ಸತೀಶ್ ಗುಜ್ರಾಲ್ ನಮ್ಮ ನೆಲದ ಆಸ್ತಿ

Share This

ದೇಶದ ಖ್ಯಾತನಾಮರ ಸಾಲಿಗೆ ಸೇರಿದ ಚಿತ್ರಕಲಾ ಕ್ಷೇತ್ರದ ಮೇರು ಕಲಾವಿದ, ಪದ್ಮ ವಿಭೂಷಣ ಪುರಸ್ಕøತ ಸತೀಶ್ ಗುಜ್ರಾಲ್ ನಮ್ಮನ್ನಗಲಿಲ್ಲ. ಅವರು ನಮ್ಮೊಂದಿಗೇ ಇದ್ದಾರೆ!
ಹೌದು, ಸತೀಶ್ ಗುಜ್ರಾಲ್ ನಮ್ಮನ್ನಗಲಿದ್ದಾರೆ ಎಂದು ಹೇಳಿಕೊಳ್ಳಲು ನನ್ನಂಥ ಅನೇಕ ಯುವ ಕಲಾವಿದರಿಗೆ ಸಾಧ್ಯವಾಗುವುದಿಲ್ಲ. ಕಾರಣ ನಾವು ಚಿತ್ರಕಲೆಯ ಅಭ್ಯಾಸಕ್ಕೆ ಇಳಿದ ಸಂದರ್ಭದಲ್ಲಿ ಮೇರು ಪಂಕ್ತಿಯಲ್ಲಿದ್ದ ಕಲಾವಿದರ ಪೈಕಿ ಸತೀಶ್ ಗುಜ್ರಾಲ್ ಅವರೂ ಒಬ್ಬರು. ಹಾಗಾಗಿ ಸಹಜವಾಗಿಯೇ ಈ ಕಲಾವಿದರ ಕಲಾಕೃತಿಗಳು ನಮ್ಮ ಕಣ್ಮುಂದೆ ಬಂದು ನಿಲ್ಲುತ್ತವೆ.
ನಾವು ರಚಿಸಿದ ಕಲಾಕೃತಿ ನಮಪಾಲಿಗೆ ಅದೆಷ್ಟು ಶ್ರೇಷ್ಠವಾಗಿ ಕಾಣಿಸುತ್ತಿರುತ್ತದೋ ಅದೇ ರೀತಿ ನಮ್ಮ ಅಭ್ಯಾಸ ಹಂತದಲ್ಲಿ ನಮಗೆ ಸ್ಫೂರ್ತಿಯಾದ ಪ್ರತಿಯೊಬ್ಬ ಹಿರಿಯ ಕಲಾವಿದರ ಕಲಾಕೃತಿ ಅಥವಾ ಅವರ ಧೋರಣೆಗಳು ನಮ್ಮ ಕಲಾಜೀವನದುದ್ದಕ್ಕೂ ಶ್ರೇಷ್ಠವಾಗಿಯೇ ಕಾಣಿಸುವ ಅಥವಾ ಪರಿಭಾವಿಸುವ ಸಾಧ್ಯತೆಗಳು ಜಾಸ್ತಿ. ಅಂಥ ಶ್ರೇಷ್ಠರಲ್ಲಿ ಸತೀಶ್ ಗುಜ್ರಾಲ್ ಒಬ್ಬರು. ಅವರ ಕಲಾಕೃತಿಗಳು ನನ್ನ ತಲೆಮಾರಿನ ಅನೇಕ ಕಲಾವಿದರ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದುಂಟು. ಬಹಳ ಕಲಾವಿದರು ಅವರದೇ ಶೈಲಿಯಲ್ಲಿ ಕಲಾಕೃತಿಗಳನ್ನೂ ರಚಿಸಿದ ಉದಾಹರಣೆಗಳೂ ಸಿಕ್ಕಾವು.
ಅಷ್ಟರ ಮಟ್ಟಿಗಿನ ಪ್ರಭೆ ಬೀರಿದ ಕಲಾವಿದ ಸತೀಶ್ ಗುಜ್ರಾಲ್. ಅವರ ಒಂದೊಂದೂ ಕಲಾಕೃತಿಗಳು ಭಾರತೀಯ ಕಲಾವಿದರ ಹಾಗೂ ಕಲಾಪ್ರೇಮಿಗಳ ಮನದಾಳದಲ್ಲಿ ಗಟ್ಟಿಯಾಗಿ ಬೇರೂರಿವೆ.

ಸತೀಶ್ ಗುಜ್ರಾಲ್

ಕಲಾವಿದರಾಗಿದ್ದು ಹೇಗೆ?
ಸತೀಶ್ ಗುಜ್ರಾಲ್ ಕೇವಲ ಚಿತ್ರಕಲಾವಿದರಾಗಿರಲಿಲ್ಲ. ಲೇಖಕ, ಶಿಲ್ಪಿ ಮತ್ತು ವಾಸ್ತುಶಿಲ್ಪಿಯೂ ಆಗಿದ್ದರು. ತಮ್ಮಲ್ಲಿರುವ ಕ್ರಿಯಾಶೀಲ ವ್ಯಕ್ತಿತ್ವವನ್ನು ಅಭಿವ್ಯಕ್ತಗೊಳಿಸಲು ಯಾವೆಲ್ಲಾ ಕ್ಷೇತ್ರಗಳನ್ನು ಬಳಸಿಕೊಳ್ಳಬಹುದೋ ಆ ಎಲ್ಲಾ ಕ್ಷೇತ್ರಗಳಲ್ಲಿ ಅನುಭವ ಹೊಂದಿದ್ದರು. ಬ್ರಿಟಿಷ್ ಇಂಡಿಯಾದ ಪಂಜಾಬ್ ಪ್ರಾಂತ್ಯದ ಜೇಲಮ್‍ನಲ್ಲಿ 1925ರಲ್ಲಿ ಜನಿಸಿದ ಸತೀಶ್ ಗುಜ್ರಾಲ್ ಅವರು ಸ್ವಾತಂತ್ರೋತ್ತರ ಕಲಾಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದು ಗುರುತಿಸಿಕೊಂಡ ಕೆಲವೇ ಕೆಲವು ಕಲಾವಿದರಲ್ಲಿ ಒಬ್ಬರಾಗಿದ್ದರು.
ಬಾಲ್ಯದಲ್ಲೇ ಕ್ರಿಯಾಶೀಲ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರ ಬಾಲ್ಯದ ಒಂದು ಘಟನೆ ಬಗ್ಗೆ ಸ್ವತಃ ಅವರೇ ತಮ್ಮ ಕುರಿತಾದ ಸಾಕ್ಷ್ಯ ಚಿತ್ರ “ಅ ಬ್ರಶ್ ವಿತ್ ಲೈಫ್” ಮತ್ತು ಇನ್ನೂ ಕೆಲ ಸಂದರ್ಶನಗಳಲ್ಲಿ ಮೆಲುಕು ಹಾಕಿದ್ದಾರೆ.
“ನಾನು ಎಂಟು ವರ್ಷದಲ್ಲಿದ್ದಾಗ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಹಾಸಿಗೆ ಹಿಡಿಯಬೇಕಾಯಿತು. ಆ ನಂತರದ ಆರೇಳು ವರ್ಷಗಳ ಅಂತರದಲ್ಲಿ ಮರೆಯಲಾಗದ ರೀತಿಯ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಯಿತು. 14ನೇ ವರ್ಷಕ್ಕೆ ಕಾಲಿಡುವ ಹೊತ್ತಿಗೂ ನನ್ನಿಂದ ನಡೆಯಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ. ಶ್ರವಣ ಜ್ಞಾನವೂ ಇಲ್ಲದ ಪರಿಸ್ಥಿತಿ ಎದುರಿಸಬೇಕಾಯಿತು. ಈ ಸಮಸ್ಯೆಯಿಂದಾಗಿ ಸಂವನಕ್ಕೆ ತೀವ್ರವಾದ ತೊಂದರೆಯನ್ನೇ ಅನುಭವಿಸಬೇಕಾಯಿತು”
“ಇಂಥ ಸಂದಿಗ್ಧತೆಯಲ್ಲೂ ನನ್ನಲ್ಲಿ ಆತ್ಮವಿಶ್ವಾಸ ಬೆಳೆಯುವಂತೆ ಮಾಡಿದವರು ನನ್ನ ತಂದೆ. ಅದೆಷ್ಟೋ ಪುಸ್ತಕಗಳನ್ನು ತಂದು ಓದಲು ಹೇಳಿದರು. ಇನ್ನೊಂದು ವಿಷಯ ಏನೆಂದರೆ ನನ್ನ ಶಿಕ್ಷಣಕ್ಕೆ ಸಿಕ್ಕಿದ್ದೇ ಮೂರ್ನಾಲ್ಕು ವರ್ಷ ಅಷ್ಟೆ. ನನಗೆ ಉರ್ದುವಿನಲ್ಲಿ ಮಾತ್ರ ಓದಲು ಸಾಧ್ಯವಾಗುತ್ತಿತ್ತು. ಹೀಗಾಗಿ ಆ ಆರು ವರ್ಷಗಳ ಕಾಲ ಅದೆಷ್ಟೋ ಉರ್ದು ಮತ್ತು ಪಂಜಾಬಿ ಕವನ ಸಂಕಲನ, ಗದ್ಯ ಆಗೂ ಇತಿಹಾಸ ಪುಸ್ತಕಗಳನ್ನು ಓದಿದೆ. 14 ವರ್ಷದ ಬಳಿಕ ಬಹಳ ಕಷ್ಟಪಟ್ಟು ನಡೆಯಲಾರಂಭಿಸಿದೆ. ಎಲ್ಲಾ ಮಕ್ಕಳಂತೆ ನನಗೂ ಶಾಲೆಗೆ ಹೋಗಿ ಓದಬೇಕೆನ್ನಿಸುತ್ತಿತ್ತು. ಆದರೆ, ನನಗೆ ಶ್ರವಣದೋಷವಿದೆ. ಹೀಗಾಗಿ ಎಲ್ಲಾ ಮಕ್ಕಳಂತೆ ಶಿಕ್ಷಣ ಸಾಧ್ಯವಿಲ್ಲ ಎನ್ನುವುದನ್ನು ತಂದೆ ಮನವರಿಕೆ ಮಾಡಿಕೊಟ್ಟರು. ಮಾನಸಿಕವಾಗಿ ತುಂಬಾ ನೊಂದುಕೊಂಡಿದ್ದೆ ಕೂಡ. ಆಗ ನಮ್ಮ ತಂದೆ ಒಂದು ಮಾತು ಹೇಳಿದರು. ಜೀವನದಲ್ಲಿ ಸಾಧಿಸಬೇಕೆಂದಿದ್ದರೆ ಇದಾವುದೂ ಸಮಸ್ಯೆ ಅಲ್ಲ. ನೀನೂ ಜೀವನದಲ್ಲಿ ಒಬ್ಬ ಶ್ರೇಷ್ಠ ಕಲಾವಿದ ಆಗಲು ಸಾಧ್ಯ. ಚಿತ್ರಕಲೆ ನಿನ್ನ ಮುಂದಿರುವ ಅತ್ಯುತ್ತಮ ಆಯ್ಕೆ ಎಂದು ತಿಳಿ ಹೇಳಿದರು. ನಂತರ ಲಾಹೋರ್‍ನ ಕಲಾಶಾಲೆಯೊಂದಕ್ಕೆ (ಮಯೋ ಸ್ಕೂಲ್ ಆಫ್ ಆರ್ಟ್) ಸೇರಿಕೊಂಡೆ. ಅಲ್ಲಿಂದ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಬೆಳೆಯಲೂ ಸಾಧ್ಯವಾಯಿತು. ಬಳಿಕ ಕಲಾವಿದನೂ ಆದೆ”
“ಚಿತ್ರಕಲೆ ಕಲಿಕೆ ಸಂದರ್ಭದಲ್ಲಿ ವಾಸ್ತುಶಿಲ್ಪದ ಕಡೆಯೂ ಅಧ್ಯಯನ ಬೆಳೆಸಿಕೊಂಡೆ. ಹಾಗೇ ಶಿಲ್ಪ ರಚನೆಯಲ್ಲೂ ಆಸಕ್ತಿ ಬೆಳೆಸಿಕೊಂಡೆ ಇದು ಮುಂದೆ ನನ್ನನ್ನು ವಾಸ್ತುಶಿಲ್ಪಿಯಾಗಿಯೂ, ಶಿಲ್ಪಿಯಾಗಿಯೂ ಗುರುತಿಸಿಕೊಳ್ಳಲು ಸಾಧ್ಯವಾಯಿತು”
ಸತೀಶ್ ಗುಜ್ರಾಲ್ ಅವರು ಲಾಹೋರ್‍ನಿಂದ ಮುಂಬೈಗೆ ಸ್ಥಳಾಂತರವಾದ ಬಳಿಕ ಪ್ರತಿಷ್ಠಿತ ಜೆ.ಜೆ.ಸ್ಕೂಲ್‍ನಲ್ಲಿ ಕಲಾಭ್ಯಾಸ ಮುಂದುವರಿಸುತ್ತಾರೆ. ಬಳಿಕ ಮೆಕ್ಸಿಕೋ ಸ್ಕಾಲರ್‍ಶಿಪ್ ಕೂಡ ಪಡೆದು ವಿಶೇಷ ಅಧ್ಯಯನ ಕೂಡ ನಡೆಸಿ ದೇಶದ ದೊಡ್ಡ ಆಸ್ತಿಯಾದರು.

ವಾಸ್ತುಶಿಲ್ಪಕ್ಕೆ ಕೈಗನ್ನಡಿ..!
ಹೀಗೆ ತಮ್ಮ ಕಲೆ ಮತ್ತು ವಾಸ್ತುಶಿಲ್ಪದ ನಂಟಿನ ಬಗ್ಗೆ ಹೇಳಿಕೊಂಡಿರುವ ಸತೀಶ್ ಗುಜ್ರಾಲ್ ಅವರ ಜೀವನದ ಒಂದೊಂದು ಹೆಜ್ಜೆಯೂ ಎಂಥವರನ್ನೂ ಒಮ್ಮೆ ಆಶ್ಚರ್ಯಚಕಿತರನ್ನಾಗಿಸಿ ಬಿಡುತ್ತದೆ. ಅವರ ವಾಸ್ತುಶಿಲ್ಪಕ್ಕೆ ಉದಾಹರಿಸಬಹುದಾದ ಅತ್ಯುತ್ತಮ ವಿನ್ಯಾಸವೆಂದರೆ ನವದೆಹಲಿಯಲ್ಲಿರುವ ಬೆಲ್ಜಿಯಂನ ರಾಯಭಾರಿ ಕಚೇರಿ ಕಟ್ಟಡ. 20ನೇ ಶತಮಾನದ ಅತ್ಯುತ್ತಮ ಸಾವಿರ ಕಟ್ಟಡ ವಿನ್ಯಾಸಗಳಲ್ಲಿ ಇದೂ ಒಂದು ಎಂದು ಅಂತಾರಾಷ್ಟ್ರೀಯ ವಾಸ್ತುಶಿಲ್ಪ ಒಕ್ಕೂಟವೇ ಗುರುತಿಸಿದೆ. ಇದು ಅವರ ಅತ್ಯುತ್ತಮ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ. ಈ ಕಟ್ಟಡ ನವದೆಹಲಿಯ ಚಾಣಾಕ್ಯಪುರಿ ಜಿಲ್ಲೆಯ ಶಾಂತಿಪಥ್‍ನಲ್ಲಿದ್ದು, ಕೆಪ್ಪು ಕಲ್ಲಿನಿಂದ ಕಟ್ಟಲಾಗಿದೆ.

ಬೆಲ್ಜಿಯಂನ ರಾಯಭಾರಿ ಕಚೇರಿ

ಇಂಪ್ರೆಸ್ಸೀವ್ ಕಲಾಕೃತಿಗಳು
ಸತೀಶ್ ಗುಜ್ರಾಲ್ ಅವರ ಅನೇಕ ಕಲಾಕೃತಿಗಳು, ಶಿಲ್ಪಗಳನ್ನು ಗಮನಿಸಿದಾಗ ನನಗೆ ನೆನಪಿಗೆ ಬರುತ್ತಿದ್ದ ಕಲಾವಿದ ಸಾಲ್ವಡಾರ್ ಡಾಲಿ!
ಅದೇನೋ… ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂಬಂತೆ ಆ ಡಾಲಿಯ ಲೋಕವೇ ಬೇರೆ. ಆತನ ಮೀಸೆಯೂ ಬೇರೆಯೇ ಬಿಡಿ. ನಿರ್ವಿಷಯ ವಾದ ಮಂಡಿಸುವಂತೆ ತಮ್ಮ ಕಲಾಕೃತಿಗಳಿಗೆ ವಸ್ತುವಾಗಿಸಿಕೊಂಡು ಕಲಾಕೃತಿ ರಚಿಸುತ್ತಲೇ ಒಂದು ರಈತಿಯಲ್ಲಿ ವಿತಂಡವಾದವನ್ನೇ ಮುಂದಿಟ್ಟಿರುವುದೆಲ್ಲಾ ಈಗ ಇತಿಹಾಸ. ವಾಸ್ತವಿಕತೆಗಿಂತ ವಿಭಿನ್ನವಾಗಿ ನೋಡುವುದೇ ಡಾಲಿಯ ಕಲಾಕೃತಿಗಳಲ್ಲಿನ ಆಕರ್ಷಣೆ ಎಂಬಂತೆ ರಚಿಸಿದ್ದನ್ನು ಕಾಣಬಹುದು. ಹಾಗೇ ಸತೀಶ್ ಗುಜ್ರಾಲ್ ಅವರ ಕಲಾಕೃತಿಗಳಲ್ಲೂ ಈ ಪ್ರಭಾವ ಕಾಣಬಹುದು ಅನಿಸಿದ್ದುಂಟು. ಆದರೆ ಅದರ ಜತೆ ಜೊತೆಗೇ ಭಾರತೀಯ ಜೀವನ ಶೈಲಿಯನ್ನೂ ಜೋಡಿಸಿಡುವ ರೀತಿಯಲ್ಲಿ ಕಲಾಕೃತಿಗಳನ್ನು ರಚಿಸಿದ್ದಾರೆ. ಹಾಗಂತ ಡಾಲಿಯಿಂದಲೇ ಪ್ರಭಾವಿತರಾಗಿದ್ದರೂ ಎನ್ನಲೂ ಎಲ್ಲೂ ಸ್ಪಷ್ಟ ಮಾಹಿತಿ ನನಗಂತೂ ಸಿಕ್ಕಿಲ್ಲ. ಇಲ್ಲದೆಯೂ ಇರಬಹುದು, ಇದ್ದರೂ ಇರಬಹುದು ಎನ್ನಬಹುದಷ್ಟೆ.
ಇರಲಿ ಅದು ಮುಖ್ಯವೂ ಅಲ್ಲ. ಒಂದೊಮ್ಮೆ ಹೌದಾಗಿದ್ದರೂ, ಅಲ್ಲವಾಗಿದ್ದರೂ ಆಯಾ ಕಾಲಘಟ್ಟದ ಕಲಾವಿದರಲ್ಲಿ ಆಗುವ ಸಹಜ ಪ್ರಕ್ರಿಯೆ ಎಂದೇ ಭಾವಿಸೋಣ. ಆದರೆ ಡಾಲಿಯಲ್ಲಿದ್ದ ಕಲ್ಪನಾಶಕ್ತಿ ಅಥವಾ ಕಲಾಕೃತಿಯ ರಚನಾ ಸಾಮಥ್ರ್ಯವನ್ನು ಸತೀಶ್ ಗುಜ್ರಾಲ್ ಅವರಲ್ಲಿಯೂ ಕಾಣಬುದಿತ್ತು. ಅವರ ಅನೇಕ ಮ್ಯೂರಲ್‍ಗಳಲ್ಲಿಯೂ ಡಾಲಿಯಿಂದ ಪ್ರಭಾವಿತರಾಗಿರುವಂತೆ ರಚನೆಗೊಂಡಿರುವುದನ್ನು ಕಾಣಬಹುದು. ಭಾರತೀಯ ಸಂಸ್ಕøತಿಯನ್ನೂ ಪ್ರತಿಬಿಂಬಿಸುವಂತೆ ವಿಷಯಗಳ ಆಯ್ಕೆ ಮಾಡಿಕೊಂಡು ತಮ್ಮದೇ ಆದ ಒಂದು ಶೈಲಿ ಹಾಗೂ ಮೈವಳಿಕೆಗಳುಳ್ಳ ಕಲಾಕೃತಿಗಳ ಮೂಲಕ ಸತೀಶ್ ಗುಜ್ರಾಲ್ ಅವರು ತಮ್ಮದೇ ಆದ ಒಂದು ಐಡೆಂಟಿಟಿ ಹೊಂದಿದ್ದರು.

ಯಾರಿವರು ಸತೀಶ್ ಗುಜ್ರಾಲ್?
ಕಲಾವಿದರಾಗಿಯೇ ಪರಿಚಿತರು. ಮಾಜಿ ಪ್ರಧಾನಮಂತ್ರಿ ಇಂದ್ರಕುಮಾರ್(ಐಕೆ) ಗುಜ್ರಾಲ್ ಸಹೋದರ. ಸತೀಶ್ ಗುಜ್ರಾಲ್ ಅವರು ಪತ್ನಿ ಕಿರಣ್, ಪುತ್ರ ಮೋಹಿತ್ ಕುಟುಂಬದೊಂದಿಗೆ ನವದೆಹಲಿಯಲ್ಲಿ ವಾಸವಿದ್ದರು.

(ಸತೀಶ್ ಗುಜ್ರಾಲ್ ಅವರು ಕರ್ನಾಟಕದ ಅನೇಕ ಹಿರಿಯ ಕಲಾವಿದರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಆ ಕುರಿತು ಮುಂದಿನ ದಿನಗಳಲ್ಲಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಲಾಗುತ್ತೆ)


Share This

Leave a Reply

Your email address will not be published. Required fields are marked *