ಮೈವಳಿಕೆ ಮಾಡಿಕೊಳ್ಳುವ ಅರಿಕೆ!
• ‘Call To The Mystic’ ನಾಳೆ ಸಂಪನ್ನ • ಜೀ ಗ್ಯಾಲರಿಯಲ್ಲಿ ಕಲಾಪ್ರದರ್ಶನ
ಮರದಚ್ಚು ಅಥವಾ ಇನ್ನಾವುದೋ ವಸ್ತುವನ್ನು ಕೆತ್ತನೆ ಮಾಡುವಂತೆ ಕ್ಯಾನ್ವಾಸ್ನ ಮೇಲ್ಮೈನಲ್ಲಿ ಕೆತ್ತನೆ ಹೇಗೆ ಸಾಧ್ಯ?
ಅಸಾಧ್ಯವೇನಲ್ಲ ಎನ್ನುವುದನ್ನು ಕ್ಯಾಲಿಫೋರ್ನಿಯಾ ಮೂಲದ ಲಾಸ್ ಏಂಜಲೀಸ್ ಕಲಾವಿದೆ ಇವಾ ಮಲ್ಹೋತ್ರಾ ಕೂಡ ತಮ್ಮದೇ ರೀತಿಯಲ್ಲಿ ಸಾಧ್ಯವಾಗಿಸಿದ್ದಾರೆ. ಬಣ್ಣಗಳ ಏರಿತದ ಜೊತೆ ಬಳಕೆಯ ವಿಧಾನದಲ್ಲಿ ಕುತೂಹಲ ಮೂಡಿಸಿದ್ದಾರೆ!
ಇವಾ ಮಲ್ಹೋತ್ರಾ ಅವರ ಈ ಪ್ರಕಾರದ ಕಲಾಕೃತಿಗಳ ‘Call To The Mystic’ ಪ್ರದರ್ಶನ ಬೆಂಗಳೂರಿನ ಜೀ ಗ್ಯಾಲರಿಯಲ್ಲಿ (#ggallery) ನಡೆಯುತ್ತಿದೆ. ಕಲಾಕೃತಿಗಳಲ್ಲಿ ಮೈವಳಿಕೆ ಎಷ್ಟು ಪ್ರಾಮುಖ್ಯತೆ ಪಡೆದುಕೊಳ್ಳಬಲ್ಲದು ಎನ್ನುವುದಕ್ಕೆ ಇವಾ ಮಲ್ಹೋತ್ರಾ ಅವರ ಈ ಪ್ರಯತ್ನದಲ್ಲಿ ನೋಡಬಹುದಾಗಿದೆ. ಪೃಥ್ವಿ ಮತ್ತು ಮಾನವನ ಭಾವನೆಗಳನ್ನು ಬಹಳ ಅರ್ಥಪೂರ್ಣವಾಗಿ ಹೇಳುವಲ್ಲಿ ಇದೊಂದು ಗಂಭೀರ ಮತ್ತು ಅಮೂರ್ತತೆಯನ್ನು ಒಳಗೊಂಡಿರುವ ಪ್ರಯತ್ನ ಎನ್ನಬಹುದಾಗಿದೆ. ಪೃಥ್ವಿಯೊಳಗಿನ ನೂರಾರು ಅಚ್ಚರಿಯ ಕಥೆಗಳನ್ನು ಹೇಳುವ ಪ್ರಯತ್ನವಾಗಿಯೂ ಕಾಣಿಸುತ್ತದೆ. ಇವಾ ಮಲ್ಹೋತ್ರಾ ಅವರೆ ಹೇಳಿಕೊಂಡಿರುವಂತೆ ಇದೊಂದು ಹೊಸ ಸರಣಿಯ ಕಲಾಕೃತಿಗಳಾಗಿವೆ.
La Contadora del Tiempo (The Counter of Time) ಮತ್ತು Llamado a lo Sagrado (Call to the Mystic) ಶೀರ್ಷಿಕೆಯ ಎರಡು ಕಲಾಕೃತಿಗಳಲ್ಲಿ ತಾಮ್ರದ ಹೊದಿಕೆಯನ್ನು ಬಳಸಿಕೊಂಡಿರುವ ರೀತಿ ಗಮನಾರ್ಹ. ಹಾಗೆಯೇ, Luz de la Madre Tierra (Light of Mother Earth), La Luna en el Manglar (The Moon in the Mangrove) ಮತ್ತು A´rbol Co´smico (Cosmic Tree) ಶೀರ್ಷಿಕೆಯ ಕಲಾಕೃತಿಗಳಲ್ಲಿ ನೀಲ ವರ್ಣ ಮತ್ತು ತಾಮ್ರ ವರ್ಣವನ್ನು ಸಮತೋಲನದಿಂದ ಬಳಸಿ ಸಂಯೋಜಿಸಿರುವ ರೀತಿ ಭಿನ್ನವಾಗಿದೆ. ಇವೆಲ್ಲದರ ನಡುವೆ ‘In Illo Tempore’ ಶೀರ್ಷಿಕೆಯ ಕಲಾಕೃತಿ ಬೇರೆಯದೆ ನೆಲೆಯಲ್ಲಿ ನಿಲ್ಲುವಂತವು. ಕಣ್ಣಿಗೆ ಗೋಚರಿಸುವಂತೆ ಕೆಲವೊಂದು ಬಳಕೆಯಾಗಿರುವ ಅಂಶಗಳು (Elements) ನೋಡುಗರಲ್ಲಿ ಬೇರೆ ಬೇರೆಯದೆ ಆದ ಭಾವ ಮೂಡಿಸುವಂತಿವೆ.
ಸ್ನೇಹಿತರೆ ಒಂದೊಳ್ಳೆಯ ಕಲಾಪ್ರದರ್ಶನ ಇದಾಗಿದ್ದು, ಜುಲೈ 12, ಶನಿವಾರ (ನಾಳೆ) ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.







