- ಕರ್ನಾಟಕದ ಕಲಾವಿದೆಗೆ ಪ್ರತಿಷ್ಠಿತ ಕಲಾ ಗೌರವ
- ಈ ಪ್ರಶಸ್ತಿಗೆ ಪಾತ್ರರಾದ ಪ್ರಪಂಚದ 2ನೇ ವ್ಯಕ್ತಿ
ಕರ್ನಾಟಕದ ಹಿರಿಯ ಕಲಾವಿದೆ ಶೀಲಾ ಗೌಡ ಅವರಿಗೆ ದಿಯಾ ಆರ್ಟ್ ಫೌಂಡೇಶನ್ ಮತ್ತು ಸ್ಯಾಮ್ ಗಿಲ್ಲಿಯಾಮ್ ಫೌಂಡೇಶನ್ ಜಂಟಿಯಾಗಿ ನೀಡುವ ಸ್ಯಾಮ್ ಗಿಲ್ಲಿಯಾಮ್ ಪ್ರಶಸ್ತಿ ಲಭಿಸಿದೆ. ಕಲಾಕ್ಷೇತ್ರದಲ್ಲಿ ಮಾಡಿರುವ ಸಾಧನೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ 63.49 ಲಕ್ಷ ರು. (75,000 ಡಾಲರ್) ಮೊತ್ತದ್ದಾಗಿದೆ. ಅಲ್ಲದೆ, ದಿಯಾ ಆರ್ಟ್ ಫೌಂಡೇಶನ್ ವೇದಿಕೆಯಲ್ಲಿ ಅವಕಾಶ ಒದಗಿಸಿಕೊಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದೆರಡು ವರ್ಷಗಳ ಹಿಂದೆ ಅಂತಾರಾಷ್ಟಿçÃಯ ಮಟ್ಟದ ಕಲಾಸಾಧಕರಿಗೆ ಕೊಡಬೇಕೆನ್ನುವ ನಿರ್ಧಾರ ಮಾಡಿರುವ ಪೋಷಕ ಸಂಸ್ಥೆಗಳು ಇದೀಗ 2025ರ ಪ್ರಶಸ್ತಿಗೆ ಆಯ್ಕೆ ಮಾಡಿ, ಪ್ರಕಟಿಸಿದೆ. ಚೊಚ್ಚಲ ಪ್ರಶಸ್ತಿಯನ್ನು 2024ರಲ್ಲಿ ಘಾನಾ ದೇಶದ ಇಬ್ರಾಹಿಂ ಮಹಾಮಾ ಅವರಿಗೆ ನೀಡಲಾಗಿತ್ತು. ದ್ವಿತೀಯ ವರ್ಷದ ಪ್ರಶಸ್ತಿ ಶೀಲಾ ಗೌಡ ಅವರ ಮುಡಿಗೇರಿದೆ. 2023ರಲ್ಲಿ ಸ್ಯಾಮ್ ಗಿಲ್ಲಿಯಾಮ್ ಫೌಂಡೇಶನ್ ಅಧ್ಯಕ್ಷೆ ಮತ್ತು ಗಿಲ್ಲಿಯಾಮ್ ಪತ್ನಿ ಆನಿ ಗಾವ್ಲಾಕ್ ಅವರು ತಮ್ಮ ಫೌಂಡೇಶನ್ ವತಿಯಿಂದ ಈ ಪ್ರಶಸ್ತಿಯನ್ನು ಪ್ರತಿವರ್ಷ ನೀಡಬೇಕೆನ್ನುವ ನಿರ್ಧಾರ ಮಾಡಿದರು. ತದನಂತರ ಈ ಪ್ರಶಸ್ತಿಗಾಗಿ ಸಾಧಕರ ಹುಡುಕಾಟ ಪ್ರಕ್ರಿಯೆ ಆರಂಭಿಸಿದರು. ಇಬ್ರಾಹಿಂ ಈ ಪ್ರಶಸ್ತಿಗೆ ಭಾಜನರಾದ ಮೊದಲಿಗರಾದರು. 2025ರ ಪ್ರಶಸ್ತಿ ಕನ್ನಡತಿಯೊಬ್ಬರಿಗೆ ಸಂದಿರುವುದು ಕನ್ನಡಿಗರೆಲ್ಲರೂ ಖುಷಿ ಪಡುವ, ಸಂಭ್ರಮಿಸುವ ವಿಚಾರವಾಗಿದೆ.
ಶೀಲಾ ಗೌಡ ಕುರಿತು ಸಂಕ್ಷಿಪ್ತ ಪರಿಚಯ
68ವರ್ಷದ ಕ್ರಿಯಾಶೀಲ, ಸಮಕಾಲೀನ ಕಲಾವಿದೆ ಶೀಲಾ ಗೌಡ ಅವರು ಭದ್ರಾವತಿ ಮೂಲದವರು. ಬೆಂಗಳೂರಿನ ನಿವಾಸಿ. 1979ರಲ್ಲಿ ಬೆಂಗಳೂರಿನ ಕೆನ್ ಕಲಾಶಾಲೆಯಲ್ಲಿ ಕಲೆಗೆ ಸಂಬಂಧಿಸಿ ಶಿಕ್ಷಣ ಪಡೆದು, ಪದವಿ ಗಳಿಸಿಕೊಂಡರು. ಬಳಿಕ ಹೆಚ್ಚಿನ ವ್ಯಾಸಂಗಕ್ಕಾಗಿ ಭಾರತದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ವಿಶ್ವ ಭಾರತಿ ವಿವಿ, ಶಾಂತಿನಿಕೇತನಕ್ಕೆ ಪ್ರಯಾಣ ಬೆಳೆಸಿದರು. 1982ರಲ್ಲಿ ಪಿಜಿ ಪದವಿ ಪಡೆದುಕೊಂಡರು. ಇವರ ಕಲಾ ವ್ಯಾಸಂಗ ಇಷ್ಟಕ್ಕೆ ನಿಲ್ಲಲಿಲ್ಲ. ಇನ್ನೂ ಹೆಚ್ಚಿನ ವ್ಯಾಸಂಗಕ್ಕಾಗಿ ಲಂಡನ್‌ಗೆ ಪ್ರಯಾಣ ಬೆಳೆಸಿದರು. 1986ರಲ್ಲಿ ಶೀಲಾ ಗೌಡ ಅವರು ಇಲ್ಲಿನ ರಾಯಲ್ ಕಾಲೇಜ್ ಆಫ್ ಆರ್ಟ್ ನಲ್ಲಿ ಎಂಎ (MA) ಪದವಿಯನ್ನೂ ಪಡೆದುಕೊಂಡರು. ಪೇಂಟಿAಗ್‌ನಲ್ಲಿ ಕಲಾ ಶಿಕ್ಷಣ ಪಡೆದುಕೊಂಡಿದ್ದ ಶೀಲಾಗೌಡ ಅವರು ಅಷ್ಟೇ ಆಸಕ್ತಿಯಲ್ಲಿ ಶಿಲ್ಪ ಕಲಾಕೃತಿಗಳ ರಚನೆಯಲ್ಲೂ ಹೊಂದಿದ್ದರು. ತದನಂತರದ ದಿನಗಳಲ್ಲಿ ಶಿಲ್ಪ ಕಲಾಕೃತಿಗಳತ್ತ ಮುಖ ಮಾಡಿದರು. ಜತೆ ಜೊತೆಗೆ ಪ್ರತಿಷ್ಠಾಪನಾ ಕಲೆಯ ಬಗ್ಗೆಯೂ ವಿಶೇಷ ಆಸಕ್ತಿ ತೋರಿದರು. ಸಮಕಾಲೀನ ಘಟ್ಟಕ್ಕೆ ತಮ್ಮ ಆಲೋಚನೆಗಳನ್ನು ಹರಿಬಿಟ್ಟರು. ಸಾಕಷ್ಟು ಕಲಾಕೃತಿಗಳನ್ನು ರಚಿಸಿ ಮೆಚ್ಚುಗೆಗೂ ಪಾತ್ರರಾದರು.
ಕೂದಲು, ಸಗಣಿ, ಧೂಪ, ಕುಂಕುಮ ಇತ್ಯಾದಿ ಲಭ್ಯ ವಸ್ತುಗಳನ್ನು ಬಹಳ ಅದ್ಭುತವಾಗಿ ದುಡಿಸಿಕೊಂಡು ಪ್ರತಿಷ್ಠಾಪನಾ ಕಲಾಕೃತಿಗಳನ್ನು ರಚಿಸುವ ಶೀಲಾಗೌಡ ಅವರು ಕಲಾಕ್ಷೇತ್ರದ ಅತ್ಯಂತ ಅನುಭವಿಗಳಲ್ಲಿ ಒಬ್ಬರಾಗಿದ್ದಾರೆ. ‘process-orientated’ ಆಲೋಚನೆಗಳಿಂದ ಕೂಡಿರುವ ಕಲಾಕೃತಿಗಳ ರಚನೆಯಲ್ಲಿ ವಿಭಿನ್ನವಾಗಿ ತಮ್ಮ ಛಾಪು ಒತ್ತಿರುವ ಅಪರೂಪದ ಕಲಾವಿದೆಯಾಗಿದ್ದಾರೆ. ಪೋಸ್ಟ್ ಮಿನಿಮಲಿಸಂ (postminimalism) ಕಲಾಕೃತಿಗಳು ಅವರ ಇನ್ನೊಂದು ಪ್ರಕಾರದ ಕಲಾಕೃತಿಗಳಾಗಿವೆ. ಅದರಲ್ಲೂ ವಿಶೇಷವಾಗಿ ಅವರ ಕಾರ್ಮಿಕರ ಅಥವಾ ಶ್ರಮಿಕ ಜೀವಿಗಳ ಮೇಲಿನ ಪ್ರೀತಿ, ಅವರಿಂದ ಪ್ರೇರಿತರಾಗಿ ರಚಿಸಿರುವ ಕಲಾಕೃತಿಗಳು ಅನೇಕರ ಮೆಚ್ಚುಗೆಗೆ ಕಾರಣವಾಗಿವೆ.
ಶೀಲಾಗೌಡ ಅವರ ಕಲಾಕೃತಿಗಳು ದೇಶ-ವಿದೇಶಗಳ ಅನೇಕ ಗ್ಯಾಲರಿಗಳಲ್ಲಿ, ಮ್ಯೂಸಿಯಂಗಳಲ್ಲಿ ಪ್ರದರ್ಶನವಾಗಿವೆ. ಅವರ ಸಾಧನೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇದೀಗ ಇನ್ನೊಂದು ಪ್ರತಿಷ್ಠಿತ ಪ್ರಶಸ್ತಿ ಅವರ ಮುಡಿಗೇರಿದೆ. ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಭಿನಂದನೆಗಳು ಮೇಡಂ. ಇನ್ನಷ್ಟು ಪ್ರಶಸ್ತಿ, ಪುರಸ್ಕಾರಗಳು ಲಭಿಸಲಿ. ತಮ್ಮ ಕಲಾಕೃತಿಗಳಿಗೆ ಇನ್ನಷ್ಟು ಎತ್ತರದ ಗೌರವ ಲಭಿಸಲಿ.