ಆಸ್ವಾದ್ಯಭರಿತ “ಸ್ವಾಧ್ಯಾಯ” ನೃತ್ಯೋತ್ಸವ

Share This

• ವೃತ್ತಿಪರತೆಯ ಘನತೆ ಉಳಿಸಿದ ಚಿತ್‌ಸಭಾ ಕಲೆಕ್ಟೀವ್ ನೃತ್ಯ ಕಾರ್ಯಕ್ರಮ

” ಆಸ್ವಾದಯಂತಿ ಮನಸಾ ತಸ್ಮಾನ್ನಾಟ್ಯ ರಸಾಃ “
ಭರತಮುನಿ ನಾಟ್ಯಶಾಸ್ತ್ರ ಗ್ರಂಥದಲ್ಲಿ ನಾಟ್ಯ ಮತ್ತು ಕಾವ್ಯಕ್ಕೆ ಅನ್ವಯಿಸಿ ಹೇಳಿರುವ ಮಾತಿದು. ಆಸ್ವಾದ್ಯವಾಗಿ ರಸವಾಗುವಂತಹ ಸ್ಥಾಯಿ ಭಾವಗಳ ಬಗ್ಗೆ ನಾಟ್ಯಶಾಸ್ತ್ರದಲ್ಲಿ ಉಲ್ಲೇಖಿಸಲಾದ ಸತ್ಯಗಳ ಕುರಿತು ಇಬ್ಬಗೆಯ ಅಭಿಪ್ರಾಯಗಳೂ ಇವೆ. ಆದರೆ, ರಸಾನುಭವದ ಪರಿಕಲ್ಪನೆ ಇರುವ ಯಾರೂ ಇದನ್ನು ಅಲ್ಲಗಳೆಯಲಾರರು.
ಭರತ ಹೇಳಿರುವ ಆ ಎಂಟು ರಸಗಳ ಬಗ್ಗೆ ಇಂದಿಗೂ ಮೈನವಿರೇಳಿಸುವ ಭಾವಗಳ ಅನುಭವ ಆಗುವುದುಂಟು. ಅದೆಲ್ಲಿ ಸಾಧ್ಯ…? ಎಂದು ಯಾರೇ ಪ್ರಶ್ನಿಸಿದರೂ ‘ಇಲ್ಲಿ ಸಾಧ್ಯ’ ಎಂದು ಖಂಡಿತಾ ಉತ್ತರಿಸಲಾಗದು. ಆದರೆ ಒಮ್ಮೊಮ್ಮೆ ಕೆಲವು ಪ್ರದರ್ಶನಗಳು ಈ ಅನುಭವ ನೀಡುತ್ತವೆ. ಅದನ್ನು ಕೆಲವೊಮ್ಮೆ ಹೇಗೆ ವರ್ಣಿಸುವುದು ಎನ್ನುವುದೇ ತೋಚದು. ಪದಗಳಿಂದ ಹೇಳಲೂ ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ, ಅಂತಹ ಸಂದರ್ಭದಲ್ಲಿ ಭರತ ಹೇಳಿರುವ ಎಂಟು ರಸಗಳು ಕಣ್ಣೆದುರು ಹಾದು ಹೋಗುತ್ತವೆ. ಅಬ್ಬಾ ಇದೆಂತಹ ಶಕ್ತಿ ಎಂದು ನಿಬ್ಬೆರಗಾಗಿಬಿಡುತ್ತೇವೆ.

   ಶೃಂಗಾರ ಹಾಸ್ಯ ಕರುಣಾ ರೌದ್ರವೀರ ಭಯಾನಕಾಃ
   ಭೀಭತ್ಸಾದ್ಭುತ ಸಂಜ್ಞಾ ಚೇತ್ಯಷ್ಟೌ ನಾಟ್ಯೇರಸಾಃ ಸ್ಮೃತಾಃ
ಭರತನ ಪ್ರಕಾರ ಸ್ಥಾಯಿ ಭಾವಗಳು ಎಂಟು. ರತಿ, ಹಾಸ, ಶೋಕ, ಕ್ರೋಧ, ಉತ್ಸಾಹ, ಭಯ, ಜಿಗುಪ್ಸೆ ಮತ್ತು ವಿಸ್ಮಯ. ರತಿ ಭಾವದಿಂದ ಶೃಂಗಾರವೂ, ಹಾಸದಿಂದ ಹಾಸ್ಯವೂ, ಶೋಕದಿಂದ ಕರುಣ, ಕ್ರೋಧದಿಂದ ರೌದ್ರ, ಉತ್ಸಾಹದಿಂದ ವೀರ, ಭಯದಿಂದ ಭಯಾನಕ, ಜಿಗುಪ್ಸೆಯಿಂದ ಭೀಭತ್ಸ, ವಿಸ್ಮಯದಿಂದ ಅದ್ಭುತ ಎಂಬ ಎಂಟು ರಸಗಳು ಪ್ರತೀತವಾದವು. ಆನಂತರದ ದಿನಗಳಲ್ಲಿ ಸೇರ್ಪಡೆಯಾದದ್ದು ಶಾಂತರಸ. ಸಾಮಾನ್ಯವಾಗಿ ಈ ಎಲ್ಲಾ ರಸಗಳ ಅನಾವರಣ ಸಾಧ್ಯವಾಗುವುದು ಬಹಳ ವಿರಳ. ಇಂದಿನ ಸಂದರ್ಭದಲ್ಲಿಯಂತೂ ನರ್ತಕ/ನರ್ತಕಿಯರ ಈ ಯಾವ ಪ್ರಯತ್ನದ ಫಲವನ್ನೂ ಪ್ರೇಕ್ಷಕ ಪಡೆಯಬಲ್ಲ ಎಂದು ನಿಖರವಾಗಿ ಹೇಳುವಂತಿಲ್ಲ. ಕಲಾವಿದರ ಪ್ರಯತ್ನ ಯಶಸ್ವಿಯಾದಾಗ ಅನುಭವಿಸಿ ಪ್ರತಿಕ್ರಿಯಿಸುವ ಪ್ರೇಕ್ಷಕರು/ಅವರ ಸಂಖ್ಯೆ ಇರುವುದಿಲ್ಲ. ಭಾವಗಳನ್ನು ಗ್ರಹಿಸಿ ಅನುಭವಿಸುವ ಪ್ರೇಕ್ಷಕರು ಇದ್ದಾಗ ಅದಕ್ಕೆ ಪೂರಕವಾಗಿ ನರ್ತಕ/ನರ್ತಕಿಯರು ಇರುವುದಿಲ್ಲ. ಈ ಎರಡೂ ಮೇಳೈಸುವುದು ಈ ಕಾಲಘಟ್ಟದಲ್ಲಿ ಬಹಳ ಅಪರೂಪ. ಅದರಲ್ಲೂ ವಿದುಷಿ ಅನಿಸಿಕೊಂಡಿರುವವರೆಲ್ಲರೂ ಈ ಗೌರವಕ್ಕೆ ತಕ್ಕುದಾದ ಪ್ರದರ್ಶನ ನೀಡಬಲ್ಲರು ಎನ್ನುವುದು ಈಗೀಗ ಎದೆ ತಟ್ಟಿ ಹೇಳಿಕೊಳ್ಳುವ ಧೈರ್ಯ ಯಾರೂ ತೋರುವುದಿಲ್ಲ. ಆದರೆ, ಈ ಕಾರ್ಯಕ್ರಮದಲ್ಲಿ ವಿದುಷಿ ಗೌರವಕ್ಕೆ ಅರ್ಥ ಬರುವಂತಹ ಪ್ರದರ್ಶನವನ್ನು ಎಲ್ಲಾ ಕಲಾವಿದರೂ ನೀಡಿದರು ಎನ್ನುವುದನ್ನು ಗಟ್ಟಿಯಾಗಿ, ಧೈರ್ಯವಾಗಿ ಹೇಳಬಹುದು.

ಹೌದು, ಅಪರೂಪದಲ್ಲೂ ಅಪರೂಪವೆನ್ನುವ ಆಸ್ವಾದ್ಯಭರಿತ, ನೃತ್ಯ ಸಹಿತ ಭಾವಪೂರ್ಣ ಪ್ರದರ್ಶನಕ್ಕೆ ಫೆಬ್ರುವರಿ 25, ಭಾನುವಾರ ಸಂಜೆ ಮಲ್ಲೇಶ್ವರಂನ ಸೇವಾಸದನ ಸಾಕ್ಷಿಯಾಯಿತು. ಬೆಂಗಳೂರಿನ ಚಿತ್‌ಸಭಾ ಕಲೆಕ್ಟೀವ್ (CITSABHA COLLECTIVE) ಆಯೋಜಿಸಿದ್ದ “ಸ್ವಾಧ್ಯಾಯ” ನೃತ್ಯೋತ್ಸವ ಬಹಳ ಅರ್ಥಪೂರ್ಣವಾಗಿಯೂ, ವಿರಳಾತಿವಿರಳ ಕಾರ್ಯಕ್ರಮವಾಗಿಯೂ ಮೂಡಿಬಂತು. ಕಳೆದೊಂದು ವರ್ಷದಲ್ಲಿ ನಡೆದ ಬೆರಳೆಣಿಕೆಯಷ್ಟು ಅತ್ಯುತ್ತಮ ಕಾರ್ಯಕ್ರಮಗಳಲ್ಲಿ “ಸ್ವಾಧ್ಯಾಯ” ಕೂಡ ಒಂದು ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಈ ಕ್ಷಣಕ್ಕೆ ಸಾಕ್ಷಿಯಾದವರು ಖಂಡಿತವಾಗಿಯೂ ಇದನ್ನು ಒಪ್ಪಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ.

ಸಾಕ್ಷಾತ್ ಮೀನಾಕ್ಷಿಯ ದರ್ಶನ!
     “ಸ್ವಾಧ್ಯಾಯ” ಅಕ್ಷರಶಃ ಆಸ್ವಾದ್ಯವಾಗಿ ನವರಸಗಳ ಅನಾವರಣಕ್ಕೆ ಸಾಕ್ಷಿಯಾಯಿತು. ಭಾರತೀಯ ಶಾಸ್ತ್ರೀಯ ಕಲಾ ಪ್ರಕಾರಗಳ ಜುಗಲ್‌ಬಂದಿ ನಡೆಸುವ ಧೈರ್ಯ ಮಾಡುವವರು ಇಂದು ವಿರಳ. ಅಷ್ಟಕ್ಕೂ ಪರಿಣಿತಿ ಹೊಂದಿದ್ದರೆ ಮಾತ್ರ ಈ ಧೈರ್ಯಕ್ಕೆ ಮುಂದಾಗುತ್ತಾರೆ. ಇಂಥದ್ದೊಂದು ಯಶಸ್ವಿ ಕಾರ್ಯಕ್ರಮ ಇದಾಗಿತ್ತು. ಆರಂಭದಲ್ಲಿ ಒಡಿಸ್ಸಿ(Odissi) ಮತ್ತು ಕೂಚಿಪೂಡಿ(Kuchipudi) ಶಾಸ್ತ್ರೀಯ ನೃತ್ಯ ಪ್ರಸ್ತುತಿ ಸಭಾಂಗಣದಲ್ಲೊಂದು ಮೌನ ಆವರಿಸುವಂತೆ ಮಾಡಿತು. ಅರ್ಥಾತ್ ಮೂಖ ಪ್ರೇಕ್ಷಕರನ್ನು ಕಾಣಲು ಸಾಧ್ಯವಾಯಿತು. ಪ್ರೇಕ್ಷಕರಲ್ಲಿ ಅಷ್ಟರಮಟ್ಟಿಗಿನ ತಲ್ಲೀನತೆ, ತನ್ಮಯತೆ ಇತ್ತು. ಚಿತ್‌ಸಭಾ ಕಲೆಕ್ಟೀವ್ ರೂವಾರಿಗಳಾದ ವಿದುಷಿ ಶುಭಾ ನಾಗರಾಜನ್ ಮತ್ತು ವಿದುಷಿ ಶ್ರೀವಿದ್ಯಾ ಅಂಗಾರ ಜೋಡಿ ಪ್ರೇಕ್ಷಕರ ದೃಷ್ಟಿಯನ್ನು ಅತ್ತಿತ್ತ ಹೊರಳಲು ಬಿಡಲಿಲ್ಲ. ನರ್ತಕಿಯರ ಆಯ್ಕೆಯೇ ಅಷ್ಟೊಂದು ಪರಿಣಾಮಕಾರಿಯಾಗಿತ್ತು. ಭಾವನಾತ್ಮಕ ಕಂಪನ ಸೃಷ್ಟಿಸಿತು.
ಮಧುರೈ ಮೀನಾಕ್ಷಿ ಪಂಚರತ್ನಂ ಸ್ತೋತ್ರವನ್ನು ನೃತ್ಯಕ್ಕೆ ಅಳವಡಿಸಿಕೊಳ್ಳುವ ಮೂಲಕ, ಎಲ್ಲಿಯೂ ಶಾಸ್ತ್ರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಒಡಿಸ್ಸಿ ಮತ್ತು ಕೂಚಿಪೂಡಿ ಪ್ರಕಾರಗಳಿಗೆ ಹೊಂದಿಕೊಳ್ಳುವಂತೆ ಡಾ. ಪ್ರವೀಣ್ ಡಿ.ರಾವ್ ಅವರ ಸಂಗೀತ ಸಂಯೋಜನೆ ಗಮನ ಸೆಳೆಯಿತು. ರಾಗಮಾಲಿಕೆ, ಆದಿ ತಾಳದಲ್ಲಿ ನಿಬಂಧಗೊಳಿಸಲಾದ ಆದಿ ಶಂಕರಾಚಾರ್ಯ ವಿರಚಿತ ಸ್ತೋತ್ರಕ್ಕೆ ಶುಭಾ ನಾಗರಾಜನ್ ಮತ್ತು ಶ್ರೀವಿದ್ಯಾ ಅಂಗಾರ ಜೋಡಿ ಬಹಳ ಅಚ್ಚುಕಟ್ಟಾಗಿ ನೃತ್ಯ ಸಂಯೋಜನೆ ಮಾಡಿಕೊಂಡಿದ್ದು ವಿಶೇಷವೆನಿಸಿತು. ಒಡಿಸ್ಸಿಯಿಂದ ಕೂಚಿಪೂಡಿಗೂ, ಕೂಚಿಪೂಡಿಯಿಂದ ಒಡಿಸ್ಸಿ ಶೈಲಿಗೂ ಬದಲಾಗುವ ಕೂದಲೆಳೆಯ ನೃತ್ಯ ನಡೆಯನ್ನು ಬಹಳ ಜಾಣತನದಿಂದ ನಿರ್ವಹಿಸಿದರು. ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಜುಗಲ್‌ಬಂದಿಗೆ ಬಲ ಹೆಚ್ಚಿಸಿದೆ. ಶಿಸ್ತುಬದ್ಧವಾದ ಪ್ರದರ್ಶನ ನೀಡುವಲ್ಲಿ ಈ ಜೋಡಿ ಯಶಸ್ವಿಯಾಯಿತು.
ಗಣಪತಿ ಸ್ತುತಿಯೊಂದಿಗೆ ನೃತ್ಯಕ್ಕೆ ಗೆಜ್ಜೆಯ ಸದ್ದು ಹೊಂದಿಸಿದ ಇಬ್ಬರೂ ನರ್ತಕಿಯರ ಅಂಗಶುದ್ಧಿ, ಭಾವಾಭಿನಯ, ತನ್ಮಯತೆ ಅವರ ಅನುಭವಕ್ಕೆ ಹಿಡಿದ ಕನ್ನಡಿಯಂತಿತ್ತು. ಅಷ್ಟೇ ಅಲ್ಲ, ಗುಣಮಟ್ಟದ ಪ್ರದರ್ಶನವಾಗಿ ಮೂಡಿಬರಲು ಸಾಧ್ಯವಾಯಿತು.

ಕಥಕ್-ಭರತ ನೃತ್ಯ ಜುಗಲ್‌ಬಂದಿ!
ತರಾವರಿಯ ನೃತ್ಯ ಪ್ರಕಾರಗಳು, ಅದಕ್ಕೊಂದಿಷ್ಟು ದಾಖಲೆಗಳು ಲಭ್ಯವಿರುವ ದೇಶ ಭಾರತ ಮಾತ್ರ. ವಿಶ್ವದ ಇನ್ನಾವುದೇ ಮೂಲೆಗೆ ಹೋದರೂ ಇಷ್ಟು ವೈವಿಧ್ಯಮಯವಾದ, ಶೃಂಗಾರ ಪ್ರಧಾನವೆನಿಸುವ ನೃತ್ಯ ಪ್ರಕಾರಗಳು ಸಿಗಲು ಸಾಧ್ಯವಿಲ್ಲ. ಅದೇ ಕಾರಣಕ್ಕಾಗಿಯೇ ಭಾರತೀಯ ಶಾಸ್ತ್ರೀಯ ನೃತ್ಯಗಳು ಅನುದಿನವೂ ವಿಶ್ವದ ಯಾವ್ಯಾವುದೋ ದೇಶಗಳಲ್ಲಿ ಪ್ರದರ್ಶನ ಕಾಣುತ್ತಿರುತ್ತವೆ.
    “ಸ್ವಾಧ್ಯಾಯ” ದ್ವಿತೀಯಾರ್ಧದ ಆರಂಭದಲ್ಲಿ ವಿದುಷಿ ಮೇಧಾವಿನಿ ವರಖೇಡಿ ಮತ್ತು ವಿದುಷಿ ರೋಹಿಣಿ ಪ್ರಭಾತ್ ಅವರು ಕಥಕ್(Kathak) ಮತ್ತು ಭರತ ನೃತ್ಯ (Bharatanritya) ಜುಗಲ್‌ಬಂದಿ ಪ್ರದರ್ಶಿಸಿ ಪ್ರೇಕ್ಷಕರನ್ನು ಅರ್ಧಗಂಟೆ ಕಾಲ ಮೈಮರೆಯುವಂತೆ ಮಾಡಿದರು. ಅಷ್ಟೇ ಅಲ್ಲ, ಮಗದೊಮ್ಮೆ ಗುರು ಡಾ. ಪದ್ಮಾಸುಬ್ರಹ್ಮಣ್ಯ ಅವರನ್ನು ನೆನಪಿಸಿದರು. ನಾಟ್ಯಶಾಸ್ತ್ರದ ನಾಲ್ಕನೇ ಅಧ್ಯಾಯದ “ತಾಂಡವ ಲಕ್ಷಣ” ಅರ್ಥಾತ್ “ತಾಂಡವ ನೃತ್ಯ”ದಲ್ಲಿ ಉಲ್ಲೇಖಿಸಲಾದ ೧೦೮ ಕರಣಗಳನ್ನು ಆಧಾರವಾಗಿಟ್ಟುಕೊಂಡು 600ವರ್ಷಗಳಲ್ಲಿ ಅಭ್ಯಾಸದಲ್ಲಿಲ್ಲದ “ಭರತ ನೃತ್ಯ”ದ ಅನ್ವೇಷಣೆ ಮಾಡಿದರು. ಅಷ್ಟೇ ಅಲ್ಲ, ನಾಟ್ಯದಲ್ಲಿನ ವಿಭಿನ್ನ ಶೈಲಿಯನ್ನಾಗಿ ಪರಿಚಯಿಸಿದರು. ತಮ್ಮ ಶಿಷ್ಯಂದಿರಿಗೆ ಧಾರೆ ಎರೆದರು. ಇದೊಂದು ಪರಂಪರೆಯಾಗಿ ಸಾಗಿ ಬರಲು ಅವಕಾಶ ಮಾಡಿಕೊಟ್ಟರು. ಗುರು ನಿರುಪಮಾ ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ಈ ತಲೆಮಾರಿಗೂ ಬಳುವಳಿಯಾಗಿ ಬಂದಿದೆ. ಈ ಪರಂಪರೆಯ ಮುಂದುವರಿದ ಭಾಗವೇ ಮೇಧಾವಿನಿ ಮತ್ತು ರೋಹಿಣಿ ಅವರ ಜುಗಲ್‌ಬಂದಿ.
ಖ್ಯಾತ ಸಂಗೀತ ಸಂಯೋಜಕ, ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಅವರ ಸಂಯೋಜನೆಯ ಸಂಗೀತ ಗಮನ ಸೇಳೆಯಿತು. ಇಲ್ಲೂ ಕೂಡ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಶೈಲಿ ಮೇಳೈಸಿದೆ. ಈ ಸಂಗೀತ ಜುಗಲ್‌ಬಂದಿಯನ್ನು ಅರೆದು ಕುಡಿದವರಂತೆ ಈ ಜೋಡಿ ಅತ್ಯಂತ ಅಚ್ಚುಕಟ್ಟಾಗಿ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ವಸಂತ ಸಂಭ್ರಮದಲ್ಲಿ ಮಿಂದೇಳುವಂತೆ ಮಾಡಿದರು. ಈ ಎರಡು ಪ್ರಕಾರದ ನೃತ್ಯದ ಭಿನ್ನತೆಯನ್ನು ಹಾಗೂ ನವರಸಗಳನ್ನೂ ಪ್ರಚುರ ಪಡಿಸುವ ನರ್ತಕಿಯರ ಪ್ರಯತ್ನ ಗಮನಾರ್ಹ ಮತ್ತು ಶ್ಲಾಘನೀಯ.

 

ಶ್ಲಾಘನೀಯ ಪ್ರಯತ್ನ
ಸಾಮಾನ್ಯವಾಗಿ ಇಂತಹ ನಾಟ್ಯ ಪ್ರಯತ್ನಗಳಲ್ಲಿ ನಾಟ್ಯಶಾಸ್ತ್ರದಲ್ಲಿನ ಹಸ್ತಾಭಿನಯ ಮತ್ತು ‘ಚಾರೀ’ ಅರ್ಥಾತ್ ಪಾದಾಭಿನಯ ಹಾಗೂ ಇವೆರಡನ್ನೂ ಹೊಂದಿಸುವಲ್ಲಿ ನರ್ತಕಿಯರು/ನರ್ತಕರಲ್ಲಿ ತೊಡಕು ಕಾಣಿಸಬಹುದಾದ ಸಾಧ್ಯತೆಗಳು ಇರುತ್ತವೆ. ಆದರೆ ಜುಗಲ್‌ಬಂದಿಯ ಎರಡೂ ಪ್ರದರ್ಶನಗಳಲ್ಲಿ ನರ್ತಕಿಯರು ಅತ್ಯಂತ ಆಸ್ಥೆಯಿಂದ ನಿಭಾಯಿಸಿದ್ದಾರೆ. ಇಂತಹ ನೃತ್ಯ ಪ್ರಯತ್ನಗಳು ನಡೆಯಬೇಕು. ಈ ಮೂಲಕ ಕಲಿಕೆ ಸಾಧ್ಯವಾಗಲಿದೆ. ಜತೆ ಜೊತೆಗೆ ನೃತ್ಯ ಪ್ರಕಾರಗಳಲ್ಲಿನ ಭಿನ್ನತೆ ಹಾಗೂ ನೃತ್ಯ ಸಾಗುವ ರೀತಿಯ ಬಗ್ಗೆ ಅರಿವು ಮೂಡಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈಗಷ್ಟೇ ನಾಟ್ಯವೆಂಬ ಸಾಗರಕ್ಕೆ ಧುಮುಕಿರುವ ನರ್ತಕಿ/ನರ್ತಕರಿಗೆ ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಲಿದೆ.

ಭಕ್ತಿ, ಕಾರುಣ್ಯ ರಸಾನುಭವ!
ಕಾರ್ಯಕ್ರಮದ ಅಂತಿಮ ಪ್ರಸ್ತುತಿ ವಿದುಷಿ ಶೃತಿ ಗೋಪಾಲ್ ಅವರ ಭರತನಾಟ್ಯ (Bharatanatyam). ಭಕ್ತಿ ಮತ್ತು ಕಾರುಣ್ಯ ರಸ ಸ್ಪುರಿಸುವಂತಹ ರಾಗದ ಎಲ್ಲಾ ಶಕ್ತಿಯ ಅನಾವರಣಕ್ಕೆ ಸಾಕ್ಷಿಯಾಗಿಸಿದ ಪ್ರಸ್ತುತಿ ಇದಾಗಿತ್ತು. “ಇನ್ನುಮ್ ಎನ್ ಮನಂ” ಶುರುವಿನಲ್ಲೇ ಭರತ ನಾಟ್ಯದ ಇತಿಹಾಸದ ಪುಟಗಳನ್ನು ಮೆಲುಕು ಹಾಕುವ, ಓದಿಕೊಂಡಿರುವ ಪೇಕ್ಷಕರಿಗೆ ತ್ಯಾಗರಾಜರು, ಪಾಪನಾಶಂ ಶಿವಂ, ಲಾಲ್‌ಗುಡಿ ಜಯರಾಮನ್ ಅವರಂತಹ ವಾಗ್ಗೇಯಕಾರರು ಕಣ್ಮುಂದೆ ಬಂದು ಹೋದ ಅನುಭವ. ಕಾರಣ ವಾಗ್ಗೇಯಕಾರರು ಆಯಾ ಕಾಲಘಟ್ಟದಲ್ಲಿ ಜನಪ್ರಿಯಗೊಳಿಸಿದ, ಕರ್ನಾಟಕ ಸಂಗೀತದ ಮೇಳಕರ್ತ ರಾಗಗಳಲ್ಲಿ ಒಂದಾದ ಚಾರುಕೇಶಿ ಪ್ರತಿಯೊಬ್ಬ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು ನರ್ತಕಿ ಶೃತಿ. ನೃತ್ತ, ಆಂಗಿಕಾಭಿನಯ, ಅಂಗಶುದ್ಧಿ, ಭಾವಾಭಿನಯ ಎಲ್ಲವೂ ಆರಂಭದಿಂದ ಅಂತ್ಯದ ತನಕ ಎಲ್ಲಿಯೂ ಕಡಿಮೆ, ಹೆಚ್ಚು ಎಂದು ಗುರುತಿಸಲಾಗದಂತಹ ಸಮತೋಲನದಿಂದ ಕೂಡಿತ್ತು. ನೃತ್ತ ಸಂಯೋಜನೆಯಲ್ಲಿಯೂ ಅತ್ಯಂತ ಸಮತೋಲನವಿತ್ತು.
“ಆಟವಾಡುವಂತಹ ಆ ಪುಟಾಣಿ, ಗೋಪಿಕೆಯರ ಮನ ಕದ್ದು, ಗೆದ್ದ ಕೃಷ್ಣ, ಇಷ್ಟು ವರ್ಷಗಳ ಕಾಲ ನನ್ನೆದುರು ಬರಲೇ ಇಲ್ಲ. ನಿನಗೋಸ್ಕರ ಕಾದಿದ್ದೇನೆ, ಹಂಬಲಿಸುತ್ತಿದ್ದೇನೆ” ಎಂಬ ಅಭಿನಯ ಪ್ರಧಾನ ಸಂಚಾರಿಯನ್ನು ಶೃತಿ ಬಹಳ ಸೊಗಸಾಗಿ ನಿರ್ವಹಿಸಿದರು.
ಬಳಿಕ “ಆಜ್ ಜಾನೇ ಕೆ ಜಿದ್ ನ ಕರೋ” ಆರಂಭಗೊಂಡು “ಕೃಷ್ಣಾ ನೀ ಬೇಗನೆ ಬಾರೋ” ಮೂಲಕ ಶ್ರೀಕೃಷ್ಣನನ್ನು ಹಂಬಲಿಸಿ, ಆರಾಧಿಸಿ ಭಕ್ತಿಯ ಪರಾಕಾಷ್ಠೆಯ ಅನಾವರಣ ಮಾಡಿದರು. ಅಂತ್ಯದಲ್ಲಿ ದೇವಿ ಕಾಳಿಯಾದ ಶೃತಿ ಪ್ರೇಕ್ಷಕರ ಮನಗೆದ್ದರು.

ಚಿತ್ರ ಕೃಪೆ: ವಿ ಬಿ ಸುರೇಶ್

 

 


Share This

Leave a Reply

Your email address will not be published. Required fields are marked *