ಸಾಮಾನ್ಯವಾಗಿ ಮದುರ ಕಂಠದ ಧ್ವನಿಯನ್ನು ಕೋಗಿಲೆಗೆ ಹೊಲಿಸುತ್ತೇವೆ. ಆದರೆ ಆ ಕೋಗಿಲೆಯನ್ನು ಕಣ್ಣಾರೆ ಕಂಡರೆ ‘ಯಪ್ಪಾ ಇದೇನು ಕಪ್ಪು’ ಎಂದು ರಾಗ ಎಳೆಯುವುದು ಸಾಮಾನ್ಯ. ಆದರೆ ಈ ಕೋಗಿಲೆಯನ್ನು ನೋಡಿದರೆ ನಿಮಗೆ ನಿರಾಸೆಯಾಗುವುದಿಲ್ಲ.
ಕಾರಣ ಈ ಹಕ್ಕಿ ಅಸ್ಟು ಕಪ್ಪಗಿನ ಕೋಗಿಲೆಯಲ್ಲ. ಭಾರತದ ಸಾಮನ್ಯ ಕೋಗಿಲೆಗಿಂತ ಇದು ಭಿನ್ನವಾಗಿರುತ್ತದೆ. ಈ ಹಕ್ಕಿಯಲ್ಲಿ ಕಾಣಬಹುದಾದ ಇನ್ನೊಂದು ವಿಶೇಷವೆಂದರೆ ಇದು ನಮ್ಮ ದೇಶದ ಹಕ್ಕಿ ಅಲ್ಲ. ಆದರೆ ವರ್ಷದಲ್ಲಿ ಅರ್ಧದಸ್ಟು ದಿನಗಳನ್ನು ಸಹ್ಯಾದ್ರಿ ಸೇರಿ ಭಾರತದ ಇನ್ನಿತರ ದಟ್ಟಡವಿಯಲ್ಲೇ ಕಳೆಯುತ್ತದೆ. ಇನ್ನೇನು ಮಳೆಗಾಲ ಮುಗಿಯುತ್ತಿದೆ ಎನ್ನುವ ದಿನಗಳಲ್ಲಿ ದಕ್ಷಿಣ ಆಫ್ರಿಕಾದಿಂದ ನೇರವಾಗಿ ಭಾರತಕ್ಕೆ ವಲಸೆ ಬರುತ್ತವೆ. ಕತ್ತಲೆ ಆವರಿಸಿರುವ ದಟ್ಟಡವಿಯಲ್ಲೇ ಕಾಲ ಕಳೆಯುತ್ತದೆ.
ಆಫ್ರಿಕಾ ಖಂಡದಿಂದ ಬರುವ ಅತಿಥಿಗಳ ವಲಸೆ ಎಲ್ಲ ವರ್ಷವೂ ಒಂದೇ ರೀತಿ ಇರುವುದಿಲ್ಲ. ಮುಂಗಾರಿನಲ್ಲಿ ಹೇಗೆ ಬದಲಾವಣೆಗಳಿವೆಯೋ ಹಾಗೇ ಬದಲಾಗುತ್ತ ಹೋಗುತ್ತದೆ. ಮಳೆಯ ಆರಂಭವೇ ತಡವಾದರೆ ಭಾರತಕ್ಕೆ ಇದರ ಆಗಮನವೂ ತಡವಾಗುತ್ತದೆ. ಈ ಅತಿಥಿಯನ್ನು ನಾವು ‘ಜುಟ್ಟು ಕೋಗಿಲೆ‘ (Pied Crested Cuckoo) ಎಂದು ಕರೆದಿದ್ದೇವೆ.
ತಲೆಯ ಮೇಲೆ ಬಿಳಿ ಮಿಂಚುಳ್ಳಿ, ಚೊಟ್ಟಿ ಗೊರವ ಹಕ್ಕಿಯಂತೆ ಜುಟ್ಟು ಇರುವ ಕಾರಣ ಇದಕ್ಕೆ ಈ ಹೆಸರು. ದೇಹದ ಹಿಂಭಾಗವೆಲ್ಲ ನೀಲಿ, ಹಸಿರು ಮಿಶ್ರಿತ ಕಪ್ಪು ಬಣ್ಣದಿಂದ ಇರುತ್ತದೆ. ಆದರೆ ಕತ್ತಿನಿಂದ ಕೆಳಕ್ಕೆ, ಹೊಟ್ಟೆ ಮತ್ತು ಎದೆಯೆಲ್ಲ ಬೆಳ್ಳಗಾಗಿರುತ್ತದೆ. ರೆಕ್ಕೆಯ ಕೆಳಭಾಗದಲ್ಲೂ ಬೆಳ್ಳಗಾಗಿದ್ದು, ಇದು ಹಾರುವಾಗ ಮಾತ್ರ ಕಾಣಿಸುತ್ತದೆ. ರೆಕ್ಕೆಯ ಗರಿಗಳ ತುದಿಯಲ್ಲಿ ಬಿಳಿಯ ಪಟ್ಟಿಗಳಿರುತ್ತವೆ.
ಈ ಹಕ್ಕಿಯನ್ನು ಭಾರತ ಸೇರಿ ನೆರೆಯ ಬಾಂಗ್ಲ, ಶ್ರೀಲಂಕ, ನೇಪಾಳ, ಪಾಕಿಸ್ತಾನಗಳಲ್ಲಿಯೂ ಕಾಣಬಹುದು. ಸಂತಾನೋತ್ಪತ್ತಿಯ ವೇಳೆಯಲ್ಲಿ ಬೇರೆ ಹಕ್ಕಿಯ ಗೂಡನ್ನು ಹುಡುಕಲು ಆರಂಭಿಸುತ್ತದೆ. ಸಾಮಾನ್ಯವಾಗಿ ಕಾಗೆಯ ಗೂಡಲ್ಲಿ 2 ರಿಂದ 3 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ವಸಂತದ ವೇಳೆಯಲ್ಲಿ ಫ್ಯೂ ಫ್ಯೂ ಫೀ… ಎಂದು ಕೂಗುತ್ತಿರುತ್ತದೆ. ಜುಟ್ಟು ಕೋಗಿಲೆಯನ್ನು ತುರಾಯಿ ಕೋಗಿಲೆ, ಚೊಟ್ಟಿ ಕೋಗಿಲೆ ಎಂದೂ ಕರೆಯುತ್ತಾರೆ.
ಚಿತ್ರ ಕೃಪೆ: nagpurbirds.org