- ಆರು ಮಂದಿ ಕಲಾವಿದರ ಆರು ಶೈಲಿಯ ಕಲಾಕೃತಿಗಳು
ಗುಣಮಟ್ಟದ ಕಲಾಕೃತಿಗಳು ದೀರ್ಘಕಾಲ ನಮ್ಮ ಮನಸ್ಸಿನಲ್ಲಿ ಉಳಿದುಕೊಳ್ಳುತ್ತವೆ. ನಾವು ಇಷ್ಟಪಡುವ ಕಲಾಪ್ರಕಾರವಾದರೆ ಅವು ಮನಸ್ಸಿನಿಂದ ಅಲ್ಲಾಡದಂತೆ ಬೇರೂರಿಕೊಂಡಿರುತ್ತವೆ. ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಸಲ ಅನುಭವಕ್ಕೆ ಬಂದಿರುತ್ತದೆ. ಇದಕ್ಕೆ ರಾಜಾ ರವಿವರ್ಮ, ಮೈಕೆಲೇಂಜಲೋ ಸೇರಿದಂತೆ ಅನೇಕ ಶ್ರೇಷ್ಠ ಕಲಾವಿದರ ಕಲಾಕೃತಿಗಳನ್ನು ಉದಾಹರಣೆಯಾಗಿ ನೀಡಬಹುದು. ಹಾಗೆ ಅನೇಕ ಕಲಾಕೃತಿಗಳು ಅಥವಾ ಕಲಾಕೃತಿಗಳಲ್ಲಿನ ಅಂಶಗಳು, ತಂತ್ರಗಾರಿಕೆ ಅನೇಕ ದಿನಗಳ ಕಾಲ ಕಾಡುತ್ತಿರುತ್ತವೆ. ನಮ್ಮ ಮನಸ್ಸಿನಲ್ಲಿ ಉಳಿದುಕೊಂಡಿರುತ್ತವೆ.
ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 1ರಲ್ಲಿ ನಡೆಯುತ್ತಿರುವ ಸಮೂಹ ಕಲಾಪ್ರದರ್ಶನದಲ್ಲಿ ಪ್ರದರ್ಶಿತ ಕೆಲವು ಕಲಾಕೃತಿಗಳು ಇಂತಹದ್ದೊಂದು ಅನುಭವಕ್ಕೆ ಸಾಕ್ಷಿಯಾಗುವಂತಿವೆ. “Brush & Chisel: The Art of Transformation” ಪ್ರದರ್ಶನದ ಶೀರ್ಷಿಕೆ ಹೇಳುವಂತೆ ಈ ಪ್ರದರ್ಶನದಲ್ಲಿ ಕಲಾವಿದರ ವಿಭಿನ್ನ ಆಲೋಚನೆಗಳನ್ನು ಗ್ರಹಿಸಬಹುದಾಗಿದೆ. ಕೋಲ್ಕತಾ ಮೂಲದವರಾದ ರಾಮ್ ಕುಮಾರ್ ಮನ್ನಾ, ಪಿಯಾಲಿ ಗಂಗೂಲಿ, ಮೌಮಿತಾ ಘೋಷ್ ಮತ್ತು ರಿತುಪರ್ಣ ಚಕ್ರವರ್ತಿ, ಅಂಡಮಾನ್ ನಿಕೋಬಾರ್‌ನ ಮಹಾನಂದ ಗೊಮಾಸ್ತ, ದಕ್ಷಿಣ ೨೪ ಪರಗಣಗಳು ಜಿಲ್ಲೆಯ (South 24 Parganas) ಗೋಪಾಲಚಂದ್ರ ನಾಸ್ಕರ್ ಅವರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ.
ಮೌಮಿತಾ ಅವರ ಜಲವರ್ಣ ಕಲಾಕೃತಿಗಳು ಥಟ್ಟನೆ ಗಮನ ಸೆಳೆಯುತ್ತವೆ. ಗೊಂಚಲಾಗಿ ಅರಳಿಕೊಂಡಿರುವ ಹೂವುಗಳನ್ನು ಬಹಳ ಸೊಗಸಾದ ತಂತ್ರಗಾರಿಕೆಯಿಂದ ರಚಿಸುವಲ್ಲಿ ಮೌಮಿತಾ ಯಶಸ್ವಿಯಾಗಿದ್ದಾರೆ. ಜಲವರ್ಣವನ್ನು ಬಳಸಿಕೊಂಡಿರುವ ಮಾರ್ಗ ಆಸಕ್ತಿದಾಯಕ. ಪ್ರದರ್ಶಿತ ಕಲಾಕೃತಿಗಳಲ್ಲಿ ಕೆಲವು ಖಂಡಿತವಾಗಿ ಸಂಗ್ರಹಯೋಗ್ಯವಾದವು ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗೆಯೇ, ಗೋಪಾಲ ಚಂದ್ರ ನಾಸ್ಕರ್ ಅವರ ಕಲಾಕೃತಿಗಳೂ ಸಾಮಾನ್ಯ ನೋಡುಗನನ್ನು ಬಲು ಬೇಗ ಆಕರ್ಷಿಸುತ್ತವೆ. ವಾದ್ಯವೊಂದರ ಬಾಹ್ಯಾಕೃತಿಯನ್ನೇ ವಸ್ತು ವಿಷಯವಾಗಿಸಿಕೊಂಡು ಹೆಣ್ಣೆಂಬ ಭಾವಜೀವಿಗೆ ಹೋಲಿಕೆ ಮಾಡಿದ್ದಾರೆ. ಹೃದಯಸ್ಪರ್ಶಿಯಾಗಿಸುವ ನಿಟ್ಟಿನಲ್ಲಿ ಪ್ರಮುಖ ಎರಡು ಅಂಶಗಳನ್ನು ರೂಪಕವಾಗಿ (metaphor) ಬಳಸಿಕೊಂಡಿದ್ದಾರೆ. ರಾಧಾ-ಕೃಷ್ಣರ ಪ್ರೇಮದಂತೆ ವರ್ಣ ಬಳಕೆಯನ್ನೂ ಅಷ್ಟೇ ಸೊಗಸಾಗಿಸುವ ಪ್ರಯತ್ನ ನಡೆಸಿದ್ದಾರೆ.
ಮಹಾನಂದ ಗೊಮಾಸ್ತ ಅವರ ಮರದಿಂದ ರಚಿಸಲ್ಪಟ್ಟ ಶಿಲ್ಪಗಳು ಗಮನ ಸೆಳೆಯುತ್ತವೆ. ಮರದೊಳಗೆ ನಿಂತು ತಲೆಭಾಗವನ್ನಷ್ಟೇ ಹೊರಚಾಚಿ ನೋಡುತ್ತಿರುವ ಭಾವಪೂರ್ಣವಾದ ಶಿಲ್ಪಗಳು ವಿಶೇಷವಾಗಿವೆ. ಶಿಲ್ಪದ ಮೇಲ್ಮೈವಳಿಕೆಯಲ್ಲಿ ಚಾಣದ ಏಟಿನ ನೈಜತೆಯನ್ನು ಉಳಿಸಿಕೊಳ್ಳುವ ಬಗೆ ಸಾಕಷ್ಟು ಗಮನ ಸೆಳೆಯುತ್ತವೆ. ಇನ್ನು ರಾಮ್ ಕುಮಾರ್ ಮನ್ನಾ ಅವರ ಭಾವಪೂರ್ಣ ಶಿಲ್ಪಗಳು ಖಂಡಿತವಾಗಿ ನೋಡುಗನನ್ನು ಹಿಡಿದು ನಿಲ್ಲಿಸುವ, ಇಡೀ ಪ್ರದರ್ಶನದ show stopper. ರಾಮ್ ಕುಮಾರ್ ಅವರನ್ನು ಗ್ರಾಂಡ್‌ಮಾಸ್ಟರ್ ಆಫ್ ಟೆರಕೋಟ (grandmaster of terracotta) ಎಂದು ವಿಶ್ಲೇಷಿಸುವುದುಂಟು. ಕಾರಣ ಅವರು ಮಣ್ಣಿನ ಶಿಲ್ಪ ರಚನೆಯಲ್ಲಿ ಸಾಕಷ್ಟು ಪಳಗಿರುವ ಕಲಾವಿದರಾಗಿದ್ದಾರೆ.
ಒಂದೊಳ್ಳೆಯ ಪ್ರದರ್ಶನ ಇದಾಗಿದ್ದು, ಡಿಸೆಂಬರ್ 15ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.