ಮಿರುಗೋ ಕಣ್ಣಿನ ಹಸಿರು ಗುಪ್ಪಿ

Share This

ಎತ್ತರದ ಮರದಿಂದ ಪುರ್ ಎಂದು ಹಾರಿ ಹೋಗುವಾಗ ನೋಡಿದರೆ ಯುದ್ಧ ವಿಮಾನ ಟೇಕ್ಆಫ್ ಮಾಡಿದಂತೆ ಇರುತ್ತದೆ. ಎತ್ತರದಿಂದ ನೆಲಕ್ಕಿಳಿದು ಕುಳಿತುಕೊಳ್ಳುವಾಗಲೂ ಅಸ್ಟೆ. ಪೇಪರ್ ವಿಮಾನ ಮಾಡಿ ಮೇಲಕ್ಕೆ ಹಾರಿಸಿದಾಗ ಹೇಗೆ ನೆಲ ಸೇರುತ್ತದೋ ಹಾಗೆ. ತನ್ನೆರಡು ರೆಕ್ಕೆಗಳನ್ನು ಹೊರಕ್ಕೆ ಚಾಚಿಕೊಂಡಿದೆಯೋ ಇಲ್ಲವೋ ಎನ್ನುವಂತೆ ನೆಲಸೇರುತ್ತದೆ.
ಇದನ್ನು ನೋಡಲು ಗದ್ದೆ, ಬಯಲು ಪ್ರದೆಶದಲೆಲ್ಲೋ ಕುಳಿತಿದ್ದರೆ ಖಂಡಿತ ಅಸ್ಟು ಸುಲಭವಾಗಿ ನಿಮ್ಮಿಂದ ಈ ಹಕ್ಕಿಯನ್ನು ಗುರುತಿಸಲು ಸಾದ್ಯವಿಲ್ಲ. ಕಾರಣ ಈ ‘ಹಸಿರುಗುಪ್ಪಿ’ (Little Green Heron) ಏಕಾಂಗಿ. ಅಸ್ಟೇ ಅಲ್ಲ, ಇನ್ನೇನು ಸೂರ್ಯಸ್ತವಾಗುತ್ತದೆ ಎನ್ನುವಾಗಲೇ ಬೇಟೆಗಾಗಿ ಗೂಡಿನಿಂದ ಹೊರಬೀಳುತ್ತದೆ. ಕತ್ತಲು ಆವರಿಸುತ್ತಿದ್ದಂತೆ ಇದರ ಕಾರ್ಯಾಚರಣೆ ಆರಂಭಗೊಳ್ಳುತ್ತದೆ. ಹೆಚ್ಚುಕಡಿಮೆ ರಾತ್ರಿ ಕೊಕ್ಕರೆಯ ಸ್ವಭಾವದ ಹಕ್ಕಿ ಇದು.
ಕೆರೆ, ಕೆಸರುಗದ್ದೆಗಳಲ್ಲಿ ಇರುವ ಈ ಹಸಿರುಗುಪ್ಪಿ ಜಲಚರಗಳನ್ನೇ ಶಿಕಾರಿಮಾಡಿ ತಿನ್ನುತ್ತದೆ. ಸಿಗಡಿ, ಏಡಿ, ಚಿಕ್ಕ ಚಿಕ್ಕ ಮೀನು ಎಂದರೆ ಈ ಹಕ್ಕಿಗೆ ಪಂಚಪ್ರಾಣ.
ಸಂತಾನೋತ್ಪತ್ತಿಯ ವೇಳೆಯಲ್ಲಿ ಬೆಳ್ಳಕ್ಕಿಗಳಂತೆ ನೆತ್ತಿಯ ಮೇಲೆ ಜುಟ್ಟು ಬರುವುದನ್ನು ಕಾಣಬಹುದು. ಉಳಿದಂತೆ ಈ ಹಸಿರುಗುಪ್ಪಿ ಕೆಸರುಗುಪ್ಪಿಯನ್ನೇ ಹೋಲುತ್ತದೆ. ಬೆನ್ನು ಮತ್ತು ರೆಕ್ಕೆಗಳೆಲ್ಲ ಹಸಿರು ಮಿಶ್ರಿತ ಬಣ್ಣದಿಂದ ಇರುತ್ತದೆ. ಕಾಲುಗಳು, ಕತ್ತು ಮತ್ತು ಹೊಟ್ಟೆಭಾಗ ಹಳದಿ ಮಿಶ್ರಿತ ಬೂದು ಬಣ್ಣ. ಎದೆಭಾಗಗಳಲ್ಲಿ ಕಂದು ಬಣ್ಣದ ಗರಿಗಳೂ ಇರುತ್ತವೆ.
ಜೌಗು, ಹುಲ್ಲುಗಳಿರುವ ಪ್ರದೇಶಗಳಲ್ಲಿ ಜಾಸ್ತಿಯಾಗಿ ಕಂಡುಬರುವ ಈ ಹಕ್ಕಿಯನ್ನು ಹಸಿರ್ಗಪ್ಪು ಬಕ ಎಂದೂ ಕರೆಯುತ್ತಾರೆ.
ಮರಗಳ ಮೇಲೆ ಕಡ್ಡಿಗಳಿಂದ ಗೂಡುಮಾಡಿಕೊಳ್ಳುವ ಹಸಿರುಗುಪ್ಪಿ ಮಾರ್ಚ್-ಆಗಸ್ಟ್ ತಿಂಗಳಾವಧಿಯಲ್ಲಿ 2-5 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಹಸಿರುಗುಪ್ಪಿಯ ಕಣ್ಣುಗಳು ತಿಳಿ ಹಳದಿಯಿಂದ ಇದ್ದು ಮಿರುಗುತ್ತವೆ. ಭಾರತದ ಎಲ್ಲಾ ಭಾಗಗಳಲ್ಲಿಯೂ ಇವೆ. ಬಾಂಗ್ಲ, ಲಂಕಾ ಮತ್ತು ಪಾಕಿಸ್ತಾನಗಳಲ್ಲಿಯೂ ಇವೆ.
ಚಿತ್ರಕೃಪೆ: ಚಿಟ್ಟಿ


Share This

Leave a Reply

Your email address will not be published. Required fields are marked *