ಭಾರತೀಯ ಚಿತ್ರಕಲೆಗೆ “POP” ಪಂಥ ನಾಮಾಂಕಿತ ಕಲೆ ಹೊಸತೇನಲ್ಲ. ಆಗಾಗ ಕೇಳಿದ್ದೂ ಉಂಟು, ಅಲ್ಲೋ ಇಲ್ಲೋ ಓದಿದ್ದೂ ಉಂಟು. ಭಾರತೀಯ ಕಲಾಕ್ಷೇತ್ರಕ್ಕೆ ಹೊಸ ಪರಿಚಯವೆಂದು ಭಾವಿಸಬೇಕಿಲ್ಲ. ಕಳೆದೊಂದು ದಶಕದಲ್ಲಿಯೇ ಇಂತಹ ನೂರಾರು ಪ್ರಯೋಗಾತ್ಮಕ ಕಲಾಕೃತಿಗಳು ಬೇರೆ ಬೇರೆ ಗ್ಯಾಲರಿಗಳಲ್ಲಿ ಪ್ರದರ್ಶಿಸಲ್ಪಟ್ಟಿವೆ.
ಆದರೆ, ವಿದೇಶಿ ಕಲಾವಿದರ ಸಮೂಹವೊಂದು ಇದೇ ಮೊದಲಬಾರಿಗೆ ಭಾರತದಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿತು.
ಮುಂಬೈನಲ್ಲಿರುವ ನೀತಾ ಅಂಬಾನಿ ಕಲ್ಚರಲ್ ಸೆಂಟರ್ (Nita Ambani Cultural Centre)ನ ಆರ್ಟ್ ಹೌಸ್ (Art House) ಗ್ಯಾಲರಿಯಲ್ಲಿ ಡಿಸೆಂಬರ್ 1, 2023ರಿಂದ ಫೆಬ್ರವರಿ 11,2024ರ ತನಕ ” POP: FAME, LOVE AND POWER ” ಪ್ರದರ್ಶನ ನಡೆಯಿತು.
ಹೊಸ ಪಂಥವೊಂದನ್ನು ಹುಟ್ಟುಹಾಕಿ ಬ್ರಿಟನ್ ಮತ್ತು ಅಮೆರಿಕದಲ್ಲಿ ಹೊಸ ಅಲೆ ಎಬ್ಬಿಸಿದ ಆ್ಯಂಡಿ ವಾರ್ಹೋಲ್, ರಾಯ್ ಲಿಚ್ಟೆನ್ಸ್ಟೈನ್ ಮತ್ತು ಅಮೆರಿಕನ್ ಕಲಾವಿದರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿದ್ದವು.
ಭಾರತೀಯ ಸಮಕಾಲೀನ ಕಲಾಪರಂಪರೆಯ ಪ್ರಯೋಗಾತ್ಮಕ ಕಲಾಕೃತಿಗಳಿಗೆ ಹತ್ತಿರವೆನಿಸುವಂತಿತ್ತು. ಅದಕ್ಕಿಂತಲೂ ಭಿನ್ನವೆನಿಸುವ ಯಾವುದೇ ಅಂಶಗಳು ಖಂಡಿತವಾಗಿ ಇರಲಿಲ್ಲ. ಕೆಲ ಕಲಾವಿದರ ಕ್ರಾಂತಿಕಾರಿ ಗುಣಗಳು, ಧೋರಣೆಗಳನ್ನು ಗುರುತಿಸುವಂತಿತ್ತು.
| ” ಪಾಪ್ ಆರ್ಟ್ Pop Art ” ! |
ಬ್ರಿಟನ್ ಮತ್ತು ಅಮೆರಿಕಗಳಲ್ಲಿ 1950ರ ದಶಕದ ಸಂದರ್ಭದಲ್ಲಿ ಇಡೀ ಕಲಾಕ್ಷೇತ್ರವನ್ನು ತುಸುಕಾಲ ಬೆಚ್ಚಿಬೀಳಿಸಿದ್ದು ಪಾಪ್ ಆರ್ಟ್ ಚಳವಳಿ. ಬ್ರಿಟನ್ ನಲ್ಲಿ ಎಡರ್ಡೊ ಪಾಲೊಜಿ (Eduardo Paolozzi) ಮತ್ತು ರಿಚರ್ಡ್ ಹ್ಯಾಮಿಲ್ಟನ್ (Richard Hamilton) ಹಾಗೂ ಅಮೆರಿಕದಲ್ಲಿ ಲ್ಯಾರಿ ರಿವರ್ಸ್(Larry Rivers), ರೇ ಜಾನ್ಸನ್(Ray Johnson), ರಾಬರ್ಟ್ ರೌಸ್ಪೆನ್ ಬರ್ಗ್(Robert Rauschenberg), ಜಾಸ್ಪರ್ ಜಾನ್ಸ್ (Jasper Johns) ಈ ಚಳವಳಿಯಲ್ಲಿ ಕಾಣಿಸಿಕೊಂಡ ಪ್ರಮುಖರು.
ಅಮೂರ್ತ ಅಭಿವ್ಯಕ್ತಿವಾದಕ್ಕೆ (abstract expressionism) ಪ್ರತಿಯಾಗಿ ಹುಟ್ಟಿ, ಪ್ರಾಬಲ್ಯ ಸಾಧಿಸುವಲ್ಲಿ ಒಂದು ಹಂತದ ಯಶಸ್ಸನ್ನೂ ಕಂಡುಕೊಂಡಿತು. ಅವರ ಕಲಾಕೃತಿಗಳಲ್ಲಿನ ವಸ್ತು ವಿಷಯ ಮತ್ತು ಬಳಕೆಯ ಕ್ರಮ ಸ್ವಲ್ಪಮಟ್ಟಿಗೆ ದಾದಾಯಿಸಂ ಪ್ರೇರೇಪಿತ ಅನಿಸಿಕೊಳ್ಳುತ್ತದೆ.
| ಜಾಹೀರಾತು ವಿನ್ಯಾಸವೂ
ವಸ್ತು ವಿಷಯವಾದೀತು! |
ಪಾಪ್ ಕಲಾವಿದರ ಧೋರಣೆಗಳನ್ನು ಗಮನಿಸಿದಾಗ ಅವರು ಕಲಾಕೃತಿ ರಚನೆ ಸಂದರ್ಭದಲ್ಲಿ ತಮಗೆ ಎದುರಾಗುವ ಕಟ್ಟಪ್ಪಣೆಗಳನ್ನು ಬಹಳ ಸಲೀಸಾಗಿ ಬ್ರೇಕ್ ಮಾಡಿ ಮುಂದೆ ಹೋಗುವುದನ್ನು ಕಾಣಬಹುದು. ಪ್ರದರ್ಶಿಸಲ್ಪಟ್ಟ ಅನೇಕ ಕಲಾಕೃತಿಗಳಲ್ಲಿ ಈ ಧಾರ್ಶ್ಯತನ ಕಾಣಿಸಿತು.
ವಾರ್ಹೋಲ್ ಕಲಾಕೃತಿಗಳಲ್ಲಿ ಸೂಪ್ ಕ್ಯಾನ್ ಲೇಬಲಗಳನ್ನೇ ಬಹಳ ಜಾಣ್ಮೆಯಿಂದ ಬಳಸಿದ್ದು ಪ್ರಮುಖವೆನಿಸುತ್ತದೆ. ಹಾಗೇ ಟೊಮೆಟೊ ಜ್ಯೂಸ್ ಬಾಕ್ಸ್ ಇದಕ್ಕೆ ಹತ್ತಿರವೆನಿಸುತ್ತದೆ.