ಸೌಮ್ಯ ಸ್ವಭಾವ, ಮೃದು ಮನಸ್ಸು, ಮುದ್ದಾದ ದೇಹ, ಉಣ್ಣೆಯಂಥ ಗರಿಗಳು… ಮುದುಡಿ ಕುಳಿತರೆ ಚೆಂಡು ಇಟ್ಟಂತೆ ತೋರುವ ಅಪರೂಪದ ಹಕ್ಕಿ ಇದು.
ಈ ಹಕ್ಕಿ ಮತ್ತು ಮೆತ್ತಗೆ ಗದರಿದರೂ ಅಳುವ ಮಗುವಿಗೂ ಹೆಚ್ಚೇನು ವ್ಯತ್ಯಾಸವಿಲ್ಲ. ನೀವು ಜೋರಾಗಿ ಕೂಗಾಡಿಕೊಳ್ಳುತ್ತಿದ್ದೀರಿ ಎಂದರೆ ಆ ಪ್ರದೇಶಕ್ಕೆ ಮುಖವನ್ನೇ ಹಾಕುವುದಿಲ್ಲ. ಆ ಜಾಗದಿಂದ ನೂರಾರು ಮೀಟರ್ ದೂರದಲ್ಲಿಯೇ ಇರುತ್ತದೆ. ಅದರಲ್ಲೂ ಒಮ್ಮೆ ಇಂಥ ಕೂಗಾಟ ಕೆಳಿಸಿತೆಂದರೆ ಸಣ್ಣ ಗಲಾಟೆಯಾದರೂ ಎಲೆ ಮರೆಯಲ್ಲೆಲ್ಲೋ ಕುಳಿತು ಕಾಲ ಕಳೆಯುತ್ತದೆ.
ಇದು ಈ ‘ಕರಿಗತ್ತಿನ ರಾಟವಾಳ’ (Black-throated Munia) ಹಕ್ಕಿಯ ವಿಶೇಷ.
ಈ ಹಕ್ಕಿ ಗೂಡು ಕಟ್ಟಿಕೊಳ್ಳುವ ರೀತಿಯೂ ನಮ್ಮನ್ನು ಅಚ್ಚರಿಗೊಳಿಸುತ್ತದೆ. ಸಂತಾನೋತ್ಪತ್ತಿಯ ಸಮಯದಲ್ಲಿ ಚೆಂಡಿನಾಕಾರದ ಹತ್ತಿ, ನಾರಿನ ಮೃದುವಾದ ಗೂಡು ಕಟ್ಟಿಕೊಳ್ಳುತ್ತದೆ. ಗೂಡಿನ ಒಳಗೆ ಹಾಸಿಗೆ ಮೆತ್ತಗಾಗಿರಬೇಕೆಂದು ಹತ್ತಿಯನ್ನು ತಂದು ಜೇಡನ ಬಲೆಯಿಂದ ರಚಿಸಿಕೊಳ್ಳುತ್ತದೆ. ಗೂಡು ಕುಸಿಯ ಬಾರದು ಎನ್ನುವ ಕಾರಣ ಹೊರಭಾಗದಲ್ಲೂ ಜೇಡನ ಬಲೆಯನ್ನು ಬಳಸಿಕೊಳ್ಳುತ್ತದೆ.
ಕತ್ತು ಕಪ್ಪಗಾಗಿರುವ ಕಾರಣಕ್ಕಾಗಿಯೇ ಈ ಹಕ್ಕಿಗೆ ಈ ಹೆಸರು.
ಕರಿಗತ್ತಿನ ರಾಟವಾಳ ಜೂನ್-ನವೆಂಬರ್ ತಿಂಗಳಾವಧಿಯಲ್ಲಿ 3 ರಿಂದ 4 ಮೊಟ್ಟೆಗಳನ್ನು ಇಟ್ಟು ಮರಿಮಾಡುತ್ತದೆ. ನೋಡಲು ಹೆಚ್ಚು ಕಡಿಮೆ ಗುಬ್ಬಿಯಂತೆ ಇರುತ್ತದೆ. ಕತ್ತು, ತಲೆ, ರೆಕ್ಕೆಯ ಕೆಳಭಾಗ ಮತ್ತು ಪುಕ್ಕದ ತುದಿಯಲ್ಲಿ ಕಂದು ಮಿಶ್ರಿತ ಕಪ್ಪು. ಬೆನ್ನಿನ ಭಾಗದಲ್ಲಿ ಕಂದು ಬಣ್ಣ ಜಾಸ್ತಿಯಿರುತ್ತದೆ. ಕೊಕ್ಕು ಮತ್ತು ಕಾಲುಗಳು ಕಪ್ಪಗಾಗಿರುತ್ತದೆ. ಹೊಟ್ಟೆ ಮತ್ತು ಪುಕ್ಕದ ಕೆಳಭಾಗ ಬೆಳ್ಳಗಿರುತ್ತದೆ.
ಸಾಮಾನ್ಯವಾಗಿ ಹುಲ್ಲುಗಳಿರುವ ಪ್ರದೇಶಗಳಲ್ಲಿ ಕೀಟಗಳನ್ನು ಹಿಡಿದು ತಿನ್ನುತ್ತಿರುತ್ತದೆ. ತಣ್ಣನೆಯ ಗಾಳಿಯಿದ್ದರೆ ಈ ಹಕ್ಕಿಗೆ ಖುಷಿಯೂ ಖುಷಿ. ಲಂಕಾದಲ್ಲಿ ಜಾಸ್ತಿ. ಭಾರತ, ಬಾಂಗ್ಲಾದಲ್ಲೂ ಇವೆ. ಚಿತ್ರ ಕೃಪೆ: ಅಂತರ್ಜಾಲ.