ಅಯ್ಯೋ ಈ ತಿಂಗಳ “ಚಂದಮಾಮ” ಸಿಕ್ಕಿಲ್ವಲ್ಲ. ಅಯ್ಯೋ ಕಳೆದ ತಿಂಗಳ “ಚಂದಮಾಮ” ಓದಲು ಆಗಿಲ್ವಲ್ಲ…
ಹೀಗೆ ನಾವು ಬೆಳೆದುಬಂದ ಹಳ್ಳಿಗಳಲ್ಲಿ ಒಂದೊಂದು ಪ್ರತಿಗಾಗಿಯೂ ಪರದಾಡುತ್ತಿದ್ದ ಆ ದಿನಗಳ ಒಂದೊಂದು ಘಟನೆಗಳೂ ಈಗ ಕಣ್ಮುಂದೆ ಬಂದು ಹೋಗುತ್ತವೆ.
ಪ್ರತಿ ತಿಂಗಳು “ಚಂದಮಾಮ” ಉಣಬಡಿಸುತ್ತಿದ್ದ ರಾಜಾ ವಿಕ್ರಮ ಮತ್ತು ಬೇತಾಳನ ಕಥೆಗಳ ದೃಶ್ಯಗಳನ್ನು ಬಹಳ ಅರ್ಥಪೂರ್ಣವಾಗಿ ಮೂಡಿಬರುತ್ತಿದ್ದ ಆ ರೇಖೆಗಳನ್ನು ನೋಡುವುದೇ ಒಂದು ಖುಷಿ. ಒಂದೊಂದು ಚಿತ್ರಗಳ ಜತೆ ಜೊತೆಗೇ ಕಥೆ ಪೂರ್ತಿ ಓದಿ ಮುಗಿದಿರುತ್ತಿತ್ತು. ಶಾಲಾ ಪಠ್ಯ ಓದಲು ಮರೆತರೂ “ಚಂದಮಾಮ” ಓದಲು ಮಾತ್ರ ಯಾರೂ ಮರೆಯುತ್ತಿರಲಿಲ್ಲ. ಎರಡ್ಮೂರು ತಿಂಗಳ, ಅಷ್ಟೇ ಏಕೆ ನಾಲ್ಕಾರು ತಿಂಗಳಿನ ಪತ್ರಿಕೆಗಳನ್ನೆಲ್ಲ ಒಟ್ಟೊಟ್ಟಿಗೇ ತಂದು ತೃಪ್ತಿಯಾಗುವಷ್ಟು ಸಲ ಪುಟ ಮಗುಚಿದ ದಿನಗಳೂ ಇವೆ. ಇದಕ್ಕೆ ಕಾರಣ ಅದರೊಳಗಿನ ಚಿತ್ರಗಳು. ಆ ಚಿತ್ರದೊಳಗಿನ ಮೋಡಿ ಮಾಡುವ ರೇಖೆಗಳು. ಆ ರೇಖೆಗಳಲ್ಲಿರುವ ಜೀವಾಳ ಎಂಥವರನ್ನೂ ಒಮ್ಮೆ ಹಿಡಿದು ನಿಲ್ಲಿಸುತಿದ್ದವು.
ನನಗೆ ಈಗಲೂ ನೆನಪಿದೆ, ಓದಿನ ಹುಚ್ಚು ಬೆಳೆಸಿಕೊಂಡ ನಮ್ಮೂರಿನ ಅದೆಷ್ಟೋ ತಾತಂದಿರೂ “ಚಂದಮಾಮ” ಓದುವುದನ್ನು ರೂಢಿಸಿಕೊಂಡಿದ್ದರು. ತಾವು ಓದುವುದರ ಜೊತೆಗೇ ಮೊಮ್ಮಕ್ಕಳಿಗೆ ಕಥೆ ಹೇಳಿ ಬೇತಾಳನ ಲೋಕಕ್ಕೆ ಕರೆದೊಯ್ಯುತ್ತಿದ್ದರು. ಇನ್ನೂ ಒಂದು ಸಂಗತಿ ಹೇಳಿ ಬಿಡುತ್ತೇನೆ. ಪ್ರತಿದಿನ ಸಾಯಂಕಾಲ ಮಗ್ಗಿ ಪುಸ್ತಕ ಓದುವುದಕ್ಕೂ ಮೊದಲ ವಿಕ್ರಮ ಮತ್ತು ಬೇತಾಳನ ಕಥೆಗಳನ್ನು ಓದಾಗಿರುತ್ತಿತ್ತು. ಸ್ಕೂಲ್ ಬ್ಯಾಗ್‍ನಲ್ಲಿ ಅಂದಿನ ಪಾಠದ ಪಠ್ಯಪುಸ್ತಕ ಮರೆತರೂ ಒಂದು “ಚಂದಮಾಮ” ಹಾಕಿಕೊಳ್ಳುವುದನ್ನು ಮರೆಯುತ್ತಿರಲಿಲ್ಲ. “ಚಂದಮಾಮ”ನ ನಂಟು ಇಷ್ಟೇ ಅಲ್ಲ, “ಚಂದಮಾಮ” ಚಂದಾದಾರರಾಗಿದ್ದ ಅದೆಷ್ಟೋ ಮನೆಗಳಲ್ಲಿ ಮೂರ್ನಾಲ್ಕು ವರ್ಷಗಳ ಸಂಚಿಕೆ ಹಾಗೇ ಇರುತ್ತಿದ್ದವು. ಯಾವುದೇ ಕಾರಣಕ್ಕೂ ರದ್ದಿ ಎಂದು ಬಿಸಾಡಿದ ಉದಾಹರಣೆಗಳು ಬಹಳ ಕಡಿಮೆ. ಕಾರಣ ಊರಿನ ಇನ್ನಾರೋ ಅದನ್ನು ಕೊಂಡೊಯ್ದು ಓದುತ್ತಾರೆ ಎಂದು ಕಾಪಿಟ್ಟುಕೊಳ್ಳುತ್ತಿದ್ದರು.
ಬಾಲ್ಯದ ಜತೆ ಜೊತೆಗೇ “ಚಂದಮಾಮ” ಹಿಡಿದು ಬೆಳೆದು ಬಂದ ನಮಗೆ ಈಗ ಮತ್ತೆ ಇವೆಲ್ಲವೂ ನೆನಪಾಗಲು ಕಾರಣ ಅಂದು ತಮ್ಮ ರೇಖೆಗಳಿಂದ ಸಹಸ್ರಾರು ಮಕ್ಕಳನ್ನು ಓದಿಗೆ ಹಚ್ಚುವಂತೆ ಮಾಡಿದ್ದ ಮೋಡಿಗಾರ, ಕಲಾವಿದ ಕರಥೋಲುವು ಚಂದ್ರಶೇಖರನ್ ಶಿವಶಂಕರನ್ (ಕೆ.ಸಿ.ಶಿವಶಂಕರ್) ಇನ್ನಿಲ್ಲ. 97 ವರ್ಷ ವಯಸ್ಸಿನ ಶಿವಶಂಕರನ್ ನಮ್ಮನ್ನೆಲ್ಲಾ ಅಗಲಿದ್ದಾರೆ. ವಯೋಸಹಜ ಅನಾರೋಗ್ಯದಿಂದಾಗಿ ಇಹಲೋಕ ತ್ಯಜಿಸಿದ್ದಾರೆ. ಶಂಕರ್ ಎಂದೇ ಗುರುತಿಸಿಕೊಂಡಿದ್ದ ಶಿವಶಂಕರನ್ ನನ್ನಂತಹ ಸಾವಿರಾರು ಯುವಕರನ್ನು ರೇಖೆಗಳತ್ತ ಸೆಳೆದವರು. ಶಂಕರ್ ಎಂಬ ಕಲಾವಿದರ ಬಗ್ಗೆ ಗೊತ್ತಿಲ್ಲದೇ ಇದ್ದರೂ, ಅವರು ಬರೆದಂತೆ ಚಿತ್ರಗಳನ್ನು ಬರೆಯಬೇಕೆಂದು ಕನಸುಕಂಡವರು ಸಾವಿರಾರು ಮಂದಿ ಸಿಗುತ್ತಾರೆ. ವಿಕ್ರಮ ಮತ್ತು ಬೇತಾಳನ ಸಾಹಸಮಯ ಕಥೆಗಳಿಂದ ಬೆರಗಾಗುವಂತೆ ಮಾಡಿ ಬಾಲ್ಯವನ್ನು ಸಹ್ಯಗೊಳಿಸಿದವರು ಶಿವಶಂಕರನ್.
“ಚಂದಮಾಮ” ಸಂಸ್ಥಾಪಕ
ತಂಡದ ಕಡೇ ಸದಸ್ಯ!
ಹೌದು, 1947ರಲ್ಲಿ ತೆಲಗು ಭಾಷೆಯಲ್ಲಿ ಆರಂಭವಾದ ಚಂದಮಾಮ ತಂಡದ ಸದಸ್ಯರಲ್ಲೊಬ್ಬರಾಗಿದ್ದರು ಶಿವಶಂಕರನ್. ಅಚ್ಚರಿ ಎಂದರೆ ಅಂದು ಚಂದಮಾಮ ಆರಂಭಿಸಿದ ತಂಡದ ಸದಸ್ಯರುಗಳಲ್ಲಿ ಶಿವಶಂಕರನ್ ಹೆಚ್ಚು ದಿನ ಬದುಕುಳಿದು ಸೆ.29ರಂದು ನಮ್ಮನ್ನಗಲಿದ್ದಾರೆ. ಶಿವಶಂಕರನ್ ಅವರು ತಮಿಳುನಾಡಿನ ಈರೋಡ್‍ನವರು. ಇವರ ತಂದೆ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ತಾಯಿ ಮನೆ ನಿರ್ವಹಣೆಯಲ್ಲೇ ಬ್ಯೂಸಿಯಾಗಿರುತ್ತಿದ್ದರು. ಬಾಲ್ಯದಲ್ಲೇ ಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಶಿವಶಂಕರನ್ ಅವರು ಐತಿಹಾಸಿಕ ಕ್ಷೇತ್ರಗಳನ್ನು ರೇಖೆಗಳಲ್ಲಿ ಮೂಡಿಸುವ ಹವ್ಯಾಸ ಬೆಳೆಸಿಕೊಂಡಿದ್ದರು. ಆದರೆ ಅವರ ಈ ಹವ್ಯಾಸಕ್ಕೆ ಮನೆಯಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗಲಿಲ್ಲ. ಆದರೆ ಇದನ್ನು ಗಮನಿಸಿದ್ದ ಡ್ರಾಯಿಂಗ್ ಶಿಕ್ಷಕರು ಬೆನ್ನು ತಟ್ಟುತ್ತಿದ್ದರು. 12ನೇ ತರಗತಿ ಪೂರ್ಣಗೊಳಿಸುವವರೆಗೂ ಹೀಗೆ ಮುಂದುವರಿದಿತ್ತು. ಬಳಿಕ 1941ರಲ್ಲಿ ಚೆನ್ನೈನ ಸರ್ಕಾರಿ ಚಿತ್ರಕಲಾ ಕಾಲೇಜಿಗೆ ಸೇರಿಕೊಂಡರು. ಕಾಲೇಜು ಶಿಕ್ಷಣ ಮುಗಿಸಿದ ಬೆನ್ನಲ್ಲೇ ಕಲೈಮಗಲ್ ತಮಿಳು ಪತ್ರಿಕೆಯಲ್ಲಿ ಕಲಾವಿದರಾಗಿಯೇ ಸೇರಿಕೊಂಡರು. ಸದ್ಯ ಶಿವಶಂಕರನ್ ಅವರ ಕುಟುಂಬ ಚೆನ್ನೈನಲ್ಲಿ ವಾಸವಿದ್ದು, ಪತ್ನಿ ಗಿರಿಜಾ ಮತ್ತು ನಾಲ್ವರು ಗಂಡು, ಒಬ್ಬ ಮಗಳನ್ನು ಅಗಲಿದ್ದಾರೆ. ಇಬ್ಬರು ಮಕ್ಕಳು ದೇಶದಲ್ಲಿ ನೆಲೆಸಿದ್ದಾರೆ.
(ಅಪ್‍ಡೇಟ್ ಆಗಲಿದೆ)