ಗ್ರಹಿಸುವುದೂ ಒಂದು ಮಹತ್ವದ್ದಾಗಿರುತ್ತದೆ.
ಇನ್ನು ಕಲಾಪ್ರದರ್ಶನದ ಗುಣಮಟ್ಟ ಕಾಯ್ದುಕೊಳ್ಳುವ ಪ್ರಕ್ರಿಯೆಯಲ್ಲೂ ಲವರು ಆರ್ಟ್ ಸೆಂಟರ್ ಪ್ರಯತ್ನ ಶ್ಲಾಘನೀಯ. ತಮಗಿರುವ ಸಣ್ಣದೊಂದು ಗ್ಯಾಲರಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಲಾಕೃತಿಗಳನ್ನು ಪ್ರದರ್ಶಿಸಿ ಬದ್ಧತೆ ತೋರಿದೆ. ವಿದೇಶಗಳು ಹಾಗೂ ಬೆಂಗಳೂರೇತರ ಕಲಾವಿದರ ಕಲಾಕೃತಿಗಳು ಇರುವ ಕಾರಣ ಸಹಜವಾಗಿ ಜವಾಬ್ದಾರಿ ಹೆಚ್ಚಿರುತ್ತದೆ. ಈ ಜವಾಬ್ದಾರಿಯನ್ನು ಲವರು ಬಹಳ ಜಾಗರೂಕತೆಯಿಂದ ಕಾಪಿಟ್ಟುಕೊಂಡು ನಿಭಾಯಿಸಿದೆ. ಈ ಪ್ರಯತ್ನ ಇಷ್ಟಕ್ಕೇ ನಿಲ್ಲದೆ ಮುಂದುವರಿಸಬೇಕಿದೆ. ಇದಕ್ಕಿರುವ ಸವಾಲುಗಳನ್ನು ಮೆಟ್ಟಿನಿಲ್ಲಬೇಕಿದೆ. ಖಂಡಿತವಾಗಿ ಈ ವೇದಿಕೆ ಭವಿಷ್ಯದ ಅವಕಾಶಕ್ಕಾಗಿ ಕಾದಿರುವ ಕಲಾವಿದರಿಗೆ ಸಹಕಾರಿ.

Share This

Leave a Reply

Your email address will not be published. Required fields are marked *