ಪೂರ್ಣಕಾಲಿಕ ಪತ್ರಕರ್ತನಾಗಿದ್ದ ಸಂದರ್ಭದಲ್ಲಿ ಪ್ರತಿದಿನ, ಪ್ರತಿಕ್ಷಣ ನನಗೆ ಆಸಕ್ತಿ ಇರುವ ಸುದ್ದಿಗಳ ಮೇಲೆ ಕಣ್ಣಾಡಿಸುತ್ತ ಇರುವ ಅವಕಾಶ ಇರುತ್ತಿತ್ತು.
ಸುದ್ದಿ ಓದಿಕೊಳ್ಳುವುದು, ಅದಕ್ಕೇನೋ ತಯಾರಿ ಇವೆಲ್ಲವೂ ಅನಿವಾರ್ಯ ಒಂದೆಡೆಯಾದರೆ, ಇನ್ನೊಂದು ಕಡೆ ನನ್ನ ಆಸಕ್ತಿಯ ಸುದ್ದಿ ಬಿಡಲಾಗದೆ ಟೈಮ್ ಸಿಕ್ಕಾಗಲೆಲ್ಲ ಓದಿಕೊಳ್ಳುವ ರೂಢಿ ಇತ್ತು.
ಸುಮಾರು ಹತ್ತೆನ್ನರಡು ವರ್ಷಗಳ ಹಿಂದಿನ ಮಾತಿದು. ಹೀಗೊಮ್ಮೆ ಪಶ್ಚಿಮ ಬಂಗಾಳ ಮೂಲದ ಕಲಾವಿದ ಪರೇಶ್ ಮೈಥಿ ಅವರ ಕುರಿತು ಓದಿಕೊಂಡಿದ್ದೆ. ಸಾಧ್ಯವಾದರೆ ಭೇಟಿ ಮಾಡಿ ಮಾತ್ನಾಡ್ಬೇಕು ಅಂದ್ಕೊಂಡಿದ್ದೆ. ಕಾರಣ ಅವರ ಬೃಹದಾಕಾರದ ಕಲಾಕೃತಿಗಳನ್ನು ನೋಡಿ ನಿಬ್ಬೆರಗಾಗಿದ್ದೆ. ಹೇಗೆ ಸಾಧ್ಯ ಇವೆಲ್ಲಾ ಅಂದುಕೊಂಡಿದ್ದುಂಟು. ಕೇವಲ ಎನರ್ಜಿ ಇದ್ದರೆ ಸಾಲದು ಎಂಬ ಸತ್ಯವೊಂದು ಗೊತ್ತಿತ್ತು.
ನಾಲ್ಕು ವರ್ಷಗಳ ಬಳಿಕ ದೆಹಲಿಯ ಲಲಿತಕಲಾ ಅಕಾಡೆಮಿಯ ಗ್ಯಾಲರಿಯಲ್ಲಿ ಪರೇಶ್ ಮೈಥಿ ಅವರ ಕಲಾಪ್ರದರ್ಶನ ನಡೆದಾಗ ಭೇಟಿ ನೀಡಿ ಜಲವರ್ಣದಲ್ಲಿ ರಚಿಸಿರುವ ಬೃಹತ್ ಅಳತೆಯ ಕಲಾಕೃತಿಗಳನ್ನು ನೋಡಿ, ಅವರೊಂದಿಗೆ ಕಷ್ಟಪಟ್ಟು ಫೋಟೊ ಕ್ಲಿಕ್ಕಿಸಿಕೊಂಡಿದ್ದೆ. ಮಾತನಾಡುವ ಅವಕಾಶ ಸಿಗಲಿಲ್ಲವಲ್ಲ ಎಂದು ಬೇಸರವೂ ಆಗಿತ್ತು. ಇದಾಗಿ ವರ್ಷ ಕಳೆದು ಮತ್ತೆ ದೆಹಲಿಯಲ್ಲೇ ಅವರ ಭೇಟಿ ಆಯ್ತು, ಮಾತನಾಡಲು ಅವಕಾಶವೂ ಇತ್ತು. ಆದರೆ ಅವರು ಮಾತುಕತೆಗೆ ಅವಕಾಶ ಕೊಟ್ಟಿರಲಿಲ್ಲ. ಆಗಲಿ, ಯಾವತ್ತೋ ಒಂದು ದಿನ ಚಾನ್ಸ್ ಸಿಗುತ್ತೆ, ಟೈಮ್ ಬಂದೇ ಬರುತ್ತೆ ಅಂದುಕೊಂಡಿದ್ದೆ.
ಈಗ ಕೆಲ ದಿನಗಳ ಹಿಂದೆ ಅವಕಾಶ ತನ್ನಿಂತಾನೇ ಒದಗಿಬಂತು. ಪರೇಶ್ ಮೈಥಿ ಅವರನ್ನು ಭೇಟಿ ಮಾಡಿ ಕೆಲ ಕಾಲ ಮಾತುಕತೆಯೂ ಸಾಧ್ಯವಾಯ್ತು. ಅವರ ಕಲಾಕೃತಿಗಳ ರಚನಾ ವಿಧಾನದ ಬಗ್ಗೆ ನನಗಿದ್ದ ಕೆಲ ಕುತೂಹಲಕಾರಿ ಅಂಶಗಳ ಬಗ್ಗೆ ಕೇಳಿದೆ. ಖುಷಿಯಿಂದ ಹೇಳಿದರು. ಇತ್ತೀಚೆಗೆ ಬೆಂಗಳೂರಿನ ಸುಮುಖ ಗ್ಯಾಲರಿಯಲ್ಲಿ ಅವರ ಕಲಾಕೃತಿಗಳ ಪ್ರದರ್ಶನ ಆದಾಗಲೂ ಭೇಟಿ ಸಾಧ್ಯವೇನೋ ಅಂದುಕೊಂಡಿದ್ದೆ ಎಂದು ಪ್ರಸ್ತಾಪಿಸಿದೆ. ಸಹಜವಾಗೇ ನಕ್ಕು, ಭೇಟಿ ಮಾಡಬಹುದಿತ್ತು ಅಂದರು.
ಅಂದಹಾಗೆ, ಈ ಹಿಂದಿನ ಎರಡು ಪ್ರಯತ್ನ ವಿಫಲವಾದ್ದರಿಂದ ನಾನೂ ಭೇಟಿಯ ಗೋಜಿಗೆ ಹೋಗಿರಲಿಲ್ಲ. ಆದರೆ 2024ರ ಫೆಬ್ರವರಿಯ ಮೊದಲನೇ ವಾರ ಬಹುದಿನಗಳಿಂದ ಅಂದುಕೊಂಡಿದ್ದು ಸಾಧ್ಯವಾಯ್ತು.
ಪರೇಶ್ ಮೈಥಿ ಅವರ ಬಗ್ಗೆ ವಿಶೇಷ ಕುತೂಹಲ ಯಾಕಿತ್ತು ಎಂದರೆ, ಅವರು ವಿವಿಧ ಮಾಧ್ಯಮ(medium)ಗಳಲ್ಲಿ ಕಲಾಕೃತಿಗಳನ್ನು ರಚಿಸಬಲ್ಲರು. ಎಲ್ಲಾ ಪ್ರಕಾರದಲ್ಲಿಯೂ ಶಿಲ್ಪ ರಚಿಸಬಲ್ಲರು. ಇನ್ನು ಪೇಂಟಿಗ್(painting)ಗೂ ಸೈ, ಲ್ಯಾಂಡ್ ಸ್ಕೇಪ್ (landscape)ಗೂ ಸೈ! ಅದೂ ಬೃಹತ್ ಅಳತೆಯ ಕಲಾಕೃತಿಗಳು. ಗಾಢ ಬಣ್ಣಗಳ ಬಳಕೆ, ಬಹಳ ಸರಳವೆನ್ನುವ ವಸ್ತುವಿಷಯ. ಹೀಗಾಗಿ, ಒಬ್ಬ ಕಲಾವಿದನಾಗಿ ಸಹಜ ಕುತೂಹಲವಿತ್ತು. ಕಿರಿಯನಾದ ನನಗೆ ಪ್ರಯೋಜನವಾದೀತು ಎಂಬ ಸ್ವಾರ್ಥವೂ ಇತ್ತು. ಸ್ಫೂರ್ತಿ ಆಗಬಲ್ಲರು ಎಂಬ ವಿಶ್ವಾಸವನ್ನೂ ಹೊಂದಿದ್ದೆ. ಅದು ಸುಳ್ಳಾಗಲಿಲ್ಲ.
ಪರೇಶ್ ಮೈಥಿ ಅವರ ಕಲಾಕೃತಿಗಳು ಇತ್ತೀಚೆಗೆ ನಡೆದ ಇಂಡಿಯಾ ಆರ್ಟ್ ಫೇರ್ (India Art Fair)ನಲ್ಲಿಯೂ ಪ್ರದರ್ಶನಗೊಂಡಿದ್ದವು. ವಿಶೇಷವಾಗಿ ಬೃಹಧಾಕಾರದ ಲೋಹದ “ಮೃದಂಗ” ಗಮನಸೆಳೆಯಿತು. ಹೀಗೂ ಕಲಾಕೃತಿ ರಚನೆಗೆ ಯೋಚಿಸಬಹುದಲ್ಲವೇ? ಎಂಬ ಸ್ಫೂರ್ತಿಯ ಜೊತೆಗೆ ಹುಬ್ಬೇರಿಸುವಂತಿತ್ತು. ಮಗದೊಂದು ಗ್ಯಾಲರಿಯಲ್ಲಿ ಅವರ Landscape ಸರಣಿಯ ಕಲಾಕೃತಿಯೊಂದು ಪ್ರದರ್ಶನಗೊಂಡಿತ್ತು. ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಬಹಳ ಜಾಣತನ ತೋರುವ ಕೆಲವೇ ಕೆಲವು ಕಲಾವಿದರಲ್ಲಿ ಪರೇಶ್ ಅವರೂ ಒಬ್ಬರೆಂದರೆ ತಪ್ಪಾಗಲಾರದು.
ಪರೇಶ್ ಮೈಥಿ ಪೇಂಟರ್, ಸ್ಕಲ್ಪ್ಟರ್ ಅಷ್ಟೇ ಅಲ್ಲ. ಅವರೊಬ್ಬ ಉತ್ತಮ ಫೋಟೋಗ್ರಾಫರ್ ಮತ್ತು ಫಿಲ್ಮ್ ಮೇಕರ್ ಕೂಡ ಹೌದು. ಪ್ರತಿಷ್ಠಿತ ಪದ್ಮಶ್ರೀ ಪುರಸ್ಕೃತರಾದ ಪರೇಶ್ ಅವರು ಈ ತನಕ 80ಕ್ಕೂ ಹೆಚ್ಚು ಏಕವ್ಯಕ್ತಿ ಕಲಾಪ್ರದರ್ಶನ ನಡೆಸಿದ್ದಾರೆ. ಅನೇಕ ಪ್ರಶಸ್ತಿಗಳು ಅವರ ಮುಡಿಗೇರಿವೆ.