ಗಮನ ಸೆಳೆದ ರಾಖಿ ಶೆಣೈ ಕಲಾಕೃತಿ!

Share This

ಆಕೆಗೆ ತಾಳ್ಮೆ ಜಾಸ್ತಿ. ಕೆಲವೊಮ್ಮೆ ನಾನೇ ಆಶ್ಚರ್ಯಪಟ್ಟಿದ್ದೂ ಉಂಟು. ನಿಷ್ಕಲ್ಮಶವಾದ ಮನಸ್ಸಿನಿಂದ ಎಲ್ಲಿಯೂ ತಾಳ್ಮೆ ಕಳೆದುಕೊಳ್ಳದೆ ಹೆಚ್ಚುಕಡಿಮೆ ಕಳೆದೊಂದು ವರ್ಷದ ನಿರಂತರ ಪ್ರಯತ್ನದ ಪ್ರತಿಫಲವಾಗಿ ಇಂದು ಈ ಕಲಾಕೃತಿಗಳನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾಳೆ
ಹೀಗೆಂದು, ತಮ್ಮ ಮಗಳು ರಾಖಿ ಶೆಣೈ ಅವರ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದು ಹಿರಿಯ ಕಲಾವಿದ ಗುರುದಾಸ್ ಶೆಣೈ ಅವರು.
ಪ್ರಬುದ್ಧತೆಯ ದಾರಿಯಲ್ಲಿ ಸಾಗುತ್ತಿರುವುದಕ್ಕೆ ರಾಖಿ ಶೆಣೈ ಅವರ ಕಲಾಕೃತಿಗಳೇ ಸಾಕ್ಷಿಯಾಗಿರುವಾಗ ತಂದೆ ಹೆಮ್ಮೆಯಿಂದ ಹೇಳಿಕೊಳ್ಳುವುದು ಸಹಜವೂ ಹೌದು.

ಕಲಾವಿದೆಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ರಾಖಿ ಶೆಣೈ ಅವರ ವಿಭಿನ್ನ ಕಲಾಕೃತಿಗಳ ಪ್ರದರ್ಶನ ಸೆಪ್ಟೆಂಬರ್ 1ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ದೊಮ್ಮಲೂರು ಸಾಂಚಿ ಕಲಾಗ್ಯಾಲರಿಯಲ್ಲಿ ನಡೆಯಿತು. ತಂದೆ ಗುರುದಾಸ್ ಅವರನ್ನೇ ಆದರ್ಶವಾಗಿಟ್ಟುಕೊಂಡು ಚಿತ್ರಕಲೆ ಮತ್ತು ಕಸೂತಿ(embroidery) ಪ್ರಕಾರದ ಕೌಶಲ್ಯ ಕರಗತ ಮಾಡಿಕೊಂಡಿದ್ದಾರೆ ರಾಖಿ ಶೆಣೈ. ಅಲ್ಲದೆ, ದೃಶ್ಯಕಲಾ (visual art) ಕ್ಷೇತ್ರದಲ್ಲಿ ವೃತ್ತಿಪರವಾಗಿ ಗುರುತಿಸಿಕೊಳ್ಳುವ ಮೊದಲ ಪ್ರಯತ್ನದಲ್ಲಿಯೇ ರಾಖಿ ಶೆಣೈ ಗಮನಾರ್ಹ ಹೆಜ್ಜೆ ಇಟ್ಟಿದ್ದಾರೆಂದರೆ ಖಂಡಿತಾ ಅತಿಶಯೋಕ್ತಿ ಮಾತಲ್ಲ. ಅವರ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. ‘work is worship’ ಎಂಬ ಮಾತಿಗೆ ಅತ್ಯುತ್ತಮ ಉದಾಹರಣೆ ಎನ್ನುವಂತಿದೆ ರಾಖಿ ಶೆಣೈ ಅವರ ಪ್ರಯತ್ನ.

ಕಸೂತಿ ಕೌಶಲ್ಯತೆಯನ್ನು ರಾಖಿ ಶೆಣೈ ಅವರು ಬಹಳ ಸೊಗಸಾಗಿ ಬಳಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಮತೋಲನ ಕಾಯ್ದುಕೊಂಡಿರುವ ಪರಿಯೂ ಗಮನಾರ್ಹ. ಎಲ್ಲಿಯೂ ಕಸೂತಿ ಮತ್ತು ಚಿತ್ರಕಲೆಯ ಸಮ್ಮಿಲನ (amalgamation) ಅತಿ ಎನಿಸದಂತೆ ನಿರ್ವಹಿಸಿದ್ದಾರೆ. ಸಾಮಾನ್ಯವಾಗಿ ಕಸೂತಿಯಲ್ಲಿ ಗಾಢವಾದ ವರ್ಣಗಳ ಏರಿಳಿತವನ್ನು ಕಾಣುತ್ತೇವೆ. ಆದರೆ ರಾಖಿ ಶೆಣೈ ಅವರು ಎಲ್ಲಾ ಕಲಾಕೃತಿಗಳಲ್ಲಿಯೂ ವರ್ಣ ಸಂಯೋಜನೆ (color composition) ಹಾಗೂ ಬಣ್ಣಗಳ ಆಯ್ಕೆಯಲ್ಲಿ (color combination) ಬಹಳ ಗಮನ ಹರಿಸಿ ಜಾಣತನ ಮೆರೆದಿದ್ದಾರೆ. ಇನ್ನೂ ಒಂದು ಕುತೂಹಲಕಾರಿ ಅಂಶವಿದೆ. ಅದೇನೆಂದರೆ, ಎಲ್ಲಿಯೂ ತಂದೆ ಅವರ ಅಥವಾ ತಮ್ಮ ತಾತ ಜಿ.ಎಸ್.ಶೆಣೈ ಅವರ ಯಾವುದೇ ಕಲಾಕೃತಿಗಳ ಪ್ರಭಾವಕ್ಕೆ (influence) ಒಳಗಾಗದೇ ವಿಭಿನ್ನ ನೆಲೆಯಲ್ಲಿ ಕಲಾಕೃತಿಗಳನ್ನು ಪೂರ್ಣಗೊಳಿಸಿರುವುದು ವಿಶೇಷ. ಸಾಮಾನ್ಯವಾಗಿ ಮನೆ ಸದಸ್ಯರು ಯಾರಾದರೂ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದರೆ ಯಾವುದೋ ಒಂದು ರೀತಿಯಲ್ಲಿ ಅವರ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಗುರುತಿಸಬಹುದಾದ ಒಂದು ಅಂಶವನ್ನಾದರೂ ಕಾಣಲು ಸಾಧ್ಯವಾಗಿರುತ್ತದೆ. ಆದರೆ ರಾಖಿ ಶೆಣೈ ಈ ನಿಟ್ಟಿನಲ್ಲಿ ಅತ್ಯಂತ ಜಾಣ ನಡೆ ತೋರಿದ್ದಾರೆ. ದೃಢ ಸಂಕಲ್ಪದೊಂದಿಗೆ ಕಲಾಕೃತಿಗಳನ್ನು ಒಂದು ನಿಶ್ಚಿತ ಶೈಲಿಗೆ ಅಂಟಿಕೊಂಡು ಪೂರ್ಣಗೊಳಿಸಿದ್ದಾರೆ.

ಲೋಬ್ರೋ ಚಳವಳಿ!
ರಾಖಿ ಅವರ ಹೆಚ್ಚಿನ ಕಲಾಕೃತಿಗಳಲ್ಲಿ ಲೋಬ್ರೋ (Low Brow) ಕಲಾಚಳವಳಿಯ ವೇಳೆಯಲ್ಲಿ ರಚನೆಗೊಂಡಿರುವ ಅನೇಕ ಕಲಾಕೃತಿಗಳಲ್ಲಿನ ಒಂದಿಷ್ಟು ಅಂಶಗಳು ಕಾಣಿಸುತ್ತವೆ. Low Brow ಪಂಥವನ್ನೇ ಪಾಪ್ ಸೆರಿಯಾಲಿಸಮ್ (Pop Surrealism) ಎಂದೂ ವ್ಯಾಖ್ಯಾನಿಸಲಾಗಿದೆ. ವಾಸ್ತವಕ್ಕೆ ಹತ್ತಿರವಾದ ಬಳಕೆಯ ವಸ್ತುಗಳನ್ನೇ ಕೊಂಚ ಹಾಸ್ಯ ಪ್ರಜ್ಞೆಯಿಂದ ನೋಡಿ ಕಾಲಾಕೃತಿಯಾಗಿಸುವ ಪ್ರಯತ್ನವನ್ನು ಇಲ್ಲಿ ಗಮನಿಸಬಹುದಾಗಿದೆ. ಈ ಕಲಾ ಪಂಥದ ಶೈಲಿಯಲ್ಲಿ ಮುದ್ರಣ ಕ್ಷೇತ್ರದ ಇಂದಿನ ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಳ್ಳುವುದುಂಟು. ರಾಖಿ ಶೆಣೈ ಅವರೂ ಇಂದಿನ ಮುದ್ರಣ ಕ್ಷೇತ್ರದ ಎಲ್ಲಾ ಸಾಧ್ಯತೆಗಳ ಬಗ್ಗೆ ಅರಿತು ಹೊಸ ಶೈಲಿಯತ್ತ ದೃಷ್ಟಿ ನೆಟ್ಟಿದ್ದಾರೆ.
ತಮ್ಮ ನಿತ್ಯ ಜೀವನಕ್ಕೆ ಹತ್ತಿರವೆನಿಸುವ ವಸ್ತುಗಳು, ಪ್ರಕೃತಿಯಲ್ಲಿನ ಹುಲ್ಲು, ಗಿಡ, ಬಳ್ಳಿಗಳಲ್ಲಿನ ಕುಸುಮ, ಕಾಯಿ, ಹಣ್ಣು, ಎಲೆ, ಕೀಟಗಳನ್ನೇ ವಸ್ತು ವಿಷಯವಾಗಿಸಿಕೊಂಡಿದ್ದಾರೆ. ಚಿಟ್ಟೆಗಳನ್ನು ತಮ್ಮ ಶೈಲಿಗೆ ಹೊಂದಿಕೊಳ್ಳುವಂತೆ ದುಡಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಕಸೂತಿ ಕೌಶಲ್ಯವನ್ನು ಸಂಗಮಗೊಳಿಸಿ ಕಲಾಕೃತಿಗಳ ಮೈವಳಿಕೆಯ ಸೌಂದರ್ಯ ಹೆಚ್ಚಿಸಿದ್ದಾರೆ. ಮಿಶ್ರ ಮಾಧ್ಯಮ ಬಳಕೆ ಆಸಕ್ತಿಕರವಾಗಿದೆ. ಜತೆ ಜೊತೆಗೆ ಚಿತ್ರಕಲೆಯಲ್ಲಿನ ಡಿಜಿಟಲ್ ಸಾಧ್ಯತೆಗಳು, ಇಂದಿನ ತಂತ್ರಗಾರಿಕೆ ಹಾಗೂ ವಿಭಿನ್ನ ಮಾಧ್ಯಮಗಳಿಂದ ಆಗಬಹುದಾದ ಪ್ರಯೋಗಾತ್ಮಕ ತಂತ್ರಗಳನ್ನೂ ಕಲಾಕೃತಿಗಳ ರಚನೆ ಪ್ರಕ್ರಿಯೆಯಲ್ಲಿ ಅಳವಡಿಸಿಕೊಂಡಿರುವುದು ಆಕರ್ಷಣೆಗೆ ಕಾರಣವಾಗಿದೆ.
ಯಾವುದೇ ಒಂದು ಕಲಾಕೃತಿ ತನ್ನ ಬಾಹ್ಯ ಮತ್ತು ಆಂತರಿಕ ಸೌಂದರ್ಯದ ಮೂಲಕ ನೋಡುಗನನ್ನು ಹಿಡಿದು ನಿಲ್ಲಿಸಬೇಕೆನ್ನುವ ವಾದಕ್ಕೆ ರಾಖಿ ಶೆಣೈ ಅವರ ಕಲಾಕೃತಿಗಳು ಉತ್ತಮ ಉದಾಹರಣೆ ಆಗಬಲ್ಲವು.
Wish you all the best Rakhee Shenoy 💐

Friends, ರಾಖಿ ಶೆಣೈ ಅವರ ಕಲಾಕೃತಿಗಳು ಆಗಸ್ಟ್‌ 24ರ ತನಕ www.artisera.com ನಲ್ಲಿ ವೀಕ್ಷಣೆಗೆ ಲಭ್ಯವಿದೆ.


Share This

Leave a Reply

Your email address will not be published. Required fields are marked *