-
ಶತಮಾನೋತ್ಸವ ಹಿನ್ನೆಲೆಯಲ್ಲಿ ಕಲಾಪ್ರದರ್ಶನ
-
ಹಿರಿಯ ಕಲಾವಿದಗೆ ಚಿತ್ರಕಲಾ ಪರಿಷತ್ ಗೌರವ
“Practice what you know, and it will help to make clear what now you do not know.”
ಜಗತ್ಪ್ರಸಿದ್ಧ ಡಚ್ ಕಲಾವಿದ ರೆಂಬ್ರಾಂಟ್(Rembrandt) ನುಡಿಮುತ್ತು ಇದು. ನಮಗೆ ಏನು ಗೊತ್ತಿರುತ್ತೋ ಅದನ್ನೇ ಅಭ್ಯಾಸವಾಗಿ ಮುಂದುವರಿಸಿಕೊಂಡು ಹೋಗಬೇಕು. ಆಗ ಗೊತ್ತಿಲ್ಲದ ಸಂಗತಿಗಳ ಬಗ್ಗೆ ಸ್ಪಷ್ಟತೆ(clarity) ಸಿಗಲು ಸಾಧ್ಯ. ಈ ಮೂಲಕ ಗೊತ್ತಿಲ್ಲದ್ದನ್ನು ಗೊತ್ತು ಮಾಡಿಕೊಳ್ಳಲು ಸಹಕಾರಿ ಎನ್ನುತ್ತಾರೆ ಈ ಮಹಾನ್ ಕಲಾವಿದ.
ಗಾಢವಾದ ಪರಿಣಾಮ ಬೀರಬಲ್ಲ ರೆಂಬ್ರಾಂಟ್ ಸಾಲುಗಳನ್ನು ಈಗ ಮೆಲುಕು ಹಾಕಿಕೊಳ್ಳಲು ಬಲವಾದ ಕಾರಣವಿದೆ.
19ನೇ ಶತಮಾನದ (19th century) ಕಲಾಪಂಥವೊಂದರ ಪ್ರಭಾವಕ್ಕೊಳಗಾದ ಭಾರತೀಯ ಹಿರಿಯ ಕಲಾವಿದ ಎಂ. ಎಸ್. ಚಂದ್ರಶೇಖರ್ ಅವರ 150ಕ್ಕೂ ಹೆಚ್ಚು ಕಲಾಕೃತಿಗಳು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಗಳಲ್ಲಿ ಪ್ರದರ್ಶಿಸಲ್ಪಟ್ಟಿವೆ. ಶತಮಾನೋತ್ಸವದ (century celebration) ಹಿನ್ನೆಲೆಯಲ್ಲಿ ಚಂದ್ರಶೇಖರ್ ಅವರ ಕಲಾಕೃತಿಗಳ ” Eternal Echoes ” ಪ್ರದರ್ಶನವನ್ನು ಕುಟುಂಬ ವರ್ಗದವರ ಸಹಕಾರದೊಂದಿಗೆ ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜಿಸಿದೆ.
| ಎಂ.ಎಸ್. ಚಂದ್ರಶೇಖರ್ ಕಲಾ’ಯಾನ’ |
ಸ್ವಾತಂತ್ರ್ಯಾ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಭಾರತೀಯ ಕಲಾಕ್ಷೇತ್ರದಲ್ಲಾದ ಬದಲಾವಣೆಯ ದಿಕ್ಕು ಲೆಕ್ಕಿಸದೇ ತಮ್ಮದೇ ಮಾರ್ಗದಲ್ಲಿ ಸಾಗಿಬಂದವರು ಎಂ.ಎಸ್. ಚಂದ್ರಶೇಖರ್. ತಮ್ಮ ಕಾಲಘಟ್ಟದ ಅಕಾಡೆಮಿಕ್ (academic) ಸಿದ್ಧ ನಿಯಮಗಳನ್ನು ಹಿಂಬಾಲಿಸುತ್ತಲೇ ನಿಸರ್ಗ ಚಿತ್ರಣ(landscape)ದಲ್ಲಿ ಹಿಡಿತ ಸಾಧಿಸಿದ ಹಾಗೂ ಹೆಚ್ಚಿನ ಒಲವು ಹೊಂದಿದ್ದ ಕಲಾವಿದರ ಸಾಲಿಗೆ ಸೇರಿದವರು.
ಚಂದ್ರಶೇಖರ್ ಅವರ ಕಲಾಕೃತಿಗಳನ್ನು ಗಮನಿಸಿದಾಗ ಅವರೊಳಗೊಬ್ಬ ಇಂಪ್ರೆಷನಿಸ್ಟ್ (impressionist) ಅರ್ಥಾತ್ ಚಿತ್ತಪ್ರಭಾವ ನಿರೂಪಕ ಇದ್ದ ಎನ್ನುವುದು ಸ್ಪಷ್ಟವಾಗಿ ಹೇಳಬಹುದು. ಅವರ ಪ್ರತಿಪಾದನೆಯ ಅನೇಕ ಅಂಶಗಳನ್ನು ಕಲಾಕೃತಿಗಳಲ್ಲಿ ಕಾಣಲುಸಾಧ್ಯವಿದೆ. ಅಷ್ಟೇ ಅಲ್ಲ, ಪಾಯಿಂಟಲಿಸಂ (pointillism) ಕಲಾವಿದರ ತಂತ್ರಗಾರಿಕೆಯನ್ನು ಬಹಳ ಚೆನ್ನಾಗಿ ಮೈಗೂಡಿಸಿಕೊಂಡಿದ್ದರು. ನಿಸರ್ಗ ಚಿತ್ರಣದ ಸಾಕಷ್ಟು ಕಲಾಕೃತಿಗಳಲ್ಲಿ ಈ ಪ್ರಭಾವವಿದೆ. ಇನ್ನು ಕೆಲ ಕಲಾಕೃತಿಗಳಲ್ಲಿ ಕುಂಚದ ಬೀಸು (brush stroke) ಉಳಿಸಿಕೊಳ್ಳುವ ಪ್ರಯೋಗಾತ್ಮಕ ತಂತ್ರಗಾರಿಕೆ ಕಲಾಪ್ರಿಯರ ಕಣ್ಣಿಗೆ ಹಬ್ಬ. ವಿಶೇಷವಾಗಿ ಜಲವರ್ಣ ಮತ್ತು ತೈಲವರ್ಣದಲ್ಲಿ ಹಿಡಿತ ಕಂಡುಕೊಂಡಿದ್ದ ಚಂದ್ರಶೇಖರ್ ಅವರ ನೆರಳು-ಬೆಳಕಿನ ಸಮತೋಲನ ಈಗಲೂ ಕಲಾಕೃತಿಗಳನ್ನು ಜೀವಂತವಾಗಿರಿಸಿದೆ.
| ಅಜಂತ ಭಿತ್ತಿಚಿತ್ರಗಳ ಮರುಸೃಷ್ಟಿ |
ಕೇಂದ್ರ ಸರ್ಕಾರದ ನಿಯೋಜನೆ ಮೇರೆಗೆ ಚಂದ್ರಶೇಖರ್ ಅವರು 25 ವರ್ಷಗಳ ಕಾಲ ಅಜಂತದಲ್ಲಿಯೇ ನೆಲೆಸಿದ್ದರು. ಅಜಂತ ಗುಹಾಲಯಗಳಲ್ಲಿನ ಗೋಡೆಗಳ ಮೇಲಿರುವ ಭಿತ್ತಿಚಿತ್ರಗಳನ್ನು ಅದೇ ಅಳತೆಯಲ್ಲಿ ಮರುಸೃಷ್ಟಿ (reproduction) ಮಾಡಿದ್ದಾರೆ. ಈ ಅನುಭವ, ಪ್ರಭಾವ ಅವರ ಮೇಲೆ ಸಾಕಷ್ಟು ಆಗಿತ್ತು ಎನ್ನುವುದಕ್ಕೆ ಅವರ ಅಜಂತ ಸರಣಿ ಚಿತ್ರಗಳು ಸಾಕ್ಷಿಯಾಗಿವೆ. 25ಕ್ಕೂ ಹೆಚ್ಚು ಅಜಂತ ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ. ಈ ಕಲಾಕೃತಿಗಳ ರಚನೆಯಲ್ಲೂ ಮೈವಳಿಕೆ(texture) ಗಮನ ಸೆಳೆಯುತ್ತವೆ. ಪಾಯಿಂಟಲಿಸಂ ತಂತ್ರಗಾರಿಕೆಯ ಲಕ್ಷಣ ಈ ಕಲಾಕೃತಿಗಳಲ್ಲಿವೆ.
Toilet scene 1 & 2, Blind Drummer, Flying Ghandharvas 1 ಮತ್ತು 2, Mahamaya,
Yeshodhara, Vajrapani, Bodhisattva Vajrapani, Devotee 1 & 2 ಇತ್ಯಾದಿ ಕಲಾಕೃತಿಗಳು ಮನಸ್ಸಿನಲ್ಲಿ ಉಳಿಯಬಲ್ಲವು.
Flying Gandharvas ಶೀರ್ಷಿಕೆಯ ಕಲಾಕೃತಿಯೊಂದು ಆಧುನಿಕ ಮತ್ತು ಸಮಕಾಲೀನ ಕಲಾ ಪ್ರಕಾರಗಳಲ್ಲಿನ ನಿರ್ವಹಣೆಗೆ ಏನೂ ಕಡಿಮೆ? ಎನ್ನುವಷ್ಟರ ಮಟ್ಟಿಗೆ ವಿಭಿನ್ನವಾಗಿ ರಚಿಸಿದ್ದಾರೆ. ಅವರ ಈ ಸರಣಿ ಕಲಾಕೃತಿಗಳನ್ನು ವೀಕ್ಷಿಸಿದಾಗ ಅಜಂತ ಗುಹೆಗಳಲ್ಲೇ ಮರುಸೃಷ್ಟಿ ಮಾಡಿರುವ ಕಲಾಕೃತಿಗಳನ್ನು ನೋಡುವ ತವಕ ಹೆಚ್ಚಿಸುತ್ತವೆ.
| ಅಭಿನಂದನೀಯ ಕಾರ್ಯ |
ಚಂದ್ರಶೇಖರ್ ಅವರ ಪತ್ನಿ ಸುನಂದಾ ಚಂದ್ರಶೇಖರ್ ಅವರು ಹಾಗೂ ಪುತ್ರ ಬಾಲಮುರಳಿ ಚಂದ್ರಶೇಖರ್, ಪುತ್ರಿಯರಾದ ಶಾರದಾ ಮಂಜುನಾಥ್ ಮತ್ತು ಶೈಲಜಾ ರಮೇಶ್ ಅವರು ಈ ಎಲ್ಲಾ ಕಲಾಕೃತಿಗಳನ್ನು ಕಾಪಿಟ್ಟುಕೊಂಡು ಬಂದಿದ್ದರಿಂದಾಗಿ ನಾವಿಂದು ಇಷ್ಟೊಂದು ಕಲಾಕೃತಿಗಳನ್ನು ನೋಡಲು ಸಾಧ್ಯವಾಗಿದೆ.
ಕಲಾಸಕ್ತರಿಗೆ ಎಲ್ಲಾ ಕಲಾಕೃತಿಗಳನ್ನು ನೋಡುವ ಅವಕಾಶ ಕಲ್ಪಿಸಿದ್ದಕ್ಕಾಗಿ ಕುಟುಂಬ ವರ್ಗ ಮತ್ತು ಪ್ರದರ್ಶನ ಆಯೋಜಿಸಿದ ಕರ್ನಾಟಕ ಚಿತ್ರಕಲಾ ಪರಿಷತ್ ಕಾರ್ಯ ಅಭಿನಂದನೀಯ.
Friends,
” Eternal Echoes ” ಕಲಾಪ್ರದರ್ಶನ ಏಪ್ರಿಲ್ 28ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಕಲಾಕೃತಿಗಳನ್ನು ವೀಕ್ಷಿಸಿ ಬನ್ನಿ.