- ಗಮನ ಸೆಳೆದ ಅವಿಜಿತ್ ದತ್ತಾ ಕಲಾಕೃತಿಗಳು
- ಜುಲೈ 19ರ ತನಕ ಕಿಂಕಿಣಿಯಲ್ಲಿ ಪ್ರದರ್ಶನ
” Beautiful places take us to a different realm “ ಎಂದು ಹೇಳುವುದುಂಟು.
ಅಕ್ಷರಶಃ ಸತ್ಯ. ಕೆಲವೊಮ್ಮೆ ಕೆಲವೊಂದು ಸ್ಥಳಗಳೇ ಮನುಷ್ಯನ ಮನಸ್ಸನ್ನು ಅತ್ಯಂತ ಶಾಂತಿ, ನೆಮ್ಮದಿಯ ಕಡೆ ಕೊಂಡೊಯ್ಯುತ್ತವೆ. ಅನೇಕ ಸಂದರ್ಭಗಳಲ್ಲಿ ಇಂತಹ ಅನುಭವಗಳನ್ನು ಪದಗಳಿಂದ ವಿವರಿಸಲೂ ಸಾಧ್ಯವಾಗುವುದಿಲ್ಲ. ಅನುಭೂತಿ ಅದ್ಭುತ, ಸಾಕ್ಷಾತ್ಕಾರ ಎಂದೆಲ್ಲಾ ವರ್ಣಿಸಲಾಗುತ್ತದೆ.
” Beautiful places are so magical that they feel like a living person “ ಎನ್ನುವಂತೆ, ಕೆಲವೊಂದು ಸ್ಥಳಗಳು ಶಕ್ತಿ ಕೇಂದ್ರವಾಗಿರುತ್ತವೆ. ಇಂತಹ ಶಕ್ತಿ ಕೇಂದ್ರಗಳಲ್ಲಿ ಸಹಜವಾಗಿ ಮನಸ್ಸು ಕೇಂದ್ರೀಕರಿಸುವ ಕಂಪನ (Vibe) ಇರುತ್ತವೆ. ಇವು ಮನುಷ್ಯನೊಳಗೊಂದು ವಿಶೇಷ ಭಾವ ಹುಟ್ಟು ಹಾಕುತ್ತವೆ. ಮನುಷ್ಯನಂತೆ ಶಕ್ತಿ ಸ್ಥಳವೂ ಜೀವಂತವಾಗಿರುವಂತೆ ಭಾಸವಾಗುತ್ತದೆ. ಮನುಷ್ಯ ಅಥವಾ ಯಾವುದೇ ಜೀವಿಯ ಪ್ರತಿ ಹೆಜ್ಜೆಯ ಜತೆ ಜೊತೆಯಲ್ಲೇ ಸಾಗುತ್ತಿವೆಯೇನೋ ಎಂಬಂತೆ ಅನಿಸುತ್ತವೆ. ಇಂತಹದ್ದೊಂದು ವಿಶೇಷ ಅನುಭವ ನೀಡಿದ್ದು, ಬೆಳಕಿನ ರಹಸ್ಯ ಭೇದಿಸಿದ ವಿಜ್ಞಾನಿ ಸಿ.ವಿ.ರಾಮನ್ ಅವರ ಮಲ್ಲೇಶ್ವರಂನಲ್ಲಿರುವ ನಿವಾಸ ” ಪಂಚವಟಿ ” ಪ್ರವೇಶಿಸಿದಾಗ.
ಹೌದು, ಪ್ರತಿಷ್ಠಿತ ಕಿಂಕಿಣಿ ಆರ್ಟ್ ಗ್ಯಾಲರಿ ಆಯೋಜಿಸಿದ ಕೋಲ್ಕತ ಮೂಲದ ಕಲಾವಿದ ಅವಿಜಿತ್ ದತ್ತಾ ಅವರ ಕಲಾಕೃತಿಗಳ ಪ್ರದರ್ಶನವು ಸಿ.ವಿ.ರಾಮನ್ ಅವರ ಮನೆ ಮತ್ತು ಆವರಣದ ಸೌಂದರ್ಯ ಹೆಚ್ಚಿಸಿದೆ. ಜೂನ್ 22 ಮತ್ತು 23, ಎರಡು ದಿನಗಳ ಕಾಲ ಸಾರ್ವಜನಿಕ ವೀಕ್ಷಣೆಗೆ ಇಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಸೋಮವಾರದಿಂದ ಇಲ್ಲಿ ಪ್ರದರ್ಶಿತ ಕಲಾಕೃತಿಗಳು ಕಿಂಕಿಣಿ ಗ್ಯಾಲರಿಯಲ್ಲಿ ಜುಲೈ 19ರ ತನಕ ವೀಕ್ಷಣೆಗೆ ಲಭ್ಯವಿರಲಿದೆ.
| ದತ್ತಾ ಕಲಾಕೃತಿಗಳ ದೃಶ್ಯಾಲಂಕಾರ |
ಅವಿಜಿತ್ ದತ್ತಾ ಅವರು ಈ ಬಂಗ್ಲೋದ ಸ್ಥಳಾವಕಾಶ ನೋಡಿಯೇ ಕಲಾಕೃತಿಗಳನ್ನು ರಚಿಸಿರುವುದು ಸ್ಪಷ್ಟ. ಫೋಟೋ ರಿಯಲಿಸಂಗೆ ಬಹಳ ಹತ್ತಿರವೆನಿಸುವ ಕಲಾಕೃತಿಗಳು ಪಂಚವಟಿಯ ಗೋಡೆಗಳ ಸೌಂದರ್ಯ ಹೆಚ್ಚಿಸಿವೆ. ಕಲಾಕೃತಿಗಳ ಮೈವಳಿಕೆ (texture) ನೋಡುಗರಲ್ಲಿ ಕುತೂಹಲ ಕೆರಳಿಸುವಂತಿದೆ. ಕಾರಣ, ಪ್ರಾಚೀನ ವರ್ಣ ಬಳಕೆಯ ಕ್ರಮ, ಪದ್ಧತಿ ಅನುಸರಿಸಿದ್ದಾರೆ. ಸಾಮಾನ್ಯವಾಗಿ ಇಂತಹ ಕಲಾಕೃತಿಗಳು ನೋಡುಗರಲ್ಲಿ ಸಹಜವಾಗಿಯೇ ಒಂದು ಕುತೂಹಲ ಮೂಡಿಸುತ್ತವೆ. ನುಣುಪು ಮತ್ತು ರಗಡ್ ಎನಿಸುವ ಕಲಾಕೃತಿಗಳ ಮೈವಳಿಕೆಗೆ ತಕ್ಕುದಾದ ಚೌಕಟ್ಟು ಜೋಡಿಸುವಲ್ಲಿ ಕಲಾವಿದ ಅವಿಜಿತ್ ಅವರು ಬಹಳ ಜಾಣತನ ತೋರಿದ್ದಾರೆ. ಇದು ಅವರ ಅನುಭವವನ್ನೂ ಅನಾವರಣಗೊಳಿಸುತ್ತಿದೆ.
| ಸ್ಥಳ ಮಹಿಮೆ ಕಲಾಕೃತಿಗಳಿಗೆ ಹಿರಿಮೆ |
ಪ್ರದರ್ಶನದ ಇನ್ನೊಂದು ವಿಶೇಷವೇನೆಂದರೆ, ಸ್ಥಳಕ್ಕೆ ತಕ್ಕುದಾದ ಕಲಾಕೃತಿಗಳ ಪ್ರದರ್ಶನ ಸಾಧ್ಯವಾಗಿದೆ. ಮಲ್ಲೇಶ್ವರಂ ಹೃದಯ ಭಾಗದ ಎರಡುವರೆ ಎಕರೆ ಜಾಗದಲ್ಲಿರುವ ಮನೆ ಮತ್ತು ಹಸಿರು ಆವರಣ ಎಂಥವರಲ್ಲಿಯೂ ಒಂದು ಮಂದಹಾಸ ಮೂಡಿಸಬಲ್ಲದು. ಕಾಂಕ್ರಿಟ್ ಕಾಡಿನ ಮಧ್ಯೆ ಹಸಿರು ತುಂಬಿಕೊಂಡಿರುವ ಮರ,ಗಿಡ,ಬಳ್ಳಿಗಳು ತೋರಣದಂತಿವೆ. ಈ ಹಸಿರು ನಡುವೆಯೇ ಕುಳಿತು ಕಲಾಕೃತಿಗಳನ್ನು ರಚಿಸಿದ್ದಾರೇನೋ ಎನ್ನುವಂತೆ ಸ್ಪಂದಿಸುತ್ತವೆ ಅವಿಜಿತ್ ಅವರ ಕಲಾಕೃತಿಗಳು. ಕಿಂಕಿಣಿ ಗ್ಯಾಲರಿ ಈ ಸ್ಥಳಾವಕಾಶವನ್ನು ಬಹಳ ಸೊಗಸಾಗಿ ಬಳಸಿಕೊಂಡಿದೆ. ಕಿಂಕಿಣಿ ಗ್ಯಾಲರಿ ಸಂಸ್ಥಾಪಕರಲ್ಲಿ ಒಬ್ಬರಾದ, ಸಿ.ವಿ.ರಾಮನ್ ಅವರ ಮೊಮ್ಮಗ ವಿವೇಕ್ ರಾಧಾಕೃಷ್ಣನ್ ಅವರ ಈ ಪ್ರಯತ್ನ ಶ್ಲಾಘನೀಯ. ವಿಜ್ಞಾನಿಯೊಬ್ಬರ ನಿವಾಸ ಕಲಾರಾಧನೆಗೆ ತಾಣವಾಗಿರುವುದು ಎಲ್ಲರೂ ಖುಷಿ ಪಡುವ, ಶ್ಲಾಘಿಸಬೇಕಾದ ವಿಚಾರ ಕೂಡ.
ಸ್ನೇಹಿತರೆ, ಈ ಕಲಾಪ್ರದರ್ಶನ ಕಿಂಕಿಣಿ ಗ್ಯಾಲರಿಯಲ್ಲಿ ಜು.19ರ ತನಕ ನಡೆಯಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.