“ರಸಾನುಭವ”ದಲ್ಲಿ ‘ಬ್ರಹ್ಮ’ಸ್ವಾದ ಅನುಭೂತಿ

Share This

  • ಗುರು, ಶಿಷ್ಯೆಯ ನೃತ್ಯ ಪ್ರದರ್ಶನ ಅನನ್ಯ 
  • ಕಂದಸ್ವಾಮಿ, ಅನನ್ಯಾ ನೃತ್ತಕ್ಕೆ ಪ್ರೇಕ್ಷಕ ಬೆರಗು

ಹತ್ತನೇ ಶತಮಾನದ ಭಾರತೀಯ ತತ್ವಜ್ಞಾನಿ, ಸೌಂದರ್ಯ ಶಾಸ್ತ್ರಜ್ಞ ‘ಅಭಿನವಗುಪ್ತ’ (Abhinavagupta) ಕಾಲಘಟ್ಟದಲ್ಲಿ ಕೆಲ ಚಿಂತಕರು ‘ಪ್ರಜ್ಞೆ’ಯನ್ನು ಸೌಂದರ್ಯ ಪ್ರಜ್ಞೆ ಮತ್ತು ಆಧ್ಯಾತ್ಮ ಪ್ರಜ್ಞೆ ಎಂದು ವರ್ಗೀಕರಣಕ್ಕೆ ಮುಂದಾಗಿದ್ದರಂತೆ. ಆದರೆ ಅಭಿನವಗುಪ್ತ ಇದನ್ನು ಆಕ್ಷೇಪಿಸಿದರಂತೆ. ರಸಸ್ವಾದ ಎನಿಸಿಕೊಳ್ಳುವ ಸೌಂದರ್ಯ ಪ್ರಜ್ಞೆ (Aesthetic consciousness) ಮತ್ತು ಬ್ರಹ್ಮಸ್ವಾದ ಎನಿಸಿಕೊಳ್ಳುವ ಆಧ್ಯಾತ್ಮ ಪ್ರಜ್ಞೆಯಲ್ಲಿ (Mystical consciousness) ಯಾವ ವ್ಯತ್ಯಾಸವಿಲ್ಲ. ಎರಡೂ ಒಂದೇ ಎಂದು ಒಂದಿಷ್ಟು ಸಾಮ್ಯತೆಗಳನ್ನು ಪಟ್ಟಿಮಾಡಿ ಪ್ರತಿಪಾದಿಸಿದರಂತೆ. ಈ ಬಗ್ಗೆ ಮ್ಯಾಸನ್ ಮತ್ತು ಪಟವರ್ಧನ್ ಅವರು ಅಭಿನವಗುಪ್ತ ನೀಡಿದ 13 ಸಾಮ್ಯತೆಗಳನ್ನು ಉಲ್ಲೇಖಿಸಿ ಬರೆದಿದ್ದಾರೆ ಎನ್ನುವ ಮಾಹಿತಿ ಇತಿಹಾಸದ ಪುಟಗಳಲ್ಲಿ ಲಭ್ಯ.

ರಸಸ್ವಾದ ಮತ್ತು ಬ್ರಹ್ಮಸ್ವಾದ ಕುರಿತಾಗಿ ಅಭಿನವಗುಪ್ತ ಹೇಳಿರುವ ಸಾಮ್ಯತೆಗಳಲ್ಲಿ ಕೆಲವೊಂದು ಬಹಳ ಮಾರ್ಮಿಕ ಎನ್ನುವಂತಿದೆ. ” Time and Space disappear during the experience of both, there is total immersion.” ಎನ್ನುತ್ತಾರೆ. ಇವೆರಡೂ ಅನುಭವಕ್ಕೆ ಬರುವಾಗ ಸಮಯ ಮತ್ತು ಸ್ಥಳದ ಪರಿವೆಯೇ ಇರುವುದಿಲ್ಲ. ಸಂಪೂರ್ಣ ಮುಳುಗಿಹೋಗುವ, ಅಂದರೆ ಮೈಮರೆಯುವ ಭಾವ ಆವರಿಸಿಕೊಳ್ಳುತ್ತದೆ ಎಂದು ಹೇಳುತ್ತಾರೆ. ಹಾಗೆಯೇ ಇನ್ನೊಂದು ಸಾಮ್ಯತೆ ಬಗ್ಗೆ ಹೇಳುತ್ತಾರೆ.
“The Aesthetic experience or the Mystical experience are not the ultimate goals.”
ರಸಸ್ವಾದವಾಗಲಿ ಅಥವಾ ಬ್ರಹ್ಮಸ್ವಾದವಾಗಲಿ, ಇದೇ ಅಂತಿಮವೂ ಅಲ್ಲ ಎನ್ನುವ ಮೂಲಕ ಇದರಾಚೆಗಿನ ರಸಾನುಭವ ಸಾಧ್ಯತೆಯ ಬಗ್ಗೆ ಉಲ್ಲೇಖಿಸಿದ್ದಾರೆ.

 

 

 

 

ಈ ಓದು ಮರುಕಳಿಸಲಿಕ್ಕೂ ಬಲವಾದ ಕಾರಣವಿದೆ. ನಿನ್ನೆ ಶುಕ್ರವಾರ ಸಾಯಂಕಾಲ ಬಸವನಗುಡಿಯ Indian Institute of World Culture (IIWC) ರಂಗಮಂದಿರದಲ್ಲಿ ರಸಸ್ವಾದ , ಬ್ರಹ್ಮಸ್ವಾದದ ಅನುಭವ ಪ್ರಾಪ್ತವಾಯಿತು. ಅನೇಕರ ಕಣ್ಣುಗಳಲ್ಲಿ ಕಾಣಿಸಿದ ಆನಂದಭಾಷ್ಪವೇ ಇದಕ್ಕೆ ಸಾಕ್ಷಿಯಾಗಿತ್ತು. ಅಕ್ಷರಶಃ ಮೈಮರೆತು ಮೌನಕ್ಕೆ ಶರಣಾಗಿದ್ದ ಸಹೃದಯ ಪ್ರೇಕ್ಷಕ ವೃಂದದಿಂದ ಕರತಾಡನ ಬಿಟ್ಟರೆ ಇನ್ನಾವುದೇ ಪ್ರತಿಕ್ರಿಯೆ ಇರಲಿಲ್ಲ.

ಭಾರತೀಯ ಸಂಸ್ಕೃತಿಯ ಮುಖವಾಣಿಯಂತಿರುವ ವೇದಗಳು, ಉಪನಿಷತ್ ಮತ್ತು ಭಗವದ್ಗೀತೆಯಲ್ಲಿ ಹೇಳಲಾದ ಆನಂದ- ಪರಮಾನಂದ- ಅಮಿತಾನಂದ ಎಲ್ಲರಲ್ಲಿ ನೆಲೆಸಿತ್ತು. ಈ ಮೂಲಕ ಅನನ್ಯ ಕಲಾನಿಕೇತನದ ಕರ್ನಾಟಕ ಕಲಾಶ್ರೀ ಗುರು ಬೃಂದಾ ಅವರು ಆಯೋಜಿಸಿದ್ದ “ ರಸಾನುಭವ ” ನೃತ್ಯ ಕಾರ್ಯಕ್ರಮ ಅರ್ಥಪೂರ್ಣಗೊಳಿಸಿದ್ದು ವಿಶ್ವ ಖ್ಯಾತಿಯ ನೃತ್ಯ ಗುರು, ವಿದ್ವಾನ್ ಶಂಕರ ಕಂದಸ್ವಾಮಿ ಮತ್ತು ಅವರ ಶಿಷ್ಯೆ, ವಿದುಷಿ ಅನನ್ಯಾ ಎಂ. ಅವರ ನೃತ್ಯ ಸಮರ್ಪಣೆ.
ನಟವಾಂಗದಲ್ಲಿ ವಿದ್ವಾನ್ ಡಿ.ವಿ ಪ್ರಸನ್ನ ಕುಮಾರ್, ಗಾಯನದಲ್ಲಿ ವಿದ್ವಾನ್ ನಂದಕುಮಾರ್ ಉನ್ನಿಕೃಷ್ಣನ್, ಮೃದಂಗ ವಾದನದಲ್ಲಿ ವಿದ್ವಾನ್ ಹರ್ಷ ಸಾಮಗ, ಕೊಳಲು ವಾದನದಲ್ಲಿ ವಿದ್ವಾನ್ ಜಯರಾಮ ಕಿಕ್ಕೇರಿ ಸಾಥ್ ನೀಡಿ ರಸಸ್ವಾದನೆಯ ಶಕ್ತಿ ಹೆಚ್ಚಿಸಿದರು.

| ನಟರಾಜನೆದುರು ನಟಭಯಂಕರ ಪ್ರದರ್ಶನ |
ಪದ್ಮವಿಭೂಷಣ ಡಾ. ಬಾಲಮುರಳಿಕೃಷ್ಣ ಅವರ ಕೃತಿ ಆರಭಿರಾಗ, ಆದಿತಾಳದಲ್ಲಿ ನಿಬಂಧಿತ ಪುಷ್ಪಾಂಜಲಿ ಹಾಗೂ ಅಲರಿಪು ಮೂಲಕ ಗುರು ಕಂದಸ್ವಾಮಿ ಮತ್ತು ಗುರು ಅನನ್ಯಾ ಖಚಿತ, ಶುದ್ಧ ಆಂಗಿಕಾಭಿನಯ, ಭಾವಾಭಿನಯ, ನೃತ್ತದೊಂದಿಗೆ ಕಾರ್ಯಕ್ರಮದುದ್ದಕ್ಕೂ ಸಹೃದಯರನ್ನು ಆವರಿಸಿಕೊಳ್ಳುತ್ತಾ ಸಾಗಿದರು. ಅನುಭವಿ ನೃತ್ಯಪಟುಗಳ ಸಾಮರ್ಥ್ಯವನ್ನು ಮಗದೊಮ್ಮೆ ಇಲ್ಲಿ ಸಾಬೀತುಪಡಿಸಿದರು. ನಟರಾಜನ ಸಮ್ಮುಖದಲ್ಲಿ ನಟಭಯಂಕರ ಪ್ರದರ್ಶನಕ್ಕೆ ಕಾರಣರಾದರು.

ಸಾಮಾನ್ಯವಾಗಿ ನೃತ್ಯ ಕಾರ್ಯಕ್ರಮಗಳಲ್ಲಿ ನರ್ತಕ/ನರ್ತಕಿಯ ಎರಡನೇ ಆಯ್ಕೆ ಜತಿಸ್ವರ. ಆ ಪ್ರಕಾರವೇ ರಾಗ ನಳಿನಕಾಂತಿ, ರೂಪಕ ತಾಳದಲ್ಲಿ ನಿಬಂಧಿತ ಜತಿಸ್ವರಕ್ಕೆ ಹೆಜ್ಜೆ ಹಾಕಿದ ಗುರು-ಶಿಷ್ಯೆ ರಾಗದ ಆರೋಹಣ, ಅವರೋಹಣದ ಲಕ್ಷಣವನ್ನು ನೃತ್ತದಲ್ಲಿ ಹಿಡಿದಿಟ್ಟರು. ನಿರ್ದಿಷ್ಟ ಚಲನೆ ಮೂಲಕ ಜತಿಸ್ವರ ಸ್ವರೂಪ ಅನಾವರಣಗೊಳಿಸಿದರು. ನರ್ತಕ-ನರ್ತಕಿಯ ಪ್ರತಿ ಹೆಜ್ಜೆಗಳು ಕೀರ್ತನಕ್ಕೆ ಭಂಗ ತರದ ರೀತಿ ನಿರ್ವಹಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಗುರುವಿನ ಎದುರು, ಅಲ್ಲಲ್ಲ ಗುರು ಜೊತೆಗೂಡಿ ಹೆಜ್ಜೆ ಇಡುವುದು ಸವಾಲು ಕೂಡ. ಈ ನಿಟ್ಟಿನಲ್ಲಿ ಅನನ್ಯಾ ಅವರು ಅತ್ಯಂತ ಆತ್ಮವಿಶ್ವಾಸದಿಂದ ನೃತ್ತ ಪ್ರದರ್ಶಿಸಿದರು. ಅಭಿನಂದನಾರ್ಹ ನಿರ್ವಹಣೆ ಅವರದ್ದಾಗಿತ್ತು. ಅಭ್ಯಾಸ ಬಲವಿಲ್ಲದೇ ಒಲಿಯಲು ಸಾಧ್ಯವೇ ಇಲ್ಲ ಎನ್ನುವ ಗುರುವರ್ಯರ ಮಾತನ್ನೇ ಇಲ್ಲಿ ಉಲ್ಲೇಖಿಸಬೇಕು ಅನಿಸುತ್ತದೆ. ನಿಖರವಾದ ನೃತ್ತ ಅನನ್ಯಾ ಅವರಲ್ಲಿ ಕಾಣಿಸಿತು. ಹಾಗೆಯೇ ಗುರು ಕಂದಸ್ವಾಮಿ ಅವರ ನೃತ್ತದ ಮೇಲಿನ ಹಿಡಿತ, ಬದ್ಧತೆ, ನಿಪುಣತೆ ಉಲ್ಲೇಖಾರ್ಹ.

ನೀರೂಪಕಿ ವಿದುಷಿ ರೂಪಶ್ರೀ ಮಧುಸೂದನ್ ಅವರ ಸುಂದರ ವಿವರಣೆಗೆ ಸಮರ್ಥನೆ ಎನ್ನುವಂತೆ ” ಕಮಲ ಸುಲೋಚನೆ, ತ್ರಿಪುರ ಸುಂದರಿ, ಕುಂಜರಗಮನೆ, ಶಿವ ಪಂಜರ ಶುಕಿ ಈಕೆ. ರಕ್ಷಿತ ಮದನಿ, ರತ್ನ ಸದನೆ, ಮಂದಸ್ಮಿತೆ, ಪೂರ್ಣಚಂದ್ರ ನಿಭಾನನೆ, ಏಕಾಂಮ್ರೇಶ ಮನೋಹರಿ, ಭುವನಸುಂದರಿ, ಕಮಲಾಮನೋಹರಿ…” ವರ್ಣನೆಗೆ ನರ್ತಕ-ನರ್ತಕಿ ಭಾವ ಪರವಶರಾದರು.
ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ಮುತ್ತುಸ್ವಾಮಿ ದೀಕ್ಷಿತರು ರಚಿಸಿದ ಕಮಲಮನೋಹರಿ ರಾಗ, ಆದಿತಾಳ ಅಳವಟ್ಟ ” ಕಂಜದಳಾಯತಾಕ್ಷಿ ಕಾಮಾಕ್ಷಿ ಕಮಲಾಮನೋಹರಿ ತ್ರಿಪುರಸುಂದರಿ ” ಎಂದು ಜಗನ್ಮಾತೆಯ ಭಕ್ತಿಪೂರ್ವಕ ಕೃತಿಗೆ ಪ್ರದರ್ಶಿಸಿದ ನೃತ್ಯದ ಸಂಯೋಜನೆ ಅಪರೂಪದ್ದೆನಿಸಿತು.

 

 

| ಭಕ್ತೆಯ ಕೃಷ್ಣಾರ್ಪಣ |
ಆಕೆ ಕೃಷ್ಣ ಭಕ್ತೆ. ಕೃಷ್ಣನನ್ನು ಹಂಬಲಿಸುತ್ತಿದ್ದಾಕೆ. ಶ್ರೀಕೃಷ್ಣನನ್ನು ಎದುರಾಗಿಸಿಕೊಂಡು ಮನದುಂಬಿಸಿಕೊಳ್ಳಬೇಕೆಂದು ಕನಸುಕಂಡಾಕೆ. ‘ ಓ ಕೃಷ್ಣ ಹೇಗೆ ನೀನು ನನ್ನ ಹೃದಯ ಆವರಿಸಿಕೊಂಡೆ’ ಎಂದು ಕೇಳುತ್ತಾಳೆ. ಭಾವನಾತ್ಮಕ, ಅದ್ಭುತ ಪರಿಕಲ್ಪನೆಯ ನೃತ್ಯ ಸಂಯೋಜನೆ. ಊತುಕಾಡ್ ವೆಂಕಟಸುಬ್ಬಯ್ಯರ್ ವಿರಚಿತ ನೀಲಾಂಬರಿ ರಾಗ, ಆದಿ ತಾಳ ನಿಬಂಧಿತ ” ಎಪ್ಪಡಿ ತಾನ್ ಎನ್ ಉಲ್ಲಂ ” ಎನ್ನುತ್ತಾ ಪ್ರಾರ್ಥಿಸಿದ ನರ್ತಕಿ ಅನನ್ಯಾ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನದಾಳಕ್ಕಿಳಿದರು. ನನ್ನ ಹೃದಯದಲ್ಲಿ ಹೇಗೆ ನೆಲೆಸಿಬಿಟ್ಟೆ ಎಂದು ಪರಿಪರಿಯಾಗಿ ಹಂಬಲಿಸುತ್ತಲೇ ಪರಕಾಯಪ್ರವೇಶ ಮಾಡಿದರೇನೊ ಎಂಬಂತೆ ಅಭಿನಯಿಸಿದರು.

| ಶಿವ ಭಕ್ತನ ಭಕ್ತಿಯ ಪರಾಕಾಷ್ಠೆ |
ನಿಜ ಭಕ್ತ ಭಗವಂತನ ಕೃಪೆಗೆ ಹೇಗೆ ಪಾತ್ರನಾಗುತ್ತಾನೆ ಎನ್ನುವುದಕ್ಕೆ ಭಕ್ತ ಮಾರ್ಕಂಡೇಯ, ಶಿವ ಭಕ್ತ ಕಣ್ಣಪ್ಪ ಮತ್ತು ಭಕ್ತ ಪ್ರಹ್ಲಾದನ ಕಥೆಗಳು ಒಂದು ಉತ್ತಮ ಉದಾಹರಣೆ.
ಆದರೆ ಇಲ್ಲಿ ಶಿವಭಕ್ತನಿಗೆ ಪರ್ವತದೆತ್ತರದ ಶಿವಭಕ್ತ ನಂದಿಯೇ ಅಡ್ಡಲಾಗಿ ನಿಂತಿದ್ದಾನೆ. ನಂದಿ ಸ್ವಲ್ಪ ಸರಿದರೆ ಶಿವ ದರ್ಶನವಾದೀತು ಎಂದು ಭಕ್ತ ಹಂಬಲಿಸುತ್ತಿದ್ದಾನೆ. ಭಕ್ತ ನಿರಾಶನಾಗಲು ಶಿವ ಬಿಡಲಿಲ್ಲ. ದರ್ಶನ ಪ್ರಾಪ್ತನಾಗುತ್ತಾನೆ ಶಿವಭಕ್ತ. ಇಂತಹದ್ದೊಂದು ಭಕ್ತಿ ಕೃತಿಗೆ ಗುರು ಕಂದಸ್ವಾಮಿ ಅವರ ಅಭಿನಯ ಪ್ರೇಕ್ಷಕರನ್ನು ಭಕ್ತಿ ಸಾಗರದಲ್ಲಿ ಲೀನವಾಗುವಂತೆ ಇತ್ತು. ಶಿವ ದರ್ಶನಕ್ಕೆ ಅಡ್ಡ ಬಂದ ನಂದಿಯನ್ನು, ಶಿವನನ್ನು ನೋಡಿ ಕಣ್ತುಂಬಿಕೊಳ್ಳಬೇಕೆನ್ನುವ ಆತುರ, ಕೌತುಕವನ್ನು ಅಭಿನಯದಲ್ಲಿ ತೋರಿಸಿದ ಪರಿ ಶ್ಲಾಘನೀಯ. ಒಂದು ಶ್ರೇಷ್ಠ ಅಭಿನಯವೂ ಹೌದು.

| ಕೃಷ್ಣ ಸಂಪ್ರೀತೆಗೆ ಶ್ರೀಕೃಷ್ಣ ದರ್ಶನ |
ದೇವರ ದೇವ ಬೇಡನಾಗಿ ಬಂದಿದ್ದಾನೆ. ಆದರೆ ಕೃಷ್ಣನಿಗಾಗಿ ಪರಿತಪಿಸುತ್ತಿರುವ ಕೃಷ್ಣ ಸಂಪ್ರೀತೆಗೆ ದೇವರ ದೇವ ಶ್ರೀಕೃಷ್ಣ ಕಾಣಿಸುತ್ತಿಲ್ಲ. ಹುಡುಕಾಟ ನಡೆಸುತ್ತ ಕಾಡಿಗೆ ಬಂದ ಆಕೆಯಲ್ಲಿ ತುಂಟ ಕೃಷ್ಣ ತನ್ನನ್ನು ವರಿಸುವಂತೆ, ಆಲಂಗಿಸುವಂತೆ ಒತ್ತಡ ಹೇರಿ ಸುಂದರಿಯ ಸುಖಕ್ಕಾಗಿ ಕಾಮುಕನಂತೆ ವರ್ತಿಸುತ್ತಾನೆ. ಬೆಚ್ಚಿದ ಆ ತರುಣಿ ಕಾಮಾಂಧನನ್ನು ನೋಡಿ ಧರಾಶಾಯಿ ಆದಳೆನೋ ಎಂಬಂತೆ ಪ್ರಜ್ಞೆತಪ್ಪಿದ್ದಾಳೆ. ತಲೆ ಎತ್ತಿ ನೋಡುವಷ್ಟರಲ್ಲಿ ಕೃಷ್ಞ ಕಣ್ಣೆದುರು ನಿಂತಿದ್ದಾನೆ. ಕೃಷ್ಣನನ್ನು ನೋಡಿ ಕಣ್ತುಂಬಿಕೊಂಡ ಆಕೆಗೆ ಮಾತು ಹೊರಳುತ್ತಿಲ್ಲ. ಎಲ್ಲಿಲ್ಲದ ಖುಷಿ ಆವರಿಸಿಕೊಂಡಿದೆ. ಕೃಷ್ಣನ ಕೈಹಿಡಿದು ಸಂಪ್ರೀತಳಾಗುತ್ತಾಳೆ. ಶೃಂಗಾರ ಮೇಳೈಸುತ್ತಿದೆಯೇನೋ ಎನ್ನುವಂತೆ ನೃತ್ತ, ಆಂಗಿಕಾಭಿನಯ ಪ್ರೇಕ್ಷಕರನ್ನು ಸುತ್ತುವರಿದಿತ್ತು.
ಅಭಿನಯ ಪ್ರಧಾನ ದೃಶ್ಯಗಳಿಗೆ ಸೊಗಸಾದ ನೃತ್ಯದ ಮೂಲಕ ಜೀವ ತುಂಬುವಲ್ಲಿ ನರ್ತಕಿ ಅನನ್ಯಾ ಮತ್ತು ಗುರು ಕಂದಸ್ವಾಮಿ ಅವರ ಯಶಸ್ಸು ಅವರ ಸ್ಪಷ್ಟತೆಯನ್ನು ಅರಿಯುವಂತಿತ್ತು.

ಅಂತ್ಯದಲ್ಲಿ ಸೀಮೋಲ್ಲಘನದ ಅನುಭೂತಿ ಎನ್ನುವಂತೆ ನರ್ತಕ-ನರ್ತಕಿ ಸಮರ್ಪಣಾ ಮನೋಭಾವದಿಂದ ತಿಲ್ಲಾನ, ಮಂಗಳಕ್ಕೆ ಹೆಜ್ಜೆ ಹಾಕಿ “ರಸಾನುಭವ” ಕಾರ್ಯಕ್ರಮ ಸಂಪನ್ನಗೊಳಿಸಿದರು.

 

 

 

 

 


Share This

Leave a Reply

Your email address will not be published. Required fields are marked *