– ಮೊದಲ ಬಾರಿಗೆ ಕರ್ನಾಟಕದಲ್ಲಿ ಇಟಲಿ ಕಲಾವಿದನ ಕಲಾಕೃತಿ ಪ್ರದರ್ಶನ
– ಎನ್ಜಿಎಂ ಗ್ಯಾಲರಿಯಲ್ಲಿ ‘ಭಾವಪರವಶಳಾದ ಮೇರಿ ಮ್ಯಾಗ್ಡಲೆನ್’ ದರ್ಶನ
ಕತ್ತಲೆಯಲ್ಲಿ ಹಾಯುವ ಬೆಳಕು, ವಾಸ್ತವಿಕತೆಗಿಂತಲೂ ದೂರವಿದೆಯೇನೋ ಎನ್ನುವಂತೆ ಭಾಸವಾಗುವ ನಾಟಕೀಯ ದೃಶ್ಯ, ಅತ್ಯಂತ ನೈಜವೆನಿಸುವ ಮುಖಭಾವ, ಕತ್ತಲೆಯಲ್ಲೇ ನಿಂತು ನೋಡುವಾಗ ಆ ಬೆಳಕು ಕೃತಕವಾಗಿ ಸೃಷ್ಟಿಸಿದ್ದು ಎಂದು ವಾದಿಸಬಹುದಾದ ಗುಣವುಳ್ಳದ್ದು… ಹೀಗೆ ವರ್ಣಿಸಲಿಳಿದರೆ ಇನ್ನೂ ಅನೇಕ ಸಂಗತಿಗಳನ್ನು ವರ್ಣಿಸಬಹುದಾದ ಕಲಾಕೃತಿ!
ವಿಲಕ್ಷಣ ಕಲಾವಿದನೆಂದೇ ಇಟಲಿಯ ಖ್ಯಾತ ಕಲಾವಿದ ಮೈಕೆಲೆಂಜಿಲೊ ಮೆರಿಸಿ ಡ ಕರವಾಜಿಯೋ ಅವರ “Mary Magdalene in Ecstasy” (ಭಾವಪರವಶಳಾದ ಮೇರಿ ಮ್ಯಾಗ್ಡಲೆನ್) ಶೀರ್ಷಿಕೆಯ ಪ್ರಸಿದ್ಧ ಕಲಾಕೃತಿ ಈಗ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿದೆ. ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನಲ್ಲಿ ತೈಲವರ್ಣದ, 103.5 ಸೆಂಟಿ ಮೀಟರ್ 91.5 ಸೆಂಟಿ ಮೀಟರ್ ಅಳತೆಯ ಈ ಕಲಾಕೃತಿಯನ್ನು ಇದೇ ಮೊದಲ ಬಾರಿಗೆ ಪ್ರದರ್ಶನಕ್ಕಿಡಲಾಗಿದೆ. ಕರ್ನಾಟಕದ ಇತಿಹಾಸದಲ್ಲಿಯೆ ಇದೇ ಮೊದಲ ಬಾರಿಗೆ ಇಟಲಿಯ ಕಲಾವಿದರೊಬ್ಬರ ಕಲಾಕೃತಿಯನ್ನು ಭಾರತಕ್ಕೆ ತಂದು ಪ್ರದರ್ಶಿಸಲಾಗಿದೆ. ಸಾಕಷ್ಟು ಬೆಲೆ ಬಾಳುವ ಕಲಾಕೃತಿ ಇದಾಗಿದ್ದರಿಂದ ಪೊಲೀಸ್ ಭದ್ರತೆ ನೀಡಲಾಗಿದೆ.
1606ರಲ್ಲಿ ರಚಿಸಲ್ಪಟ್ಟಿರುವ ಈ ಕಲಾಕೃತಿ 2014ರಲ್ಲಿ ಖಾಸಗಿ ಸಂಗ್ರಾಹಕರೊಬ್ಬರಿAದ ಪತ್ತೆ ಮಾಡಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದಕ್ಕೂ ಪೂರ್ವದಲ್ಲಿ ಈ ಕಲಾಕೃತಿಯ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ, ಕೆಲವೇ ಕೆಲವು ಕಲಾ ಇತಿಹಾಸಕಾರರು ಮತ್ತು ಕರವಾಜಿಯೋ ಅವರೊಂದಿಗೆ ಒಡನಾಟದಲ್ಲಿದ್ದವರು ಮಾತ್ರ ಮಾಹಿತಿ ಹೊಂದಿದ್ದರು. ಮೊದಲೇ ಹೇಳಿದಂತೆ ಕರವಾಜಿಯೋ ಒಬ್ಬ ವಿಲಕ್ಷಣ ವಾದಿಯೆ. ಈ ಕಲಾಕೃತಿ ರಚಿಸುವುದಕ್ಕೂ ಮೊದಲು ಕರವಾಜಿಯೋ ತನ್ನದೆ ವೃತ್ತಿ ಬಾಂಧವ ರನುಸಿಯೊ ಟೊಮಾಸೋನಿಯನ್ ಎಂಬಾತನನ್ನು ಕೊಂದು ವಿಲನ್ ಆಗಿಬಿಟ್ಟಿದ್ದ. ರೋಮ್ನಲ್ಲಿ ಎಲ್ಲರೂ ಕರವಾಜಿಯೋನನ್ನು ಕೊಲೆಗಾರನಾಗಿಯೆ ನೋಡುವ, ಆಡಿಕೊಳ್ಳುವ ವಾತಾವರಣ ಸೃಷ್ಟಿಸಿಕೊಂಡಿದ್ದ. ಈ ಘಟನೆಯ ಬಳಿಕ ರಚಿಸಿದ ಕಲಾಕೃತಿ ಇದು ಎಂದು ಹೇಳಲಾಗುತ್ತದೆ. ಅಷ್ಟಕ್ಕೂ ಯಾವ ಕಾರಣಕ್ಕಾಗಿ ಕೊಂದಿದ್ದು ಎಂದು ಹುಡುಕಾಡಿದರೆ ಸಿಗುವ ಕಾರಣ ಇಷ್ಟೆ, ಟೆನಿಸ್ ಆಟದ ವೇಳೆಯಲ್ಲಿ ಇಬ್ಬರ ನಡುವೆ ಬೆಟ್ಟಿಂಗ್ ನಡೆದಿತ್ತು. ಬಳಿಕ ಇದು ಜಗಳಕ್ಕೆ ತಿರುಗಿಕೊಂಡಿತ್ತು. ತುಸು ಮುಂಗೋಪಿ ಆಗಿದ್ದ ಕರವಾಜಿಯೋ ಏಕಾಏಕಿ ಕೊಲೆ ಮಾಡಿ ಬಂಧನಕ್ಕೊಳಗಾಗುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದ. ಈ ಘಟನೆಯಿಂದ ಗಾಬರಿಯಾಗಿದ್ದ ಕರವಾಜಿಯೋ ಅಲ್ಲೇ ಇದ್ದಿದ್ದರೆ ಬಹುಶಃ ಮರಣದಂಡನೆಗೆ ಗುರಿಯಾಗಬೇಕಿತ್ತು. ಇದನ್ನೆಲ್ಲಾ ಅರಿತ ಕರವಾಜಿಯೋ ಇದೇ ಕಾರಣಕ್ಕಾಗಿಯೆ 1952ರಿಂದ ಇದ್ದ ಊರನ್ನೇ ತ್ಯಜಿಸಿ ಯಾರ ಕೈಗೂ ಸಿಗದಂತಹ ಸ್ಥಳಕ್ಕೆ ಪರಾರಿಯಾಗಿದ್ದ. ಇಟಲಿಯ ಕೊಲೊನ್ನಾ ಮನೆತನಕ್ಕೆ ಸೇರಿದ ಎಸ್ಟೇಟ್ ಒಂದರಲ್ಲಿ ತಲೆಮರೆಸಿಕೊಂಡಿದ್ದ. ಇಷ್ಟಾದರೂ ಕರವಾಜಿಯೋ ಕಲಾಕೃತಿಗಳನ್ನು ರಚಿಸುವ ಗೀಳು ನಿಲ್ಲಿಸಿರಲಿಲ್ಲ. ಈ ಅವಧಿಯಲ್ಲಿ ಮೇರಿ ಮ್ಯಾಗ್ಡಲೆನ್ ಸೇರಿದಂತೆ ಇನ್ನೂ ಕೆಲ ಕಲಾಕೃತಿಗಳನ್ನು ಪೂರ್ಣಗೊಳಿಸಿದರು ಎನ್ನುವುದು ಇತಿಹಾಸ. ಈ ಸಂದರ್ಭದಲ್ಲಿ ಒಂದಿಷ್ಟು ದಿನಗಳನ್ನು ಮಾಲ್ಟಾ ಮತ್ತು ಸಿಸಿಲಿ ದ್ವೀಪಗಳಲ್ಲಿ ಕಳೆದರು ಎನ್ನಲಾಗುತ್ತದೆ. ಇಂತಹ ಪ್ರಳಯಾಂತಕ ಕಲಾವಿದ ಕರವಾಜಿಯೋ.
ಟೆನೆಬ್ರಿಸಂ ಶೈಲಿ ಅಥವಾ ಪಂಥದ ರೂವಾರಿಗಳೆನ್ನುವಂತೆ ಕಲಾಕೃತಿಗಳನ್ನು ರಚಿಸಿ ಖ್ಯಾತನಾಗಿದ್ದ ಕರವಾಜಿಯೋ ತಮ್ಮ ಜೀವಿತಾವಧಿಯ ಬಹುತೇಕ ಕಲಾಕೃತಿಗಳನ್ನು ಈ ಶೈಲಿಯಲ್ಲೇ ರಚಿಸಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಪ್ರದರ್ಶನ ಕಂಡಿರುವ ಕಲಾಕೃತಿ ಕೂಡ ಇದೇ ಸಿದ್ಧಾಂತದ ತಳಹದಿಯ ಮೇಲೆ ರಚಿಸಲ್ಪಟ್ಟಿರುವಂತದ್ದು. ಮಹಿಳೆಯ ಉಡುಪುಗಳ ಮೇಲಿನ ನೆರಳು ಬೆಳಕಿನ ವೈಖರಿ, ಮಹಿಳೆಯ ಮುಖದಲ್ಲಿ ಕಾಣಬಹುದಾದ ದುಃಖತಪ್ತ ಮತ್ತು ಬಳಲಿಕೆಯ ಭಾವ ವಾಸ್ತವಿಕತೆಗೆ ಹತ್ತಿರದಲ್ಲಿರುವಂತೆ ಚಿತ್ರಿಸಿದ್ದಾರೆ. ಅಲ್ಲಿಯೂ ಬೆಳಕು ಒಂದು ಶಕ್ತಿಯಾಗಿ ಆಕೆಯ ದೇಹದ ಮೇಲೆ ಚಿಮ್ಮಿರುವುದನ್ನು ಸೊಗಸಾಗಿ ತೋರಿಸಿದ್ದಾರೆ. ಕರವಾಜಿಯೋ ಅವರ ಅನೇಕ ಕಲಾಕೃತಿಗಳಲ್ಲಿ ಈ ವಿಶೇಷತೆಯನ್ನು ಕಾಣಬಹುದಾಗಿದೆ.
ಇಂತಹ ಕಲಾಕೃತಿಯೊಂದರ ಎದುರುನಿಂತು ನೋಡುವ ಅವಕಾಶ ಇದೀಗ ಕನ್ನಡಿಗರಿಗೆ ಲಭ್ಯವಾಗಿದೆ. ಇಟಲಿಯ ಲೊಂಬಾರ್ಡಿ ಎಂಬಲ್ಲಿ ಜನಿಸಿದ ಕರವಾಜಿಯೋ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಹೀಗಾಗಿ 1592ರಲ್ಲಿ, ತಮ್ಮ 21ನೇ ವಯಸ್ಸಿನಲ್ಲಿ ಚಿತ್ರಕಲೆಯ ಅಧ್ಯಯನಕ್ಕಾಗಿ ರೋಮ್ಗೆ ತೆರಳಿದ್ದರು. ಆರಂಭದಲ್ಲಿ ಸ್ಟಿಲ್ಲೈಫ್ ಕಲಾಕೃತಿಗಳನ್ನು ರಚಿಸಿ ಅನೇಕರಿಂದ ಶಹಬ್ಬಾಸ್ ಅನಿಸಿಕೊಂಡಿದ್ದರು. 1595ರಲ್ಲಿ ಇವರ ಅದೃಷ್ಟ ಬದಲಾಯಿತು. ಕರವಾಜಿಯೋ ಪ್ರತಿಭೆಯನ್ನು ಗುರುತಿಸಿದ ಖ್ಯಾತ ಕಾರ್ಡಿನಲ್, ಕಲಾ ತಜ್ಞ ಫ್ರಾನ್ಸೆಸ್ಕೊ ಡೆಲ್ ಮಾಂಟೆ ತಮ್ಮ ಮನೆಗೆ ಕರೆದೊಯ್ದು, ಪರಿಚಯಸ್ಥರಿಗೆ ಹೇಳಿ ಪ್ರೋತ್ಸಾಹಿಸಿದರು. ಇವರೆಲ್ಲರ ಸಹಕಾರದಿಂದ ತಮ್ಮ ಮೊದಲ ಕಲಾಪ್ರದರ್ಶನ ಆಯೋಜಿಸಿ ರಾತ್ರಿ ಬೆಳಗಾಗುವಷ್ಟರಲ್ಲಿ ಜನಪ್ರಿಯತೆ ಗಳಿಸಿಕೊಂಡರು. ಹೀಗೆ ಅನೇಕ ಏಳು-ಬೀಳುಗಳನ್ನು ಕಂಡಿರುವ ಕರವಾಜಿಯೋ ಚಿತ್ರಕಲೆಯಲ್ಲಿ ಅತ್ಯಂತ ಹಿಡಿತ ಸಾಧಿಸಿದ್ದರು. ಕಲಾಕೃತಿ ರಚಿಸುವ ವೇಗ ಅಂದು ರೋಮ್ನಲ್ಲಿನ ಅನೇಕ ಕಲಾವಿದರ ನಿದ್ದೆಗೆಡಿಸಿತ್ತು. ಆಸಕ್ತಿದಾಯಕ ವಿಚಾರವೇನೆಂದರೆ ಕರವಾಜಿಯೋ ಅಪರಾಧವೆಸಗಿದ್ದು ಒಂದೆರಡು ಬಾರಿಯಲ್ಲ. ಅನೇಕ ಬಾರಿ ಅಪರಾಧವೆಸಗಿ ಬಂಧನವಾಗಿ, ವಿಚಾರಣೆಗೊಳಪ್ಪಟ್ಟ ಬಗ್ಗೆ ಇತಿಹಾಸ ಹೇಳುತ್ತದೆ. ಕರವಾಜಿಯೋ ಹಿನ್ನೆಲೆ ಅತ್ಯಂತ ರೋಚಕತೆಯಿಂದ ಕೂಡಿದೆ. ಕತ್ತಿಯನ್ನು ಇಟ್ಟುಕೊಂಡು ಸಾರ್ವಜನಿಕವಾಗಿ ಹಲ್ಲೆ ಮಾಡಿರುವ ಕಾರಣಕ್ಕಾಗಿ ವಿಚಾರಣೆಗೆ ಒಳಪಟ್ಟಿರುವುದೆನ್ನ ಗಮನಿಸಿ ಕ್ರಿಮಿನಲ್ ಕಲಾವಿದ ಎಂದೆಲ್ಲಾ ಲೇವಡಿ ಮಾಡಿದ್ದುಂಟು ಎನ್ನುತ್ತವೆ ಅನೇಕ ಪುರಾವೆಗಳು.
ಕ್ರಾಂತಿಕಾರಿ ಕಲಾಕೃತಿಗಳೊಂದಿಗೆ ಖ್ಯಾತಿ ಗಳಿಸಿರುವ ಕರವಾಜಿಯೋ ಅಂತ್ಯವೂ ನಿಗೂಢವಾಗಿಯೇ ನಡೆದುಹೋಗಿದೆ. ಈ ಬಗ್ಗೆ ಅನೇಕ ಸಂಶೋಧನೆಗಳೂ ನಡೆದಿವೆ. 1571ರಲ್ಲಿ ಜನಿಸಿ 1610ರಲ್ಲಿ ನಿಧನರಾಗಿ, ಈ ಅಲ್ಪಾವಧಿಯಲ್ಲೇ ಸಾಕಷ್ಟು ಕಲಾಕೃತಿಗಳನ್ನು ರಚಿಸಿರುವ ಕರವಾಜಿಯೋ ಒಬ್ಬ ವಿಶ್ವ ವಿಖ್ಯಾತ ಕಲಾವಿದರೆನಿಸಿಕೊಂಡಿದ್ದಾರೆ. Judith Beheading Holofernes, The Calling of Saint Matthew, Narcissus, The Cardsharps, The Beheading of Saint John the Baptist, Boy Bitten by a Lizard, The Raising of Lazarus ಇವೆಲ್ಲವೂ ಕರವಾಜಿಯೋ ರಚಿಸಿರುವ ಪ್ರಸಿದ್ಧ ಕಲಾಕೃತಿಗಳಾಗಿವೆ.
ಜುಲೈ 6ರ ತನಕ Mary Magdalen in Ecstasy ಕಲಾಕೃತಿ ಬೆಂಗಳೂರಿನಲ್ಲಿ ವೀಕ್ಷಣೆಗೆ ಲಭ್ಯವಿರಲಿದೆ.
