“Losing isn’t always the end, sometimes it becomes the beginning”
ಹೌದು. ಸೋಲು ಅಂತ್ಯಕ್ಕೆ ನಾಂದಿಯೇನಲ್ಲ. ಇದೇ ಸೋಲು ಕೆಲವು ಬಾರಿ ಆರಂಭವೇ ಆಗಿರುತ್ತದೆ. ದೃಶ್ಯ ಮಾಧ್ಯಮಕ್ಕೂ ಇದೇ ಆಗಲಿದೆ ಎಂದೇ ಭಾವಿಸೋಣ. ಯಾವುದೋ ಒಂದು ಯಶಸ್ಸಿಗೆ ಅಥವಾ ನಿಶ್ಚಿತ ಗೆಲುವಿಗೂ ಕಾರಣವಾಗಬಹುದು. ಅಂತಹ ಆತ್ಮವಿಶ್ವಾಸದೊಂದಿಗೆ ಹೆಜ್ಜೆ ಇಟ್ಟಾಗಲೇ ಎಂತೆಂಥದ್ದೋ ಸೋಲನ್ನು ಜಯಿಸಿಬಿಡಬಹುದು. ಜಯಿಸಿದ ನಿದರ್ಶನಗಳೂ ಇವೆ.
ಇಂಥದ್ದೇ ಒಂದು ಸವಾಲನ್ನು ಈ ಮನುಕುಲ ಮತ್ತೆ ಎದುರಿಸುತ್ತಿದೆ. ಕಲಾವಿದರಾದ ನಾವೂ ಇದರಿಂದ ಹೊರತಾದವರೇನಲ್ಲ. ನಮ್ಮ ಮುಂದೆಯೂ ಈ ಕಠಿಣ ಸವಾಲಿದೆ. ಇದಕ್ಕೆಲ್ಲ ಈಗಿನ ಕಾರಣ ವಿಶ್ವವನ್ನೇ ನಡುಗಿಸಿದ ಮಹಾಮಾರಿ ಕೊರೋನಾ ವೈರಸ್. 2018 ಮತ್ತು 2019ರಲ್ಲಿಯೇ ಒಂದು ಹಂತದಲ್ಲಿ ಕುಸಿತ ಕಂಡಿದ್ದ ಆರ್ಟ್ ಮಾರ್ಕೆಟ್‍ಗೆ ಇದು ಚೇತರಿಸಿಕೊಳ್ಳಲಾಗದ ಹೊಡೆತ ಆಗಬಾರದಷ್ಟೆ.
ಕೊರೋನಾ ವೈರಸ್‍ನ ಭೀತಿಯಲ್ಲಿ ಈಗಾಗಲೇ ಎರಡು ವಾರ ಕಳೆದಿದ್ದೇವೆ. ಲಾಕ್‍ಡೌನ್ ಬಹಳಷ್ಟು ಮಂದಿಯ ತಾಳ್ಮೆಯನ್ನೂ ಪರೀಕ್ಷಿಸಿದೆ. ಇನ್ನೆಷ್ಟು ದಿನಗಳ ಕಾಲ ನಮ್ಮನ್ನು ಕಾಡಬಹುದು ಎಂಬುದನ್ನು ನಾವ್ಯಾರೂ ಊಹಿಸಲಿಕ್ಕೂ ಆಗದ ಪರಿಸ್ಥಿತಿಯಲ್ಲಿ ಬಂಧಿಯಾಗಿದ್ದೇವೆ. ಈ ನಡುವೆ ಕ್ಷಣ ಕ್ಷಣವೂ ಈ ಹೆಮ್ಮಾರಿ ನಮ್ಮ ಕಾಲ್ಬುಡಕ್ಕೆ ಬಂದೀತು ಎಂಬ ಆತಂಕ ಸಹಜವಾಗಿಯೇ ಕಾಡುತ್ತಿದೆ. ಕಳೆದ ಮೂರು ತಿಂಗಳಿಂದ ವಿಶ್ವವನ್ನು ಕಾಡುತ್ತಿರುವ ಕೊರೋನಾ ವೈರಸ್‍ನಿಂದಾಗಿ ವಿಶ್ವದ ಆರ್ಟ್ ಮಾರ್ಕೆಟ್ ಶೇ.90ರಷ್ಟು ಮಕಾಡೆ ಮಲಗಿದೆ. ಎರಡು ತಿಂಗಳಿಂದ ಕಲಾಕ್ಷೇತ್ರದ ಅದೆಷ್ಟೋ ಮಹತ್ವದ ಚಟುವಟಿಕೆಗಳು ರದ್ದಾಗಿ ಅಥವಾ ಮುಂದೂಡಲ್ಪಟ್ಟು ಎಲ್ಲಾ ಕ್ಷೇತ್ರಗಳು ಎದುರಿಸಿದ ನಷ್ಟ ಅನುಭವಿಸಿದೆ. ಸಂದಿಗ್ಧ ಪರಿಸ್ಥಿತಿ ಎದುರಿಸುವಂತಾಗಿದೆ.
ಗಮನಿಸಬೇಕಾದ ಒಂದು ಅಂಶವೇನೆಂದರೆ ಈ ನಷ್ಟದ ದೊಡ್ಡ ಹೊಡೆತ ತಿನ್ನುವುದೇ ಎಮರ್ಜಿಂಗ್ ಆರ್ಟಿಸ್ಟ್‍ಗಳು. ಅಂದರೆ, ಈಗಷ್ಟೇ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡು ತಕ್ಕಮಟ್ಟಿಗೆ ಕಲಾಕೃತಿಗಳನ್ನು ಮಾರಾಟ ಮಾಡಿಕೊಳ್ಳುತ್ತಿರುವ ಅಥವಾ ಒಂದು ಹಂತದ ಮಾರುಕಟ್ಟೆ ಕಂಡುಕೊಂಡು, ಸಾಕಷ್ಟು ಹೂಡಿಕೆ ಮಾಡಿಕೊಂಡಿರುವ ಕಲಾವಿದರಿಗೆ ಇದೊಂದು ಬರೆಯಾಗಿ ಪರಿಣಾಮ ಬಿರುವಂತೆ ತೋರುತ್ತಿದೆ.
ಸಂಕಷ್ಟದಲ್ಲಿ ಆರ್ಟ್ ಮಾರ್ಕೆಟ್
ವಿಶ್ವದ ಆರ್ಟ್ ಮಾರ್ಕೆಟ್ ಭಾರೀ ಕುಸಿತ ಕಂಡಿದೆ. ಸಾಮಾನ್ಯವಾಗಿ ಐಷಾರಾಮಿ ಜೀವನ ಬಯಸುವ, ಚಿತ್ರಕಲೆಯನ್ನು ಉದ್ಯಮವಾಗಿಸಿಕೊಂಡ, ಚಿತ್ರಕಲಾಕೃತಿಗಳನ್ನು ಒಂದು ಆಸ್ತಿ ಎಂದು ಸಂಗ್ರಹಿಸಿಟ್ಟುಕೊಳ್ಳುವವರು ಕೊರೋನಾ ಹೊಡೆತಕ್ಕೆ ನಲುಗಿಹೋಗಿದ್ದಾರೆ. ವರ್ಷದ ಆರಂಭದಲ್ಲಿಯೇ ಕೊರೋನಾ ಹೊಡೆತ ಬಿದ್ದಿದ್ದರಿಂದಾಗಿ ಇಡೀ ವರ್ಷದ ಯೋಜನೆಗಳು ಈಗ ಬುಡಮೇಲಾಗಿವೆ. ಟೋಕಿಯೋ ಆರ್ಟ್ ಫೇರ್ ಮುಂದೂಡಲ್ಪಟ್ಟ ಬೆನ್ನಲ್ಲೇ ವಿಶ್ವದ ಪ್ರಮುಖ ನಗರಗಳಲ್ಲಿ ನಡೆಯಬೇಕಿದ್ದ ಕಲಾಪ್ರದರ್ಶನಗಳು ರದ್ದು, ಇಲ್ಲಾ ಮುಂದೂಡಲ್ಪಟ್ಟಿವೆ. ಜಪಾನ್‍ನ ಅತಿದೊಡ್ಡ ಕಲಾಪ್ರದರ್ಶನ ‘ಆರ್ಟ್ ಫೇರ್ ಟೋಕಿಯೋ’ ರದ್ದಾಗಿರುವುದು ದೊಡ್ಡ ಹೊಡೆತ ಎಂದು ಆರ್ಟ್ ಟೋಕಿಯೋ ಅಸೋಸಿಯಷನ್ ಹೇಳಿಕೊಂಡಿದೆ. ನಿಜ ಕೂಡ.
ಇನ್ನು ನವ್ಯ, ಸಮಕಾಲೀನ ಕಲಾ ಪ್ರದರ್ಶಗಳ ಮೂಲಕ ವಿಶ್ವದ ಪ್ರತಿಷ್ಠಿತ ಕಲಾ ಪ್ರದರ್ಶನಗಳಲ್ಲೊಂದಾದ “ಆರ್ಟ್ ಬಸೆಲ್” ರದ್ದಾಗಿದೆ. ಕೋಟ್ಯಂತರ ವಹಿವಾಟು ನಡೆಸುವ ಈ ಪ್ರದರ್ಶನ ಹಾಂಗ್‍ಕಾಂಗ್‍ನಲ್ಲಿ ಮಾರ್ಚ್ 19ರಿಂದ ನಡೆಯಬೇಕಿತ್ತು. ಆಯೋಜಕರಾದ ಸ್ವಿಟ್ಜರ್ಲೆಂಡ್‍ನ ಎಂಸಿಎಚ್ ಗ್ರೂಪ್ ಅಧಿಕೃತವಾಗಿ ಪ್ರಕಟಣೆ ಮೂಲಕ ಇದನ್ನು ಖಚಿತ ಪಡಿಸಿದೆ.
“ಇದೊಂದು ಕಠಿಣ ನಿರ್ಧಾರ. ವಿಶ್ವ ಆರೋಗ್ಯ ಸಂಸ್ಥೆಯ ಕಟ್ಟುನಿಟ್ಟಿನ ಸೂಚನೆಯನ್ನು ಪಾಲಿಸಲೇಬೇಕಾದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದೇವೆ. ಇದರಿಂದ ಆರ್ಟ್ ಮಾರ್ಕೆಟ್ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದರೆ ಈ ನಿರ್ಧಾರ ಅನಿವಾರ್ಯ. ನಮಗೆ ಆರ್ಟಿಸ್ಟ್, ಆರ್ಟ್ ಬಯರ್ಸ್, ಕಲೆಕ್ಟರ್ಸ್ ಹಾಗೂ ಆರ್ಟ್ ಲವರ್ಸ್‍ಗಳ ಆರೋಗ್ಯವೂ ಅಷ್ಟೇ ಮುಖ್ಯ. ಈ ಕಳಕಳಿ ತೋರುವುದು ನಮ್ಮ ಜವಾಬ್ದಾರಿ ಕೂಡ. ಹೀಗಾಗಿ ಈ ಕಠಿಣ ನಿಲುವಿಗೆ ಬಂದಿದ್ದೇವೆ” ಎಂದು ಎಂಸಿಎಚ್ ಸಿಇಒ ಬನ್ರ್ಡ್ ಸ್ಟ್ಯಾಂಡ್ಲ್‍ವೈಸರ್ ಹೇಳಿದ್ದಾರೆ. ಇನ್ನು ಜೂನ್‍ನಲ್ಲಿ ಸ್ವಿಟ್ಜರ್ಲೆಂಡ್‍ನಲ್ಲಿ ನಡೆಯಬೇಕಿದ್ದ “ಆರ್ಟ್ ಬಸೆಲ್” 50ನೇ ಆವೃತ್ತಿಯನ್ನು ಸಪ್ಟೆಂಬರ್‍ನಲ್ಲಿ ನಡೆಸುವುದಾಗಿ ಕಳೆದ ವಾರವಷ್ಟೇ ಆಯೋಜಕರು ನಿರ್ಧರಿಸಿದ್ದಾರೆ. ಯುರೋಪ್‍ನ ಆರ್ಟ್ ಮಾರುಕಟ್ಟೆಯನ್ನೇ ಬದಲಾಯಿಸಿಬಿಡುವ ಮಹತ್ವದ ಪ್ರದರ್ಶನ ಇದಾಗಿರುತ್ತದೆ. ಸಾವಿರಾರು ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳುವ, 250ಕ್ಕೂ ಹೆಚ್ಚು ಗ್ಯಾಲರಿಗಳು ಪಾಲ್ಗೊಳ್ಳುವ ಈ ಪ್ರದರ್ಶನಕ್ಕಾಗಿ ಅದೆಷ್ಟೋ ಮಂದಿ ವರ್ಷವೆಲ್ಲಾ ಕಾದಿರುತ್ತಾರೆ. ಮುಂದೇನು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಲಂಡನ್ ಮೂಲದ ಡೀಲರ್ ರಿಚರ್ಡ್ ನೇಗಿ, ‘ಸಾಕಷ್ಟು ನಿರೀಕ್ಷಿತ ಪ್ರದರ್ಶನ ಇದಾಗಿದೆ. ಅಷ್ಟರೊಳಗೆ ಕೊರೋನಾ ವೈರಸ್ ಭೀತಿಯಿಂದ ನಾವು ಪಾರಾಗಿರುತ್ತೇವೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ. ಅವರ ಮಾತು ನಿಜವಾಗಲೆಂದು ಆಶಿಸೋಣ.
ವಿಶ್ವ ಮಟ್ಟದಲ್ಲಿ ಏನೆಲ್ಲಾ ಅವಾಂತರಗಳು ಸೃಷ್ಟಿಸಿವೆ. ಆರ್ಟ್ ಮಾರ್ಕೆಟ್ ಎಷ್ಟರ ಮಟ್ಟಿಗೆ ನಲುಗಿವೆ ಎಂಬುದನ್ನು ಊಹಿಸಿಕೊಳ್ಳಿ. ದುಬೈನಲ್ಲಿ ಮಾರ್ಚ್ 12ರಿಂದ ನಡೆಯಬೇಕಿದ್ದ ನಡೆಯಬೇಕಿದ್ದ ಹಾರ್ಸ್ ಫೆಸ್ಟಿವಲ್ ಕೂಡ ಕೊರೋನಾ ವೈರಸ್‍ನಿಂದಾಗಿ ರದ್ದಾಗಿದೆ. ವಿಶ್ವದ ಅನೇಕ ಕಲಾವಿದರು ಪಾಲ್ಗೊಳ್ಳುವ ಪ್ರತಿಷ್ಠಿತ ಕಲಾಪ್ರದರ್ಶನ ಇದು. ಕೇವಲ ಕುದುರೆಗಳ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ವಿಶ್ವದ ಘಟಾನುಘಟಿ ಕಲಾಸಕ್ತರು ಹಾರ್ಸ್ ಫೆಸ್ಟಿವಲ್‍ನಲ್ಲಿ ಪಾಲ್ಗೊಳ್ಳುತ್ತಾರೆ. ಅದೀಗ ಮುಂದೂಡಲ್ಪಟ್ಟಿದೆ.
ಅದೇ ರೀತಿ ಭಾರತ ಸೇರಿದಂತೆ 39 ದೇಶಗಳ ಹೆಚ್ಚುಕಡಿಮೆ 100 ಪ್ರತಿಷ್ಠಿತ ಗ್ಯಾಲರಿಗಳು ಪಾಲ್ಗೊಳ್ಳುವ “ಆರ್ಟ್ ದುಬೈ” ಕೂಡ ಮುಂದೂಡಲ್ಪಟ್ಟಿದೆ. ಆದರೆ ಕಡೇ ಪಕ್ಷ ಆನ್‍ಲೈನ್ ಪ್ರದರ್ಶನದ ಮೂಲಕವಾದರೂ ಮಾರುಕಟ್ಟೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಚಿಂತನೆ ನಡೆಸಿದೆ.
ಇವೆಲ್ಲವುಗಳಷ್ಟೇ ಪ್ರತಿಷ್ಠಿತ ನ್ಯೂಯಾರ್ಕ್ ಫ್ರೀಜ್ ಆರ್ಟ್ ಫೇರ್ ಕೂಡ ರದ್ದಾಗಿದೆ. ಮೇ 7ರಿಂದ 10ರ ತನಕ ಇಲ್ಲಿನ ರಾಂಡಾಲ್ಸ್ ಐಲ್ಯಾಂಡ್ ಪಾರ್ಕ್ ನಲ್ಲಿ ಈ ಪ್ರದರ್ಶನಕ್ಕೆ ತಯಾರಿ ನಡೆದಿತ್ತು. ಆದರೆ ಕೊರೋನಾಗೆ ಕಲಾಪ್ರದರ್ಶನ ಬಲಿಯಾಗಿದೆ. ಆಯೋಜಕರಾದ ಫ್ರೀಜ್ ಫೇರ್ಸ್ ಹಾಗೂ ನಿರ್ದೇಶಕಿ ವಿಕ್ಟೋರಿಯಾ ಸಿದ್ದಾಲ್ ಮುಂದೂಡಲ್ಪಟ್ಟಿರುವ ಮಾಹಿತಿ ಖಚಿತಪಡಿಸಿದ್ದಾರೆ. ಬಹಳ ಮುಖ್ಯವಾಗಿ ಎಡಿನ್‍ಬರ್ಗ್ ಇಂಟರ್‍ನ್ಯಾಷನಲ್ ಆರ್ಟ್ ಫೆಸ್ಟಿವಲ್, ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಹಾಗೂ ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್‍ನ ಎಲ್ಲಾ ಚಟುವಟಿಕೆಗಳಿಗೂ ಬ್ರೇಕ್ ಬಿದ್ದಿದೆ.
ಭಾರತದಲ್ಲೂ ಸಂಕಷ್ಟವೇ…
ಭಾರತದಲ್ಲೂ ಕೊರೋನಾ ವೈರಸ್‍ನ ಹೊಡೆತಕ್ಕೆ ಆರ್ಟ್ ಮಾರ್ಕೆಟ್ ನಲುಗುವ ಎಲ್ಲಾ ಲಕ್ಷಣಗಳಿವೆ. ಒಂದಿಷ್ಟು ಪ್ರದರ್ಶನಗಳು ಈಗಾಗಲೇ ರದ್ದಾಗಿದ್ದರೆ, ಇನ್ನೊಂದಿಷ್ಟು ಮುಂದೂಡಲ್ಪಟ್ಟಿವೆ. ಈಗಾಗಲೇ ಅಪನಗದೀಕರಣದಿಂದಾಗಿ ದೊಡ್ಡ ಹೊಡೆತ ತಿಂದಿರುವ ಇಂಡಿಯನ್ ಆರ್ಟ್ ಮಾರ್ಕೆಟ್‍ಗೆ ಇದೀಗ ಕೊರೋನಾದಿಂದಾದ ಆರ್ಥಿಕ ಸಂಕಷ್ಟವೂ ಒಂದು ಕಾರಣವಾಗಿ ಪರಿಣಮಿಸಲಿದೆ. ಲಾಕ್‍ಡೌನ್‍ನಿಂದಾಗಿ ಬಹು ತೇಕ ಉದ್ಯಮ ಕ್ಷೇತ್ರ ಈಗ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದೆ. ವೃತ್ತಿಯನ್ನೇ ನಂಬಿ ಬದುಕು ಕಟ್ಟುಕೊಂಡಿದ್ದ ಬುತೇಕ ಕಲಾವಿದರು ಇನ್ನೇನು ಚಿಗುರಿಕೊಳ್ಳುವ ಆತ್ಮವಿಶ್ವಾಸದಲ್ಲಿರುವಾಗಲೇ ಇದೀಗ ಕೊರೋನಾದಿಂದಾಗಿ ಮತ್ತೆ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಭೀತಿಯಲ್ಲಿದ್ದಾರೆ. ಆದರೆ ಈಗಲೇ ಪರಿಣಾಮ ಹೀಗೇ ಎಂದು ಹೇಳಲಾಗದು. ಒಂದಂತೂ ಖರೆ ಈ ವರ್ಷಾಂತ್ಯದ ತನಕ ಯಾವುದೇ ಕ್ಷೇತ್ರ ಚೇತರಿಸಿಕೊಳ್ಳುವ ಸಾಧ್ಯತೆಯಂತೂ ಬಹಳ ಕಡಿಮೆ. ಹಾಗೇ ಆರ್ಟ್ ಮಾರ್ಕೆಟ್ ಕೂಡ. ಉಳಿದ ಕ್ಷೇತ್ರಗಳಿಗೆ ಸರ್ಕಾರ ಹೇಗೆ ನೆರವಿಗೆ ಬರುತ್ತದೋ ಅದೇ ಪ್ರಕಾರ ವೃತ್ತಿಪರ ಕಲಾವಿದರ ನೆರವಿಗೂ ಬಂದಲ್ಲಿ ತಕ್ಕ ಮಟ್ಟಿಗೆ ಉಸಿರಾಡಿಸಿಯಾರು. ಇಲ್ಲವಾದಲ್ಲಿ ಕಠಿಣ ಸ್ಥಿತಿ ಎದುರಿಸಬೇಕಾದೀತು ಎಂದು ತಜ್ಞರೇ ಅಭಿಪ್ರಾಯ ಪಡುತ್ತಿದ್ದಾರೆ.
ಇದೇ ಏಪ್ರಿಲ್ 24ರಿಂದ ಕರ್ನಾಟಕ ಚಿತ್ರಕಲಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಇಂಡಿಯಾ ಆರ್ಟ್ ಫೆಸ್ಟಿವಲ್ ಬೆಂಗಳೂರು ಆವೃತ್ತಿಯೂ ಇದೀಗ ಮುಂದೂಡಲ್ಪಟ್ಟಿದೆ. ಸೆಪ್ಟೆಂಬರ್‍ನಲ್ಲಿ ನಡೆಸುವ ಆಶಾಭಾವನೆಯನ್ನು ಆಯೋಜಕರು ವ್ಯಕ್ತಪಡಿಸಿದ್ದಾರೆ.
ಕರಕುಶಲ ಕ್ಷೇತ್ರ ಕೂಡ ಕೊರೋನಾದಿಂದ ಭಾರೀ ನಷ್ಟ ಅನುಭವಿಸಿದೆ. ಕರಕುಶಲ ಕಲೆಯನ್ನು ವಾಣಿಜ್ಯೋದ್ಯಮ ಮಾಡಿಕೊಂಡಿರುವ ಕಲಾವಿದರು ಅಥವಾ ಕಲಾ ಪೋಷಕರು ಲಾಕ್‍ಡೌನ್‍ನಿಂದ ಈಗಾಗಲೇ ನಷ್ಟ ಎದುರಿಸಿದ್ದಾಗಿದೆ. ಮುಂದೆಯೂ ಕಲಾವಿದರಿಗೆ ಈ ಸವಾಲು ತಪ್ಪಿದ್ದಲ್ಲ. ದೇಶದ ಪ್ರವಾಸೋದ್ಯಮ ಇನ್ನೇನು ರಜಾ ಕಾಲದಲ್ಲಿ ಚೇತರಿಸಿಕೊಳ್ಳುತ್ತದೆ ಎಂಬ ಹೊತ್ತಲ್ಲೇ ಕೊರೋನಾದಿಂದಾಗಿ ಸಂಪೂರ್ಣವಾಗಿ ಕುಸಿದಿದೆ.
ಬೆಂಬಲಕ್ಕೆ ನಿಂತಿದೆ ಡಿಜಿಟಲ್ ಮಾರ್ಕೆಟ್
ಜಾಗತಿಕ ಮಾರುಕಟ್ಟೆಯನ್ನು ತಲ್ಲಣಗೊಳಿಸಲಾರಂಭಿಸಿದ ಬೆನ್ನಲ್ಲೇ ಅಮೆರಿಕ, ಚೀನಾ ಸೇರಿದಂತೆ ಇನ್ನೂ ಅನೇಕ ದೇಶಗಳ ಕಲಾ ಸಂಸ್ಥೆಗಳು ಹಾಗೂ ಕಲಾ ಪೋಷಕರು ಇನ್‍ಸ್ಟಾಗ್ರಾಮ್‍ಗಳಲ್ಲಿ #artistsupportpledge ನೊಂದಿಗೆ ಬೆಂಬಲಕ್ಕೆ ನಿಂತಿದ್ದಾರೆ. ಇದು ಎಷ್ಟರ ಮಟ್ಟಿಗೆ ನೆರವಾದೀತೋ ನಾ ಕಾಣೆ. ಆದರೆ ಕಡೇ ಪಕ್ಷ ಉಸಿರಾಡಿಕೊಳ್ಳಲಾದರೂ ಸಹಕಾರಿಯಾದೀತು ಎಂಬ ಆಶಾಭಾವನೆಯಲ್ಲಿರೋಣ.
“ ಕ್ರಾಂತಿಕಾರಕ ಬದಲಾವಣೆ ಆದೀತು “
ಪ್ರತಿಯೊಬ್ಬರಿಗೂ ಇದು ಅನಿರೀಕ್ಷಿತ ಶಾಕ್. ಯಾರೂ ಕೂಡ ವೈರಸ್ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಎಫೆಕ್ಟ್ ಮಾಡಿಬಿಡುತ್ತೆಂದು ಭಾವಿಸಿರಲಿಲ್ಲ. ಬಹುಶಃ ಜಾಗತಿಕ ಮಟ್ಟದಲ್ಲಿ ಆರೋಗ್ಯ ಸುರಕ್ಷತೆಯ ಬಗ್ಗೆ ಎಲ್ಲಾ ದೇಶಗಳೂ ಹೆಚ್ಚಿನ ಒತ್ತು ಕೊಡದೇ ಇರುವುದರ ಪರಿಣಾಮ ಇಂದು ನಾವು ತಕ್ಕ ಬೆಲೆ ತೆರುತ್ತಿದ್ದೇವೆ. ಜಾಗತಿಕ ಮಟ್ಟದಲ್ಲಿಯೇ ಈ ಬಗ್ಗೆ ಎಚ್ಚೆತ್ತುಕೊಳ್ಳುವ ಕೆಲಸವಾಗಬೇಕು. ಕೊರೋನಾದಂತಹ ವೈರಸ್‍ನ ಪರಿಣಾಮ ಎಲ್ಲಾ ಕ್ಷೇತ್ರಗಳ ಮೇಲೆ ಆದಂತೆ ನಮ್ಮ ಕ್ಷೇತ್ರದ ಮೇಲೂ ಆಗಿದೆ. ಕಲೆ ಆರಾಧಿಸುವ ಅಥವಾ ಪ್ರೋತ್ಸಾಹಿಸುವ ಉಳಿದ ಕ್ಷೇತ್ರಗಳು ಸುಭಿಕ್ಷದಿಂದ ಇದ್ದಾಗಲೇ ಕಲಾಕ್ಷೇತ್ರವೂ ತಲೆ ಎತ್ತಿನಿಂತಿರಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ, ಪೋಷಕರೇ ಇಲ್ಲವೆಂದಮೇಲೆ ನಮ್ಮ ಕ್ಷೇತ್ರದ ಬೆಳವಣಿಗೆಯೂ ಸಾಧ್ಯವಾಗುವುದಿಲ್ಲ.
ಆದರೆ ಇವೆಲ್ಲದರ ನಡುವೆ ಸಮಾಧಾನಕರ ಬೆಳವಣಿಗೆ ಏನೆಂದರೆ, ಈ ಸಂದರ್ಭದಲ್ಲಿ ಆನ್‍ಲೈನ್ ಕಲಾ ಚಟುವಟಿಕೆಗಳು ಹೆಚ್ಚಿನ ಒತ್ತು ಪಡೆದುಕೊಳ್ಳುತ್ತಿದೆ. ಇದರ ಯಶಸ್ಸನ್ನು ಈಗಲೇ ನಿರ್ಧರಿಸಲು ಸಾಧ್ಯವೇ ಇಲ್ಲ. ಯಾವ ದಿಕ್ಕಿನಲ್ಲಿಯೂ ಇದು ಸಾಗಬಹುದು. ಹಾಗಾಗಿ ಆಶಾದಾಯಕರಾಗಿ ಇರಬೇಕು. ಆದರೆ ಒಂದು ಆತಂಕವೇನೆಂದರೆ, ಕಲಾವಿದನಾಗಬೇಕು, ಕಲಾವಿದನಾಗಿ ಬೆಳೆಯಬೇಕು ಎಂಬ ಕನಸು ಹೊತ್ತು ಈಗಷ್ಟೇ ಎಂಟ್ರಿ ಕೊಟ್ಟವರು ಅಥವಾ ಒಂದು ಮಾಧ್ಯಮದಲ್ಲಿ ನೆಲೆಕಂಡುಕೊಂಡು, ಬೆಳವಣಿಗೆಯ ಹೊಸ್ತಿಲಲ್ಲಿದ್ದವರು ಮುಂಬರುವ ದಿನಗಳಲ್ಲಿ ಎದುರಾಗುವ ಸವಾಲನ್ನು ಹೇಗೆ ಎದುರಿಸುತ್ತಾರೆ ಎನ್ನವುದು ಪ್ರಶ್ನಾರ್ಹ. ಜೊತೆಗೆ ಅನುಭವಿಗಳಾಗಿ ನೆಲೆಯೂರಿರುವ ಕಲಾವಿದರ ಕೈಯಲ್ಲಿರುವ ಪ್ರಾಜೆಕ್ಟ್ ಗಳು ಮುಂದೇನು? ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.
ಈ ಕ್ಷಣ ನನಗನ್ನಿಸುವುದೇನೆಂದರೆ ಆರ್ಟ್ ಮಾರ್ಕೆಟ್‍ನಲ್ಲಿಯೂ ಮುಂಬರುವ ದಿನದಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆ ಆಗಬಹುದು. ಆ ಸಾಧ್ಯತೆ ಹೆಚ್ಚಿದೆ ಅನಿಸುತ್ತಿದೆ. ಆದರೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎನ್ನುವುದನ್ನು ಈಗಲೇ ಖಚಿತವಾಗಿ ನಿರ್ಧರಿಸಲಾಗದು. ಜೊತೆಗೆ ಕ್ರೀಯಾಶೀಲನಾದವ ಒಂದು ಹೊಸ ಅಧ್ಯಾಯ ಸೃಷ್ಟಿಸುವ ನೆಲೆಯಲ್ಲಿ ಯೋಚಿಸಲಂತೂ ಇದು ಸುಸಂದರ್ಭವನ್ನಾಗಿಸಿಕೊಳ್ಳಬಹುದು.
- ಎಲ್.ಎನ್. ತಲ್ಲೂರು, ಆರ್ಟಿಸ್ಟ್
“ ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು“
ಇಂಥ ಸಂದರ್ಭಗಳಲ್ಲಿ ಕಲೆಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದ ಕಲಾವಿದರು ನಲುಗಿ ಹೋಗುತ್ತಾರೆ. ಅದರಲ್ಲೂ ಅವರನ್ನು ನಂಬಿಕೊಂಡಿರುವವರು ಇದ್ದಾಗ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಷ್ಟರಲ್ಲೇ ಬದುಕು ದುರಂತ ಸನಿಹ ತಂದು ನಿಲ್ಲಿಸಿಬಿಡುತ್ತದೆ. ಪ್ರತಿಯೊಬ್ಬ ಕಲಾವಿದರು ಈ ಸಂದರ್ಭದಲ್ಲಿ ತನ್ನಿಂದ ಸಾಧ್ಯವಾಗುವ ಯಾವುದೇ ಕೆಲಸವನ್ನೂ ಮಾಡಲು ಹಿಂಜರಿಕೆ ಇಟ್ಟುಕೊಳ್ಳಬಾರದು. ಆತ್ಮವಿಶ್ವಾಸದಿಂದ ಇಡುವ ಹೆಜ್ಜೆಯೇ ನಮ್ಮನ್ನು ದಡ ಸೇರಿಸುತ್ತದೆ. ಹಾಗಾಗಿ ಭಯ ಪಡದೇ ಹೆಜ್ಜೆ ಇಡಬೇಕು.
ಹಾಗೆ ನೋಡಿದರೆ ಎಮರ್ಜಿಂಗ್ ಆರ್ಟಿಸ್ಟ್ ಗಳಿಗೆ ಕೊರೋನಾ ಜಾಗತಿಕ ಮಟ್ಟದಲ್ಲಿ ತಂದೊಡ್ಡಿರುವ ನಷ್ಟ ಅಷ್ಟಿಷ್ಷಲ್ಲ. ನಮ್ಮ ಊಹೆಗೂ ನಿಲುಕದಷ್ಟು ದೊಡ್ಡ ಹಾನಿ ಮಾಡಿವೆ ನಿಜ. ಹಾಗಂತ ನಾವು ನಮ್ಮ ಕೆಲಸವನ್ನು ನಿಲ್ಲಿಸಿಕುಳಿತಿರಲು ಸಾಧ್ಯವಿಲ್ಲವಲ್ಲ. ಅದೇ ಕೆಲಸವನ್ನು ಮಾಡಲೇಬೇಕು. ಬದುಕಿನ ಶೈಲಿ ಕೊಂಚ ಬದಲಾಗಬಹುದಷ್ಟೇ, ಅದಕ್ಕೆ ಹೊಂದಿಕೊಂಡು ಆತ್ಮವಿಶ್ವಾಸದಿಂದ ಹೆಜ್ಜೆ ಇಡಬೇಕಿದೆ. ಉದಾಹರಣೆಗೆ ನನ್ನ ಕಲಾಕೃತಿಗಳ ಪ್ರದರ್ಶನ ಮಾರ್ಚ್ 12ರಿಂದ ದುಬೈನಲ್ಲಿ ನಡೆಯಬೇಕಿತ್ತು. ಕಲಾಕೃತಿಗಳನ್ನೆಲ್ಲ ತೆಗೆದುಕೊಂಡು ದುಬೈ ತಲುಪಿದ ಬಳಿಕ ಆಯೋಜಕರು ಪ್ರದರ್ಶನ ನಡೆಸಲು ಸಾಧ್ಯವಾಗದೇ ಮುಂದೂಡಿದರು. ಕಾರಣ ಕೊರೋನಾ ವಿಶ್ವಮಟ್ಟದಲ್ಲಿ ಹಠಾತ್ತಾಗಿ ಹರಡುವ ಮೂಲಕ ಗಾಬರಿಗೊಳಿಸಿಬಿಟ್ಟಿದೆ. ಇದಕ್ಕೆ ಯಾರನ್ನೂ ಹೊಣೆಯಾಗಿಸಲು ಸಾಧ್ಯವಿಲ್ಲ. ನಷ್ಟವಾಗುವುದೂ ಸಹಜ. ಎಲ್ಲಾ ಕ್ಷೇತ್ರಗಳೂ ನಷ್ಟಕ್ಕೆ ತುತ್ತಾದ ಕಾರಣ ಸ್ವಲ್ಪ ಮಟ್ಟಿಗೆ ಯೋಚಿಸಿಯೇ ಹೆಜ್ಜೆ ಇಡಬೇಕಷ್ಟೆ.
ಆದರೆ ಈ ಸಂದರ್ಭದಲ್ಲಿ ಸರ್ಕಾರ, ಕಲಾ ಪೋಷಕರು ತುಂಬಾ ಕಷ್ಟಕ್ಕೆ ಸಿಲುಕಿಕೊಂಡಿರುವ ಕಲಾವಿದರ ನೆರವಿಗೆ ನಿಲ್ಲುವಲ್ಲಿ ಔದಾರ್ಯ ತೋರಬೇಕು. ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಹಾಗೇ ಕಲಾವಿದರೂ ಯಶಸ್ಸು ಕಂಡುಕೊಳ್ಳುವಲ್ಲಿ ಪ್ರಯತ್ನ ಮುಂದುವರಿಸಬೇಕು. ಕಲಾವಿದನಿಗೆ ಆತ್ಮಸ್ಥೈರ್ಯ ಬಹಳ ಮುಖ್ಯ. ಇಂಥ ಸಂದರ್ಭದಲ್ಲಿ ಅದೇ ನಮ್ಮನ್ನು ಗೆಲುವಿನತ್ತ ಸಾಗಿಸುತ್ತದೆ.
- ಎಂ. ನಾರಾಯಣ್, ಆರ್ಟಿಸ್ಟ್
“ಉತ್ತಮ ಕಲಾಕೃತಿ ರಚನೆಗಿದು ಸಕಾಲ”
ಆರ್ಟ್ ಮಾರ್ಕೆಟ್ ಮೇಲೂ ಪರಿಣಾಮ ಬೀರಿದೆ ನಿಜ. ಹಾಗಂತ ಮುಂದೆ ಏನೋ ಆಗಿಬಿಡುತ್ತೆ ಅಂದು ಭಯಪಡಬೇಕಿಲ್ಲ. ಕಾಲಚಕ್ರ… ಈಗ ಮಾರ್ಕೆಟ್ ಕುಸಿದರೂ ಮತ್ತೆ ಉತ್ತಮ ದಿನಗಳು ಬಂದೇ ಬರುತ್ತದೆ. ಹೀಗಾಗಿ ಆಶಾದಾಯಕರಾಗಿ ನಮ್ಮ ಕೆಲಸ ನಾವು ಮುಂದುವರಿಸಲು ಯಾವುದೇ ಆತಂಕ ಇಲ್ಲ ಅನ್ನೋದೇ ನನ್ನ ಮೊದಲ ಅಭಿಪ್ರಾಯ. 2003-2004ರಲ್ಲಿಯೂ ಆರ್ಟ್ ಮಾರುಕಟ್ಟೆ ಕುಸಿದಿತ್ತು. ಆಗಲೂ ಇದೇ ರೀತಿ ಕಲಾವಿದರು ಆತಂಕಗೊಂಡಿದ್ದರು. ಮತ್ತೆ ನಿಧಾನವಾಗಿ ಚೇತರಿಸಿಕೊಂಡಿತು. ಅಗೈನ್ 2007-2008ರಲ್ಲಿ ಕುಸಿತ ಕಂಡಿತು. ಅಂದಿನಿಂದ ಪೀಕ್ ಸ್ಟೇಜ್‍ಗೆ ಹೋಗದೇ ಇದ್ದರೂ, ಉತ್ತಮ ಕಲಾಕೃತಿಗಳ ಮಾರಾಟದಲ್ಲಿ ಭಾರೀ ಹಿನ್ನಡೆ ಏನೂ ಆಗಿಲ್ಲ ಎಂದೇ ಭಾವಿಸುತ್ತೇನೆ. ಆದರೆ, ಇದೀಗ ಕೊರೋನಾ ವೈರಸ್ ತಂದ ಆಘಾತ ಅಪ್ ಕಮಿಂಗ್ ಆರ್ಟಿಸ್ಟ್ ಗಳಿಗೆ ತೊಂದರೆ ಮಾಡಿದೆ. ಆದರೆ ಆರೇಳು ತಿಂಗಳಲ್ಲಿ ಮತ್ತೆ ಈ ಹಿಂದಿನ ಸ್ಥಿತಿಗೆ ಮರಳಲಿದೆ ಎಂಬ ವಿಶ್ವಾಸವಿದೆ.
ಒಂದೇನೆಂದರೆ, ಲಾಕ್‍ಡೌನ್ ಸಮಯವನ್ನು ಆರ್ಟಿಸ್ಟ್ ಗಳು ಹೊಸ ಯೋಚನೆಗಳಿಗೆ, ಹೊಸ ಶೈಲಿಯಲ್ಲಿ ರಚಿಸಲು, ಹೊಸ ಪ್ರಯೋಗಗಳಿಗೆ ಹಾಗೂ ಇನ್ನೂ ಉತ್ತಮ ಕಲಾಕೃತಿಗಳ ರಚನೆಗೆ ಬಳಸಿಕೊಳ್ಳಲು ಇದು ಸಕಾಲ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಮುಂದೆ ಉತ್ತಮ ದಿನ ಬಂದೇ ಬರುತ್ತದೆ.
- ಗುರುದಾಸ್ ಶೆಣೈ, ಆರ್ಟಿಸ್ಟ್
“ಹೊಸತನಕ್ಕೆ ನಾಂದಿ“
ಎಲ್ಲಾ ರೀತಿಯ ಸಂದರ್ಭಗಳನ್ನೂ ಎದುರಿಸಲು ಸಿದ್ಧವಿರಲೇಬೇಕು. ನಮ್ಮ ಕಲಾಕೃತಿಗಳು ಲಾಭ ತಂದುಕೊಟ್ಟಾಗ ಇಂಥದ್ದೊಂದು ಸಂದರ್ಭದ ಬಗ್ಗೆಯೂ ಯೋಚಿಸಿದ್ದಾಗ ಈ ಸಂದರ್ಭವನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಕಲಾವಿದರಿಗೆ ಇದು ಪ್ಲಸ್ ಪಾಯಿಂಟ್ ಕೂಡ ಆಗಲಿದೆ. ಹೊಸ ಮಾರ್ಗದಲ್ಲಿ, ಹೊಸ ಅನ್ವೇಷಣೆಗೆ ತಮ್ಮ ಸಮಯ ಮೀಸಲಿಡಲು ಸಾಧ್ಯವಾಗುತ್ತದೆ. ಅಲ್ಲದೇ ನಮ್ಮ ಕಣ್ಮುಂದೆ ಕಾಣುವ ಈ ನೋವು ಮುಂದೊಂದು ದಿನ ಹೊಸ ಕಲಾಕೃತಿಗೂ ನಾಂದಿ ಆಗಬಹುದು. ಇದು ನನ್ನ ಸೋಲಲ್ಲ ಎಂದು ಭಾವಿಸಿಯೇ ಮುನ್ನಜ್ಜೆ ಇಡುವುದನ್ನು ನಾವೇ ರೂಢಿಸಿಕೊಳ್ಳಬೇಕು. ಕೊರೋನಾ ತಂದೊಡ್ಡಿದ ಹಾನಿ ಯಾವುದೋ ಒಬ್ಬ ವ್ಯಕ್ತಿಯಿಂದಾಗಿದ್ದಲ್ಲವಲ್ಲ, ಹಾಗಾಗಿ ಪ್ರತಿಯೊಬ್ಬ ಕಲಾವಿದರೂ ಪಾಸಿಟಿವ್ ಆಗಿ ಯೋಚಿಸಿ, ಸಮಯವನ್ನು ಹೊಸ ಹಾಗೂ ಯಶಸ್ಸಿನ ಧಿಕ್ಕಿನತ್ತ ಸಾಗಲು ಮೀಸಲಿಡುವುದು ಒಳಿತು.
- ಜಯಂತ್ ಬಿ. ಹುಬ್ಳಿ, ಆರ್ಟಿಸ್ಟ್