- ಗಮನ ಸೆಳೆದ ” Sands of Time ” ಕಲಾಕೃತಿ
- ಅಸ್ತಿತ್ವವಾದ ಮುಂದಿಟ್ಟ ಜ್ಯೋತಿ ಸಿಂಗ್ ಡಿಯೋ
“Beauty is in the Eye of the Beholder”
ಹೌದು, ಯಾವುದೇ ವಸ್ತುವಿನ ಸೌಂದರ್ಯವನ್ನು ಹೇಗೆ ನೋಡುತ್ತೇವೆ ಎನ್ನುವುದರ ಮೇಲೆ ಆ ವಸ್ತು ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎನ್ನುವ ಉತ್ತರ ಬರುವುದು ಸಹಜ. ಅಂದರೆ ಸೌಂದರ್ಯ ಎನ್ನುವುದು ನೋಡುಗರ ನೋಟವನ್ನಾಧರಿಸಿದೆ ಎನ್ನುವುದು ಸ್ಪಷ್ಟ. ಅನೇಕ ಸಂದರ್ಭಗಳಲ್ಲಿ ಯಾವುದೋ ಒಂದು ವಸ್ತು ನೂರರಲ್ಲಿ ಹತ್ತು ಮಂದಿಗಷ್ಟೇ ಇಷ್ಟವಾಗಬಹುದು. ಅಂದ ಮಾತ್ರಕ್ಕೆ ಆ ವಸ್ತುವಿಗೆ ಸೌಂದರ್ಯವೇ ಇಲ್ಲ ಎನ್ನುವ ನಿರ್ಧಾರಕ್ಕೆ ಬರಲಾಗದು. ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಸೌಂದರ್ಯ ಅದಕ್ಕೆ ಇದ್ದೇ ಇದೆ. ನೋಡುಗನಿಗೆ ಇಷ್ಟ ಆಗಿರಬಹುದು, ಆಗದೆಯೂ ಇರಬಹುದು.
ವಸ್ತುವೊಂದರ ಸೌಂದರ್ಯವನ್ನೇ ಗುರಿಯಾಗಿಸಿಕೊಂಡು ಅಥವಾ ವಸ್ತುವಿನ ಗುಣಲಕ್ಷಣಗಳನ್ನು ಮೂಲವಾಗಿರಿಸಿಕೊಂಡು ಕಲಾಕೃತಿಯಾಗಿಸುವುದಕ್ಕೆ ಬದಲಾದ ಕಾಲಘಟ್ಟದಲ್ಲಿ ದೃಶ್ಯ ಕಲಾವಿದರು ಹೆಚ್ಚಿನ ಒತ್ತು ಕೊಡುತ್ತಿದ್ದಾರೆ. ಸೂಕ್ತವೆನಿಸುವ ಮಾಧ್ಯಮವನ್ನು ಉಪಯೋಗಿಸಿಕೊಂಡಿರುವ ಅಭಿವ್ಯಕ್ತಿ ಆದಾಗಿರಬಹುದು. ಕರಕುಶಲ ಕಲಾಕೃತಿಯಾಗಿಯೂ ಕಾಣಿಸಬಹುದು. ಕಲಾವಿದರಾದವರು ಅಥವಾ ಕ್ರಿಯಾಶೀಲರು ಕೊಂಚ ಭಿನ್ನವಾಗಿ ಯೋಚಿಸಬಹುದು. ಸೃಜನಾತ್ಮಕವಾಗಿ ಚಿಂತಿಸಬಹುದು. ವಸ್ತುವಿನ ಸೌಂದರ್ಯವನ್ನೇ ಕಲಾಕೃತಿ ಎಂದು ನೋಡುಗನ ಮುಂದಿಡದೆ, ನೈಜ ಸೌಂದರ್ಯವನ್ನು ಬಳಸಿಕೊಂಡು ಅದಕ್ಕೆ ಮಗದೊಂದು ಸೌಂದರ್ಯ ಕೊಡುವ ಅಥವಾ ಅರ್ಥ ಕೊಡುವ ಪ್ರಯತ್ನವನ್ನು ಕಲಾವಿದ ಮಾಡಬಲ್ಲ. ಹೀಗೂ ನೋಡಬಹುದು ಎನ್ನುವುದನ್ನು ತೋರಿಸಬಲ್ಲ. ಅದನ್ನೇ work of art ಎಂದು ಪ್ರತಿಪಾದಿಸಿದ ಉದಾಹರಣೆಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಅಷ್ಟಕ್ಕೂ ಅವು ಒಪ್ಪಿತವೆ.
ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ನಡೆದ ಕಲಾವಿದೆ ಜ್ಯೋತಿ ಸಿಂಗ್ ಡಿಯೋ ಅವರ ” EXISTENTIAL DICHOTOMY ” ಶೀರ್ಷಿಕೆಯ ಏಕವ್ಯಕ್ತಿ ಕಲಾಪ್ರದರ್ಶನದ ಕೆಲವು ಕಲಾಕೃತಿಗಳು ಪುಷ್ಟಿ ಕೊಡುವಂತಿದ್ದವು. ವಿಭಿನ್ನ ಮಾಧ್ಯಮಗಳ ಕಲಾಕೃತಿಗಳು, ವಿಭಿನ್ನ ಪ್ರಕಾರದ ಕಲಾಕೃತಿಗಳನ್ನು ಪ್ರದರ್ಶಿಸಿದ್ದರು. ಆದರೆ, ಇವರ ಪ್ರಯೋಗಾತ್ಮಕ ಕಲಾಕೃತಿಯಂತೆ ತೋರಿದ ” sands of time ” ಶೀರ್ಷಿಕೆಯ ಕಲಾಕೃತಿ ಗಮನ ಸೆಳೆಯಿತು. ಮರಳಿನ ಮಹಿಮೆ ಅದಾಗಿತ್ತು. ಜ್ಯೋತಿ ಅವರು ಮರಳನ್ನು ಬಹಳ ವಿಭಿನ್ನವಾಗಿ ಬಳಸಿಕೊಳ್ಳುವ ಯಶಸ್ವಿ ಪ್ರಯತ್ನ ಮಾಡಿದ್ದಾರೆ. ತಮ್ಮ ಕ್ರಿಯಾಶೀಲ ನಡೆ ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಈ ಮಾಧ್ಯಮದಲ್ಲಿ ಇನ್ನಷ್ಟು ಅನಾವರಣದ ಸಾಧ್ಯತೆಗೆ ಕದ ತಟ್ಟಿದ್ದಾರೆ. ಅವರ ಮುಂದಿನ ಹೆಜ್ಜೆಯ ಬಗ್ಗೆ ಸಾಕಷ್ಟು ಕುತೂಹಲ ಮೂಡುವಂತೆ ಮಾಡಿದ್ದಾರೆ. ಖಂಡಿತವಾಗಿ ” sands of time ” ಶ್ಲಾಘಿಸಲೇಬೇಕಾದ ಕಲಾಕೃತಿ.
” Hunger ” ಶೀರ್ಷಿಕೆಯ ಕಲಾಕೃತಿ ಅರ್ಥಪೂರ್ಣವಾದ ಸಂದೇಶವನ್ನು ನೀಡುವಂತಿತ್ತು. ಪ್ರಸ್ತುತಿಯ ವಿಚಾರದಲ್ಲಿ ಜ್ಯೋತಿ ಅವರು ಇನ್ನೂ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ಯೋಚಿಸಬಹುದಿತ್ತು.
ಅಂದ ಹಾಗೆ ಇನ್ನು ಕೆಲವು ಕಲಾಕೃತಿಗಳಲ್ಲಿ ಕೆಲವೊಂದು ವಸ್ತುಗಳನ್ನು ನೇರವಾಗಿ ಬಳಸಿಕೊಂಡು ನಡೆಸಿದ ಪ್ರಯತ್ನ ಸಾಮಾನ್ಯ ಅನಿಸುವಂತಿವೆ. ಕೌಶಲ್ಯ ಪ್ರಧಾನ, ಪ್ರಯೋಗಾತ್ಮಕ ಪ್ರಯತ್ನಗಳಲ್ಲಿ ಇವೂ ಒಂದು ಎನ್ನುವುದನ್ನು ಹೇಳುತ್ತಿದ್ದಾರೇನೊ ಎನ್ನುವಂತಿವೆ. ಕಲಾಕೃತಿಗಳ ರಚನೆಯ ಸಂದರ್ಭದಲ್ಲಿ ಈ ಎಲ್ಲವೂ ಸಾಮಾನ್ಯವಾಗಿದ್ದರೂ, ಪ್ರದರ್ಶಿಸುವ ಹಂತದಲ್ಲಿ ಅವರ ನಿರ್ಧಾರ “ದ್ವಂದ್ವ” ಅನಿಸಿತು. ಈ ವಿಚಾರದಲ್ಲಿ ಇನ್ನಷ್ಟು ಸ್ಪಷ್ಟತೆ ಕಂಡುಕೊಂಡಿದ್ದರೆ ಕಲಾಪ್ರದರ್ಶನ ನಿರ್ಧಾಕ್ಷಿಣ್ಯವಾಗಿ ಇನ್ನಷ್ಟು ಎತ್ತರದಲ್ಲಿ ನಿಲ್ಲುತ್ತಿತ್ತು.
ಜ್ಯೋತಿ ಅವರು ತಮ್ಮ ಈ ಕಲಾಪ್ರದರ್ಶನದ ಮೂಲಕ ತಮ್ಮ ಸಾಮರ್ಥ್ಯವನ್ನೂ ಅನಾವರಣಗೊಳಿಸುವ ಪ್ರಯತ್ನ ಮಾಡಿದ್ದಾರೆ. ಪ್ರದರ್ಶನ ವಿಭಿನ್ನ ಅನುಭವವನ್ನೂ ನೀಡಿತು. ಜ್ಯೋತಿ ಅವರಿಗೆ ಅಭಿನಂದನೆಗಳು.