India Art Festival ಆರಂಭ, ಕಲಾಸಕ್ತರು ಹೋಗಿ ಬನ್ನಿ

Share This

  • 300 ಕಲಾವಿದರಿಂದ 3000 ಕಲಾಕೃತಿಗಳ ಪ್ರದರ್ಶನ
ಕಲಾವಿದರಿಗೆ ದೊಡ್ಡದೊಂದು ಸವಾಲು ಎಂದರೆ ತಮ್ಮ ಕಲಾಕೃತಿಗಳ ಮಾರ್ಕೆಟಿಂಗ್. ಕಲಾಕೃತಿಗಳನ್ನು ಅದೆಷ್ಟೇ ಕಷ್ಟವಾದರೂ ರಚಿಸಿಬಿಡಬಲ್ಲರು. ಆದರೆ ಮಾರ್ಕೆಟ್ ಮಾಡಿಕೊಳ್ಳುವ ವಿದ್ಯೆ ಕಲಾವಿದರಲ್ಲಿ ಇರುವುದಿಲ್ಲ. ಅನೇಕ ಕಾರಣಗಳಿಗಾಗಿ ಮಾರ್ಕೆಟ್ ವಿಚಾರದಿಂದ ದೂರವೇ ಇರಲು ಬಯಸುತ್ತಾರೆ. ನೂರರಲ್ಲಿ ಒಬ್ಬ ಕಲಾವಿದ ಮಾರ್ಕೆಟ್ ಮಾಡಿಕೊಳ್ಳುವಲ್ಲೂ ಜಾಣ ಎನಿಸಿಕೊಳ್ಳಬಲ್ಲ.
ಹೀಗಿರುವಾಗ ಕಲಾವಿದರಿಗೆ ಮಾರ್ಕೆಟ್‌ ಸೃಷ್ಟಿಸುವ ಕೆಲಸ ಯಾರಿಂದಾದರೂ ಆಗಬೇಕಲ್ಲವೆ? ಇದಕ್ಕೆ ವೇದಿಕೆ ಸೃಷ್ಟಿಸಿಕೊಡುವಲ್ಲಿ ಮುಂಬೈ ಮೂಲದ ರಾಜೇಂದ್ರ ಪಾಟೀಲ್ ಯಶಸ್ವಿಯಾಗಿದ್ದಾರೆ. ಇಂಡಿಯಾ ಆರ್ಟ್ ಫೆಸ್ಟಿವಲ್ (India Art Festival) ಹೆಸರಿನಲ್ಲಿ ಪ್ರತಿವರ್ಷ ಮುಂಬೈ, ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಸೂಕ್ತ ವೇದಿಕೆ ಒದಗಿಸುತ್ತಾರೆ. ಅದೇ ರೀತಿ ಇದೀಗ ಬೆಂಗಳೂರಿನ ಅರಮನೆ ಮೈದಾನದಲ್ಲಿ India Art Festival ನಡೆಯುತ್ತಿದೆ. ಡಿಸೆಂಬರ್ 12, ನಿನ್ನೆ ಈ ಮಹಾ ಕಲಾಪ್ರದರ್ಶನಕ್ಕೆ ಚಾಲನೆ ಸಿಕ್ಕಿದೆ. ಕರ್ನಾಟಕದ ಹಿರಿಯ ಕಲಾವಿದರು ಉದ್ಘಾಟಿಸಿದರು. 20 ಗ್ಯಾಲರಿಗಳೂ ಸೇರಿ 100ಕ್ಕೂ ಹೆಚ್ಚು ಬೂತ್ ಗಳಲ್ಲಿ 300ಕ್ಕೂ ಹೆಚ್ಚು ಕಲಾವಿದರ 3000ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ದೇಶದ ಖ್ಯಾತ ಕಲಾವಿದರಿಂದ ಹಿಡಿದು ಹವ್ಯಾಸಿ ಕಲಾವಿದರ ಕಲಾಕೃತಿಗಳು ಪ್ರದರ್ಶನವಾಗಿವೆ. ದೇಶದ ಬೇರೆ ಬೇರೆ ರಾಜ್ಯಗಳ ಕಲಾವಿದರು ಪಾಲ್ಗೊಂಡಿದ್ದಾರೆ. ಈ ‘ಕಲೋತ್ಸವ’ ಮೂರು ದಿನಗಳ ಕಾಲ ನಡೆಯಲಿದ್ದು, ನಾಳೆ ಭಾನುವಾರ ಸಂಪನ್ನಗೊಳ್ಳಲಿದೆ.
ಪ್ರಸಕ್ತ ಸಾಲಿನ ಆವೃತ್ತಿಯ ಮೊದಲ ದಿನ ವಿಭಿನ್ನವಾದ ಕಲಾಕೃತಿಗಳು ಕಣ್ಣಿಗೆ ಬಿದ್ದವು. ಅನೇಕ ಹವ್ಯಾಸಿ ಕಲಾವಿದರು ತಮ್ಮ ಕಲಾಕೃತಿಗಳನ್ನು ಇಂತಹ ವೇದಿಕೆಗೆ ತರುವ ಧೈರ್ಯ ಮಾಡಿದ್ದಾರೆ. ವೃತ್ತಿಪರ ಕಲಾವಿದರ ಕಲಾಕೃತಿಗಳನ್ನು ನೋಡಿ ತಾವು ಹೇಗೆ ಆ ದಾರಿಯಲ್ಲಿ ಹೆಜ್ಜೆ ಇಡಲು ಸಾಧ್ಯ ಎನ್ನುವುದರ ಅನುಭವ ಇಂತಹ ವೇದಿಕೆಗಳಲ್ಲಿ ಹವ್ಯಾಸಿ ಕಲಾವಿದರಿಗೆ ಸಿಗಲಿದೆ. ಅದರ ಪ್ರಯೋಜನ ಪಡೆದುಕೊಳ್ಳುವ ಮನಸ್ಸು ಅವರಲ್ಲಿ ಇರಬೇಕಷ್ಟೆ. ಕಲಾಕೃತಿಗಳನ್ನು ವಾಣಿಜ್ಯೋದ್ಯಮ ಆರಿಸಿಕೊಳ್ಳುವ ಮತ್ತು ಹೊಸತನ ಅಳವಡಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆ.
ಸ್ನೇಹಿತರೆ ಬಿಡುವು ಮಾಡಿಕೊಂಡು ಹೋಗಿ ಬನ್ನಿ. ಭಾನುವಾರ ಸಂಪನ್ನಗೊಳ್ಳಲಿದೆ.

Share This

Leave a Reply

Your email address will not be published. Required fields are marked *