ಪ್ರತಿಭಾನ್ವೇಷಣೆಗೆ ವೇದಿಕೆಯಾದ ದೃಶ್ಯೋತ್ಸವ

Share This

• CKP ಗ್ಯಾಲರಿಯಲ್ಲಿ ವಿದ್ಯಾರ್ಥಿಗಳ ಕಲಾ ಪ್ರದರ್ಶನ 
• ವೃತ್ತಿ ಬದುಕಿನ ಕಡೆ ಮುಖ ಮಾಡಿದ ವಿದ್ಯಾರ್ಥಿಗಳು
ಕಲಾ ಶಿಕ್ಷಣ ಪಡೆದು ವೃತ್ತಿಪರ ಬದುಕು ಕಟ್ಟಿಕೊಳ್ಳಬೇಕೆನ್ನುವ ತುಡಿತದ ನಡುವೆ ಕಲಿಕೆಯ ಅನುಭವದ ಅಭಿವ್ಯಕ್ತಿ ವಿದ್ಯಾರ್ಥಿಯ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹಾಗಂತ ಅದೇ ಅಂತಿಮ ಎಂದಲ್ಲ. ನಂತರದ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳನ್ನೂ ನಿರೀಕ್ಷಿಸಬಹುದಾಗಿರುತ್ತದೆ.
” End is not the end if fact E.N.D. Means “Efforts Never Dies “
ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಮಾತಿದು. ಪ್ರಯತ್ನಗಳು ಎಂದೆಂದೂ ವ್ಯರ್ಥವಾಗುವುದಿಲ್ಲ ಎಂಬ ಅವರ ಮಾತು ಸ್ಪೂರ್ತಿದಾಯಕ. ಒಂದೊಂದು ಪ್ರಯತ್ನವೂ ಜೀವನಕ್ಕೊಂದು ಪಾಠವಾಗಲಿದೆ. ಆದರೆ ಪ್ರಯತ್ನ ನೂರಕ್ಕೆ ನೂರರಷ್ಟಿರಬೇಕು. ಅಂತಹ ಪ್ರಯತ್ನಗಳಿಂದ ಸಿಕ್ಕ ಅನುಭವ ವೃತ್ತಿ ಬದುಕಿನ ಉತ್ತುಂಗಕ್ಕೇರಲು ಸಾಧ್ಯವಾಗಲಿದೆ ಎನ್ನುವುದನ್ನು ಅರ್ಥೈಸಿಕೊಳ್ಳಬಹುದಾಗಿದೆ.
| ಗುಣಮಟ್ಟದ ಆಚೀಚೆ |
ಕರ್ನಾಟಕ ಚಿತ್ರಕಲಾ ಪರಿಷತ್ ಸಂಸ್ಥೆಗೆ ಸೇರಿದ ಕಾಲೇಜ್ ಆಫ್ ಫೈನ್ ಆರ್ಟ್ಸ್ (College Of Fine Arts) ಅಂತಿಮ ವರ್ಷದ (BVA final year) ದೃಶ್ಯ ಕಲಾ ವಿದ್ಯಾರ್ಥಿಗಳ ವಾರ್ಷಿಕ ಪ್ರದರ್ಶನ ” ದೃಶ್ಯೋತ್ಸವ-2024 ” ಗ್ಯಾಲರಿ 1,2,3 ಮತ್ತು 4ರಲ್ಲಿ ನಡೆಯುತ್ತಿದೆ. ಡ್ರಾಯಿಂಗ್ (Drawing), ಪೇಂಟಿಂಗ್ (Painting), ಗ್ರಾಫಿಕ್ (Graphics), ಶಿಲ್ಪ (Sculpture), ಪರಿಕಲ್ಪನಾ (Conceptual) ಹಾಗೂ ಪ್ರತಿಷ್ಠಾಪನಾ (Installation) ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ.
ಅಂತಿಮ ವರ್ಷದ ವಿದ್ಯಾರ್ಥಿಗಳು ಭವಿಷ್ಯದ ವೃತ್ತಿಪರ ಕಲಾವಿದರೇ ಆಗಿದ್ದರಿಂದ ಖಂಡಾಖಂಡಿತವಾಗಿ ಈ ಪ್ರದರ್ಶನ ಅತೀ ಮಹತ್ವದ್ದು. ಇದನ್ನು ಸಮರ್ಥಿಸಿಕೊಳ್ಳಬಹುದಾದ ಒಂದಿಷ್ಟು ಗುಣಮಟ್ಟದ ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ. ಆದರೆ, ಕೆಲವೊಂದಿಷ್ಟು ಗುರುತಿಸಬಹುದಾದ ಕಲಾಕೃತಿಗಳು (up to the mark) ಎನ್ನಲಾಗದು. ಕೆಲ ವಿದ್ಯಾರ್ಥಿಗಳು ಇನ್ನಷ್ಟು ಆಸಕ್ತಿ ತೋರಬೇಕಿತ್ತೇನೋ ಅನಿಸುತ್ತವೆ. ಜೊತೆಗೆ ಇಂತಹ ವಾರ್ಷಿಕ ಕಲಾಪ್ರದರ್ಶನದ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವುದೂ ಭವಿಷ್ಯದ ದೃಷ್ಟಿಯಿಂದ ಬಹಳ ಮುಖ್ಯವಾಗುತ್ತದೆ. ಗಮನಿಸಬಹುದಾದ ಒಂದು ಅಂಶ ಏನೆಂದರೆ ವಿದ್ಯಾರ್ಥಿಗಳು ಮಾಧ್ಯಮ ಬಳಕೆಯನ್ನು ಬಹಳ ಚೆನೈ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ವಿದ್ಯಾರ್ಥಿಗಳ ಪ್ರಯೋಗಶೀಲತೆ ಗಮನಾರ್ಹ.
| ಪ್ರದರ್ಶನ ಉದ್ದೇಶ ಈಡೇರಲಿ |
ಸಾಮಾನ್ಯವಾಗಿ ಕಲಾ ಪ್ರೋತ್ಸಾಹಕರು, ಗ್ಯಾಲರಿಗಳು, ಯುವ ಕಲಾವಿದರ ಕಲಾಕೃತಿಗಳನ್ನು ಕೊಂಡುಕೊಳ್ಳುವ ಉದ್ದೇಶ ಹೊಂದಿರುವ ಕಲಾ ಸಂಗ್ರಹಕಾರರು ಇಂತಹ ಕಲಾಪ್ರದರ್ಶನಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಯುವ ಮತ್ತು ಕ್ರಿಯಾಶೀಲ ಉದ್ಯೋಗಿಗಳಿಗಾಗಿ ಹುಡುಕಾಟ ನಡೆಸುತ್ತಿರುವ (ಪ್ರತಿಭಾನ್ವೇಷಣೆಯಲ್ಲಿ ತೊಡಗಿರುವ) ಎಷ್ಟೋ ಕಂಪನಿಗಳ ಪ್ರತಿನಿಧಿಗಳೂ ಇಂತಹ ಪ್ರದರ್ಶನಕ್ಕೆ ಭೇಟಿ ನೀಡುವ ಸಾಧ್ಯತೆಗಳು ಇರುತ್ತವೆ. ಕಲಾವಿದ್ಯಾರ್ಥಿ ಕಲಿಕಾ ಸಂದರ್ಭದಲ್ಲಿ ಎಷ್ಟರ ಮಟ್ಟಿಗೆ ತನ್ನನ್ನು ತೊಡಗಿಸಿಕೊಂಡಿದ್ದಾನೆ, ಮುಂಬರುವ ದಿನಗಳಲ್ಲಿ ಹೇಗೆ ತೊಡಗಿಸಿಕೊಳ್ಳಬಲ್ಲ ಎನ್ನುವ ಒಳನೋಟ (insight) ಸಿಗುತ್ತದೆನ್ನುವುದೂ ವೀಕ್ಷಣೆಯ ಹಿಂದಿನ ಉದ್ದೇಶಗಳಲ್ಲಿ ಒಂದಾಗಿರುತ್ತದೆ.
ಅಷ್ಟೇ ಅಲ್ಲ, ಶಿಕ್ಷಣ ಸಂಸ್ಥೆಗೂ ಈ ಕಲಾಪ್ರದರ್ಶನ ಮುಖ್ಯವಾಗುತ್ತದೆ. ತಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ಇದೊಂದು ವೇದಿಕೆಯೂ ಆಗಲಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಸಂಸ್ಥೆಗಳು ಸಿ.ಎಸ್.ಆರ್. ಫಂಡ್ (Corporate Social Responsibility) ಪಡೆದು ಭವಿಷ್ಯದತ್ತ ಮುಖಮಾಡಿರುವ ಕಲಾವಿದರಿಗಾಗಿ ಅನೇಕ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿರುವುದು ಗೊತ್ತಿರುವ ವಿಚಾರವೆ. ವಿಶೇಷವಾಗಿ ಆರ್ಟ್ ಮತ್ತು ಆರ್ಟಿಸ್ಟ್ ರೆಸಿಡೆನ್ಸಿ (Art and Artist residencies) ಕಾರ್ಯಕ್ರಮಗಳನ್ನು ನಡೆಸುತ್ತಿರುವ ಸಂಸ್ಥೆಗಳು ಪ್ರತಿಭಾನ್ವಿತರಿಗಾಗಿ ಹುಡುಕಾಟ ನಡೆಸುತ್ತಿರುತ್ತವೆ. ಇಂತಹ ಸಂಸ್ಥೆಯ ಕಣ್ಣಿಗೆ ಬಿದ್ದಲ್ಲಿ ಸಹಜವಾಗಿಯೇ ಅದೃಷ್ಟದ ಬಾಗಿಲು ತೆರೆದುಕೊಳ್ಳುವುದರಲ್ಲಿ ಯಾವ ಅನುಮಾನವಿಲ್ಲ. ಹೀಗಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಈ ಪ್ರದರ್ಶನ ಬಹಳ ಮುಖ್ಯವಾಗುತ್ತವೆ. ವಿದ್ಯಾರ್ಥಿಗಳು ಈ ವೇದಿಕೆಯನ್ನು ಬಳಸಿಕೊಳ್ಳುವಲ್ಲಿ ಕೊಂಚ ಎಡವಿದರೂ, ನಿರ್ಲಕ್ಷಿö್ಯಸಿದರೂ ಒಂದೊಳ್ಳೆಯ ಅವಕಾಶ ಕೈತಪ್ಪಬಹುದಾದ ಸಾಧ್ಯತೆ ಹೆಚ್ಚು.
” ದೃಶ್ಯೋತ್ಸವ -2024 ” ಪ್ರದರ್ಶನ ಕಲಾಶಿಕ್ಷಣ ನೀಡುತ್ತಿರುವ ಸಂಸ್ಥೆಯ ಶಿಕ್ಷಣದ ಗುಣಮಟ್ಟವನ್ನು ಅನಾವರಣಗೊಳಿಸುವ ಅಥವಾ ಭವಿಷ್ಯದ ಕಲಾವಿದರನ್ನು ಪರಿಚಯಿಸುವ ದೃಷ್ಟಿಯಲ್ಲಿ ತನ್ನ ಪಾತ್ರವನ್ನು ಹೇಳಿಕೊಳ್ಳುವ ಚಟುವಟಿಕೆಯೂ ಹೌದು. ಈ ಹಿನ್ನೆಲೆಯಲ್ಲೇ ಸಾಮಾನ್ಯವಾಗಿ ಇಂತಹ ಪ್ರದರ್ಶನಗಳ ಆಯೋಜನೆ ಆಗುತ್ತವೆ. ದೃಶ್ಯೋತ್ಸವ ಕಲಾ ಪ್ರದರ್ಶನದಲ್ಲಿ ಪ್ರದರ್ಶಿಸಲ್ಪಟ್ಟ ಅನೇಕ ಕಲಾಕೃತಿಗಳು, ಅದರ ಹಿಂದಿನ ಕಲಾವಿದ್ಯಾರ್ಥಿಯ ಶ್ರಮ, ಪರಿಕಲ್ಪನೆಯ ಕ್ರಮ ಶ್ಲಾಘನೀಯ.
ಸ್ನೇಹಿತರೆ, ದೃಶ್ಯೋತ್ಸವ-2024 ಕಲಾಪ್ರದರ್ಶನ ಜೂನ್ 30ಕ್ಕೆ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ. ಭವಿಷ್ಯದ ಕಲಾವಿದರ ಬೆನ್ನು ತಟ್ಟಿ, ಪ್ರೋತ್ಸಾಹಿಸಿ.
ಕಲಾಕೃತಿಗಳನ್ನು ಪ್ರದರ್ಶಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು, ಶುಭವಾಗಲಿ. Congratulations and Best wishes 💐💐.

 


Share This

Leave a Reply

Your email address will not be published. Required fields are marked *