ನೀರೆ ಇದರ ಸರ್ವಸ್ವ!
ಕಣ್ಣೆದುರು ನೀರಿಲ್ಲದಿದ್ದರೆ ಒಂದೇ ಒಂದು ಕ್ಷಣವನ್ನೂ ಕಳೆಯಲು ಇಸ್ಟಪಡುವುದಿಲ್ಲ. ಹಠಾತ್ ಜಾಗ ಖಾಲಿ ಮಾಡಿಬಿಡುತ್ತದೆ. ಹಾಗಂತ ಬಾತುಕೋಳಿಯಂತೆ ನೀರಿನಲ್ಲಿಯೇ ಮುಳುಗೇಳುತ್ತ ಇರಬೇಕೆಂಬ ಆಸೆಯಾಗಲಿ, ಅನಿವಾರ್ಯತೆಯಾಗಲಿ ಇದಕ್ಕಿಲ್ಲ.
ಬಾತುಕೋಳಿಗಿಂತ ಭಿನ್ನ. ಕೆರೆ ಭಾಗ ಅಥವಾ ಹಿನ್ನೀರು ಪ್ರದೇಶಗಳಲ್ಲಿ ಇದ್ದೆ ಇರುತ್ತದೆ ಈ “ದೊಡ್ಡ ನೀರ್ ಮುಳ್ಕ” ಅರ್ಥಾತ್ Great Cormorant.
ನೀವು ನಂಬಲಿಕ್ಕೇ ಅಸಾಧ್ಯವಾದ ಒಂದು ವಿಶೇಷತೆ ಈ ಹಕ್ಕಿಯಲ್ಲಿದೆ. ನಾವು ನೀರಲ್ಲಿ ಡೈವ್ ಮಾಡುವಾಗ ಹೇಗೆ ಜಂಪ್ ಮಾಡಿ ಧುಮುಕುತ್ತೇವೋ ಹಾಗೆ ಈ ಹಕ್ಕಿ ಕೂಡ ನೀರಿಗೆ ಬೀಳುವಾಗ ತನ್ನ ದೇಹದ ತೂಕವನ್ನು ಹೆಚ್ಚಿಸಿಕೊಳ್ಳುತ್ತದೆ. ಹೇಗೆ ಸಾಧ್ಯ ಎನ್ನುವುದು ನಿಮ್ಮ ಪ್ರಶ್ನೆ. ಅದಕ್ಕಿಲ್ಲಿದೆ ಉತ್ತರ.
ನೀರಿನಲ್ಲಿರುವ ಮೀನುಗಳನ್ನು ಹಿಡಿದು ತಿನ್ನಲಿ ತನ್ನೆರಡು ರೆಕ್ಕೆಗಳನ್ನು ಜೋರಾಗಿ ಬಡಿದುಕೊಂಡು ದೇಹದಲ್ಲಿರುವ ಗಾಳಿಯನ್ನು ಹೊರಹಾಕುತ್ತ ದೇಹದ ತೂಕ ಹೆಚ್ಚಿಸಿಕೊಳ್ಳುವ ಗುಣ ಇದಕ್ಕಿದೆ. ಕ್ಷಣಾರ್ಧದಲ್ಲೇ ನೀರಿಗೆ ಧುಮುಕಿ ತಾನು ಗುರಿಯಿಟ್ಟ ಜಲಜೀವಿಯನ್ನು ಬೇಟೆಯಾಡುತ್ತದೆ. 3-4 ನಿಮಿಷಗಳ ಕಾಲ ನೀರಿನಲ್ಲಿ ಮುಳುಗಿರುವ ಸಾಮರ್ಥ್ಯ ಇದಕ್ಕಿರುವುದರಿಂದ ಒಂದಲ್ಲ ಒಂದು ಜೀವಿಯನ್ನು ಭೇಟೆಯಾಡಿಯೇ ಮೇಲಕ್ಕೇಳುತ್ತದೆ. ದೇಹದಲ್ಲಿ ಎಣ್ಣೆಯ ಅಂಶ ಇರುವ ಕಾರಣ ದೇಹ ನೀರಿನಲ್ಲಿ ಒದ್ದೆಯಾಗುವುದಿಲ್ಲ.
ಹೆಚ್ಚುಕಡಿಮೆ ಬೆಳ್ಳಕ್ಕಿಯಷ್ಟೇ ಉದ್ದ, ಅಗಲದ ಈ ಹಕ್ಕಿ ಬೂದು, ನೀಲಿ, ಕಂದು ಮಿಶ್ರಿತ ಕಪ್ಪು ಬಣ್ಣದಿಂದ ಇರುತ್ತದೆ. ಮೇಲ್ನೋಟಕ್ಕೆ ಈ ಹಕ್ಕಿಯ ದೇಹ ಬೂದು ಬಣ್ಣದಂತೆಯೇ ತೋರುತ್ತದೆ. ಕತ್ತಿನ ಕೆಳಭಾಗ ಮತ್ತು ಎದೆ ಭಾಗದಲ್ಲಿ ಬಿಳಿ ಬಣ್ಣವಿದ್ದು, ಕಣ್ಣಿನ ಕೆಳಭಾಗದಲ್ಲಿ ಹಳದಿ ಪಟ್ಟಿ ಇರುತ್ತದೆ. ಕಾಲುಗಳು ಮತ್ತು ಕೊಕ್ಕು ಬಲಿಷ್ಠವಾಗಿವೆ.
ಸಾಮಾನ್ಯವಾಗಿ ನೀರಿಗೆ ಸನಿಹದ ಮರಗಳಲ್ಲಿ ಕಡ್ಡಿಗಳನ್ನು ತಂದು ಗೂಡು ಮಾಡಿಕೊಳ್ಳುತ್ತದೆ. ಜೂನ್-ಜನವರಿ ತಿಂಗಳಾವಧಿಯಲ್ಲಿ 3-4 ತಿಳಿ ನೀಲಿ ಮಿಶ್ರಿತ ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ.
ದೊಡ್ಡ ನೀರುಕಾಗೆ ಎಂದೂ ಕರೆಯಿಸಿಕೊಳ್ಳುವ ಈ ಹಕ್ಕಿಯನ್ನು ದಾಂಡೇಲಿ, ರಂಗನತಿಟ್ಟು, ಗುಡವಿ, ಮಂಡಗದ್ದೆಗಳಲ್ಲಿ ನೋಡಲು ಸಾಧ್ಯ.
ಚಿತ್ರಕೃಪೆ: ಅಂತರ್ಜಾಲ